ಕನ್ನಡ ಕರಾವಳಿ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಗಾಧ ಮತ್ತು ಅನನ್ಯ. ಆಧುನಿಕ ವೈದ್ಯವಿಜ್ಞಾನದ ಜೊತೆಜೊತೆಗೆ ಆಯುರ್ವೇದ ವಿಜ್ಞಾನದ ಬೆಳವಣಿಗೆ ಮತ್ತು ವಿಸ್ತಾರ ಅಷ್ಟೇ ವೇಗವಾಗಿ ಸಾಗಿದೆ. ಆಯುರ್ವೇದ ವೈದ್ಯ ವಿಜ್ಞಾನದ ಅಭ್ಯಾಸ, ಅನ್ವೇಷಣೆ, ಮಾನಕೀಕರಣ,ಪ್ರಯೋಗಶೀಲತೆ ಹಾಗೂ ವೃತ್ತಿಪರತೆ ಸಾವಿರಸಾವಿರ ಸಂಖ್ಯೆಯ ರೋಗಿಗಳ ಮೊಗದಲ್ಲಿ ನಗು ಹೊಮ್ಮಿಸಿದೆ.
ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಆಯುರ್ವೇದ ವೃತ್ತಿಪರ ಸಂಸ್ಥೆಗಳನ್ನು ಹೊರತುಪಡಿಸಿ ಅಲೋಪತಿ ನರ್ಸಿಂಗ್ ಹೋಮ್ ಗಳಂತೆ ಸುಸಜ್ಜಿತ ಖಾಸಗಿ ಆಯುರ್ವೇದ ಆಸ್ಪತ್ರೆಗಳು ರಾಜ್ಯದಲ್ಲಿ ಕೇವಲ ಬೆರಳೆಣಿಕೆಯಷ್ಟು. ಆರ್ಥಿಕ ಸವಾಲುಗಳನ್ನು ಎದುರಿಸಿ ದೂರಗಾಮಿ ಸ್ಥಿರತೆಯನ್ನು ಕಾಪಾಡಿಕೊಂಡು ಉನ್ನತ ಸೇವಾತತ್ಪರತೆಯನ್ನು ಮೆರೆಯುವುದು ನಿಜಕ್ಕೂ ಕಠಿಣ. ಹಾಗಾಗಿಯೇ ಏನೋ ಬಡ ಮಧ್ಯಮವರ್ಗದ ಜನರಿಗೆ ಆಯುರ್ವೇದ ಔಷಧ, ಚಿಕಿತ್ಸೆ, ಶುಶ್ರೂಷೆ ಮರೀಚಿಕೆಯಾಗಿದ್ದು ಮಾತ್ರವಲ್ಲದೆ ಆಯುರ್ವೇದದ ಬಗೆಗಾಗಿನ ಪ್ರಚಾರ ಪ್ರಸಾರ ತೀರಾ ನೀರಸವಾಯಿತು.
ಲಾಭಾನಾಂ ಶ್ರೇಯಃ ಆರೋಗ್ಯಮ್ – ಬದುಕಿನಲ್ಲಿ ಸಂಪಾದಿಸುವ ಎಲ್ಲಾ ಲಾಭಗಳಿಗಿಂತ ಆರೋಗ್ಯ ಸಂಪಾದನೆ ಶ್ರೇಷ್ಠ ಲಾಭ.
ಆಯುರ್ವೇದ ಜೀವನ ಪದ್ಧತಿ ಸಾರ್ವಕಾಲಿಕ ಮತ್ತು ಸರ್ವಮಾನ್ಯ. ಆರೋಗ್ಯ ರಕ್ಷಣೆ ಮತ್ತು ರೋಗ ನಿವಾರಣೆಯ ಮಹೋನ್ನತ ಧ್ಯೇಯದೊಂದಿಗೆ ಪರಿಪೂರ್ಣ ಆರೋಗ್ಯದ ಚಿಂತನೆ ಆಯುರ್ವೇದದ ವೈಶಿಷ್ಟ್ಯ. ಇಲ್ಲಿ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ನೆರವಾಗುವ, ಯೌವನದ ಸಮಸ್ಯೆಗಳಿಗೆ ಪರಿಹಾರ ನೀಡುವ, ವೃದ್ದಾಪ್ಯದ ತೊಂದರೆಗಳನ್ನು ದೂರೀಕರಿಸುವ,ಗರ್ಭಿಣಿ-ಸೂತಿಕಾ ಮಹಿಳೆಯರ ಆರೈಕೆಗೆ ಪೂರಕವಾಗಿರುವ,ಬಂಜೆತನದ ನಿವಾರಣೋಪಾಯ ಸೂಚಿಸುವ… ಹೀಗೆ ಸಮಾಜದ ಎಲ್ಲರ ಆರೋಗ್ಯ ಕಾಳಜಿಯೊಂದಿಗೆ ಸಂತೃಪ್ತ ಜೀವನಕ್ಕೆ ಸಹಕಾರಿಯಾಗುವ ಚಿಕಿತ್ಸಾ ಕೌಶಲ ಅಷ್ಟಾಂಗ ಆಯುರ್ವೇದದ ಮಹತ್ತಿಕೆ.
