ಆಕೆ ಮನೆ ನಿರ್ಮಾಣ ಆರಂಭಿಸಿದ ನಂತರ ಒಂದಲ್ಲ ಒಂದು ತೊಂದರೆ ಆಗುತ್ತಲೇ ಇತ್ತು. 6 ತಿಂಗಳು ಆಗುವಾಗ ಅಪಘಾತ ಒಂದರಲ್ಲಿ ಗಂಡ ತೀರಿಕೊಂಡ. 3 ತಿಂಗಳಿರುವಾಗ ಹಾರ್ಟ್ ಅಟ್ಯಾಕ್ ಆಗಿ ತಂದೆ ತೀರಿಕೊಂಡರು. ಆಕೆ ಒಳ್ಳೆಯ ಉದ್ಯೋಗದಲ್ಲಿದ್ದರೂ ಮನೆ ನಿರ್ಮಾಣ ಮುಂದುವರಿಸುವುದು ಕಷ್ಟವಾದಾಗ ನಾದಿನಿ, ಸೊಸೆ, ಅತ್ತೆ, ಭಾವoದಿರು ಮನೆ ಕೆಲಸ ಸದ್ಯ ಸ್ಥಗಿತಗೊಳಿಸಲು ಹೇಳಿದ್ದರು. ನಿನ್ನ ಮನೆ ಅನಿಷ್ಟ ಆ ಕೆಲಸ ನಿಲ್ಲಿಸು ಎಂದು ಪದೇ ಪದೇ ಹೇಳುತ್ತಿದ್ದರು. ಆಕೆಗೂ ಮಾನಸಿಕವಾಗಿ ಕಿರಿ ಕಿರಿ ಅನ್ನಿಸುತ್ತಿತ್ತು.
ಯಾರೋ ಹೇಳಿದ್ದು ಕೇಳಿ ಊರ ಹೊರವಲಯಕ್ಕೆ ಬಂದಿದ್ದ ಆ ಮಹಾತ್ಮರನ್ನು ಭೇಟಿ ಮಾಡಲು ಬಂದಳು ತನ್ನ ನಾದಿನಿ, ಸೊಸೆ, ಅತ್ತೆ, ಭಾವಂದಿರೊಂದಿಗೆ. ಕಾರು ಅವರ ಆಶ್ರಮದ ಸಮೀಪ ನಿಂತಿತು. ಭಾವ ಹೇಳಿಯೇ ಬಿಟ್ಟರು “ನಿನಗೆ ಹುಚ್ಚು ಇವರೆಲ್ಲ ಕಳ್ಳ ಸನ್ಯಾಸಿಗಳು ಇವರಿಂದ ಏನು ನಿರೀಕ್ಷಿಸುತ್ತಿ?” ಎಂದು. “ಇರ್ಲಿ ಭಾವ ನೋಡೋಣ” ಎಂದು ಆಶ್ರಮ ಪ್ರವೇಶಿಸಿದರು. ಅಲ್ಲಿ ಮಹಾತ್ಮರ ಬಳಿ ತನ್ನ ಎಲ್ಲಾ ನೋವನ್ನೂ ಹೇಳಿಕೊಂಡಳು. ಸುತ್ತಾ ಎಲ್ಲರನ್ನೂ ಗಮನಿಸಿದ ಸ್ವಾಮಿಜಿ ಒಳಗೆ ಹೋಗಿ 2 ಇಟ್ಟಿಗೆ ತಂದರು. “ನೋಡು ಮಗಳೇ ನಿನ್ನ ಮನೆಯ ಪಂಚಾಂಗ ಸರಿ ಇಲ್ಲ ಹಾಗಾಗಿ ಇಷ್ಟೆಲ್ಲ ಸಮಸ್ಯೆಯಾಗಿದೆ. ಇಲ್ಲಿರುವ ಈ 2 ಇಟ್ಟಿಗೆಯನ್ನು ಮುಖ್ಯದ್ವಾರದ ಹೊರಗೆ ಬಳಸುವ ಕಲ್ಲಿನೊಂದಿಗೆ ಬಳಸುವಂತೆ ನಿನ್ನ ಮೇಸ್ತ್ರಿಗಳಿಗೆ ಹೇಳು ಹಾಗೇ ಆ ಇಟ್ಟಿಗೆಯನ್ನು ಇಡುವಾಗ ಹೇಳುವ 2 ಮಂತ್ರಗಳಿವೆ ಒಳಗೆ ನೀನೊಬ್ಬಳೇ ಬಾ” ಎಂದು ಹೇಳಿ ಒಳಗೆ ಹೋದರು.
