ಸಮಾಜದ ಸರ್ವ ವರ್ಗ ಗೌರವಿಸುವ ವೃತ್ತಿ ಅದು ಶಿಕ್ಷಕ ವೃತ್ತಿ. ಕಾರಣ ಒಂದು ಆರೋಗ್ಯವಂತ ಸಮಾಜ ತನ್ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಬಹುದೊಡ್ಡ ಪಾತ್ರ ಉತ್ತಮ ಶಿಕ್ಷಕರದ್ದು. ಇಂದಿನ ಮಕ್ಕಳು ನಾಳಿನ ಜನಾಂಗ ಅವರನ್ನು ಯೋಗ್ಯ ನಾಗರೀಕರನ್ನಾಗಿ ರಾಷ್ಟ್ರದ ಯೋಗ್ಯ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರಿಗಿದೆ. ಹೀಗೆ ತನ್ನ ವೃತ್ತಿ ಗೌರವ ಹಾಗೂ ಸಾಮಾಜಿಕ ಹೊಣೆಗಳನ್ನು ಅರ್ಥ ಮಾಡಿಕೊಂಡು ತನ್ನ ಜೀವನದ ಮೂರೂವರೆ ದಶಕಗಳ ಕಾಲ ಶಿಕ್ಷಣ ಕ್ಷೇತ್ರಕ್ಕೆ ಸಾರ್ಥಕ ಸೇವೆ ಸಲ್ಲಿಸಿ, ನಿವೃತ್ತರಾದ ಮೇಲೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡು ತಾಲೂಕು ಮಟ್ಟದ, ಜಿಲ್ಲಾ ಮಟ್ಟದ ಹಾಗೂ ರಾಜ್ಯಸ್ತರದ ಪ್ರಶಸ್ತಿಗಳಿಗೆ ಭಾಜನರಾದ ಅಪರೂಪದ ನಿವೃತ್ತ ಶಿಕ್ಷಕ ಕೆ.ರವೀಂದ್ರ ರೈ.
ಸಾಹಿತಿಯಾಗಿ, ಸಂಘಟಕರಾಗಿ, ಕಾರ್ಯಕ್ರಮ ಸಂಯೋಜಕರಾಗಿ, ನಿರ್ವಾಹಕರಾಗಿ, ಕೃಷಿಕರಾಗಿ ಬಹುಮುಖಿ ಸಾಧನೆಯ ಮುಖಾಂತರ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ ಹರೇಕಳದ ರಾಮಕೃಷ್ಣ ಫ್ರೌಢ ಶಾಲೆಯ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರ ಕೆ.ರವೀಂದ್ರ ರೈ ಅವರು ನಾಲ್ಕು ಗೋಡೆಗಳ ಮಧ್ಯೆ ಪಾಠ ಹೇಳಿ ಕೊಡುವ ಬೋಧಕನಷ್ಟೇ ಅಲ್ಲ. ತಾನು ದುಡಿಯುವ ಶಿಕ್ಷಣ ಸಂಸ್ಥೆಯ ವಿಶೇಷತೆಗಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಪ್ರಾಮಾಣಿಕವಾಗಿ ದುಡಿದ ಮಹನೀಯರು ಇವರು. ಸಾರ್ವಜನಿಕ ಸೇವೆ ಸಂಘಟನೆಗಳಿಂದ ಲಯನ್ಸ್ ಕ್ಲಬ್, ಜೇಸೀಸ್, ರೋಟರಿಗಳಂತಹ ನಾಯಕತ್ವ ತರಬೇತಿ ಹಾಗೂ ಸಾರ್ವಜನಿಕ ಸೇವಾ ಸಂಸ್ಥೆಗಳ ಸಂಪರ್ಕದೊಂದಿಗೆ ಇದ್ದುಕೊಂಡು ಪರಿಸರದ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳ ಒಡಗೂಡಿ ಸಾರ್ವಜನಿಕ ಚಟುವಟಿಕೆಗಳಿಂದ ಗುರುತಿಸಿ ಕೊಂಡವರು ಕೆ.ರವೀಂದ್ರ ರೈ.
