“ಹೋಮಕ್ಕೆ ಹಾಕಲು ಕಡಿಮೆ ದರದ ತುಪ್ಪ ಕೊಡಿ ” ಯಾವುದೇ ಅಂಗಡಿಯಲ್ಲೂ ಕೇಳಿ ಬರುವ ಮಾತಿದು. ದೇವರ ದೀಪಕ್ಕೂ ಇದೇ ತುಪ್ಪ. ದೇವರಿಗೆ ಈ ತುಪ್ಪ ನಡೆಯುತ್ತಾ? ಹೌದು, ದೇವರಿಗೆ ಭಕ್ತಿಯಿಂದ ಏನೇ ಸಮರ್ಪಿಸಿದರೂ ಆತ ಸ್ವೀಕರಿಸುತ್ತಾನೆ. ಕಣ್ಣಪ್ಪನ ಮಾಂಸ ಸ್ವೀಕರಿಸಿದ್ದ ಆತ. ಹಲವಾರು ಕಡೆ ಮದ್ಯ ಮಾಂಸ ಸಿಗರೇಟಿನ ನೈವೇದ್ಯ ಪದ್ಧತಿ ಕೂಡ ಇವೆ. ಆದರೆ ಹಾಗಂತ ತೀರಾ ದನದ ಮಾಂಸದ ತುಪ್ಪ ಕೊಟ್ಟರೆ? ಗೊತ್ತಿಲ್ಲದೇ ಕೊಟ್ಟರೆ ಏನೂ ತೊಂದರೆ ಇಲ್ಲ ಅಂದುಕೊಂಡು ನಮ್ಮ ಮನಸ್ಸಿಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತೇವೆ. ಆದರೆ ಒಳಗಿಂದೊಳಗೆ ನಮಗೆ ಗೊತ್ತಿಲ್ಲದೇ ಇಲ್ಲ.
ತುಪ್ಪದ ದರ ಹೊರಗೆ ಐನೂರು ರೂಪಾಯಿ ತನಕ ಇದೆ. ಆದರೆ ದೇವರಿಗೆ ಅರ್ಪಿಸುವ ತುಪ್ಪ 125 ರಿಂದ 200 ರೂಪಾಯಿ ಕೇಜಿ. ಸ್ವಾಮಿ ಅಯ್ಯಪ್ಪ ಇರುಮುಡಿ ಸಲುವಾಗಿ ಲಕ್ಷಾಂತರ ಕೇಜಿ ತುಪ್ಪ ನವೆಂಬರ್ ನಿಂದ ಜನವರಿ ತನಕ ಬರುತ್ತದೆ.
ಇದರಲ್ಲಿ ಇರುವುದು ದನದ ಕೊಬ್ಬು. ಎಲುಬು ಮತ್ತು ವನಸ್ಪತಿ. ಸುವಾಸನೆ ಬರಲು ಎಸೆನ್ಸ್. ಹತ್ತೀಕಾಳು ತಿನ್ನಿಸಿ ಬೆಳೆಸಿದ ಎತ್ತಿನ ಕೊಬ್ಬಿಗೂ ತುಪ್ಪಕ್ಕೂ ವ್ಯತ್ಯಾಸ ಕಂಡುಹಿಡಿಯುವುದು ಪ್ರಯೋಗ ಶಾಲೆಯಲ್ಲಿ ಮಾತ್ರ ಸಾಧ್ಯ. ಎರಡರ ಮೆಲ್ಟಿಂಗ್ ಪಾಯಿಂಟ್ ಕೂಡ ಹೆಚ್ಚು ಕಡಿಮೆ ಒಂದೇ. ಕಸಾಯಿಖಾನೆಗಳಿಂದ ನೇರ ಸರಬರಾಜು ತುಪ್ಪ ತಯಾರಿಕಾ ಘಟಕಕ್ಕೆ. ನೂರಾರು ನಕಲಿ ತುಪ್ಪ ತಯಾರಿಕಾ ಘಟಕಗಳಿವೆ. ಆದರೆ ಇವೂ ತಯಾರಿಸುವುದು ಮಾನವ ಬಳಕೆಗೆಂದೇ. ಮಾರ್ಕೆಟ್ ನಲ್ಲಿ ಸಿಗುವ ಶೇಕಡ 50 ತುಪ್ಪ ನಕಲಿ ಅಂತ ವರದಿಯಿದೆ. ಈ ತುಪ್ಪ ಅಸಲಿ ತುಪ್ಪಕ್ಕಿಂತ ಹೆಚ್ಚು ರುಚಿ ಮತ್ತು ಪರಿಮಳ. ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಕೊಡುವುದು ನಕಲಿ ಬೆಣ್ಣೆ. ಆದರೆ ಇದನ್ನು ತಿನ್ನುವುದರಿಂದ ಪಾರ್ಶ್ವವಾಯು, ಗ್ಯಾಂಗ್ರೀನ್ , ಕಿಡ್ನಿ ವೈಫಲ್ಯ ಉಂಟಾಗುತ್ತದೆ ಅಂತ ಸರಕಾರಕ್ಕೆ ವರದಿ ಆಗಿದೆ. ನಕಲಿ ತುಪ್ಪದಲ್ಲಿ ವನಸ್ಪತಿ ಬೆರೆಸುವುದನ್ನು ತಡೆಯಲು ವನಸ್ಪತಿಗೆ ಬಣ್ಣ ಹಾಕಬೇಕು ಅಂತ ವೆಜಿಟೇಬಲ್ ಆಯಿಲ್ ಕಂಟ್ರೋಲ್ ಆರ್ಡರ್ ಪಾಸ್ ಮಾಡಿದೆ. ಇದರ ಅನುಸಾರ ವನಸ್ಪತಿಯಲ್ಲಿ ಶೇಕಡಾ 5 ಕ್ಕಿಂತ ಹೆಚ್ಚು ಎಳ್ಳೆಣ್ಢೆ ಇರಲೇಬೇಕು. ಇದು ಅದಕ್ಕೆ ಅಗತ್ಯ ಬಣ್ಣ ಕೊಡುತ್ತದೆ.
ಇದು ತಿನ್ನುವ ನಕಲಿ ತುಪ್ಪದ ಕತೆಯಾದರೆ ದೇವರಿಗೆ ಕೊಡುವ ನಕಲಿ ತುಪ್ಪದ ಕತೆ ಘೋರ. ಹಂದಿಯ ಕೊಬ್ಬು ಕೂಡ ಮಿಕ್ಸ್ ಮಾಡುತ್ತಾರೆ. ನಮ್ಮ ಅಯ್ಯಪ್ಪ ಭಕ್ತರು ಲಕ್ಷಾಂತರ ಕ್ವಿಂಟಾಲ್ ದನ ಮತ್ತು ಹಂದಿಯ ಕೊಬ್ಬನ್ನು ಶಬರಿಮಲೆಯಲ್ಲಿ ಪ್ರತೀ ವರ್ಷ ಹೋಗಿ ಹಾಕಿ ಬರುತ್ತಾರೆ ಮತ್ತು ದೇವಾಲಯ ಹೆಣ್ಣು ಮಕ್ಕಳು ಹೋದರೆ ಮೈಲಿಗೆ ಅಂತ ಶುದ್ಧ ಮಾಡುತ್ತದೆ. ಈ ತುಪ್ಪ ಡೈರೆಕ್ಟ್ ಆಗಿ ದೇವರ ಮೂರ್ತಿಗೆ ಅಬಿಷೇಕ ಆಗುತ್ತದೆಯೋ ಅಲ್ಲಿನ ಸರೋವರದಲ್ಲಿ ಹಾಕುತ್ತಾರೋ ಬಲ್ಲವರು ತಿಳಿಸಿ.
ದೇವರ ದೀಪದ ಎಣ್ಣೆಯ ಕತೆ ಕೂಡ ಹೀಗೇಯೇ ಇದೆ. “ದೀಪಂ” ಅಂತ ಹೆಸರಿನ ಪ್ಲಾಸ್ಟಿಕ್ ಕೊಟ್ಟೆಗಳನ್ನು ಬೆಂಗಳೂರಿನ ದೇವಸ್ಥಾನದ ಮುಂಭಾಗದಲ್ಲಿ ಕಸದ ತೊಟ್ಟಿಯಿಂದ ಆಯುವವರ ದೊಡ್ಡ ಗುಂಪಿದೆ. ಇದೊಂದು ಇನ್ನೊಂದು ಕಂಪನಿಯ ಕೊಟ್ಟೆಗಳನ್ನು ಮಾತ್ರ ಇವರು ಕೊಂಡೊಯ್ಯುತ್ತಾರೆ. ಏನು ರೀಸೈಕಲ್ ಆಗುತ್ತೋ ಗೊತ್ತಿಲ್ಲ. ಅಗ್ಗದ ಊದುಬತ್ತಿಗಳೂ ಮಾರಕ. ಹೀಗೆಲ್ಲ ಮಾಡಿ ದೇವರಿಗೆ ಇವೆಲ್ಲ ಕೊಡುವುದಾದರೂ ಯಾಕೆ? ರುಕ್ಮಿಣಿಯ ಒಂದು ತುಳಸೀ ದಳಕ್ಕೇ ಸುಪ್ರೀತನಾಗಿರಲಿಲ್ಲವೇ ಅವನು? ತೀರಾ ಕಚಡಾ ಸಮರ್ಪಿಸಬೇಡಿ. ಸಾಧ್ಯವಾದಷ್ಟೂ ಒಳ್ಳೆಯದು ಕೊಡೋಣ. ಹೇಗೂ ಅವನು ತಿನ್ನಲ್ಲ. ತಿನ್ನೋದು ನಾವೇ. ದೇವರನ್ನೇ ಬೆಪ್ಪನಾಗಿಸಲು ನಕಲಿ ತುಪ್ಪ ಕೊಟ್ಟು ನಕಲಿಯಾಗಬೇಡಿ.