ಮುಂಬಯಿ, ಡಿ.10: ಸಾರ್ವಜನಿಕ ವಲಯ, ಸಂಘ-ಸಂಸ್ಥೆಗಳಲ್ಲಿ ಸೋಲು-ಗೆಲುವು, ಸವಾಲುಗಳೆಲ್ಲವೂ ಸಾಮಾನ್ಯವಾಗಿದ್ದು, ಇವೆಲ್ಲವನ್ನು ಚಾಣಾಕ್ಷತನದಿಂದ ಎದುರಿಸಿದಾಗಲೇ ಸಾಧನೆ ಸಿದ್ಧಿ ಸಾಧ್ಯ. ಸ್ವಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸಲು ಸ್ವಸಮಾಜದ ಸಂಸ್ಥೆಗಳು ಆಧಾರ ಸ್ತಂಭಗಳಾಗಿವೆ. ಆದುದರಿಂದ ನಾವು ಮಾತೃಸಂಸ್ಥೆಗಳಲ್ಲಿ ಸಕ್ರೀಯರಾಗಿಸಿ ತಮ್ಮತನ, ಅಸ್ಮಿತೆಯನ್ನು ನಿರ್ಣಾಯಕವಾಗಿಸಬೇಕು. ನಮ್ಮ ಜನರ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಬೇಕು. ಆ ಮೂಲಕ ಅಶಕ್ತರನ್ನು ಸಮರ್ಥರನ್ನಾಗಿಸಲು ಬಂಟರು ಶ್ರಮಿಸಬೇಕು ಎಂದು ಬಂಟ್ಸ್ ಸಂಘ ಬೆಂಗಳೂರು ಸಂಸ್ಥಾಪಕ, ಅಧ್ಯಕ್ಷ ಮುರಳೀಧರ ಹೆಗ್ಡೆ ತಿಳಿಸಿದರು.
ಗುಜರಾತ್ ಅಹಮದಾಬಾದ್ನ ಗುಜರಾತ್ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಮೂವತ್ತು ಸಂವತ್ಸರ ಸೇವಾ ಸಂಭ್ರಮದಲ್ಲಿನ ಬಂಟ್ಸ್ ಸಂಘ ಅಹಮದಾಬಾದ್ (ರಿ.) ಗುಜರಾತ್ ಸಂಸ್ಥೆ ತ್ರಿದಶಮನೋತ್ಸವ ಸಂಭ್ರಮಿಸಿದ್ದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಬೆಳಗಿಸಿ ಸಮಾರಂಭಮಕ್ಕೆ ಚಾಲನೆಯನ್ನೀಡಿ ಹೆಗ್ಡೆ ಮಾತನಾಡಿದರು.
ಬಿಎಸ್ಎ ಅಧ್ಯಕ್ಷ ನಿತೇಶ್ ಎಸ್.ಶೆಟ್ಟಿ ಶಿರ್ವಾಕೋಡು ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಉನ್ನತ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಆದರ್ಶ್ ಬಿ.ಶೆಟ್ಟಿ, ಮುಲುಂಡ್ ಬಂಟ್ಸ್ ಮಾಜಿ ಅಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ, ತುಳು ಸಂಘ ಅಂಕಲೇಶ್ವರ ಅಧ್ಯಕ್ಷ ಶಂಕರ ಕೆ.ಶೆಟ್ಟಿ, ಸ್ಟೀಲ್ಸ್ಟ್ರಾಂಗ್ ವ್ಯಾಲ್ಯೂಸ್ ಸಂಸ್ಥೆಯ ಕಾರ್ಯಾಧ್ಯಕ್ಷ ರಮೇಶ್ ಶೆಟ್ಟಿ, ಶಿವ ಕ್ಯಾಟರರ್ಸ್ನ ಮಾಲೀಕ ಶಿವರಾಮ ಬಿ.ಶೆಟ್ಟಿ ಸೂರತ್, ತುಳುನಾಡ ಐಸಿರಿ ವಾಪಿ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ ಗೌರವ ಅತಿಥಿಗಳಾಗಿ, ಬಿಎಸ್ಎ ಕಾರ್ಯದರ್ಶಿ ಕಿರಣ್ ಶೆಟ್ಟಿ, ಖಜಾಂಚಿ ಪ್ರಶಾಂತ್ ನಾೈಕ್ ವೇದಿಕೆಯನ್ನಲಂಕರಿಸಿ ದ್ದರು.
ಸುಮಾರು ಮೂರು ದಶಕಗಳ ಕಾಲ ಶಕ್ತಿಸ್ತಂಭಗಳಾಗಿ ಶ್ರಮಿಸಿದ ಬಿಎಸ್ಎ ಸಂಸ್ಥಾಪಕ ಅಧ್ಯಕ್ಷ ಸಂಜೀವ ಶೆಟ್ಟಿ ಅಜೆಕಾರ್ (ಪತ್ನಿ ಜಯಲಕ್ಷ್ಮೀ ಶೆಟ್ಟಿ ಮತ್ತು ಪರಿವಾರ ಸಹಿತ) ಮತ್ತು ನಿಕಟಪೂರ್ವ ಅಧ್ಯಕ್ಷ ದೇವದತ್ತ ಶೆಟ್ಟಿ (ಪತ್ನಿ ಕುಸುಮಾ ಶೆಟ್ಟಿ ಮತ್ತು ಪರಿವಾರ ಸಹಿತ) ಇವರಿಗೆ ಅತಿಥಿಗಳು ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಿ ಅಭಿನಂದಿಸಿದರು.
ಶಶಿಧರ್ ಶೆಟ್ಟಿ ಮಾತನಾಡಿ ದಾನ ಮಾಡುವ ಸದ್ಗುಣ ಬಂಟರಿಗೆ ವರವಾಗಿದೆ. ಕೊಡುವ ಮನಸ್ಸುಗಳ ಜೊತೆಗೆ ಜೊತೆಗೂಡುವ ಮನಸ್ಸುವುಳ್ಳವರೂ ಶ್ರೇಷ್ಠರೇ ಆಗಿರುತ್ತಾರೆ. ಸಮಾಜದ ಸಂಭ್ರಮಕ್ಕೆ ಸ್ಪಂದಿಸುವ ಸಭಿಕರೂ ಸರ್ವಶ್ರೇಷ್ಠರೇ ಆಗಿದ್ದು, ಸ್ವಸಮಾಜದ ಬಂಧುಗಳ ಪಾಲ್ಗೊಳ್ಳುವಿಕೆಯಿಂದ ಮಾತ್ರ ಐಕ್ಯತೆ ಮೂಡುತ್ತದೆ. ಬಂಟರಲ್ಲಿನ ಒಗ್ಗಟ್ಟನ್ನು ಮತ್ತಷ್ಟು ಭದ್ರಪಡಿಸಲು ಇಂತಹ ಸಂಭ್ರಮಗಳು ಪೂರಕವಾಗಿದ್ದು ಶೀಘ್ರದಲ್ಲೇ ರಾಜ್ಯಾದಾದ್ಯಾಂತದ ಗುಜರಾತ್ ಬಂಟರ ಸಂಘ ಆಸ್ತಿತ್ವ ಬರಲಿದೆ ಎಂದರು.
ಸದ್ಯ ಮನುಕುಲದ ಬಾಂಧವ್ಯ ಮತ್ತು ಬಂಧನದ ಮಧ್ಯೆ ಅಂತರ ಬೃಹತ್ತಾಗುತ್ತಿದೆ. ಆದುದರಿಂದ ಮಾನವಕುಲದಲ್ಲಿ ಜೀವನದ ಬಾಂಧವ್ಯ ಜಾಸ್ತಿಯಾಗಬೇಕಾಗಿದೆ. ಜೀವನ ಶೈಲಿಗೆ ಸಂಸ್ಥೆಗಳು ಬುನಾದಿಯಾಗಿದ್ದು, ಸಂಸ್ಥೆಗಳ ಸಂಬಂಧವನ್ನು ಸಮೀಪ್ಯವಾಗಿಸಿ ಬಾಳುವ ಅವಶ್ಯಕತೆ ಪ್ರತಿಯೊಬ್ಬರಿಗಿದೆ ಎಂದು ಬಾಲಕೃಷ್ಣ ಶೆಟ್ಟಿ ತಿಳಿಸಿದರು.
ಡಾ| ಸತ್ಯಪ್ರಕಾಶ ಮಾತನಾಡಿ ಸ್ತ್ರೀ ಪ್ರಧಾನ ಸಮಾರಂಭಗಳು ಯಾವೋತ್ತು ಶಕ್ತಿದಾಯಕವೂ, ಪ್ರೋತ್ಸಾಹಕರವೂ ಆಗಿರುತ್ತವೆ ಅನ್ನುವುದಕ್ಕೆ ಈ ಸಂಭ್ರಮವೇ ಸಾಕ್ಷಿಯಾಗಿದೆ. ಸೇವೆ ಮತ್ತು ವ್ಯವಹಾರಕ್ಕೆ ಬಂಟರು ಮತ್ತು ಗುಜರಾತಿಗಳು ಭಾಯಿಭಾಯಿಗಳಂತಿದ್ದು ಎಲ್ಲವನ್ನೂ ಸಿದ್ಧಿಸುವ ಛಲಗಾರರಾಗಿದ್ದಾರೆ. ಸಂಸ್ಕಾರದ ನಡೆಗೆ ಮಾತೃಭಾಷೆಯೇ ಪ್ರಧಾನವಾಗಿದೆ. ಮಾತೃಭಾಷೆಯ ಅರಿವು ತಿಳಿದಾಗ ಸಂಸ್ಕಾರ ಬರುವುದು, ಸಂಸ್ಕಾರ ಬಂದಾಗ ಸುಸಂಸ್ಕೃತ ಬದುಕು ಸಾಧ್ಯ. ಆದುದರಿಂದ ಮೌಲ್ಯಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ ಅನ್ನುತ್ತಾ ಸಮುದಾಯದ ಬೆನ್ನೆಲುಬು ಆಗಿದ್ದ ಬಂಟ ಸರದಾರ, ಸಮಾಜದ ಪರಿವರ್ತನಾಕಾರ ಮೂಲ್ಕಿ ಸುಂದರರಾಮ ಶೆಟ್ಟಿ ಸ್ಮರಣೆಗೈದರು.
