ಯುವ ಬಂಟರ ಸಂಘ ಕುಂದಾಪುರ ಹಾಗೂ ಡಾ. ಅಂಪಾರು ನಿತ್ಯಾನಂದ ಶೆಟ್ಟಿ. ಹೌದು ಬಂಟ ಸಮಾಜದಲ್ಲಿ ಸಂಚಲನ ಮೂಡಿಸಿರುವ ಸಂಘಟನೆ ಮತ್ತು ಯುವ ನಾಯಕ. ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಬಂಟ ಸಮುದಾಯ ವಿಶೇಷ ಸ್ಥಾನಮಾನ ಪಡೆದ ಒಂದು ಸಮುದಾಯ. 2000 ಇಸವಿಯಲ್ಲಿ ಆರಂಭವಾದ ಕುಂದಾಪುರ ಬಂಟರ ಯಾನೆ ನಾಡವರ ಸಂಘದಲ್ಲಿ ಡಾ. ಯಡ್ತರೆ ನರಸಿಂಹ ಶೆಟ್ಟಿ, ಶ್ರೀ ಬಿ. ಅಪ್ಪಣ್ಣ ಹೆಗ್ಡೆ , ಶ್ರೀ ಅರುಣ್ ಕುಮಾರ್ ಶೆಟ್ಟಿ ಅಂತಹ ಹಿರಿಯ ಮುತ್ಸದ್ದಿಗಳು ಅಧ್ಯಕ್ಷರಾಗಿ ಮಹತ್ತರವಾದ ಕೊಡುಗೆಗಳನ್ನು ಈ ಸಮಾಜಕ್ಕೆ ನೀಡಿದವರು. ಅವರ ಮುಂದುವರಿಕೆಯ ಭಾಗವಾಗಿ ಇವತ್ತು ಅಂಪಾರು ಮುಂಚೂಣಿಯಲ್ಲಿ ಇದ್ದಾರೆ. ಇಂದು ಕುಂದಾಪುರ ಬೈಂದೂರು ತಾಲೂಕಿನಲ್ಲಿ ಅತ್ಯಂತ ಪ್ರಭಾವಿ ಯುವ ನಾಯಕನಾಗಿ ಬಂಟ ಸಮುದಾಯದಲ್ಲಿ ಗುರುತಿಸಿಕೊಳ್ಳುತ್ತಿರುವ ಹೆಸರೇ ಡಾ. ಅಂಪಾರು ನಿತ್ಯಾನಂದ ಶೆಟ್ಟಿ. ಬಂಟ ಸಮುದಾಯಕ್ಕೆ ಅವರು ನೀಡಿದ ಸೇವೆಗೆ ಇಡೀ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅವರ ಹೆಸರು ಗುರುತಿಸಲ್ಪಟ್ಟಿದೆ ಎಂದರೆ ತಪ್ಪಾಗಲಾರದು. ಅವರ ಬದುಕಿನ ದಾರಿಯನ್ನು ನೋಡಿದರೆ ಇಂದಿನ ಯುವ ಪೀಳಿಗೆಗೆ ಮಾದರಿ ಎನ್ನಬಹುದು.
ಕರ್ನಾಟಕ ರಾಜ್ಯದಲ್ಲಿ ಬಂಟ ಸಮುದಾಯದಲ್ಲಿ ಗುರುತಿಸಲ್ಪಡುವ ಕೆಲವೇ ಕೆಲವು ಮುಖ್ಯ ಹೆಸರುಗಳಲ್ಲಿ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಸಹ ಒಬ್ಬರು. 2012 ರಲ್ಲಿ ಯುವ ಬಂಟರ ಸಂಘ ಕಟ್ಟಬೇಕೆಂಬ ಹಂಬಲವನ್ನು ಇಟ್ಟುಕೊಂಡು ಹೊರಟವರು. ಅವರ ಕನಸು 2013 ಏಪ್ರಿಲ್ ನಲ್ಲಿ ಕುಂದಾಪುರ ಯುವ ಬಂಟರ ಸಂಘದ ಸ್ಥಾಪನೆಯ ಮೂಲಕ ಕನಸು ನನಸಾಯಿತು. ಸಂಘ ಉದ್ಘಾಟನೆಯ ಪೂರ್ವದಲ್ಲಿ ಒಂದು ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಮಾಡಿಕೊಂಡು, ತಲಾ ಒಂದು ಲಕ್ಷ ರೂಪಾಯಿಯಂತೆ 10 ಮಂದಿ ದಾನಿಗಳಿಂದ ದತ್ತಿ ನಿಧಿ ಹಣ ಸಂಗ್ರಹ ಮಾಡಿ ಉದ್ಘಾಟನೆಗೊಂಡ ಸಂಸ್ಥೆ ಕುಂದಾಪುರ ತಾಲೂಕು ಯುವ ಬಂಟರ ಸಂಘ. ಆರಂಭದ ಎರಡು ವರ್ಷ ಅಂಪಾರು ನಿತ್ಯಾನಂದ ಶೆಟ್ಟಿ ಅವರ ಸ್ಥಾಪಕಾಧ್ಯಕ್ಷತೆಯಲ್ಲಿ ವಿವಿಧ ಸೇವಾ ಚಟುವಟಿಕೆಗಳ ಮೂಲಕ ಇಡೀ ಕುಂದಾಪುರದಲ್ಲಿ ಒಮ್ಮೆ ಸಂಚಲನವನ್ನು ಮೂಡಿಸಿತ್ತು. ಬಂಟರ ಕ್ರೀಡೋತ್ಸವದ ಮೂಲಕ ಇನ್ನಷ್ಟು ಯುವ ಮನಸ್ಸುಗಳನ್ನು ಒಗ್ಗೂಡಿಸಿ ಸಂಘದ ಶಕ್ತಿಯನ್ನು ಹೆಚ್ಚಿಸಿದ್ದಾರೆ. ಆರಂಭದ ಎರಡು ವರ್ಷಗಳ ನಂತರ ತನ್ನ ಜೊತೆ ಒಡನಾಟ ಇಟ್ಟುಕೊಂಡ ಎಲ್ಲಾ ಮುಂದಿನ ಅಧ್ಯಕ್ಷರುಗಳಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುತ್ತಾ ಯುವ ಬಂಟರ ಸಂಘದ ಕೀರ್ತಿ ಹೆಚ್ಚಿಸುವಲ್ಲಿ ತನ್ನ ಪರಿಶ್ರಮ ತೋರಿದರು.
ತಾನೇ ಕಟ್ಟಿ ಬೆಳೆಸಿದ ಸಂಸ್ಥೆ ತನ್ನ ಹತ್ತನೇ ವರ್ಷವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಆ ಸಂಸ್ಥೆಯ ಅಧ್ಯಕ್ಷ ಗಾದಿಯನ್ನು ತಾನೇ ವಹಿಸಿಕೊಂಡು ಇಡೀ ಸಂಸ್ಥೆಯನ್ನು ರಾಜ್ಯಕ್ಕೆ ಮಾದರಿಯನ್ನಾಗಿಸಿ ತೋರಿಸಿದ ಕೀರ್ತಿ ಡಾ. ಶೆಟ್ಟಿ ಅವರದ್ದು. ತನ್ನ ವೃತ್ತಿ ಬದುಕಿನ ನಡುವೆಯೂ ಪ್ರತಿ ತಿಂಗಳಿಗೊಮ್ಮೆ ನಿರಂತರ ಜನಸೇವಾ ಕಾರ್ಯಗಳನ್ನು ಹಾಕಿಕೊಂಡು ಸರಿಸುಮಾರು ಒಂದು ಕೋಟಿ ರೂಪಾಯಿ ಹಣವನ್ನು ಸಮಾಜ ಬಾಂಧವರಿಗೆ ಹಂಚಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಯಾವುದೇ ಒಬ್ಬ ಉದ್ಯಮಿ ಹಣ ಸಂಗ್ರಹಿಸುವುದಕ್ಕೂ ಒಬ್ಬ ಸಾಮಾನ್ಯ ವ್ಯಕ್ತಿ ಹಣ ಸಂಗ್ರಹಿಸುವುದಕ್ಕೂ ವ್ಯತ್ಯಾಸ ಇದೆ. ನಮ್ಮ ನಿತ್ಯಾನಂದ ಶೆಟ್ಟಿ ವೃತ್ತಿ ಬದುಕಿನಲ್ಲಿ ಇದ್ದುಕೊಂಡು ಕೇವಲ ದೂರವಾಣಿ ಮೂಲಕ ಒಂದುವರೆ ಕೋಟಿ ಹಣ ಸಂಗ್ರಹ ಮಾಡಿ ಸೇವಾ ಚಟುವಟಿಕೆ ಮಾಡಿದ್ದಾರೆ ಎಂದರೆ ಬಹುಶಃ ಯಾರಿಂದಲೂ ಸಾಧ್ಯವಾಗದೇ ಇರುವುದನ್ನು ಇವರು ಮಾಡಿ ತೋರಿಸಿದ್ದಾರೆ. ಮುಂದಿನ ಫೆಬ್ರವರಿ ತಿಂಗಳಲ್ಲಿ ದಶಮ ಸಂಭ್ರಮದ ಸಮಾರೋಪ ಸಮಾರಂಭದ ಅಂಗವಾಗಿ ಭಾವೈಕ್ಯ ಬಂಟರ ಮಹಾಸಮಾಗಮ ಕಾರ್ಯಕ್ರಮದಲ್ಲಿ ಒಂದು ಕೋಟಿ ರೂಪಾಯಿ ಹಣವನ್ನು ನೊಂದವರ ದುರ್ಬಲರ ಬದುಕಿಗೆ ಹಂಚಬೇಕೆಂಬ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಸರಕಾರ ನಡೆಸಿಕೊಂಡು ಬರುವ ರೀತಿ ವಿವಿಧ ಯೋಜನೆಗಳ ಮೂಲಕ ಕುಂದಾಪುರ ಮತ್ತು ಬೈಂದೂರು ಭಾಗದ ಶೇಕಡ 