ನಾವೆಲ್ಲ ಹುಟ್ಟುತ್ತಲೇ ಮಾತೃ ಋಣ, ಪಿತೃ ಋಣ ಹಾಗೂ ಸಮಾಜದ ಋಣವನ್ನು ಕೂಡಿಕೊಂಡೇ ಹುಟ್ಟುತ್ತೇವೆ. ಈ ಋಣಗಳನ್ನು ನಮ್ಮ ಜೀವಮಾನದಲ್ಲಿ ತೀರಿಸಲು ಸಾಧ್ಯವಿಲ್ಲ. ಕಿಂಚಿತ್ ಪ್ರಮಾಣದಲ್ಲಿಯಾದರೂ ಋಣಭಾರವನ್ನು ಹಗುರ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾದುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಈ ದೆಸೆಯಲ್ಲಿ ಕೆಲವರಾದರೂ ಪ್ರಯತ್ನ ಶೀಲರಾಗಿ ಸತತ ಸಂಘರ್ಷಗಳಿಂದ ಇಂಥ ಪಥದಲ್ಲಿ ಅಗ್ರೇಸರರಾಗಿ ಸಮಾಜದಲ್ಲಿ ಗುರುತಿಸಿ ಕೊಂಡಿರುವುದಷ್ಟೇ ಅಲ್ಲದೇ ತಮ್ಮ ಮಾತಾಪಿತರ ಹಾಗೂ ಹುಟ್ಟಿದ ಊರಿನ ಹೆಸರನ್ನು ಗೌರವದಿಂದ ಆಡಿಕೊಳ್ಳುವಂತೆ ಸಾಧನೆ ಮಾಡಿದವರನ್ನು ನೆನೆಸಿ ಕೊಂಡರೆ ಹೆಮ್ಮೆಯೆನಿಸುತ್ತದೆ. ಇಂಥವರ ಸಾಲಿನಲ್ಲಿ ನಿಸ್ಸಂಶಯವಾಗಿ ಹೆಸರಿಸಬಹುದಾದ ಹೆಸರು ಕಾರ್ಕಳ ತಾಲೂಕಿನ ಅಜೆಕಾರು ಮೂಲದ ಸಂಘಟಕ, ಸಮಾಜಸೇವಕ, ಜನಪರ ಕಾಳಜಿಯ ಸ್ನೇಹಜೀವಿ ಶ್ರೀ ವಿಜಯ್ ಶೆಟ್ಟಿ ಅವರದ್ದು.
ಕಾರ್ಕಳ ತಾಲೂಕಿನ ಅಜೆಕಾರು ಕೊರಗ ಶೆಟ್ಟಿ ಹಾಗೂ ಶ್ರೀಮತಿ ಸರಸ್ವತಿ ಕೆ ಶೆಟ್ಟಿ ದಂಪತಿಗಳಿಗೆ ಆರನೇ ಪುತ್ರನಾಗಿ ಜನಿಸಿದ ವಿಜಯ್ ಶೆಟ್ಟಿ ಅವರು ಅಜೆಕಾರು ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಹಾಗೂ ಅಜೆಕಾರು ಜ್ಯೋತಿ ಹೈಸ್ಕೂಲ್ ನಲ್ಲಿ ಫ್ರೌಡಶಿಕ್ಷಣವನ್ನು ಪೂರೈಸಿದರು. ಬೆಳೆವ ಸಿರಿ ಮೊಳಕೆಯಲ್ಲಿ ನೋಡು ಎಂಬ ನಾಣ್ಣುಡಿಯಂತೆ ಕಿಶೋರಾವಸ್ಥೆಯಲ್ಲೇ ರಂಗಭೂಮಿ ಹಾಗೂ ಯಕ್ಷಗಾನ ಮೊದಲಾದ ಕಲಾಪ್ರಕಾರಗಳಲ್ಲಿ ಆಸಕ್ತಿ ತೋರಿ ಮುಂದೆ ಅನೇಕ ನಾಟಕ ಯಕ್ಷಗಾನಗಳಲ್ಲಿ ಪಾತ್ರವಹಿಸಿ ತನ್ನ ವಿಶೇಷ ಪ್ರತಿಭೆಯ ಪರಿಚಯ ನೀಡಿದವರು. ಬಾಲ್ಯದ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸಮಾಧಾನಕರವಾಗಿರಲಿಲ್ಲವಾದ ಕಾರಣ ಪ್ರತಿಭಾವಂತನಾದರೂ ತನ್ನ ವಿದ್ಯಾಭ್ಯಾಸವನ್ನು ಹೈಸ್ಕೂಲು ಶಿಕ್ಷಣಕ್ಕೆ ಮೊಟಕುಗೊಳಿಸ ಬೇಕಾಗಿ ಬಂದುದು ಅವರಿಗೆ ಈಗಲೂ ನೋವನ್ನುಂಟು ಮಾಡುತ್ತದೆ. ಆದರೆ ತನ್ನ ಸಂಕಲ್ಪ ಶಕ್ತಿ, ಇಚ್ಛಾ ಶಕ್ತಿಗಳು ಪ್ರಭಲವಾಗಿದ್ದ ಕಾರಣ ಯಾರದೇ ಆಳಾಗಿ ದುಡಿಯಲು ತನ್ನ ಸ್ವಾಭಿಮಾನ, ಆತ್ಮಸಮ್ಮಾನ ಒಪ್ಪದೇ ಇದ್ದುದರಿಂದ ತಾನು ನನ್ನದೇ ಆದ ವ್ಯಾಪಾರ ಆರಂಭಿಸಿ ಆರ್ಥಿಕ ಪ್ರಗತಿ ಕಾಣಬೇಕೆಂಬ ಮಹತ್ವಾಕಾಂಕ್ಷೆಯಿಂದ ಆರಂಭದಲ್ಲಿ ಅತೀ ಸಣ್ಣ ಮೊತ್ತದೊಂದಿಗೆ ಮರದ ಡಿಪೋ ಒಂದನ್ನು ಆರಂಭಿಸಿದರು.
ತನ್ನ ಉತ್ಕಟ ಇಚ್ಚೆ, ಕಠಿಣ ಪರಿಶ್ರಮದ ಫಲವಾಗಿ ಇಂದು ಅದೇ ವ್ಯಾಪಾರ ಬೃಹತ್ ಉದ್ದಿಮೆಯಾಗಿ ಬೆಳೆದಿದೆ. ಪರಿಶ್ರಮಕ್ಕೆ ಪರ್ಯಾಯವಿಲ್ಲವೆಂಬ ಜೀವನ ಸಿದ್ಧಾಂತ ಹೊಂದಿದ ವಿಜಯ್ ಶೆಟ್ಟರು ಇಂದು ಓರ್ವ ಯಶಸ್ವಿ ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದಾರೆ. ಇಂದು ಅವರ ಉದ್ಯಮ ಶ್ರೀ ನಿತ್ಯಾನಂದ ವುಡ್ ಇಂಡಸ್ಟ್ರೀಸ್ ಎಂಬ ನಾಮಫಲಕದಿಂದ ಉದ್ಯಮ ಕ್ಷೇತ್ರದಲ್ಲಿ ಬೆಳಗುತ್ತಿದೆ. ಆದರೆ ಮೂಲತಃ ಪರೋಪಕಾರ ಸ್ವಭಾವದ ಶೆಟ್ಟರು ತಾನು ಸಂಪಾದಿಸಿದ ಲಾಭವನ್ನು ತಾನು ಮತ್ತು ತನ್ನವರು ಮಾತ್ರ ಅನುಭವಿಸಬೇಕೆನ್ನುವ ಜಾಯಮಾನದವರಲ್ಲ. ಕೈ ಚಾಚಿ ಬಂದ ಅಶಕ್ತರಿಗೆ ನಾಸ್ತಿ ಎನ್ನದೆ ತನ್ನಿಂದಾದ ಸಹಾಯ ಮಾಡತೊಡಗಿದರು. ಅಷ್ಟೇ ಅಲ್ಲದೆ ಮುಂದೆ ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಕಲಾಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಾರ್ವಜನಿಕ ಜೀವನದಲ್ಲಿ ಮಿಂಚ ತೊಡಗಿದರು.
ಶ್ರೀಯುತ ವಿಜಯ್ ಶೆಟ್ಟಿ ಅವರು ಅಜೆಕಾರು ವಿಷ್ಣುಮೂರ್ತಿ ಯಕ್ಷಗಾನ ಮಂಡಳಿಯ ಸ್ಥಾಪಕಾಧ್ಯಕ್ಷರಾಗಿ, ಕಾರ್ಕಳ ಯುವಶಕ್ತಿ ಎಜುಕೇಶನ್ ಟ್ರಸ್ಟ್ ಇದರ ನಿರ್ದೇಶಕರಾಗಿ, ಕಾರ್ಕಳ ಯಕ್ಷ ಕಲಾರಂಗ, ಪಟ್ಲ ಫೌಂಡೇಷನ್ ಕಾರ್ಕಳ ಘಟಕದ ಅಧ್ಯಕ್ಷರಾಗಿ, ಅಜೆಕಾರಿನ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಅಧ್ಯಕ್ಷರಾಗಿ, ರಾಜಕೀಯವಾಗಿ ಭಾರತೀಯ ಜನತಾ ಪಾರ್ಟಿ ಕಾರ್ಕಳ ಇದರ ಕೋಶಾಧಿಕಾರಿಯಾಗಿ, ಅದೇ ರೀತಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಕಾರ್ಕಳ ಹೆಬ್ರಿ ವಲಯದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಪು ಮೂಲದ ಶ್ರೀಮತಿ ಸವಿತಾ ವಿ ಶೆಟ್ಟಿ ಜೊತೆಗಿನ ವಿವಾಹ ಬಂಧನ ಬಳಿಕದ ದಾಂಪತ್ಯ ಜೀವನದಲ್ಲಿ ವಿಖ್ಯಾತ್ ಮತ್ತು ವಿಜೇತ ಎಂಬ ಎರಡು ಮಕ್ಕಳನ್ನು ಪಡೆದು ಸಂತೃಪ್ತ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. ಶ್ರೀಯುತರ ಧರ್ಮಪತ್ನಿ ಕಾರ್ಕಳ ಹೆಬ್ರಿ ವಲಯದ ಬಂಟರ ಮಹಿಳಾ ಸಂಘದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ಪುತ್ರ ವಿಖ್ಯಾತ್ ಶೆಟ್ಟಿ ಭಾಜಪ ಉಡುಪಿ ಜಿಲ್ಲೆಯ ಯುವ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳು ಅಳಿಯ ಕತಾರ್ ನಲ್ಲಿ ವಾಸ್ತವ್ಯ ಹೊಂದಿದ್ದಾರೆ.
ಅದೇ ರೀತಿ ಮರ್ಣೆ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾಗಿಯೂ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ಗುರುತಿಸಿ ಕೊಂಡಿರುತ್ತಾರೆ. ಪರಿಸರದಲ್ಲಿ ನಡೆಯುವ ತಾಳಮದ್ದಳೆ ಕೂಟಗಳಲ್ಲಿ ಅರ್ಥಧಾರಿಯಾಗಿ ಭಾಗವಹಿಸಿ ತನ್ನದೇ ಶೈಲಿಯ ಮಾತುಗಾರಿಕೆ ಮೂಲಕ ಕಲಾಭಿಮಾನಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ತಾಲೂಕಿನ ಕಲಾ ಸಂಘಟನೆಗಳು ಇವರಿಗೆ ಕಲಾಕರ್ಣ ಎಂಬ ಉಪಾದಿ ನೀಡಿ ಗೌರವಿಸಿದೆ. ಅದೇ ರೀತಿ ಕಾರ್ಕಳ ಜೇಸೀಸ್ ವತಿಯಿಂದ ಸೇವಾರತ್ನ ಪ್ರಶಸ್ತಿಯಿಂದ ವಿಭೂಷಿತರಾಗಿದ್ದಾರೆ. ಹೀಗೆ ಓರ್ವ ಬಹುಮುಖ ಪ್ರತಿಭೆಯ ಸಂಘಟಕನಾಗಿ, ಸಮಾಜ ಸೇವಕನಾಗಿ, ಜನ ಪ್ರತಿನಿಧಿಯಾಗಿ ಸಮಾಜದಲ್ಲಿ ಗೌರವಾದರದ ಸ್ಥಾನ ಪಡೆದಿರುವ ಶ್ರೀ ವಿಜಯ್ ಶೆಟ್ಟಿ ಅಜೆಕಾರು ಅವರ ಭವಿಷ್ಯ ಜೀವನದಲ್ಲಿ ಇನ್ನಷ್ಟು ಪ್ರಗತಿ ಪ್ರಸಿದ್ಧಿ ದೊರೆತು, ಆರೋಗ್ಯ ನೆಮ್ಮದಿ ಸ್ಥಿರವಿದ್ದು, ಅವರಿಂದ ಇನ್ನಷ್ಟು ಸಮಾಜಸೇವೆ ಲಭ್ಯವಾಗಲಿ ಎನ್ನುವ ಆಶಯದೊಂದಿಗೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಸರ್ವರಿಗೂ ಶುಭವಾಗಲಿ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು