ವಿಶ್ವದಲ್ಲೇ ದೊಡ್ಡ ಅನಿವಾಸಿ ಭಾರತೀಯ ಸಾಂಸ್ಕೃತಿಕ ಸಂಘಟನೆ ದುಬಾಯಿಯಲ್ಲಿ ಇರುವ ಇಂಡಿಯನ್ ಸೋಶಿಯಲ್ ಎಂಡ್ ಕಲ್ಚರಲ್ ಸೆಂಟರ್ ಇದರ ಉಪಾಧ್ಯಕ್ಷ ಪದದಲ್ಲಿ ಗಮನೀಯ ಸೇವೆ ಸಲ್ಲಿಸಿದ ತುಳುನಾಡಿನ ಪುತ್ತೂರು ಮೂಲದ ಪ್ರತಿಷ್ಠಿತ ಮಿತ್ರಂಪಾಡಿ ಮನೆತನದ ಶ್ರೀ ಜಯರಾಮ ರೈ ತನ್ನ ಸಂಘಟನಾ ಸಾಮರ್ಥ್ಯ ಜನಸಂಪರ್ಕ ಕಲಾಪ್ರೇಮ ಹಾಗೂ ನಿರ್ವ್ಯಾಜ್ಯ ಪರೋಪಕಾರ ಸ್ವಭಾವಕ್ಕೆ ಹೆಸರಾದವರು. ತುಳುನಾಡಿನ ಪುತ್ತೂರು ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧಿ ಪಡೆದ ಊರಾಗಿದ್ದು ಇಲ್ಲಿ ಜನ್ಮ ತಳೆದ ಅದೆಷ್ಟೋ ಮಂದಿ ತಮ್ಮ ಸಾಂಸ್ಕೃತಿಕ ಸಾಹಿತ್ಯದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ನಾಡಿಗೆ ಮಾದರಿಯಾಗಿದ್ದಾರೆ. ಪುತ್ತೂರಿನ ಕೆದಂಬಾಡಿ ಗ್ರಾಮ ಇಲ್ಲಿನ ಎಲ್ಲಾ ಹಿರಿಯರಿಂದ ಕಿರಿಯ ನಾಗರಿಕರು ಅತ್ಯಂತ ಪೂಜ್ಯ ಗೌರವ ಭಾವದಿಂದ ಕಾಣುವ ಹೆಸರಾಂತ ಕೃಷಿ ಪ್ರಧಾನ ಕುಟುಂಬದ ಪ್ರಗತಿ ಪರ ಕೃಷಿಕರಾಗಿದ್ದ ಕೆದಂಬಾಡಿ ಚೆನ್ನಪ್ಪ ರೈ ಹಾಗೂ ಸುಶೀಲೆ ಅನ್ನಪೂರ್ಣೆ ಎಂದೇ ಕರೆಸಿಕೊಳ್ಳುತ್ತಿದ್ದ ದಿವಂಗತ ಡಿಂಬ್ರಿಗುತ್ತು ಶ್ರೀಮತಿ ಸರಸ್ವತಿ ಸಿ ರೈ ದಂಪತಿಯರಿಗೆ ಪುತ್ರರಾಗಿ ಜನಿಸಿದ ರೈ ಅವರು ಒಂದು ಸುಸಂಸ್ಕೃತ ಗೌರವಾನ್ವಿತ ಕುಟುಂಬದ ಹಿನ್ನೆಲೆ ಹೊಂದಿದ್ದ ಕಾರಣ ಶಿಸ್ತು ಸಂಸ್ಕಾರ ಸಾಹಿತ್ಯಕ ಸಾಂಸ್ಕೃತಿಕ ವಿಶೇಷತೆಗಳನ್ನು ಬಾಲ್ಯದಿಂದಲೇ ಮೈಗೂಡಿಸಿ ಕೊಂಡು ಬೆಳೆದವರು.