ಆಕಾಶವಾಣಿ, ದೂರದರ್ಶನ ಹಾಗೂ ತರಬೇತಿ ಶಿಬಿರ ಪತ್ರಿಕಾ ಮಾಧ್ಯಮಗಳ ಮೂಲಕ ಜನಜಾಗೃತಿ ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಇಂದಿನ ಅವಶ್ಯಕತೆಗಳ ಕುರಿತಂತೆ ಭಾಷಣ ನೀಡುವ ಅತ್ಯುತ್ತಮ ಭಾಷಣಗಾರ, ಲೇಖಕ.
ಮುಖ್ಯೋಪಾಧ್ಯಾಯರಾಗಿ ತಾನು ದುಡಿದ ರಾಮಕೃಷ್ಣ ಫ್ರೌಢ ಶಾಲೆಯ ಸಮಗ್ರ ಅಭಿವೃದ್ಧಿಗೆ ಕಾರಣರಾದ ರೈ ಅವರು ಈಗ ಕೊಣಾಜೆ ಸಮೀಪದ ಕಲ್ಲಿಮಾರು ಎಂಬಲ್ಲಿ ತನ್ನ ಜಮೀನು ಕೃಷಿ ನೋಡಿಕೊಂಡು ನಿವ್ರತ್ತ ಜೀವನದ ಜೊತೆಗೆ ಸಮಾಜ ಸೇವೆ ಮತ್ತು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತೆಂಗು, ಕಂಗು, ಮಾವು, ಬಾಳೆ ಹಾಗೂ ಬಗೆ ಬಗೆಯ ತರಕಾರಿ ಫಲವಸ್ತುಗಳನ್ನು ಬೆಳೆಸಿಕೊಂಡು ಓರ್ವ ಆದರ್ಶ ಕೃಷಿಕರಾಗಿಯೂ ಗುರುತಿಸಿ ಕೊಂಡಿದ್ದಾರೆ. ಕೊರೋನ ಕಾಲದಲ್ಲಿ ತನ್ನ ಈ ಕೃಷಿಗಾರಿಕೆಯಲ್ಲಿ ವ್ಯಸ್ಥರಾಗಿದ್ದ ರೈ ಅವರಿಗೆ ಎರಡು ವರ್ಷ ಕಾಲದ ಕೊರೋನ ಭೀತಿಯ ಅರಿವೇ ಬಾರದ ರೀತಿಯಲ್ಲಿ ಸಮಯ ಕಳೆದು ಹೋಯಿತು ಎನ್ನುತ್ತಾರೆ.
ಶ್ರೀಯುತರಿಂದ ವಿದ್ಯೆ ಕಲಿತ ವಿದ್ಯಾಕುಮಾರಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಗೇರಿದ ಅಭಿಮಾನ ಹೆಮ್ಮೆ ರವೀಂದ್ರ ರೈ ಅವರಿಗಿದೆ. ಶ್ರೀಯುತರು ಮೂಲತಃ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕುಳಾಲ ಬಂಟ ಮನೆತನಕ್ಕೆ ಸೇರಿದವರು. ಇದು ಸಾಲೆತ್ತೂರು ಸಮೀಪ ಇದೆ. ಅಲ್ಲಿಗೆ ಸಮೀಪದ ಕಳಂಜಿಮಲೆ ಅರಣ್ಯಮಾರ್ಗದ ಮೂಲಕ ಸುಮಾರು ಆರು ಕಿಲೋಮೀಟರ್ ಕಾಲ್ನಡಿಗೆ ಮೂಲಕ ಅರಣ್ಯ ವಲಯವನ್ನು ದಾಟಿಕೊಂಡು ಕನ್ಯಾನ ಎಂಬಲ್ಲಿಯ ಒಂದು ಶಾಲೆಯಲ್ಲಿ ಪ್ರಾಥಮಿಕ, ಹೈಸ್ಕೂಲ್ ಶಿಕ್ಷಣ ಪೂರೈಸಿದರು. ಕನ್ಯಾನದಲ್ಲಿ ಶಿಕ್ಷಣ ಮುಗಿಸಿದ ಬಳಿಕ ಮಂಗಳೂರಿನ ಕೆನರಾ ಕಾಲೇಜ್ ಮೂಲಕ ಪದವಿ ಶಿಕ್ಷಣ ಪೂರೈಸಿ ಬಳಿಕ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಎಂ.ಎ. ಪದವಿ ಸಂಪಾದಿಸಿ ಬಳಿಕ ಮಂಗಳೂರಿನ ಶಿಕ್ಷಕ ತರಬೇತಿ ಸಂಸ್ಥೆಯಿಂದ ಅಧ್ಯಾಪನ ವೃತ್ತಿಗೆ ಅನುಕೂಲವಾಗಬಲ್ಲ ಬಿ.