ಯಾವಾಗ ಗಂಡ-ಹೆಂಡತಿ, ಮಕ್ಕಳೇ ಪರಿವಾರ ಎಂಬ ಸಂಸ್ಕೃತಿ ಹುಟ್ಟಿತೋ ಅಲ್ಲಿಂದ ಮದುವೆಯಲ್ಲಿ ಸ್ವಾರ್ಥ ಪ್ರಾರಂಭವಾಗಿ ಪರಿವಾರದ ಘನತೆ ಹಾಗೂ ಸಂಸ್ಕಾರ ಮಾಯವಾಯಿತು. ತಂದೆ- ತಾಯಿ; ಅಕ್ಕ-ತಂಗಿ; ಅಣ್ಣ-ತಮ್ಮ; ಸೋದರ ಮಾವ -ಅತ್ತೆ ಹೀಗೆ ಇವರೊಡನಿದ್ದ ಅನ್ಯೋನ್ಯತೆ ಮಾಯವಾಗಿ ಪರಿವಾರ ಎಂಬ ಮೂಲ ಸಂಸ್ಕಾರಯುತ ಪದ್ಧತಿ ಸವಕಳಿಯಾಯಿತು.
ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸಂಪಾದನೆಗಾಗಿ ಬೋಧನೆ ವಿನಹ ವಿಶಾಲ ತಿಳುವಳಿಕೆಗೆ ಆಸ್ಪದ ಇಲ್ಲ. ಎಲ್ಲಿ ದೂರದೃಷ್ಠಿ, ತ್ಯಾಗ, ಸಮರ್ಪಣಾ ಮನೋಭಾವನೆ ಇರುತ್ತದೆಯೋ ಅಲ್ಲಿ ಪರಿವಾರದ ಬೇರುಗಳು ಬಲವಾಗಿರುತ್ತದೆ. ಸಂಸಾರದ ದೀರ್ಘ ಬಾಳಿಕೆಗೆ ಬುನಾದಿ ಈ ಅನುಭವ ಸಂಪನ್ನ ಪರಿವಾರದಿಂದ ಸಾಧ್ಯ ಹಾಗೂ ಅದರ ಅವಶ್ಯವಿದೆ. ಇಂದು ಅಂತಹ ವಾತಾವರಣವೇ ಇಲ್ಲವಾಗಿದೆ. ಕೇವಲ ಸೊಬಗು, ಪ್ರಲೋಭನೆ, ಸಂಭ್ರಮ ಆಕರ್ಷಣೆಗಳಿಗೆ ಒಳಗಾಗಿ ತಮ್ಮ ಬದುಕನ್ನು ಪರಿವಾರದಿಂದ ದೂರ ಮಾಡಿಕೊಳ್ಳುತ್ತಾ ಸಮಸ್ಯೆಗೆ ಒಳಗಾಗಲು ಸಮೃದ್ಧ ಪರಿವಾರದ ಮಾರ್ಗದರ್ಶನದ ಕೊರತೆಯು ಕಾರಣ ಎಂದು ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ದಿನಾಂಕ 02.07.2023 ರವಿವಾರ ಕನ್ನಡ ವೆಲ್ಫೇರ್ ಸೊಸಾಯಿಟಿ ಸಭಾಗೃಹ ಫಾಟ್ಕೋಪರ್ ಇಲ್ಲಿ ಹಮ್ಮಿಕೊಂಡ `ಮದುವೆ, ಪರಿವಾರ ಹಾಗೂ ಸಂಸ್ಕಾರ’ ಎಂಬ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ ಶ್ರೀ ಅಶೋಕ ಸುವರ್ಣ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅಭ್ಯಾಗತರಾಗಿ ಆಗಮಿಸಿದ ಕರ್ನಾಟಕ ಮಹಾಮಂಡಲ ಮೀರಾ- ಭಾಯಂದರ್ ಇದರ ಸಂಸ್ಥಾಪಕ ಅಧ್ಯಕ್ಷರು, ಮೀರಾ-ಭಾಯಂದರ್ ಪರಿಸರದ ಹಿರಿಯ ಸಾಮಾಜಿಕ ಕಾರ್ಯಕರ್ತ ಶ್ರೀ ಚಂದ್ರಶೇಖರ ಶೆಟ್ಟಿ ಅವರು ಮಾತನಾಡಿ ಮನುಷ್ಯ ನಾಗರಿಕತೆ ಅರಿಯದ ಆ ಕಾಲದಲ್ಲಿ ಪ್ರಾಣಿಗಳಂತೆ ಜೀವಿಸುತಿದ್ದ. ಆಗ ಹೆಣ್ಣಿಗೆ ರಕ್ಷಣೆಯೇ ಇರಲಿಲ್ಲ. ಅದನ್ನರಿತ ನಮ್ಮ ಹಿರಿಯರು, ಋಷಿಮುನಿಗಳು ಅದಕ್ಕೊಂದು ಪರಿಹಾರ ಹುಡುಕಿದರು. ಹೆಣ್ಣಿಗೆ ರಕ್ಷಣೆ ಜೊತೆಗೆ ಭದ್ರತೆ ಒದಗಿಸುವುದರೊಂದಿಗೆ ಸಮೃದ್ಧ ಸಮಾಜಕ್ಕಾಗಿ ಒಂದು ಹೆಣ್ಣಿಗೆ ಒಂದೇ ಗಂಡು; ಅದು ಪವಿತ್ರ ಹಾಗೂ ಜೀವನ ಪರ್ಯಂತದ ಸಂಬಂಧವಾಗಿರಲು ವ್ಯವಸ್ಥಿತ, ಯೋಜನಾ ಬದ್ದ ಕಟ್ಟುಪಾಡುಗಳನ್ನು ಜಾರಿಗೆ ತಂದರು. ಅದೇ `ಮದುವೆ’ ಎಂಬ ಸಂಸ್ಕಾರ, ಸುಸಂಸ್ಕೃತ ಶಿಸ್ತುಬದ್ಧ ದೀರ್ಘ ಬಾಳಿಕೆ ಬರುವ ನಿಯಮಗಳನ್ನು ರೂಪಿಸಿದರೂ ಅವೆಲ್ಲ ಇಂದು ಸವಕಳಿಯಾಗುತ್ತ ವಿಭಜನೆಯತ್ತ ಸಾಗುತಿದೆ. ಎರಡು ಪವಿತ್ರ ಆತ್ಮಗಳ ಹಾಗು ಪರಿವಾರಗಳ ಮಿಲನದೊಂದಿಗೆ ಬಲಿಷ್ಠ ಸಮಾಜ ನಿರ್ಮಾಣಕ್ಕೆ ನಮ್ಮ ಹಿರಿಯರು ನಾಂದಿ ಹಾಡಿದರು.
ಕಾಡಿನಲ್ಲಿ ಬೆಳೆದ ಮಾವು ಸಮುದ್ರದ ಉಪ್ಪಿನ ಮಿಲನದಂತೆ ಅನ್ಯೋನ್ಯ ವಾಗಿರುವಂತದ್ದೇ `ಮದುವೆ ಹಾಗೂ ಪರಿವಾರ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶೇಷ ಅಭ್ಯಾಗತರಾಗಿ ಉಡುಪಿಯಿಂದ ಆಗಮಿಸಿದ್ದ ಸಂಶೋಧನ ಬರಹಗಾರ್ತಿ ಶ್ರೀಮತಿ ಶರೋನಾ ಶೆಟ್ಟಿ ಅವರು ತಮ್ಮ ವಿಚಾರ ಮಂಡಿಸುತ್ತ, `ಮದುವೆ, ಪರಿವಾರ ಹಾಗೂ ಸಂಸ್ಕಾರ’ ಇದು ಒಂದೇ ದಾರದಲ್ಲಿ ಪೋಣಿಸಿದ ಮಣಿಗಳಂತೆ. ಪರಿವಾರ ಇಲ್ಲದ ಮದುವೆ ದುಷ್ಯಂತ-ಶಕುಂತಲೆಯರ ಮದುವೆಯಂತೆ ಕಷ್ಟಕ್ಕೆ ಸಿಲುಕಬಹುದು. ಮದುವೆ ವಿಷಯದಲ್ಲಿ ಶ್ರೀರಾಮನ ನಡೆ ನಮಗೆಲ್ಲ ಆದರ್ಶ. ಸ್ವಯಂವರದಲ್ಲಿ ಶಿವ ಧನಸ್ಸನ್ನು ಮುರಿದು ಸೀತೆಯನ್ನು ಗೆದ್ದ ರಾಮ ಮದುವೆ ಮಾತುಕತೆಗೆ ತನ್ನ ತಂದೆ ದಶರಥ ಮತ್ತು ಪರಿವಾರವನ್ನು ಕೇಳಬೇಕು ಎನ್ನುತ್ತಾನೆ. ಶ್ರೀರಾಮನ ಆ ನಡೆ ಇಂದಿಗೂ ಪ್ರಸ್ತುತ. ಸಮಾಜದಲ್ಲಿ ಹೆಚ್ಚುತ್ತಿರುವ ವಿಚ್ಛೇದನಗಳಿಗೆ ಸುದೃಢ ಪರಿವಾರ ಹಾಗೂ ಸಂಸ್ಕಾರದ ಕೊರತೆ ಕಾರಣವಿರಬಹುದು ಎಂಬ ಅಭಿಮತ ವ್ಯಕ್ತಪಡಿಸಿದರು.
ಇನ್ನೋರ್ವ ಅಭ್ಯಾಗತರಾದ ಕವಿ, ಲೇಖಕಿ ಶ್ರೀಮತಿ ಶಾರದಾ ಅಂಚನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಕರಾವಳಿ ಹಾಗೂ ಕರ್ನಾಟಕದಲ್ಲಿನ ಮದುವೆ ಸಂಪ್ರದಾಯ, ಸಂಭ್ರಮದ ವಿಶೇಷತೆ ಹಾಗೂ ಅವುಗಳ ಮಹತ್ವ ತಿಳಿಸಿದರು.
ನಮ್ಮ ಹಿರಿಯರು ಹಾಕಿ ಕೊಟ್ಟ ಸಂಪ್ರದಾಯದಂತೆ ಮದುವೆ ನಡೆದರೆ ವಿಭಜನೆಗೆ ಯಾವುದೇ ಅವಕಾಶ ಇರುವುದಿಲ್ಲ. ನಮ್ಮ ಹಿರಿಯರು ರೂಪಿಸಿದ ಮದುವೆ ಕ್ರಮ ದೀರ್ಘ ಬಾಳಿಕೆಗೆ ಪ್ರೋತ್ಸಹಿಸುತಿದ್ದವು. ಹಾಗಾಗಿ ವಿಚ್ಛೇದನದ ಪ್ರಮೇಯವೇ ಬರುತ್ತಿರಲಿಲ್ಲ. ನಾವು ಹಿರಿಯರು ರೂಪಿಸಿದ್ದ ನಿಯಮಗಳನ್ನು ಮುಂದುವರಿಸೋಣ. ಇಂದಿನ ಮದುವೆಯಲ್ಲಿನ ಮೆಹಂದಿ, ಫೋಟೋಗ್ರಾಫರ್, ವಿಡಿಯೋ ಚಿತ್ರೀಕರಣಕ್ಕೆ ಅಧಿಕ ಮಹತ್ವ ನೀಡಲಾಗುತ್ತದೆ. ನಮ್ಮ ಅರ್ಥವತ್ತಾದ ಸಂಪ್ರದಾಯಗಳು ಆಧುನಿಕತೆಯ ಭರಾಟೆಯಲ್ಲಿ ಸಾಗುತಿರುವದು ಒಳ್ಳೆಯ ಬೆಳೆವಣಿಗೆಯಲ್ಲ. ಮದುವೆ ಜೀವನ ಪರ್ಯಂತದ ಸಂಬಂಧವಾಗಿರಬೇಕಾದರೆ ನಮ್ಮ ಸತ್ಸಂಪ್ರದಾಯಗಳತ್ತ ಗಮನ ಹರಿಸುವುದು ಒಳಿತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅಭ್ಯಾಗತರಾದ ಕವಿ, ಲೇಖಕಿ ಶಾಂತಾ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ `ಮದುವೆ, ಪರಿವಾರ ಹಾಗೂ ಸಂಸ್ಕಾರ ಶಬ್ದಗಳು ಪ್ರಪಂಚದ ನಿರಂತರತೆಯ ಅಸ್ತಿತ್ವವನ್ನು ಹೇಳುವ ಸಂಕೇತಗಳು. ಮದುವೆ ಶಬ್ದದಲ್ಲಿ ಎರಡು ಜೀವಾತ್ಮಗಳು ಅಡಕವಾಗಿವೆ. ಮದುವೆ ಎಂಬುದು ಕೇವಲ ಒಂದು ಗಂಡು-ಹೆಣ್ಣಿನ `ಬಂಧನ’ ಮಾತ್ರ ಅಲ್ಲ ಅದು ಎರಡು ಕುಟುಂಬಗಳನ್ನು ಬೆಸೆಯುತ್ತವೆ. ಕೆಲವು ಸಲ ಶತ್ರುತ್ವ ಅಳಿಸಿ ಮಿತ್ರತ್ವ ಬೆಳೆಸುವ ಶಕ್ತಿ ಮದುವೆಗೆ ಇದೆ. ವಿವಾಹ ನಮ್ಮ ಸಾಮಾಜಿಕ ವ್ಯವಸ್ಥೆಯ ಭದ್ರ ಬುನಾದಿಯಲ್ಲೊಂದು ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ಗುರು ಪೂರ್ಣಿಮೆಯ ಪರ್ವಕಾಲದ ಸುಸಂದರ್ಭದಲ್ಲಿ ಹಿರಿಯ ವಿದ್ವಾಂಸೆಯಾದ ಡಾ.