ಬೆಂಗಳೂರಿನ ಯುವಬಂಟ ಸಮಾಜದ ಅಧ್ಯಕ್ಷರಾಗಿ ತುಳುವೆರೆಂಕುಲು ಸಂಘಟನೆ ಹಾಗೂ ಲಯನ್ಸ್ ಕ್ಲಬ್ ಗಳ ಪದಾಧಿಕಾರಿಯಾಗಿ ಮಹತ್ವದ ಸೇವೆ ಸಲ್ಲಿಸಿದ್ದರು. 1999 ರಲ್ಲಿ ಕೊಲ್ಲಿ ರಾಷ್ಟ್ರ ಯು.ಎ.ಇ ಅಬುದಾಬಿಯಲ್ಲಿ ತನ್ನ ವೃತ್ತಿ ಜೀವನ ಆರಂಭಿಸಿದರು. ಇಲ್ಲಿನ ಬಿನ್ ಫರ್ದಾನ್ ಗ್ರೂಪಿನ ಫೈನಾನ್ಸ್ ಮೆನೇಜರ್ ಆಗಿ ನೇಮಕಗೊಂಡವರು ಸಂಸ್ಥೆಯ ಶೀಘ್ರ ಪ್ರಗತಿಯಲ್ಲಿ ರೈ ಅವರ ಪ್ರಾಮಾಣಿಕ ವಿಶಿಷ್ಟ ಕಾರ್ಯಕೌಶಲದ ಸೇವೆಯನ್ನು ಅನುಲಕ್ಷಿಸಿದ ಆಡಳಿತ ಇವರಿಗೆ ಪದೋನ್ನತಿ ನೀಡಿದ ಬಳಿಕ ಪ್ರಸ್ತುತ ಫೈನಾನ್ಸ್ ಎಂಡ್ ಎಡ್ಮಿನ್ ಮೆನೇಜರ್ ಆಗಿ ಉನ್ನತ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ತನ್ನ ಬಿಡುವಿನ ಸಮಯವನ್ನು ಸಮಾಜಸೇವೆ, ಸಾಂಸ್ಕೃತಿಕ, ಕಲಾಸೇವೆ ಸಂಘಟನೆಗಳಿಗೆ ಮೀಸಲಾಗಿಟ್ಟಿದ್ದಾರೆ. ಇಂಡಿಯನ್ ಸೋಶಿಯಲ್ ಸೆಂಟರ್ ಟೋಸ್ಟ್ ಮಾಸ್ಟರ್ ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಅದನ್ನು ಮುನ್ನಡೆಸುತ್ತಿದ್ದಾರೆ.
ವೃತ್ತಿ ಜೊತೆಗೆ ತನ್ನ ಪ್ರವೃತ್ತಿಗಳಾದ ಸಮಾಜ ಸೇವೆ, ಸಾಂಸ್ಕೃತಿಕ ಸಂಘಟನೆ, ಕಾರ್ಯಕ್ರಮ ಸಂಯೋಜನೆ, ಯಕ್ಷಗಾನ, ನಾಟಕ, ಸಂಗೀತಾದಿ ಕಲೆಗಳಿಗೆ ಸತತ ಪ್ರೋತ್ಸಾಹ ನೀಡುವ ಮೂಲಕ ಪುತ್ತೂರಿನಿಂದ ಅಬುಧಾಬಿ ತನಕದ ಸಾಂಸ್ಕೃತಿಕ ಸೇತು ಎಂಬಂತೆ ಕಾರ್ಯವೆಸಗುತ್ತಾ ತುಳುಕನ್ನಡಿಗರ ಅಭಿಮಾನದ ಮೂರ್ತಿ ಎನಿಸಿಕೊಂಡಿರುತ್ತಾರಲ್ಲದೆ ಅಬುದಾಬಿ ಕನ್ನಡಿಗರ ಒಗ್ಗಟ್ಟು ಸ್ಥಾಪಿಸಿ ಏಕಸೂತ್ರದಲ್ಲಿ ಬಂಧಿಸುವ ಕೆಲಸವನ್ನು ತನ್ನ ಸಾಂಸ್ಕೃತಿಕ ಸಂಘಟನೆ ಮುಖಾಂತರ ಮಾಡಿಕೊಂಡು ಬಂದಿರುತ್ತಾರೆ. ಇವರು ಆಪತ್ತಿಗೆ ಸಿಕ್ಕಿ ಹಾಕಿಕೊಂಡ ಬಾಂಧವರ ಸಹಾಯಕ್ಕೆ ಧಾವಿಸಿ ತನ್ನಿಂದಾಗುವ ಸಹಾಯ ಮಾಡುವುದರಲ್ಲಿ ಹೆಸರುವಾಸಿಯಾಗಿ ಅದೆಷ್ಟೋ ಜನರ ಆಪದ್ಬಾಂಧವನೆಂದು ಕರೆಸಿಕೊಂಡಿದ್ದಾರೆ. ಒಂದು ಬಾರಿ ಪುತ್ತೂರಿನ ಜಾತ್ರೆ ಸಂದರ್ಭದಲ್ಲಿ ಅಲ್ಲಿಗಾಗಮಿಸಿದ ದೂರದೂರಿನ ಡೆಕೋರೆಶನ್ ಹಾಗೂ ಪುರಶೃಂಗಾರಕ್ಕೆ ಗೊತ್ತು ಮಾಡಿದ ತಂಡ ಪುತ್ತೂರು ಜಾತ್ರೆಗೆ ಬಂದು ಆ ಸಮಯದ ಕೊರೋನ ಲಾಕ್ ಡೌನ್ ಕಾರಣ ಪುತ್ತೂರಿನಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಸಂದರ್ಭದಲ್ಲಿ ಅವರು ಅಲ್ಲಿದ್ದಷ್ಟು ಕಾಲ ಅವರ ದೈನಂದಿನ ಆಹಾರ, ವಸತಿ ಪೂರೈಕೆ ವ್ಯವಸ್ಥೆ ಮಾಡಿದ ಪುಣ್ಯಾತ್ಮನನ್ನು ಅವರು ಭಾವಪರವಶತೆಯಿಂದ ಆರ್ದ್ರ ನಯನದಿಂದ ಕೃತಜ್ಞತೆ ಸಲ್ಲಿಸಿ ಇವರಿಗೆ ಶುಭಹಾರೈಕೆ ಸಲ್ಲಿಸಿದ್ದಾರೆ. ಇವರು ಸಾಮಾಜಿಕ ಕಳಕಳಿಯ ಬರಹಗಾರ ನಾಟಕಗಾರರಾಗಿದ್ದು ತಾವೆ ರಚಿಸಿ ನಟಿಸಿ ನಿರ್ದೇಶಿಸಿದ ಮಂತ್ರಿ ಮಂಡಲ ಮತ್ತು ಅಪ್ಪೆನ ತ್ಯಾಗ ಎಂಬ ಸಾಮಾಜಿಕ ಸಂದೇಶವನ್ನು ಸಾರುವ ನಾಟಕಗಳು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿವೆ.