75% ಕ್ಕಿಂತಲೂ ಹೆಚ್ಚು ಬಂಟ ಸಮುದಾಯದ ಮನೆಗಳಲ್ಲಿ ಮನೆಮಾತಾಗಿರುವ ಹೆಸರೇ ಅಂಪಾರು ನಿತ್ಯಾನಂದ ಶೆಟ್ಟಿ. ಕೇವಲ ಬಂಟ ಸಮುದಾಯವಲ್ಲದೇ ಜಾತ್ಯಾತೀತತೆಯನ್ನು ಮುರಿದು ಇತರ ಸಮಾಜ ಬಾಂಧವರಿಗೂ, ಅನಾರೋಗ್ಯ ಪೀಡಿತರಿಗೆ, ವಿದ್ಯಾಭ್ಯಾಸಕ್ಕೆ ಸಹಾಯವಾಗಿ ಧನಸಹಾಯ ಮಾಡುವ ಮೂಲಕ ಮಾನವೀಯತೆಯನ್ನು ಎತ್ತಿ ತೋರಿಸಿದ ಕೀರ್ತಿ ಇವರದ್ದು.
ನಿತ್ಯಾನಂದ ಶೆಟ್ಟಿಯವರು ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗಲೇ ಜಾನಪದದ ಬಗ್ಗೆ ವಿಶೇಷ ಆಸಕ್ತಿ ಹೊಂದಿದವರು. ಅವರ ಒಲವನ್ನು ಗಮನಿಸಿದ ಕರ್ನಾಟಕ ಜಾನಪದ ವಿದ್ವಾಂಸ ಶ್ರೀ ಉಪ್ಪುಂದ ಚಂದ್ರಶೇಖರ ಹೊಳ್ಳರು ಆಗಿನ ರಾಜ್ಯಾಧ್ಯಕ್ಷರಾದ ತಿಮ್ಮೇಗೌಡರಿಗೆ ಶಿಫಾರಸು ಮಾಡಿ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಆಯ್ಕೆ ಮಾಡಿದರು. ಮೂರು ವರ್ಷಗಳ ಅವರ ಜಾನಪದ ಕ್ಷೇತ್ರದಲ್ಲಿನ ಕೆಲಸಗಳನ್ನು ಮೆಚ್ಚಿ ಮುಂದಿನ ಮೂರು ವರ್ಷಕ್ಕೆ ಉಡುಪಿ ಜಿಲ್ಲಾಧ್ಯಕ್ಷರಾಗಿ ಎಸ್. ಎ ಕೃಷ್ಣಯ್ಯ ಅವರ ತೆರವಿನ ಹುದ್ದೆಗೆ ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ದಿ. ಏರ್ಯ ಲಕ್ಷ್ಮಿನಾರಾಯಣ ಆಳ್ವರವರ ಶಿಫಾರಸಿನ ಮೇಲೆ ಮಾಡಲಾಯಿತು. ಬಹುಶಃ ರಾಜ್ಯದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಲ್ಲದೆ ಒಂದಷ್ಟು ಒಳ್ಳೆಯ ಕಾರ್ಯ ಚಟುವಟಿಕೆಗಳ ಮೂಲಕ ರಾಜ್ಯದ ಗಮನ ಸೆಳೆದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆಯಂತೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಚಾಪನ್ನು ಮೂಡಿಸಿದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯಲ್ಲಿ, ಸಹಕಾರಿ ಕ್ಷೇತ್ರದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಲಹಾ ಸಮಿತಿ ಸದಸ್ಯರಾಗಿ, ಮಿಲಾಗ್ರಿಸ್ ವಿವಿದ್ದೊದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿ, ಜಾಗತಿಕ ಬಂಟರ ಸಂಘದ ಆಡಳಿತ ಮಂಡಳಿ ಸದಸ್ಯರಾಗಿ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಕುಂದಾಪುರ ತಾಲೂಕು ಸಮಿತಿಯ ನಾಮನಿರ್ದೇಶನ ಸದಸ್ಯರಾಗಿ, ರೋಟರಿ, ಲಯನ್ಸ್ ಸಂಸ್ಥೆಯಂತಹ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ತಮ್ಮನ್ನು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ಇವರು ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡೇ ಬರುತ್ತಿರುವುದು ವಿಶೇಷ. 2012 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ. ಲೋಲಾಕ್ಷಿ ಎನ್ ಕೆ ಅವರ ಮಾರ್ಗದರ್ಶನದಲ್ಲಿ ಎಂ.ಫಿಲ್ ಪದವಿಯನ್ನು ಪೂರೈಸಿ, 2014ರಲ್ಲಿ ಯುಜಿಸಿ ಪ್ರಾಯೋಜಿತ ಕಿರು ಸಂಶೋಧನಾ ಪ್ರಬಂಧವನ್ನು ಪೂರೈಸಿದರು. 2015 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ಪದವಿಗಾಗಿ ನೋಂದಣಿ ಮಾಡಿಕೊಂಡು 2021 ರಲ್ಲಿ ಮಂಗಳೂರು ವಿ.ವಿಯಿಂದ ಡಾಕ್ಟರೇಟ್ ಪದವಿಯನ್ನು ಸಹ ಪಡೆದುಕೊಂಡರು. ಕಾಲೇಜು ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳನ್ನು ಸಂಘಟಿಸಿ, ಆರು ವರ್ಷಗಳ ಕಾಲ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿಯಾಗಿ ವಿಶ್ವವಿದ್ಯಾನಿಲಯದಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಒಳ್ಳೆಯ ಎನ್ಎಸ್ಎಸ್ ಅಧಿಕಾರಿಯಾಗಿ ಗುರುತಿಸಿಕೊಂಡರು. ಇವರು ಎರಡು ಕೃತಿಗಳನ್ನು ಪ್ರಕಟಿಸಿರುವುದಲ್ಲದೇ 15 ಕ್ಕೂ ಹೆಚ್ಚು ಇವರ ಲೇಖನಗಳು ISBN ಸಂಖ್ಯೆಯೊಂದಿಗೆ ಪ್ರಕಟಗೊಂಡಿವೆ.
ಸಂಸಾರ ಜಂಜಾಟಗಳ ನಾಗಾಲೋಟದ ಬದುಕಿನ ದಾರಿಯಲ್ಲಿ ಜೀವನ ಸಾಗಿಸುವುದು ಕಷ್ಟ. ಇಂತಹ ಕಾಲದಲ್ಲಿ ತನ್ನ ಸಂಸಾರವನ್ನು ನಿಭಾಹಿಸಿಕೊಂಡು ದಿನದ ಹತ್ತಾರು ಗಂಟೆಗಳನ್ನು ತನ್ನ ಬಂಟ ಸಮುದಾಯದ ಹಾಗೂ ಸಮಾಜಮುಖಿ ಕೆಲಸಗಳಿಗೆ ಮೀಸಲಿಟ್ಟಿರುವ ಯಶಸ್ವೀ ಅಪರೂಪದ ವ್ಯಕ್ತಿ ಡಾ. ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಒಳಿತಾಗಲಿ. ಮುಂದಿನ ದಶಮ ಸಂಭ್ರಮದ ದೊಡ್ಡ ಕಾರ್ಯಕ್ರಮದ ಕನಸು ಹೊತ್ತಿರುವ ನಿತ್ಯಾನಂದ ಶೆಟ್ಟಿಯವರಿಗೆ ಒಂದು ಶುಭ ಹಾರೈಕೆ ಇರಲಿ.
ಸಂದೇಶ್ ಶೆಟ್ಟಿ ಸಳ್ವಾಡಿ