ಎಡ್. ಪದವಿ ಸಂಪಾದಿಸಿಕೊಂಡರು. ಹಿರಿಯರಾದ ಹಾಗೂ ರವೀಂದ್ರ ರೈ ಅವರ ಸಂಬಂಧಿಕರೂ ಆಗಿದ್ದ ವಿದ್ವಾನ್ ಕಾಂತ ರೈ ಅವರ ಸಲಹೆ ಮಾರ್ಗದರ್ಶನದ ಮುಖಾಂತರ ಜೈನ್ ಕಾಲೇಜಿನಲ್ಲಿ ಒಂದು ವರ್ಷ ಉಚಿತ ಸೇವೆಯೆಂಬಂತೆ ಗೌರವ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಬಳಿಕ ಹರೇಕಳದ ರಾಮಕೃಷ್ಣ ಫ್ರೌಡಶಾಲೆಯಲ್ಲಿ ಸಹ ಅಧ್ಯಾಪಕರಾಗಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ಮುಖ್ಯಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸುವುದರ ಜೊತೆಗೆ ಆಡಳಿತ ಮಂಡಳಿಯ ಜತೆ ಸೇರಿಕೊಂಡು ಶಾಲೆಯ ಸಮಗ್ರ ಅಭಿವೃದ್ಧಿಗೆ ಕಾರಣೀಭೂತರಾದರು.
ನಾಡಿನ ಅತ್ಯುತ್ತಮ ಬರಹಗಾರರ ಕೃತಿಗಳನ್ನು ಓದುವ ಮನನ ಮಾಡಿಕೊಳ್ಳುವ ಹವ್ಯಾಸ ಇದ್ದುದರಿಂದ ನನ್ನ ಅಧ್ಯಾಪನಕ್ಕೆ ತುಂಬಾ ಅನುಕೂಲವಾಯಿತ್ತಲ್ಲದೆ ಓರ್ವ ಉತ್ತಮ ಭಾಷಣಗಾರನಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎನ್ನುವ ರೈ ಅವರು ತನ್ನ ಮನೆಯಲ್ಲಿಯೇ ಒಂದು ಗ್ರಂಥ ಭಂಡಾರವನ್ನು ತುಂಬಾ ಅಚ್ಚುಕಟ್ಟಾಗಿಟ್ಟು ಉತ್ತಮ ಗ್ರಂಥಗಳನ್ನು ಶಿಸ್ತು ಬದ್ಧ ರೀತಿಯಲ್ಲಿ ಜೋಡಿಸಿಟ್ಟಿದ್ದಾರೆ. ವಿರಾಮದ ವೇಳೆಯ ಓದು ಮನಸ್ಸಿಗೆ ಮುದ ನೀಡಿ ತಮ್ಮ ಜ್ಞಾನ ವೃದ್ಧಿಯಾಗುತ್ತದೆ ಎನ್ನುತ್ತಾರೆ.
ಅವರ ಮಾತಿನ ಪ್ರಕಾರ ಶಿಕ್ಷಕನೆಂದರೆ ಕೇವಲ ಅನುಭವ ಸಂಪಾದಿಸಿದರೆ ಸಾಲದು ತಾನು ತಿಳಿದುದನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಮನ ಮುಟ್ಟುವ ರೀತಿ ಹೇಳಿಕೊಡುವ ಮಾತಿನ ಕಲೆ. ವಿದ್ಯಾರ್ಥಿಗಳ ಚೀತ್ತಾಪಹಾರ ಮಾಡುವ ಆತ್ಮೀಯ ಭಾವ ಇರಬೇಕಾಗುತ್ತದೆ ಎನ್ನುತ್ತಾರೆ. ಈ ರೀತಿ ಅಧ್ಯಾಪನ, ಸಮಾಜ ಸೇವೆ, ಸಂಘಟನೆ, ಕಾರ್ಯಕ್ರಮ ಸಂಯೋಜನೆ ನಿರ್ವಹಣೆ, ಉಪನ್ಯಾಸ, ವಿಚಾರ ಮಂಡನೆ, ವ್ಯಕ್ತಿತ್ವ ವಿಕಸನ, ಕೃಷಿ ಮಾಧ್ಯಮ ಸಂಪರ್ಕ, ವಿಸ್ತ್ರತ ಓದು ಸುದೀರ್ಘ ಜೀವನಾನುಭವಗಳಿಂದ ಸರ್ವಜನ ಗೌರವ ಪಾತ್ರರಾದ ರೈ ಅವರಿಗೆ ಅನೇಕ ಪ್ರಶಸ್ತಿಗಳು ಸನ್ಮಾನಗಳು ಸಂದಿವೆ.