ಯು.ಎ.ಇ ಯಲ್ಲಿ ಭಾರತದ ಆದಿವಾಸಿ ಜನಾಂಗದವರನ್ನು ಗುರುತಿಸಿ ಅವರ ಅವಶ್ಯಕತೆಗಳಿಗೆ ಸ್ಪಂದಿಸಿರುವುದು ಮಾತ್ರವಲ್ಲದೆ ಅವರ ಭಾಷೆ ಸಂಸ್ಕೃತಿ ಸಂಪ್ರದಾಯಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಆ ಜನಾಂಗದ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೆ ನಮ್ಮ ರಾಜ್ಯದ ಅಲ್ಪ ಸಂಖ್ಯಾತರ ಸಂಸ್ಕೃತಿ ಸಂಪ್ರದಾಯಗಳನ್ನು ಅಧ್ಯಯನ ಮಾಡುವ ಮೂಲಕ ಅದರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿತ್ವ ಇವರದು. ಬ್ಯಾರಿ ಕೊಡವ ಕುಡುಬಿ ಭಾಷೆಗಳ ಪ್ರಚಾರ ಅಭಿವೃದ್ಧಿಗೆ ಕೂಡ ಶ್ರಮಿಸಿದ್ದಾರೆ. ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಜನ್ಮತಳೆದ ಪಟ್ಲ ಫೌಂಡೇಷನ್ ನ ಟ್ರಸ್ಟಿಯಾಗಿದ್ದುಕೊಂಡು ಅಶಕ್ತ ಕಲಾವಿದರಿಗೆ ಸಹಾಯ ಮಾಡುವ ಮಾನವೀಯ ಗುಣ ಹೊಂದಿರುವ ಇವರು ಹುಟ್ಟೂರಿನ ಅನೇಕ ಸಂಘ ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ದೇವಸ್ಥಾನಗಳಿಗೆ ಆರ್ಥಿಕ ಅನುದಾನ ನೀಡಿ ಮಹಾದಾನಿ ಎಂಬ ಗೌರವಕ್ಕೆ ಪಾತ್ರರಾಗಿದ್ದು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳಿಗೂ ನಿರಂತರ ಸ್ಪಂದಿಸುತ್ತಾರೆ. ಈ ರೀತಿ ಒಂದು ಸುಸಂಸ್ಕೃತ ಗೌರವಾನ್ವಿತ ಕುಟಂಬದ ಹಿನ್ನೆಲೆ, ಹೊರದೇಶದ ಉನ್ನತ ಹುದ್ದೆ ಸ್ಥಾನಮಾನ ಇವಕ್ಕೆ ಕಲಶಪ್ರಾಯವಾಗಿ ಸಾಮಾಜಿಕ ಗೌರವಗಳಿಂದ ಓರ್ವ ಘನತೆವೆತ್ತ ಸಮುದಾಯ ಬಾಂಧವರಾಗಿ ಕೀರ್ತಿ ಭಾಜನರಾದ ರೈ ಅವರು ಜನರ ಸೇವೆಗೆ ಸದಾ ತುಡಿಯುವ ಬಡವರ ಕಂಡರೆ ಮನಮಿಡಿಯುವ ಅವರನ್ನು ಎತ್ತಿ ಆದರಿಸಿ ಹಿಡಿಯುವ ಉದಾತ್ತ ಚರಿತರಾಗಿ ಪುತ್ತೂರಿನ ಜನಮಾನಸದಲ್ಲಿ ಪುತ್ತೂರಿನ ಮುತ್ತು ಎಂಬ ಪ್ರೀತಿಗೆ ಭಾಜರಾಗಿದ್ದಾರೆ.