ದೈನಂದಿನ ಬದುಕಿನಲ್ಲಿ ಬಂಟತ್ವವನ್ನು ಮೈಗೂಡಿಸಿದರೆ ಬಂಟರು ಇನ್ನಷ್ಟು ಬಲಶಾಲಿಗಳಾಗುವರು. ಜನ್ಮಭೂಮಿಯಷ್ಟೆ ಕರ್ಮಭೂಮಿಗೂ ಗೌರವ, ಮಹತ್ವ ನೀಡಿ ಬಾಳುವ ಅಗತ್ಯವಿದೆ. ಬಹುರೂಪಿ ಶಿಕ್ಷಣಕ್ಕೆ ಮಹತ್ವವನ್ನಿತ್ತು ಮಕ್ಕಳನ್ನು ಪದವೀಧರರನ್ನಾಗಿಸಿರಿ ಎಂದು ಆದರ್ಶ್ ಶೆಟ್ಟಿ ಕರೆಯಿತ್ತರು. ಅನ್ಯರೆಲ್ಲರನ್ನೂ ತಮ್ಮವರನ್ನಾಗಿಸಿ ಬಾಳುವ ಬಂಟರು ಸಾಮರಸ್ಯದಿಂದ ಬದುಕು ಬಂಗಾರವಾಗಿಸಿದವರು. ಭವಿಷ್ಯದಲ್ಲೂ ಬಂಟರೆಲ್ಲರೂ ಮತ್ತಷ್ಟು ಒಗ್ಗಟ್ಟಾಗಿರಿ. ಅಹ್ಮದಾಬಾದ್ನಲ್ಲೂ ಸ್ವಂತದ ಬಂಟರ ಭವನ ನಿರ್ಮಾಣಕ್ಕೆ ಉದಾರತೆ ತೋರಿರಿ ಎಂದು ರಮೇಶ್ ಶೆಟ್ಟಿ ತಿಳಿಸಿದರು.
ನಿತೇಶ್ ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿ ಸಂಘ- ಸಂಸ್ಥೆಗಳು ಅವಕಾಶಗಳನ್ನು ಒದಗಿಸುವ ವೇದಿಕೆಗಳಾಗಿದ್ದು ಇದಕ್ಕೆ ಬಂಟ್ಸ್ ಸಂಘ ಅಹಮದಾಬಾದ್ ಕೂಡಾ ಸಾಕ್ಷಿಯಾಗಿದೆ. ನಮ್ಮವರಲ್ಲಿ ಆಧುನಿಕ ಶಿಕ್ಷಣದ ಅರಿವು ಮೂಡಿಸಿ, ಆರೋಗ್ಯದ ಕಾಳಜಿ ಜೊತೆಗೆ ಪರಿಸರಪ್ರೇಮಕ್ಕೆ ಪ್ರಮುಖ ಆದ್ಯತೆ ನೀಡುತ್ತಿದೆ.
