ಸಾಧಾರಣವಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನಾವು ಓದುವ ಅಂಶಗಳು ಹುಡುಗ ಹುಡುಗಿಯ ಹಿರಿಯರ, ಕುಟುಂಬಿಕರ ಮನೆ ಯಾವುದು? ಯಾವ ಮನೆತನದವರು ಎಂಬಿತ್ಯಾದಿ ಅಂಶವನ್ನು. ಆದರೆ ಇತ್ತೀಚಿಗಿನ ಮದುವೆ ಆಮಂತ್ರಣದ ಪತ್ರಿಕೆಯಲ್ಲಿ ಕೇವಲ ತಂದೆ ತಾಯಿಯ ಹೆಸರು ಮಾತ್ರ ಇದ್ದಲ್ಲಿ ಆಗ ನಾವು ಊಹಿಸಬಹುದಾಗಿದೆ ಇದು ಅಂತರ್ಜಾತಿ ವಿವಾಹ ಎಂದು. ಇಂದಿನ ಈ ದಿನಗಳಲ್ಲಿ ಇದೇನು? ಅಂತರ್ಜಾತಿ ವಿವಾಹಗಳು ಏಕೆ ಹೆಚ್ಚುತ್ತಿವೆ? ಇದಕ್ಕೆ ಮೂಲ ಕಾರಣರಾರು? ಪಾಲಕರಿಗೆ ಮಕ್ಕಳ ಮೇಲೆ ಇರುವ ಅತೀ ಪ್ರೀತಿ, ಮಮತೆ, ಇದಕ್ಕೆ ದಾರಿ ಮಾಡಿಕೊಟ್ಟೀತೇ? ಅಥವಾ ಮಿತಿಮೀರಿ ಕೊಟ್ಟ ಸ್ವಾತಂತ್ರ್ಯದ ದುರುಪಯೋಗವೇ? ಹೆಚ್ಚಿನ ವಿದ್ಯಾಭ್ಯಾಸ, ಉನ್ನತ ವ್ಯಾಸಂಗದ ಪ್ರಭಾವವೋ? ವಿದೇಶಗಳ ಸಂಸ್ಕೃತಿಯನ್ನು ನಾವು ಅನುಕರಣೆ ಮಾಡುತ್ತಿದ್ದೇವೆಯೋ? ಎಂಬಿತ್ಯಾದಿ ಪ್ರಶ್ನೆಗಳ ಸರಮಾಲೆಯೇ ಉದ್ಭವವಾಗುತ್ತಿದೆ. ಆದರೆ ಇದಕ್ಕೆಲ್ಲಾ ಉತ್ತರವನ್ನು ನಾವು ಕಂಡುಕೊಂಡಲ್ಲಿ ಪರಿಹಾರವೂ ಅದರ ಜತೆಗಿದೆ.
ನಮ್ಮ ಮಕ್ಕಳು ಅಂತರ್ಜಾತಿ ವಿವಾಹ ಎಂದೊಡನೆ ಮೊದ ಮೊದಲು ಸಂಬಂಧಿಕರು ಸಿಕ್ಕರೆ ಮುಜುಗರ, ಏನು ಹೇಳಿ ಬಿಡುತ್ತಾರೋ ಎಂಬ ಅಂಜಿಕೆ. ಇದೀಗ ಎಲ್ಲರ ಮನೆಯ ದೋಸೆ ತೂತು ಎಂಬಂತಾಗಿದೆ. ಹುಡುಗ ಹುಡುಗಿ ಒಪ್ಪಿಕೊಂಡಿದ್ದಾರೆ. ಮಧ್ಯೆ ನಮ್ಮದೇನು? ಮಕ್ಕಳ ಭವಿಷ್ಯದ ಪ್ರಶ್ನೆ ಇಲ್ಲದಿದ್ದಲ್ಲಿ ಮಕ್ಕಳ ಬೆದರಿಕೆ. ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಇಲ್ಲದಿದ್ದಲ್ಲಿ ಮದುವೆ ಬೇಡ. ಆಗ ಪಾಲಕರು ಯಾವ ನಿರ್ಧಾರವನ್ನು ಕಂಡುಕೊಂಡರೆ ಸಮಂಜಸ? ಇದು ಅವರವರಿಗೆ ಬಿಟ್ಟಿದ್ದು. ಅನಿವಾರ್ಯತೆಯ ಪ್ರಶ್ನೆಯೂ ಉದ್ಭವವಾಗುತ್ತಿದೆ.