ಸದಾ ಸಹಕಾರಿ ಸಹಚರಿ ಧರ್ಮಪತ್ನಿ ಶ್ರೀಮತಿ ಆಶಾ ಜೆ ರೈ, ಪುತ್ರ ತಾರಾನಾಥ ಜೆ ರೈ, ಸುಪುತ್ರಿ ಪ್ರಾಂಜಲಾ ರೈ ಅವರೊಂದಿಗಿನ ಸುಂದರ ಸಂತೃಪ್ತ ಸಾಂಸಾರಿಕ ಜೀವನ ಭಾಗ್ಯ ಹೊಂದಿರುವ ರೈ ಅವರು ಸಾಮಾಜಿಕವಾಗಿ ತನ್ನ ಹುಟ್ಟೂರಿನ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ಶ್ರಮಿಸುತ್ತಿದ್ದಾರೆ. ತನ್ನ ಆದಾಯದ ಒಂದಂಶವನ್ನು ಸಮಾಜಸೇವಾ ಕಾರ್ಯಗಳಿಗೆ, ಕಲೆ ಸಂಸ್ಕೃತಿ ಪೋಷಣೆಗೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲಿಡುವ ಅಪರೂಪದ ಕರ್ಮಯೋಗಿ ತನ್ನ ಸುಂದರ ರಾಜಸ ಸಾತ್ವಿಕ ವ್ಯಕ್ತಿತ್ವದಿಂದ ಸಾರ್ವಜನಿಕ ವಲಯವನ್ನು ಆಕರ್ಷಿಸುತ್ತಾರೆ. ಓರ್ವ ಉತ್ತಮ ಮಾತುಗಾರ, ಹವ್ಯಾಸಿ ಕಲಾವಿದ, ಬರಹಗಾರರೂ ಆಗಿರುವ ಇವರ ಬಹುಮುಖಿ ವ್ಯಕ್ತಿತ್ವ ಸಮಾಜದ ಇತರರಿಗೆ ಮಾದರಿಯಾಗಬಲ್ಲುದು. ಅನಿವಾಸಿ ಭಾರತೀಯ ಸೋಶಿಯಲ್ ಎಂಡ್ ಕಲ್ಚರಲ್ ಸೆಂಟರ್ ಇದರ ಲೆಕ್ಕ ಪರಿಶೋಧಕರಾಗಿಯೂ ಕಾರ್ಯನಿರತರಾದ ಶ್ರೀಯುತರು ಈ ಹಿಂದೆ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಅಬುದಾಬಿ ತುಳುಕನ್ನಡಿಗರ ಅಭಿಮಾನ ಬಂಧು ಮಿತ್ರಂಪಾಡಿ ಜಯರಾಮ ರೈ ಅವರು ಹುಟ್ಟೂರಿನ ಭಾಗ್ಯೋದಯದ ಬೆಳಕು ಎಂದು ಕರೆಸಿಕೊಳ್ಳುವ ಮೂಲಕ ತನ್ನ ಹಿರಿಯರು ಗಳಿಸಿದ ಕೀರ್ತಿಗೆ ಇನ್ನಷ್ಟು ಘನತೆ ಗೌರವಗಳನ್ನು ತಂದಿತ್ತು, ಆದರ್ಶದ ಘನತೆ ಗೌರವದ ಬಾಳನ್ನು ಬಾಳುತ್ತಿರವ ಮಿತ್ರಂಪಾಡಿ ಅವರಿಗೆ ಗೌರವ ನಮನ ಸಲ್ಲಿಸುತ್ತಾ ಭವಿಷ್ಯದಲ್ಲಿ ಇನ್ನಷ್ಟು ಸಮಾಜ ಮುಖಿ ಕಾರ್ಯಗಳಲ್ಲಿ ಅಗ್ರೇಸರರಾಗಿರುತ್ತಾ, ಸುಖ ಸಮೃದ್ಧಿ ಆರೋಗ್ಯ ನೆಮ್ಮದಿಯೊಂದಿಗೆ ಸುದೀರ್ಘ ಬಾಳನ್ನು ಬಾಳಲಿ ಎಂದು ಸರ್ವ ಸಮಾಜ ಬಾಂಧವರೊಂದಿಗೆ ಬಂಟ ಬಾಂಧವರ ಸಾಧನೆ ಗೌರವ ಗಾಥೆಗಳ ಮುಖವಾಣಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹೊಸ ವರ್ಷದ ಶುಭಾಶಯಗಳೊಂದಿಗೆ ಸದಾ ತಮ್ಮ ಜೀವನದ ಉತ್ಕರ್ಷಕ್ಕಾಗಿ ಪ್ರಾರ್ಥಿಸುತ್ತದೆ.
ಶುಭಂ… ಭದ್ರಂ… ಮಂಗಲಂ.
ಅರುಣ್ ಶೆಟ್ಟಿ ಎರ್ಮಾಳ್