ಕಾಯ ಚಿಕಿತ್ಸಾ, ಶಲ್ಯ ಚಿಕಿತ್ಸಾ, ಶಾಲಾಕ್ಯ ಚಿಕಿತ್ಸಾ, ಬಾಲರೋಗ ಚಿಕಿತ್ಸಾ, ಗ್ರಹ ಚಿಕಿತ್ಸಾ, ವಿಷ ಚಿಕಿತ್ಸಾ, ರಸಾಯನ, ವಾಜೀಕರಣ, ಪಂಚಕರ್ಮ, ಪ್ರಸೂತಿ-ಸ್ತ್ರೀರೋಗ ಚಿಕಿತ್ಸಾ, ಚರ್ಮರೋಗ ಚಿಕಿತ್ಸಾ, ಸ್ವಾಸ್ತ್ಯರಕ್ಷಣ…ಹೀಗೆ ಆಯುರ್ವೇದದ ಪಾತ್ರದ ಗಾತ್ರ ಅಗಾಧ.
ವಟಿ, ಚೂರ್ಣ, ಕಲ್ಕ, ಲೇಹ್ಯ,ಲೇಪ,ಕಷಾಯ,ಪಾನೀಯ, ಆಸವ, ಅರಿಷ್ಠ, ಭಸ್ಮ,ಹಿಮ,ಫಾಂಟ, ಪಾನಕ, ದ್ರಾವಕ,ಶರ್ಕರ, ಲವಣ, ಖಂಡ, ಮಷಿ, ಸುರ,ತಕ್ರ, ತುಪ್ಪ, ವಸಾ, ಮಜ್ಜಾ,ಪೊಟ್ಟಲಿ, ಪರ್ಪಟಿ, ರಸ,ರಸಾಯನ…ವಿವಿಧ ಔಷಧಿ ಪ್ರಕಾರಗಳು ಆಯುರ್ವೇದಕ್ಕೆ ಆಚಾರ್ಯರ ಕೊಡುಗೆ.
ಕ್ಷಾರ-ಅಗ್ನಿ-ಶಸ್ತ್ರ ಕರ್ಮ,ಅನುಶಸ್ತ್ರ ಕರ್ಮ, ಪಂಚಕರ್ಮ, ಉಪಕರ್ಮ, ನೇತ್ರ ಕಲ್ಪ, ರಕ್ತಮೋಕ್ಷಣ, ಯೋಗ,ಪಥ್ಯ ಕಲ್ಪ, ಅನುಪಾನ, ಸಹಪಾನ, ದಿನ-ಸಾಯಂ-ರಾತ್ರಿ ಚರ್ಯೆ, ಋತು ಚರ್ಯೆ, ಗರ್ಭಿಣಿ,-ಸೂತಿಕಾ ಚರ್ಯೆ…ವಿಭಿನ್ನ ವಿಶಿಷ್ಟ ಚಿಕಿತ್ಸಾ ಪರಿಕ್ರಮಗಳು ಆಯುರ್ವೇದದ ಪರ್ಯಾಪ್ತ ಶ್ರೇಷ್ಠತೆಗೆ ಸಾಕ್ಷಿ.
ಡಾ.ಬುಡ್ನಾರು ವಿನಯಚಂದ್ರ ಶೆಟ್ಟಿ ಇವರು ಆಯುರ್ವೇದ ವಿಜ್ಞಾನದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದು ಪ್ರತಿಷ್ಠಿತ ಆಯುರ್ವೇದ ಕಾಲೇಜಿನಲ್ಲಿ ಪ್ರಾಧ್ಯಾಪಕ,ಮಾರ್ಗದರ್ಶಕ,ಪ್ರಾಚಾರ್ಯರಾಗಿ ಸುದೀರ್ಘ ಅನುಭವ ಹೊಂದಿ ತಮ್ಮ ಸೇವೆಯನ್ನು ಸಮಾಜಮುಖಿಯಾಗಿಸಬೇಕೆಂದು ಆಯುರ್ವೇದ ಸಿದ್ಧಾಂತವನ್ನಿಟ್ಟುಕೊಂಡು ಆಸ್ಪತ್ರೆ ಸ್ಥಾಪಿಸಲು ಉದ್ದೇಶಿಸಿದರು.
ಹಾಗಾಗಿ ಆಯುರ್ವೇದದ ಚಿಕಿತ್ಸೆ, ತನ್ಮೂಲಕ ರೋಗಿಗಳ ಆರೈಕೆಗಾಗಿ ಸುಸಜ್ಜಿತ ಆಯುರ್ವೇದ ಆಸ್ಪತ್ರೆ “ಕ್ಷೇಮಧಾಮ” ಬ್ರಹ್ಮಾವರದ ಬಸ್ ನಿಲ್ದಾಣದ ಸಮೀಪ ಸೇವೆಗೆ ತೆರೆದುಕೊಂಡಿತು.
ಆಸ್ಪತ್ರೆಯ ಸೇವೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಡೆಯುವ ಮೂಲಕ ಆರೋಗ್ಯ ಕಾಪಿಟ್ಟುಕೊಂಡು ಸ್ವಾಸ್ಥ್ಯ ಸಾಮಾಜ ಕಟ್ಟುವಲ್ಲಿ ಈ ಆಸ್ಪತ್ರೆ ಒಂದು ಮಾದರಿಯಾಗಿದೆ.