“ಡೋಜಿ’ ಸುಧಾರಿತ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಂಪರ್ಕ ರಹಿತ ಮತ್ತು ರೋಗಿಗಳ ಮೇಲ್ವಿಚಾರಣೆ, ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆ ಹೊಂದಿದ ಅತ್ಯಾಧುನಿಕ ವ್ಯವಸ್ಥೆಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಳವಡಿಸಲಾಗಿದೆ. ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್ ಮಾರ್ಲ ಮಾಹಿತಿ ನೀಡಿ, ಎ.ಜೆ. ಆಸ್ಪತ್ರೆಯಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸುತ್ತಿದ್ದೇವೆ. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಇದು ನೆರವಾಗಲಿದೆ. ಕೋವಿಡ್ ಸಮಯದಲ್ಲೇ ಪರೀಕ್ಷಾರ್ಥವಾಗಿ ಈ ಉಪಕರಣವನ್ನು ಅಳವಡಿಸಿದ್ದೆವು. ಅನೇಕ ತಿಂಗಳ ಪ್ರಯೋಗದ ಬಳಿಕ ಸುಸಜ್ಜಿತವಾಗಿ ಸ್ಥಾಪನೆಯಾಗುತ್ತಿದೆ. ಸದ್ಯ 50 ಖಾಸಗಿ ಬೆಡ್ಗಳಿಗೆ ಅಳವಡಿಸುತ್ತೇವೆ. ರೋಗಿಗಳಲ್ಲಿ ಹೃದಯ ಸಂಬಂಧಿ, ಮಧುಮೇಹ, ರಕ್ತದೊತ್ತಡ, ದೇಹದ ಉಷ್ಣತೆ, ಇಸಿಜಿ ಸಹಿತ ವಿವಿಧ ಮಾಹಿತಿಗಳ ಮೇಲೆ ದೂರದಿಂದಲೇ ನಿಗಾ ಇರಿಸಲು ಆರೋಗ್ಯ ಕಾರ್ಯಕರ್ತರಿಗೆ ಈ ಯಂತ್ರ ನೆರವಾಗುತ್ತದೆ. ಮುಂಚಿತವಾಗಿ ಎಚ್ಚರಿಕೆ ನೀಡುವ ಸೌಲಭ್ಯ ಇದರಲ್ಲಿದ್ದು, ರೋಗಿಯ ಆರೋಗ್ಯದಲ್ಲಾಗುವ ಬದಲಾವಣೆಯನ್ನು ಮೊದಲೇ ತಿಳಿಸುತ್ತದೆ ಎಂದರು.
ಡೋಜಿಯ ಪರಿಹಾರವು ಕ್ಲೌಡ್ ಆಧಾರಿತ ಸೌಲಭ್ಯವಾಗಿದೆ. ಇದರ ಕೇಂದ್ರೀಯ ಮತ್ತು ದೂರ ನಿಯಂತ್ರಣ ವ್ಯವಸ್ಥೆಯು ರೋಗಿಗಳ ಸುರಕ್ಷೆ, ವೈದ್ಯಕೀಯ ಫಲಿತಾಂಶಗಳಿಗಾಗಿ ಸಮಯೋಚಿತ ವೈದ್ಯಕೀಯ ಸೇವೆ ಒದಗಿಸಲು ರೋಗಿಯನ್ನು ನಿರಂತರವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಆರೋಗ್ಯ ಪೂರೈಕೆದಾರರಿಗೆ ಅವಕಾಶ ಒದಗಿಸಲಿದೆ ಎಂದರು.
ವೈದ್ಯಕೀಯ ಆಡಳಿತ ನಿರ್ದೇಶಕಿ ಡಾ. ಅಮಿತ ಪಿ. ಮಾರ್ಲ, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಶಾಶ್ವತ್, ಮಾರುಕಟ್ಟೆ ಮ್ಯಾನೇಜರ್ ಡಾ. ಪ್ರೀತಮ್ ವಾಸ್, ಡೋಜಿಯ ದಕ್ಷಿಣ ವಲಯ ಮುಖ್ಯಸ್ಥ ಸುಬ್ರಾಂಸು ನಾಗ್, ಏರಿಯ ಸೇಲ್ಸ್ ಮುಖ್ಯಸ್ಥ ಅಂಕುಶ್ ಭಟ್ನಾಗರ್ ಉಪಸ್ಥಿತರಿದ್ದರು.