ಶೈಲಜಾ ಹೆಗಡೆ ಅವರು ವೇದವ್ಯಾಸರ ಕುರಿತು ತಿಳಿಸಿದರಲ್ಲದೆ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸುತ್ತ ಗುರಿ ತಲುಪಬೇಕಾದರೆ ಗುರು ಬೇಕು. ಗುರಿ ತಲುಪಿದ ಮೇಲೆಯೂ ಗುರುವನ್ನು ಮರೆಯದೆ ಗುರುವನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ವೇದವನ್ನು ವಿಂಗಡಿಸಿ ಅದನ್ನು ಶ್ರೀ ಸಾಮಾನ್ಯರಿಗೆ ತಲುಪಿಸುವಲ್ಲಿ ಶ್ರಮಿಸಿದ ವೇದವ್ಯಾಸರ ಜಯಂತಿ ಹಲವು ವಿಶೇಷತೆಯಿಂದ ಕೂಡಿದೆ ಎಂದು ವಿವರಿಸಿದರು.
ಕನ್ನಡ ವೆಲ್ಫೇರ್ ಸೊಸಾಯಿಟಿಯ ವೀಣಾ ಶೆಟ್ಟಿ ಅವರು ಪ್ರಾರ್ಥನೆಗೈದರು. ಅಭ್ಯಾಗತರು ದೀಪಪ್ರಜ್ವಲಿಸುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀಮತಿ ಲತಾ ಸಂತೋಷ್, ಮುದ್ದುಮನೆ ಅಭ್ಯಾಗತರನ್ನು ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶ ಹಾಗೂ ಪ್ರತಿಷ್ಠಾನದ ಕುರಿತು ವಿವರಿಸಿದರು.
ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ರಾಜೇಶ ಗೌಡ ಸಿಂಧೂರ, ಕಾರ್ಯಕ್ರಮಕ್ಕೆ ಸಹಕರಿಸಿದ ಕನ್ನಡ ವೆಲ್ಫೇರ್ ಸೊಸಾಯಿಟಿಯ ಅಧ್ಯಕ್ಷರಾದ ನವೀನ ಶೆಟ್ಟಿ ಇನ್ನ ಬಾಳಿಕೆ, ನಾರಾಯಣ ರಾವ್, ಶ್ರೀಮತಿ ಸವಿತಾ ಎಸ್. ಶೆಟ್ಟಿ, ಶ್ರೀ ಜಿ. ವಿ. ಹೆಗಡೆ ಹಾಗು ಗೀತ ಗಾಯನದದಲ್ಲಿ ತಮ್ಮ ಸುಮದುರ ಗಾಯನದಿಂದ ಕಾರ್ಯಕ್ರಮಕ್ಕೆ ಮೆರಗು ನೀಡಿದ ಶ್ರೀಮತಿ ವೀಣಾ ಶೆಟ್ಟಿ , ಮಾಲತಿ ಪುತ್ರನ್, ಶ್ರೀಮತಿ ಉಮಾ ಭಟ್ ಘನ್ಸೋಲಿ ಮೊದಲಾದª Àರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಸುರೇಶ್ ಶೆಟ್ಟಿ ಕಣಂಜಾರು ಕಾರ್ಯಕ್ರಮ ನಿರೂಪಿಸಿದರು.