ಮೂಡುಬಿದಿರೆ: ರಾಜ್ಯದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ಅಂತಿಮ ವರ್ಷದ ಬಿ.ಇ. ವಿದ್ಯಾರ್ಥಿಗಳಿಗೆ ಸಿಎಸ್ಎಫ್ಎಸ್ (ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್) ತರಬೇತಿ ನೀಡುವ ಮಹತ್ವದ ಒಡಂಬಡಿಕೆಗೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಮತ್ತು ಕರ್ನಾಟಕ ಸರ್ಕಾರದ ಸೈಸೆಕ್(ಸೈಬರ್ ಸೆಕ್ಯುರಿಟಿ ಕರ್ನಾಟಕ) ಜನವರಿ 20ರಂದು ಬೆಂಗಳೂರಿನ ಸೈಸೆಕ್ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಸಹಿ ಮಾಡಿದವು.
ಈ ಮಹತ್ವದ ಒಡಂಬಡಿಕೆಗೆ ಸಹಿ ಮಾಡಿದ ಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಒಡಂಬಡಿಕೆಯನ್ನು ಮಾಡಿಕೊಂಡಿರುವ ಸೈಸೆಕ್ ಮತ್ತು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜನ್ನು ಅಭಿನಂದಿಸಿದರು. ಈ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತಾರವಾಗಿ ರೂಪಿಸಿ. ಸರ್ಕಾರ ಸದಾ ಬೆಂಬಲ ನೀಡಲಿದೆ. ಈ ತರಬೇತಿ ಪಡೆದ ವಿದ್ಯಾರ್ಥಿಗಳು ಸೈಬರ್ ಸೆಕ್ಯುರಿಟಿಯಲ್ಲಿ ಉದ್ಯೋಗ ಪಡೆಯಬೇಕು ನಮ್ಮ ಪ್ರಮುಖ ಧ್ಯೇಯವಾಗಿದೆ ಎಂದರು.
ಸಿಎಸ್ಎಫ್ಎಸ್ ಕಾರ್ಯಕ್ರಮವು ಫೆಬ್ರುವರಿ 19ರಿಂದ ಮಾರ್ಚ್ 22ರ ವೆರೆಗೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಸೈಸೆಕ್ ಕೇಂದ್ರದ ಮುಖ್ಯಸ್ಥ ಕಾರ್ತಿಕ್ ರಾವ್ ಬಿ., ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಿಎಸ್ಇ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೊಠಾರಿ, ಸೈಬರ್ ಸೆಕ್ಯುರಿಟಿ ಎಂಜಿನಿಯರ್ಗಳಾದ ವಿನೀತ್ ಶೆಟ್ಟಿ, ಕೌಶಿಕ್, ಕೆಎಸ್ಸಿಎಸ್ಟಿ ಕಾರ್ಯದರ್ಶಿ ಡಾ. ಅಶೋಕ್ ಎಂ. ರಾಯಚೂರ್ ಇದ್ದರು.