ಏನೋ ಮದುವೆ ಆಯಿತೆಂದು ಸಂಭ್ರಮ ಪಡುತ್ತೀರೋ? ಬೆನ್ನಿಗೆ ಬರುತ್ತವೆ ವಿವಾಹ ವಿಚ್ಛೇದನಗಳ ಮಾತು! ಎಲ್ಲಾ ಪ್ರೇಮ ವಿವಾಹಗಳು ಮುರಿಯುತ್ತಿದೆ ಎಂದು ಇದರರ್ಥ ಅಲ್ಲ ಅಥವಾ ಸಂಬಂಧಿಕರ ಪಾಲಕರ ಒಪ್ಪಿಗೆ ಇದ್ದು ನೋಡಿ ಮಾಡಿದ ಮದುವೆಗಳು ವಿಚ್ಛೇದನಕ್ಕೆ ಹೋಗಲಾರದು ಎಂದು ಹೇಳಲಿಕ್ಕೆ ಬರುವುದಿಲ್ಲ. ಅಂತೂ ವಿಚ್ಛೇದನಗಳು ಇತ್ತೀಚೆಗೆ ಹೆಚ್ಚುತ್ತಿರುವುದು ವಿಷಾದನೀಯ.
ಇದಕ್ಕೇನು ಕಾರಣ? ಹೊಂದಾಣಿಕೆಯ ಬದುಕು ಹೇಗಿರಬೇಕೆಂಬ ಅರಿವನ್ನು ತಿಳಿಯದೆ ಇರುವುದೇ? ಅಥವಾ ತಾನು ಮೇಲು ನಾವು ಮೇಲೆಂದು ವಾದಿಸಿಕೊಳ್ಳುವ ಚರ್ಚಾಸ್ಪದ ರೀತಿಯೇ? ಆಧುನಿಕತೆಯ ಜೀವನಕ್ಕೆ ನಾವು ಮಾರು ಹೋಗುತ್ತಿರುವುದೇ ಇಂಟರ್ನೆಟ್ ಗಳ ಅತೀ ಪ್ರಭಾವ ಮಕ್ಕಳ ಮೇಲೆ ಬೀರಿ ತನ್ನತನವನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ. ಕಾಲಾಯ ತಸ್ಮೈ ಎಂಬಂತೆ, ಕಾಲಗತಿಯನ್ನು ವೈಜ್ಞಾನಿಕ ಮಾಪನಕ್ಕೆ ತೆಗೆದುಕೊಂಡಾಗ ನಾವೇನೂ ಮಾಡಲು ಸಾಧ್ಯವಿಲ್ಲ ಎಂಬಂತಿದೆ. ಎಲ್ಲವೂ ಕೈ ಮೀರಿ ಹೋಗುತ್ತಿದೆ ಎಂಬ ಆ ಪರಿವೆ ಬೇಡ. ಇನ್ನಾದರೂ ಪಾಲಕರು ಇದರತ್ತ ಗಮನಕೊಡಿ. ತಮ್ಮ ಮಕ್ಕಳಿಗೆ ಧಾರ್ಮಿಕ ಮನೋಭಾವನೆ, ಸಂಸ್ಕೃತಿಯ ತಿಳುವಳಿಕೆ, ಗೌರವ ಭಾವನೆಯುಕ್ತ ನಡೆನುಡಿಗಳನ್ನು ಕಳಿಸಿದರೆ ಅಂತರ್ಜಾತಿ ವಿವಾಹ, ವಿವಾಹ ವಿಚ್ಛೇದನಗಳು ಕಡಿಮೆಯಾಗಬಹುದು. ಮಕ್ಕಳ ಚಲನವಲನಗಳನ್ನು ಗಮನಿಸಿ ಅತೀ ಅಮೃತವೂ ವಿಷವಾಗದಂತೆ ನೋಡಿಕೊಳ್ಳಿ ಜಾತಿ, ನೀತಿ, ಸಂಸ್ಕಾರಗಳತ್ತ ನಮ್ಮ ಗಮನ ಇರಲಿ. ಎಲ್ಲರೂ ಮಾನವ ಜಾತಿ ಎಂದು ಹೇಳಲಷ್ಟೇ ಯೋಗ್ಯ. ಕಾರ್ಯರೂಪಕ್ಕೆ ತರಲು ತುಂಬಾ ಕಷ್ಟ, ಜಾತಿ ನಮ್ಮದಾಗಿರಲಿ ನೀತಿ ಒಳ್ಳೆಯದಿರಲಿ
ದಯಾಮಣಿ ಎಸ್. ಶೆಟ್ಟಿ. ಎಕ್ಕಾರು