ಎಲ್ಲರಿಗೂ ತಿಳಿದಿರುವಂತೆ ಸಮಯವು ಯಾರಿಗೂ ಕಾಯುವುದಿಲ್ಲ. ಮತ್ತು ಅದು ಹಿಂದಕ್ಕೂ ಬರುವುದಿಲ್ಲ. ಹಾಗಾಗಿ ಸಮಯಕ್ಕೆ ಸರಿಯಾಗಿ ನಾವು ಸಾಗಬೇಕು. “ನಾವು ಸಮಯವನ್ನು ಗೌರವಿಸದಿದ್ದರೆ, ಸಮಯವು ನಮ್ಮನ್ನು ಗೌರವಿಸುವುದಿಲ್ಲ”. ಸಮಯಕ್ಕೆ ಸರಿಯಾಗಿ ಏಳುವುದು, ಊಟ ಮಾಡುವುದು, ಓದುವುದು ಮತ್ತು ನಿದ್ದೆ ಮಾಡುವುದು ಹೀಗೆ ಎಲ್ಲಾ ಕೆಲಸವನ್ನು ಮಾಡುವುದೇ ಉತ್ತಮ. ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ, ಕಾಲ ಕೆಡುವುದಿಲ್ಲ, ಕೆಡುವುದು ಜನರ ನಡತೆ ಮತ್ತು ಆಚಾರ-ವಿಚಾರ ಮಾತ್ರ. ಎಲ್ಲರೂ ಕಾಲಕ್ಕೆ ತಕ್ಕಂತೆ ಸಾಗಬೇಕು ಮತ್ತು ಬದಲಾಗಬೇಕು. ಸಮಯ ಬರುತ್ತದೆ ಹಾಗೇ ಹೋಗುತ್ತೆ ಯಾರಿಗಾಗಿಯೂ ನಿಲ್ಲುವುದಿಲ್ಲ. ಇದನ್ನು ಯಾರಿಂದಲೂ ಮಾರಲು ಸಾಧ್ಯವಿಲ್ಲ ಹಾಗೇ ಖರೀದಿಸಲೂ ಸಾಧ್ಯವಿಲ್ಲ. ಕಚೇರಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಲೀ ಅಥವಾ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಾಗಲೀ ಎಲ್ಲರಿಗೂ ಒಂದೇ ಸಮಯ ಅದುವೇ ಜೀವನದಲ್ಲಿ ಬಹಳ ಮುಖ್ಯವಾಗಿರುತ್ತದೆ. ಇದರ ಬಗ್ಗೆ ತಿಳಿದವರು ಎಂದಿಗೂ ಜೀವನದಲ್ಲಿ ಮುಂದೆ ಸಾಗುತ್ತಾರೆ.
“ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂಬ ಗಾದೆ ನೂರಕ್ಕೆ ನೂರು ಸತ್ಯ. ಹಾಗೆಯೇ ಎಲ್ಲರೂ ಕೂಡ ತಮ್ಮ ಜೀವನದ ಪಯಣಕ್ಕಾಗಿ ಮನಸ್ಸಿನ ಒಂದು ವೇಳಾಪಟ್ಟಿಯನ್ನು ನಿರ್ಮಿಸಿಕೊಂಡಿದ್ದಾರೆ. ಅದಕ್ಕೆ ಅನುಗುಣವಾಗಿ ದೈನಂದಿನ ಜೀವನ ನಡೆಯುತ್ತದೆ. ವಿದ್ಯಾರ್ಥಿಯ ಜೀವನದಲ್ಲಿ ಸಮಯ ಹೇಗೆ ಮಹತ್ವ ಎಂದರೆ, ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿಯೂ ಇದರ ಮೌಲ್ಯವು ತುಂಬಾ ಹೆಚ್ಚಿರುತ್ತದೆ. ಹೇಗೆಂದರೆ ಈ ವಿದ್ಯಾರ್ಥಿ ಜೀವನದಲ್ಲಿ ಸಮಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ತಮ್ಮ ಸರಿ ಮತ್ತು ತಪ್ಪುಗಳನ್ನು ಗುರುತಿಸಿ ತಿದ್ದಿಕೊಳ್ಳಲು ಇದು ಅವಶ್ಯವಿದೆ. ವಿದ್ಯಾರ್ಥಿ ಎಂದರೆ ಸಮಯಪಾಲನೆ ಮತ್ತು ಶಿಸ್ತುಪಾಲನೆಯನ್ನು ಮಾಡುವವರು ಎಂದರ್ಥ. ವಿದ್ಯಾರ್ಥಿಗಳು ಸಮಯ ಪಾಲನೆಯಿಂದ ಅವರ ಜೀವನದ ಯಶಸ್ಸನ್ನು ಕಾಣಬಹುದು. ಇದರ ಮಹತ್ವವನ್ನು ತಿಳಿದಿರುವ ಯಾವುದೇ ವ್ಯಕ್ತಿಯಾದರೂ ತನ್ನ ಕೆಲಸವನ್ನು ಎಂದಿಗೂ ಮುಂದೂಡಲು ಬಯಸುವುದಿಲ್ಲ. ಹಾಗೆಯೇ ಯಶಸ್ಸಿನ ದಾರಿಯಲ್ಲಿ ಸಾಗುತ್ತಾನೆ. “ಅದೃಷ್ಟವಂತ ಎಂದರೆ ಅವಕಾಶವನ್ನು ಪಡೆಯುವವನು, ಬುದ್ದಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು”. ಕಾಲ ಎನ್ನುವುದು ಎಲ್ಲರಿಗೂ ಒಂದು ಅವಕಾಶವನ್ನು ನೀಡುತ್ತದೆ. ಅದರಲ್ಲಿ ನಾವು ವಿಜಯವನ್ನು ಅಥವಾ ಸೋಲನ್ನು ಕಾಣಬಹುದು. ಕೆಲವು ಅದ್ಭುತವಾದ ಅವಕಾಶವನ್ನು ಒಮ್ಮೆ ಕಳೆದುಕೊಂಡರೆ ಮತೊಮ್ಮೆ ಆ ಅವಕಾಶ ಮರಳಿಬಾರದು.
“ಸಮಯವು ಯಾವುದೇ ಆರಂಭ ಅಥವಾ ಅಂತ್ಯವನ್ನು ಹೊಂದಿರದ ಅದ್ಬುತ ವಿಷಯವಾಗಿದೆ.”