ನೈಸರ್ಗಿಕ ಕಾಳಜಿ ಬಗ್ಗೆ ಪ್ರಧಾನ ಭೂಮಿಕೆಯನ್ನೊತ್ತು ಸಾಗುತ್ತಿರುವ ಸಂಘದಲ್ಲಿ ಸದಸ್ಯ ಬಂಧುಗಳ ಭಾಗವಿಸುವಿಕೆ ಪ್ರಮುಖವಾಗಿದ್ದು ಎಲ್ಲರೂ ಒಗ್ಗೂಡಿದಾಗಲೇ ಕುಟುಂಭೋತ್ಸವ ಉಲ್ಲಾಸಮಯವಾಗಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಬಿಎಸ್ಎ ಉಪಾಧ್ಯಕ್ಷರುಗಳಾದ ರವಿರಾಜ್ ಎಂ.ಶೆಟ್ಟಿ ಮತ್ತು ಶಕುಂತಲಾ ಐ.ಶೆಟ್ಟಿ, ಕಾರ್ಯದಜೊತೆ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಜೊತೆ ಕೋಶಾಧಿಕಾರಿ ದೇವಿಪ್ರಸಾದ್ ಡಿ.ಶೆಟ್ಟಿ. ಸಂಯೋಜನಾ ಕಾರ್ಯದರ್ಶಿ ರವೀಂದ್ರ ಕೆ.ಶೆಟ್ಟಿ, ಮಾಜಿ ಅಧ್ಯಕ್ಷ ಅಪ್ಪು ಪಿ.ಶೆಟ್ಟಿ ಸದಸ್ಯರನೇಕರು ಉಪಸ್ಥಿತರಿದ್ದು ದಿಶಾ ನಿತೇಶ್ ಶೆಟ್ಟಿ ಸಂಪಾದನತ್ವದಲ್ಲಿ ಸಿದ್ಧಪಡಿಸಲಾದ `ಬಿಎಸ್ಎ ಡಿಜಿಟಲ್ ಡೈರಿ’ ಯನ್ನು ಮುರಳೀಧರ ಹೆಗ್ಡೆ ಬಿಡುಗಡೆ ಗೊಳಿಸಿದರು.
ಬಿಎಸ್ಎ ಮಾಜಿ ಅಧ್ಯಕ್ಷ ಅಪ್ಪು ಪಿ.ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ್ ಎನ್.ಶೆಟ್ಟಿ, ಪ್ರಶಾಂತ್ ಎಸ್.ಶೆಟ್ಟಿ, ವಸಂತಕುಮಾರ್ ಶೆಟ್ಟಿ, ಅಪ್ಪು ಎ.ಶೆಟ್ಟಿ, ಅಶೋಕ್ ಎಲ್.ಶೆಟ್ಟಿ, ಪ್ರಕಾಶ್ ಬಿ.ಶೆಟ್ಟಿ, ಸರೋಜಾ ಎಸ್. ಶೆಟ್ಟಿ, ಸುಹಾಸ್ ಬಿ.ಶೆಟ್ಟಿ, ದಿನೇಶ್ ಶೆಟ್ಟಿ, ಸುರೇಶ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಜಗನ್ನಾಥ ಶೆಟ್ಟಿ, ವಿಶೇಷ ಆಮಂತ್ರಿತ ಸದಸ್ಯ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದು ಅತಿಥಿಗಳು ಪ್ರತಿಭಾನ್ವಿತ ವಿದ್ಯಾಥಿರ್ಗಳು, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಶುಭಾರೈಸಿದರು.
ಸಂಘದ ಪ್ರತಿಭಾನ್ವಿತ ಮಕ್ಕಳು, ಮಹಿಳೆಯರು ಮತ್ತು ಸದಸ್ಯರು ಮನೋರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರಪಡಿಸಿದ್ದು ಕರ್ನಾಟಕ ಕರಾವಳಿಯ ಸಂದೀಪ್ ಶೆಟ್ಟಿ ರಾಯಿ ಮತ್ತು ತಂಡವು ತುಳು ಹಾಸ್ಯ ವಿಡಂಬನೆ, ಪ್ರಹಸನಗಳನ್ನೊಳಗೊಂಡ ಕುಸಲ್ದ ಕುರ್ಲಾರಿ ಕಾರ್ಯಕ್ರಮ ಪ್ರದರ್ಶಿಸಿದರು. ಸುಶ್ಮಿತಾ ಪ್ರವೀಣ್ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಅಧ್ಯಕ್ಷ ನಿತೇಶ್ ಎಸ್.ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದು ಉಪಸ್ಥಿತ ಗಣ್ಯರಿಗೆ ಸತ್ಕರಿಸಿದರು.
ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚ, ಸ್ಮರಣಿಕೆ, ಪುಷ್ಫಗುಚ್ಛಗಳನ್ನೀಡಿ ಗೌರವಿಸಿದರು. ನಮ್ಮ ಟಿವಿ ವಾಹಿನಿಯ ಕಾರ್ಯಕ್ರಮ ನಿರೂಪಕ ನವೀನ್ ಕುಮಾರ್ ಶೆಟ್ಟಿ ಎಡ್ಮೆಮಾರ್ ಅತಿಥಿಗಳು, ಪುರಸ್ಕೃತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸದಸ್ಯ ಸುದರ್ಶನ್ ಡಿ.ಶೆಟ್ಟಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ವಾರ್ಷಿಕೋತ್ಸವ ಸಮಾಪನ ಗೊಂಡಿತು.
ಚಿತ್ರ, ವರದಿ – ರೋನ್ಸ್ ಬಂಟ್ವಾಳ್