ಶ್ರೀಯುತ ರೈ ಅವರು ಪ್ರತಿಷ್ಠಿತ ಕುಳಾಲು ಬಂಟ ಮನೆತನದ ದಿವಂಗತ ವಿಠಲ ರೈ ಮತ್ತು ದಿವಂಗತ ಸುಂದರಿ ವಿಠಲ ರೈ ಅವರ ಸುಪುತ್ರರು. ಬಾಲ್ಯದಲ್ಲಿ ತುಂಬಾ ಕಷ್ಟ ಇತ್ತು ಎನ್ನುವ ರೈ ಅವರು ತನ್ನ ಪ್ರತಿಭೆ ಮತ್ತು ಕಲಿಯಬೇಕೆನ್ನುವ ಹಠದಿಂದ ತನ್ನ ಸ್ವಸಾಮರ್ಥ್ಯದಿಂದ ಇಷ್ಟು ಪದವಿ, ಶಿಕ್ಷಣ ಸಂಪಾದಿಸುವುದಕ್ಕೆ ಸಾಧ್ಯವಾಯಿತು ಎನ್ನುತ್ತಾರೆ. ಪ್ರತಿಷ್ಠಿತ ಬೆಳ್ತಂಗಡಿಯ ಅಳದಂಗಡಿ ಗುತ್ತು ಮನೆತನದ ಸ್ವರ್ಣಲತಾ ರೈ ಅವರನ್ನು ಧರ್ಮಪತ್ನಿಯಾಗಿ ಸ್ವೀಕರಿಸಿ ಸಾಂಸಾರಿಕ ಜೀವನದಲ್ಲಿ ಸ್ವಸ್ತಿಕಾ ರೈ ಎಂಬ ಪುತ್ರಿಯನ್ನು ಪಡೆದು ಆಕೆಗೆ ಉನ್ನತ ಶಿಕ್ಷಣ ನೀಡಿದ್ದಾರೆ. ಸ್ವಸ್ತಿಕಾ ರೈ ಅವರು ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಐಐಟಿಎಂ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
ಹೀಗೆ ಕಲೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ, ಶಿಕ್ಷಣ, ಸಂಘಟನೆ, ಕೃಷಿ ಎಲ್ಲಾ ಆಸಕ್ತಿಗಳು ಮೇಳವಿಸಿದ ಅಪೂರ್ವ ಸಾಧಕ ರೈ ಅವರು ನಮ್ಮ ಸಮುದಾಯ ಮಾತ್ರವಲ್ಲದೆ ಇಡೀ ಸಮಾಜ ಹೆಮ್ಮೆ ಪಡಬಹುದಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅತ್ಯಂತ ಸರಳ ವಿನಮ್ರ ನಡೆಯ ಆದರ್ಶ ಶಿಕ್ಷಕ ರೈ ಅವರ ಭವಿಷ್ಯದ ಜೀವನ ಆರೋಗ್ಯದಿಂದ ಲವಲವಿಕೆಯಿಂದ ಕೂಡಿಕೊಂಡು ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಿಸುವ ಯೋಗ ಭಾಗ್ಯಗಳನ್ನು ಭಗವಂತ ಕರುಣಿಸಲಿ. ಜೀವನದಲ್ಲಿ ಶಾಂತಿ ನೆಮ್ಮದಿ ಇರಲಿ ಎಂದು ನಾವೆಲ್ಲ ಪ್ರಾರ್ಥಿಸಿಕೊಳ್ಳುತ್ತೇವೆ.
ಶುಭಂ.. ಮಂಗಲಂ.. ಭವತ್
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು