ಅನ್ನ ಇಲ್ಲದೆ ಸತ್ತ ತಾಯಿಗೆ ವೈಕುಂಠ ಸಮಾರಾಧನೆ ಮಾಡುವ ಮಕ್ಕಳು ಇಲ್ಲಿ ಬಹು ಸಂಖ್ಯೆಯಲ್ಲಿದ್ದಾರೆ. ‘ಇರುವಾಗ ಸಾರಿ, ಸತ್ತ ಮೇಲೆ ಗೋರಿ’. ಇದು ಕೈಲಾಸಂ ಇಲ್ಲಿಯ ಜನರ ನಡವಳಿಕೆ ಕಂಡು ಆಡಿದ ವ್ಯಂಗ್ಯ ಮಾತು. ನಮ್ಮ ಸಂಸ್ಕೃತಿಯ ಸ್ವಚ್ಚಂದ ಮುಖ ಮತ್ತು ಸೊಗಸಾದ ಮುಖವನ್ನು ಸಾಹಿತ್ಯ ಬಿಂಬಿಸುತ್ತದೆ. ಕೈಲಾಸಂ ಸಾಹಿತ್ಯ ಮತ್ತು ಸಾಮಾಜಿಕ ಅಸಂಬದ್ಧ ಜೀವನ ವಿಧಾನವನ್ನು ಬಹಳ ಸ್ವಷ್ಟವಾಗಿ ತೆರೆದು ತೋರಿಸಿದೆ. ಒಳಗೊಂದು ಹೊರಗೊಂದು ಆಗಿರುವ ಮನುಷ್ಯನ ದ್ವಂದ ಮುಖವನ್ನು ಅವರಷ್ಟು ಸ್ವಷ್ಟವಾಗಿ ಮತ್ತು ನಿರ್ಭಿತವಾಗಿ ಎತ್ತಿ ತೋರಿಸಿದವರು ಬಹು ಅಪರೂಪ. ಸತ್ತ ಮೇಲಿನ ಗೋರಿ ಇದು ಈಗಲೂ ಪ್ರಸ್ತುತ. ನಾವು ಕಣ್ಮುಂದೆ ಕಾಣುವ ಸತ್ಯ. ಉಳ್ಳವರು ಆಡಂಬರಕ್ಕಾಗಿ ಉಳಿಸಿಕೊಂಡ ಆದರ್ಶಗಳೂ ಹೌದು. “ಕಲ್ಲ ನಾಗರ ಕಂಡು ಹಾಲೆರೆವರಯ್ಯ ದಿಟದ ನಾಗರ ಕಂಡು ಹೊಡೆ ಎಂಬರು”. ತಮ್ಮ ಮನೆ ಮಂದಿ ಸಂಕಟಕ್ಕೆ ತಮ್ಮ ಬದುಕಿನ ಬೇರಿಗೆ ನೀರಾಗಬೇಕಾದ ಬಂಧು ಅದೇ ಬಳಗದ ಅನಿವಾರ್ಯಕ್ಕೆ ಬಿಡಿಕಾಸು ನೆರವಾಗದವರು ದೇವರಿಗೆ ಕಿರೀಟ ತೊಡಿಸಿ ಪುಣ್ಯ ಖರೀದಿಗೆ ಹಾತೊರೆಯುತ್ತಾರೆ.
ಈ ನಂಬಿಕೆಯಲ್ಲಿ ದೇವ ಭಿಕ್ಷೆಗೆ ಲಕ್ಷ ಲಕ್ಷ ಬಿಚ್ಚುವ ಉದಾರ ದಾನಿಗಳನ್ನು ನಾವು ಕಾಣುವುದು ಸಾಧ್ಯ! ತಮ್ಮ ಬಳಗದ ಸಂದಿಗ್ಧಕ್ಕೆ ಸಹಕರಿಸದ ಧನವಂತರು ಅವರ ಉತ್ತರಕ್ರಿಯೆಗೆ ನಾಲ್ಕು ಬಗೆಯ ಭಕ್ಷ ಬಡಿಸಲು ಉದಾರವಾಗುವುದುಟು. ಇದು ಅಂತಃಕರಣ ಪ್ರೇರಕಾದ ದಾನವೂ ಅಲ್ಲ. ಅವರ ಮೇಲಿನ ಭಕ್ತಿಗಾಗಿರುವ ಸಮರ್ಪಣಾ ಭಾವವೂ ಅಲ್ಲ. ಇದು ಕೇವಲ ಸಾರ್ವಜನಿಕವಾಗಿ ಪ್ರಕಟಪಡಿಸುವ ಢಾಂಬಿಕ ನಡವಳಿಕೆ ಅಷ್ಟೇ. ವ್ಯಕ್ತಿ ಪೂಜೆ, ಢಾಂಭಿಕ ಪ್ರದರ್ಶನ, ಮೂಢನಂಬಿಕೆ ಇತ್ಯಾದಿಗಳಿಗೆ ಗುಲಾಮನಾಗುತ್ತಾ ಮಾನವತಾವಾದವನ್ನು ಪರಿಪೂರ್ಣ ತಿರಸ್ಕರಿಸಿ ಮೆರೆದಾಡುವ ಒಂದು ಅನಿಷ್ಠ ಸಂಪ್ರದಾಯಕ್ಕೆ ನಾವು ಬಲಿಯಾಗಿತ್ತಿದ್ದೇವೆ. ದೈವ ಹಸಿದರೆ ಭೂಮಿ ಬನಾಳೆವ ಮೂರು ಪಾದದ ಶಕ್ತಿಯ ನೆನಪೇ ಮಾನವನಿಂದ ಮಾಸಿ ಹೋಗಿದೆ! ಬೆಟ್ಟಕ್ಕೆ ಚಳಿಯಾದರೆ ಹೊದೆಯಲು ಯಾವ ಕೋಟ್ಯಾಧಿಪತಿ ಕಂಬಳಿ ಕೊಡಲು ಶಕ್ತ ಹೇಳಿ? ಅದಕ್ಕೆ ಉತ್ತರ ಇಷ್ಟೆ. ಹೆತ್ತ ತಾಯಿ ತಂದೆಯರಲ್ಲಿ ದೇವರನ್ನು ಕಾಣದವನಿಗೆ ಇನ್ನಾವ ದೇವರಿಂದ ಆಶೀರ್ವಾದ? ತನ್ನ ಬಂಧು ಬಳಗದ ಮುನಿಸಿಗೇ ಕೈ ಚಾಚುವವನಿಗೆ ಇನ್ನಾವ ದೇವರಿಂದ ವರದಾನ? ನಾವು ಧರ್ಮವಂತರೆಂದು ಎಷ್ಟು ಪ್ರದರ್ಶಿಕೊಂಡರೂ ನಮ್ಮನ್ನು ಅದು ರಕ್ಷಿಸಲಾರದು.
ಈ ನೀತಿ ಹೇಗೆಂದರೆ, ಕಟಕಟೆಯಲ್ಲಿ ನಿಲ್ಲುವ ಆರೋಪಿ ಮತ್ತು ಜಡ್ಜ್ಮೆಂಟ್ ಬರೆಯುವ ನ್ಯಾಯಾಧೀಶ ಒಬ್ಬನೇ ಆದರೆ ಹೇಗೆ? ಅದೇ ತರಹವೆ ಎಂದರೆ ವ್ಯತ್ತಿರಿಕ್ತವೆನಿಸಿತೆ? ‘ನಾವು ಪುಣ್ಯ ಮಾಡಿದ್ದರಿಂದ ನಾವು ಹಣವಂತರಾಗಿದ್ದೇವೆ. ನಮ್ಮನ್ನು ದೇವರು ಹರಿಸಿದ್ದಾನೆ’ ಎಂದು ಬೀಗುವ ಧನಪತಿಗಳೂ ಇದ್ದಾರೆ. ನೋವು ಸಂಕಟ ಅನಾಥ ಸ್ಥಿತಿ ಅನುಭವಿಸುವವರೆಲ್ಲಾ ಪಾಪಾತ್ಮರು. ದೇವರಿಂದ ತಿರಸ್ಕ್ರತರು. ಅವರನ್ನು ನಾವೇಕೆ ಆದರಿಸಬೇಕು. ಆದರಿಸಿದರೆ ಪಾಪ ಅವರಿಂದ ವರ್ಗಾವಣೆಯಾಗಿ ತಮಗೆ ಬಂದೀತು ಎನ್ನುವ ಮೂಢ ಮಾತುಗಳಿಗೆ ಕೊರತೆ ಇಲ್ಲ.
ದಶರಥ ಸಾಯುವಾಗ ಅವನ ಬಳಿ ಒಬ್ಬ ಮಗನೂ ತುಳಸಿ ದಳದ ನೀರು ಕೊಡಲು ಹತ್ತಿರ ಇರಲಿಲ್ಲ. ಎಂದರೆ, ದಶರಥನನ್ನೂ ದೇವರು ಕೈಬಿಟ್ಟರೆಂಬ ಅರ್ಥವೇ? ಒಬ್ಬ ಶ್ರೀಮಂತನಾಗಲು ಏನೇನೋ ದಾರಿಗಳಿವೆ. ಬೇಕಾದಷ್ಟು ಒಳದಾರಿಗಳೂ ಇವೆ. ಆದರೆ ಒಬ್ಬ ಧರ್ಮವಂತನಾಗಲು ದೇವರ ಅನುಗ್ರಹಕ್ಕೆ ಪಾತ್ರನಾಗಲು ಇರುವ ದಾರಿ ಬಹಳ ದುರ್ಗಮವಾದದು. ಕತ್ತೆಗೆ ಲಿಂಗಮುದ್ರೆ ಒತ್ತಿದರೆ? ಅದು ಕತ್ತೆಯಲ್ಲದೆ ಬಸವನಾಗುವುದು ಹೇಗೆ ಸಾಧ್ಯ? ತನ್ನ ಗಳಿಕೆಯ ಹಣ ತನ್ನ ಹೆತ್ತವರ, ತನ್ನ ಬಂಧುಗಳ ಸಂದಿಗ್ದಕ್ಕೆ ನೆರವಾಗದೆ ಆತ ಯಾವ ದೇವರಿಗೆ ಉಣ ಬಡಿಸಿದರೂ ಏನು ಉಪಯೋಗ? ಹೊರಗೆ ಮಿಂದು ಒಳಗೆ ಮೀಯದವರ ಕಂಡು ನಗುತ್ತಿದ್ದ ನಮ್ಮ ಕೂಡಲ ಸಂಗಮ ದೇವ ಎಂದ ಬಸವಣ್ಣನ ಮಾನವೀಯ ಮೌಲ್ಯವನ್ನು ಬೆಳೆಸಿಕೊಳ್ಳದೆ ಕೇವಲ ಡಂಬಾಚಾರದ ಪ್ರಚಾರಕ್ಕಿರುವ ಶುದ್ಧತೆಗೆ ಅದೆಷ್ಟು ಮಹತ್ವವಿದೆ? ಧರ್ಮದ ತಿರುಳನ್ನು ಸರಿಯಾಗಿ ತಿಳಿದಾಗ ಮಾತ್ರ ನಮಗೆ ಅಸಹಾಯಕರು, ಅವಕಾಶ ವಂಚಿತರು ದೇವರಾಗಿ ಗೋಚರಿಸುವುದು ಸಾಧ್ಯ. ಅಂತಹ ಧಾರ್ಮಿಕ ಮೂಲ ಸಿದ್ಧಾಂತವನ್ನು ನಿರ್ಲಕ್ಷಿಸಿ ಮಾಡುವ ಎಲ್ಲಾ ಉದಾರ ಕ್ರಿಯೆಗಳಿಗೂ ಫಲ ಮಾತ್ರ ಶೂನ್ಯ. ಅದರಿಂದ ಕೇವಲ ಗೊರಿಯ ಪೂಜೆಗಿರುವಷ್ಟೇ ಪ್ರತಿಫಲ. ಹುತ್ತಕ್ಕೆ ಹಾಲೆರೆದ ಹಾಗೆ ತನ್ನ ಹೊಟ್ಟೆಯ ಚಿಂತೆ ಮರೆತು ಸಲಹಿದ, ಪೊರೆದ ತಾಯಿಯ ನೆನಪೇ ಬಿಟ್ಟು, ಅವಳ ಹಸಿವಿಗೆ ಅನ್ನ ಕೊಡದಾತ ಗೋರಿ ಕಟ್ಟಿ ಚಿನ್ನದ ಕಲಶವಿಟ್ಟರೂ ದೇವರ ಹರಕೆಯ ಅರ್ಹರಾಗುವುದು ಹೇಗೆ ಸಾಧ್ಯ? ದೇವರ ಅನುಗ್ರಹಕ್ಕೆಂದೇ ತಿಳಿದು ಮನೆಯ ನೆನಪುಳಿಸಿಕೊಂಡು ಹಸಿದ ಹೊಟ್ಟೆಗೆ ಅನ್ನ ಕೊಡುವವರೇ ದೇವರಿಗೆ ಪ್ರೀಯರು ಹೊರತು ದೇವರ ಮೂರ್ತಿಗೆ ಬಂಗಾರದ ಕಣ್ಣು ಕೊಡುವವರಲ್ಲ. ಕುಚೇಲನ ಹಿಡಿ ಅವಲಕ್ಕಿಗೆ ಒಲಿದ ದೇವರು, ಶಬರಿಯ ಎಂಜಲು ಆತಿಥ್ಯಕ್ಕೆ ಒಲಿದ ದೇವರು ಯಾವ ವಜ್ರ ಬಂಗಾರವನ್ನು ಯಾಚಿಸಿ ನಮ್ಮ ಬಳಿ ಬರಬಹುದು? ಊರಿಗೆ ಉಣ ಬಡಿಸುವವರಿಗೆ ತಮ್ಮ ಮನೆಯ ಒಲೆಯಲ್ಲಿ ಬೆಂಕಿ ಆರಿದ್ದು ನೆನಪಿರಬೇಕು. ಅದೇ ದೇವರ ಅನುಗ್ರಹಕ್ಕೆ ಸಿಗುವ ಸರ್ಟಿಫಿಕೇಟು!
ದಿ. ಕೆ. ಜೆ. ಶೆಟ್ಟಿ ಕಡಂದಲೆ