ಬಾವಂದಿರು ಸಿಟ್ಟಲ್ಲಿದ್ದರು “ಅದೆಂತ ಇಟ್ಟಿಗೆ ಅವನ ಪಿಂಡ, ಕಳ್ಳ ಸನ್ಯಾಸಿ ದುಡ್ಡು ಮಾಡುವುದಷ್ಟೇ ಇಂತವರ ಉದ್ದೇಶ ನಡಿ” ಎಂದರು. ಆದರೂ ಹಣದ ಬಗ್ಗೆ ಏನೂ ಮಾತನಾಡದ ಮಹಾತ್ಮರಲ್ಲಿ ಅವಳಿಗೆ ಏನೋ ಕೇಳುವ ಆಸೆ ಇತ್ತು. ನೇರವಾಗಿ ಹೋಗಿಯೇ ಬಿಟ್ಟಳು ಅವರ ಕೊಠಡಿಗೆ. ಅಲ್ಲೊಂದು ಅದ್ಭುತ ಮಂತ್ರ ಹೇಳುವರಿದ್ದರು ಮಹಾತ್ಮರು.
ಕೊಠಡಿ ವಿಶಾಲವಾಗಿತ್ತು ಎದುರಲ್ಲಿ ಮಹಾತ್ಮರಿದ್ದರು. ಅವಳಲ್ಲಿ ಹೇಳಿದರು “ನೋಡು ಮಗಳೇ ನಿನಗೆ ಕೊಟ್ಟಿದ್ದು 2 ಇಟ್ಟಿಗೆ ಅದನ್ನ ನಿನ್ನ ಮನೆಯ ಹೊರಗೆ ಇಟ್ಟು ಮನೆಯ ಕೆಲಸ ಆರಂಭಿಸು. ಮಂತ್ರ ಇಷ್ಟೇ ಅಲ್ಲಿರುವ ಮೊದಲ ಇಟ್ಟಿಗೆಯ ಹೆಸರು ‘ನಂಬಿಕೆ’ ಎರಡನೆಯದ್ದು ‘ವಿಶ್ವಾಸ’. ಮೊದಲನೇ ಇಟ್ಟಿಗೆ ಇಡುವಾಗ ನಿನಗೆ ಗೊತ್ತಿರಲಿ ಯಾರನ್ನು ನಂಬಬೇಕು, ಯಾರ ಮಾತುಗಳನ್ನು ನಂಬಬಾರದು ಎಂದು. ನಿನ್ನ ಕನಸು ತಮ್ಮದೂ ಕನಸು ಎಂದು ತಿಳಿದವರನ್ನಷ್ಟೇ ನಿನ್ನ ಜೊತೆಯಲ್ಲಿಟ್ಟಿರು. ಆಗ ನಿನ್ನ ಸುತ್ತ ಧನಾತ್ಮಕ ಶಕ್ತಿಗಳಷ್ಟೇ ತುಂಬಿರುತ್ತದೆ. ಇನ್ನು ನಿನ್ನ ಕನಸು ನನಸಾಗಲೇ ಬಾರದು ಎಂಬ ಉದ್ದೇಶ ಇರುವ ಪಾಪಿ ಜನರನ್ನು ದೂರ ತಳ್ಳಿ ಬಿಡು ಎಂದಾಗ ಆಕೆಗೆ ನೆನಪಾಗಿತ್ತು, ಅಂದು ಗಂಡ ಮನೆ ಕಟ್ಟುತ್ತೇನೆ ಎಂದಾಗ ಇದೇ, ಭಾವ, ಅಕ್ಕಾ, ನಾದಿನಿ ಸೊಸೆಯರು ಅದೆಷ್ಟು ಕಿರುಕುಳ ಕೊಟ್ಟಿಲ್ಲ?, ಜಾಗದಿಂದ ಹಿಡಿದು ದಾಖಲೆ ಪತ್ರಗಳಿಗೆ ಅದೆಷ್ಟು ಸತಾಯಿಸಿಲ್ಲ? ಇದನ್ನೆಲ್ಲಾ ಯೋಚಿಸುತ್ತಿದ್ದವಳಿಗೆ ಕಣ್ಣು ಮಂಜಾಗಿತ್ತು. ಹಾಗೇ ನನ್ನ ಅಣ್ಣ ಅದೆಷ್ಟು ನೆರವಾಗಿದ್ದ. ಅವನೊಂದಿಗೆ ಈಗ ನಾನು ಮಾತನಾಡದಂತೆ ಮಾಡಿ ಬಿಟ್ಟಿದ್ದಾರೆ. ಅಷ್ಟರಲ್ಲಿ ಮಹಾತ್ಮರು ಮುಂದುವರಿಸಿದರು, “ಎರಡನೆಯ ಇಟ್ಟಿಗೆ ವಿಶ್ವಾಸ. ಯಾರಲ್ಲಿ ವಿಶ್ವಾಸ ಇಡಬೇಕು ಯಾರ ಮೇಲೆ ಇಡಬಾರದು ಎನ್ನುವುದು ನಿನಗೆ ಗೊತ್ತಿರಬೇಕು. ನಿಜವಾಗಿ ನಮ್ಮವರ ಮೇಲೆ ಮಾತ್ರ ವಿಶ್ವಾಸವಿರಲಿ. ನಮ್ಮವರು ಎಂದು ಹೇಳಿ ನಾಟಕ ಮಾಡುವವರ ಮೇಲೆ ಎಂದಿಗೂ ವಿಶ್ವಾಸ ಬೇಡ. ಅವರನ್ನು ಹೊರಗೆ ಇಟ್ಟು ಬಿಡು” ಎಂದಾಗ ಆಕೆಗೆ ಜ್ಞಾನೋದಯವಾಗಿತ್ತು. ತಕ್ಷಣ ಅಣ್ಣನಿಗೆ ಫೋನ್ ಮಾಡಿ ಬರ ಹೇಳಿದಳು. ಮೇಸ್ತ್ರಿ ಕೆಲಸದವರಿಗೆ ಫೋನ್ ಮಾಡಿ ನಾಳೆಯೇ ಕೆಲಸ ಸ್ಟಾರ್ಟ್ ಆಗಲಿದೆ ಎಂದು ಹೇಳಿ ಅಲ್ಲಿಂದ ಹೊರ ಬಂದಳು. ಅಲ್ಲಿದ್ದವರಿಗೆ ಆಶ್ಚರ್ಯವಾಗಿತ್ತು ಎಲ್ಲಾ ಕಾರ್ ಹತ್ತಿದರು. ನಾದಿನಿ, ಬಾವಂದಿರ ಮುಖ ಸಿಟ್ಟಲ್ಲಿ ಕುದಿಯುತಿತ್ತು. ಅಷ್ಟರಲ್ಲಿ ಅಣ್ಣನ ಕಾರ್ ಬಂದಿತ್ತು. ನೀವು ಹೋಗಿ 2 ತಿಂಗಳಲ್ಲಿ ಮನೆ ಮುಗಿಸಿ ಮತ್ತೆ ಗೃಹಪ್ರವೇಶಕ್ಕೆ ಕರೆಯುತ್ತೇನೆ. ಅಲ್ಲಿ ತನಕ ತವರು ಮನೆಯಲ್ಲಿರುತ್ತೇನೆ ಎಂದವಳೇ ಅಣ್ಣನ ಕಾರು ಹತ್ತಿಯೇ ಬಿಟ್ಟಳು.
ಮಹಾತ್ಮರು ಕೊಟ್ಟಿದ್ದ ಆ 2 ಇಟ್ಟಿಗೆ ನಿಜಕ್ಕೂ ಆಕೆಗೆ ಬಹಳಷ್ಟು ನೆರವಾಗಿತ್ತು. ನಂಬಿಕೆ ಹಾಗು ವಿಶ್ವಾಸ ಅದೆಷ್ಟು ಅದ್ಭುತ ವಸ್ತುಗಳು ನೋಡಿ. ನಂಬಿಕೆ ವಿಶ್ವಾಸ ಇದ್ದರಷ್ಟೇ ಸಂಬಂಧ. ಜೀವನದಲ್ಲಿ ಕೊನೆಗೆ ಉಳಿಯುವುದು ಇವಷ್ಟೇ. ಹಾಗಾಗಿ ಸುಲಭದಲ್ಲಿ ಸಿಗುವ ಈ ವಸ್ತುಗಳನ್ನು ಹಣಕ್ಕೋ, ಅಧಿಕಾರಕ್ಕೋ, ಅಹಂಕಾರಕ್ಕೋ ಕಳೆದುಕೊಳ್ಳಬೇಡಿ. ಯಾಕೆಂದರೆ ನೆನಪಿಡಿ ಅವು ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗದ ಅಮೂಲ್ಯ ವಸ್ತುಗಳು.
ಡಾ. ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