ಮುಂಬಯಿ ಧುನಿಯಾದಲ್ಲಿ ತುಳುಕನ್ನಡಿಗರಲ್ಲಿ `ಬಂಟ ಕುಲಭೂಷಣ’ ಮುಂಬಯಿ ತುಳುಕನ್ನಡಿಗರ ನೆಚ್ಚಿನ `ಯಜಮಾನ ಎಂ.ಡಿ ಶೆಟ್ಟಿ’ ಎಂದೇ ಜನಜನಿತ ಮೂಳೂರು ದೇಜು ಶೆಟ್ಟಿ (95) ಅವರು ಸೋಮವಾರ (ಜು.10) ಬಾಂದ್ರಾ ಪಶ್ಚಿಮದ ಎಸ್.ವಿ ರೋಡ್ನಲ್ಲಿನ ವಿಜಯ್ ರಾಜ್ ಅಪಾರ್ಟ್ಮೆಂಟ್ ನಿವಾಸದಲ್ಲಿ ನಿಧನರಾದರು.
ದಕ್ಷಿಣ ಕನ್ನಡ ಜಿಲ್ಲೆಯ ಕಾಪು ಮೂಳೂರು ಮನೆತನದವರಾಗಿದ್ದ ಮೃತರು 1973ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಉಪಸ್ಥಿತಿಯಲ್ಲಿ ಇಂದಿರಾ ಬ್ರಿಗೇಡ್ ಇದರ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡರು. 1977ರಲ್ಲಿ ವಿಶ್ವದ ಹೆಸರಾಂತ ಬಂಟ ಸಮಾಜದ ಸಂಸ್ಥೆಯಾದ ಬಂಟ್ಸ್ ಸಂಘ ಮುಂಬಯಿ ಇದರ ಅಧ್ಯಕ್ಷರಾಗಿ ಚುನಾಯಿತರಾಗಿ ಸಂಸ್ಥೆಯನ್ನು ಪ್ರತಿಷ್ಠಿತ ಮಟ್ಟಕ್ಕೆ ಬೆಳಿಸಿದ್ದು ಇಂದಿಗೂ ಬಂಟ ಸಮಾಜದ ಹಿರಿಯ ಮುತ್ಸದ್ಧಿ ಆಗಿಯೇ ಉಳಿದಿರುವರು. ವರ್ಲಿಯಲ್ಲಿನ ನಿತ್ಯಾನಂದ ರಾತ್ರಿ ಹೈಸ್ಕೂಲು ಇದನ್ನು ಬಂಟ್ಸ್ ಸಂಘಕ್ಕೆ ಸೇರ್ಪಡೆ, ಬಂಟರ ಭವನದಲ್ಲಿ ಸ್ವಾಮಿ ಮುಕ್ತಾನಂದ ಸಭಾಗೃಹ ಮತ್ತು ಮಹಿಳಾ ವಿಭಾಗದ ರಚನೆ, ಬಂಟರ ಸಂಘದ ಮುಖವಾಣಿ ಬಂಟರವಾಣಿ ಪ್ರಕಾಶನ, 2006ರಲ್ಲಿ ಸ್ಥಾಪಿತ ಬಂಟ್ಸ್ ಉನ್ನತ ಶಿಕ್ಷಣ ಯೋಜನೆ, ಅಣ್ಣಲೀಲಾ ಕಲಾ ಮತ್ತು ಅರ್ಥ ಮಹಾವಿದ್ಯಾಲಯ, ಶೋಭಾ ಜಯರಾಮ ಶೆಟ್ಟಿ ಬಿಎಂಎಸ್ ಕಾಲೇಜು, ತನ್ನ ಕಾರ್ಯಾಧ್ಯಕ್ಷತೆಯಲ್ಲಿ 1978ರಲ್ಲಿ ಸ್ವರ್ಣ ಮಹೋತ್ಸವ ಮತ್ತು 2004ರಲ್ಲಿ ವಜ್ರಮಹೋತ್ಸವ ಸಂಭ್ರಮ ಇತ್ಯಾದಿಗಳು ಇಂದಿಗೂ ಜೀವಾಳವಾಗಿವೆ. ಬಂಟರ ಸಂಘದಲ್ಲಿ ಸಂಸ್ಕೃತಿಯ ತುಂಬಾ ತನ್ನ ಪ್ರಭಾವ ಪ್ರವಾಹವನ್ನು ಹರಿಸಿ ಹೊಸದೊಂದು ಸುವರ್ಣಯುಗ ನಿರ್ಮಿಸುವಲ್ಲಿ ಯಶಸ್ವಿಕಂಡ ಧುರೀಣರಿನರಿವರು. ಬಂಟರ ಸಂಘದ ಸಾಮಾಜಿಕ ಕ್ಷಿತಿಜದಲ್ಲಿ ಒಂದು ಪ್ರಮುಖ ಸ್ಥಾನ ಕಲ್ಪಿಸಿಕೊಟ್ಟಿರುವರು.
ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ ಇದರ ಸಂಸ್ಥಾಪಕ ಅಧ್ಯಕ್ಷರಾಗಿ, ಬಂಟ್ಸ್ ನ್ಯಾಯ ಮಂಡಳಿ ಅಧ್ಯಕ್ಷರಾಗಿ ದುಡಿದ ಧುರೀಣ. ಫೆಡರೇಶನ್ನ ಅಜೀವ ಗೌರವಾಧ್ಯಕ್ಷರಾಗಿ ಸೇವಾ ನಿರತರಾಗಿದ್ದರು.
ಮೃತರು ಸೊಸೆ, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.