ತುಳು ರಂಗಭೂಮಿಯಲ್ಲಿ ಇದೀಗ ಹೊಸತನದ ಗಾಳಿ ತುಸು ಬಿರುಸಾಗಿಯೇ ಬೀಸುತ್ತಿದೆ!. ಹಾಸ್ಯಮಯ ನಾಟಕಗಳನ್ನೇ ನೆಚ್ಚಿಕೊಂಡಿದ್ದ ಹಲವು ನಾಟಕ ತಂಡಗಳು ಪ್ರಸ್ತುತ ಪೌರಾಣಿಕ, ಜಾನಪದ, ಐತಿಹಾಸಿಕ ನಾಟಕಗಳನ್ನೂ ಪ್ರದರ್ಶಿಸುವ ಮೂಲಕ ತುಳು ರಂಗಭೂಮಿಯಲ್ಲಿ ಹೊಸ ಸಂಚಲನವನ್ನುಂಟು ಮಾಡುತ್ತಿವೆ. ಅದೇ ಸಿದ್ಧಸೂತ್ರದ, ಒಂದೇ ಶೈಲಿಯ ನಾಟಕಗಳಿಗೆ ಒಗ್ಗಿಹೋಗಿದ್ದ ಇಲ್ಲಿನ ಪ್ರೇಕ್ಷಕರು ಹೊಸ ಅಲೆಯ ನಾಟಕಗಳನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸುತ್ತಿರುವುದು ತುಳು ರಂಗಭೂಮಿಯ ಹೊಸ ಬೆಳವಣಿಗೆಯಾಗಿದೆ. ತುಳುನಾಡಿನ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಉತ್ಸವ, ಜಾತ್ರೆ, ಬ್ರಹ್ಮಕಲಶ, ನೇಮೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಇಂತಹ ನಾಟಕಗಳು ಅಪಾರ ಬೇಡಿಕೆ ಪಡೆಯುತ್ತಿವೆ.
ತುಳು ನಾಟಕ ರಂಗದ ಅತ್ಯಂತ ಯಶಸ್ವಿ ಸಂಘಟಕ ಎಂಬ ಹೆಗ್ಗಳಿಕೆ ಹೊಂದಿರುವ ಕಿಶೋರ್ ಡಿ.ಶೆಟ್ಟಿ ಅವರು ಇಂತಹ ವಿಶಿಷ್ಟ ಹಾಗೂ ಮೌಲ್ಯಯುತವಾದ ನಾಟಕಗಳನ್ನು ಸಾದರ ಪಡಿಸುವ ಮಹತ್ವಾಕಾಂಕ್ಷೆಯಿಂದ ಹುಟ್ಟು ಹಾಕಿರುವ ಸಂಸ್ಥೆ “ಶ್ರೀ ಲಲಿತೆ” ತಂಡ. ಈ ನಾಟಕ ತಂಡ ಪ್ರದರ್ಶಿಸಿದ ʻಕಟೀಲ್ದಪ್ಪೆ ಉಳ್ಳಾಲ್ದಿʼ ಪೌರಾಣಿಕ ನಾಟಕ ದೇಶ- ವಿದೇಶಗಳಲ್ಲಿ ಪ್ರದರ್ಶನಗೊಂಡು ಕಲಾಭಿಮಾನಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಇದೇ ತಂಡ ಪ್ರಸ್ತುತ ಪಡಿಸಿರುವ ʼಗರುಡ ಪಂಚೆಮಿʼ ನಾಟಕ 50 ಪ್ರದರ್ಶನದ ಗಡಿಯನ್ನು ದಾಟಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ವಿಭಿನ್ನವಾದ ಕಥಾವಸ್ತು, ವೈಭವಯುತ ರಂಗ ವಿನ್ಯಾಸ, ಉತ್ತಮ ಬೆಳಕಿನ ಸಂಯೋಜನೆ, ಪ್ರಬುದ್ಧ ಸಂಭಾಷಣೆ, ಅಪೂರ್ವ ಅಭಿನಯದಿಂದಾಗಿ ಗರುಡ ಪಂಚೆಮಿ ನಾಟಕ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.. ತುಳು ನಾಟಕ ರಂಗಕ್ಕೆ ಅನೇಕ ಪೌರಾಣಿಕ ನಾಟಕಗಳನ್ನು ಕೊಡುಗೆಯಾಗಿ ನೀಡಿರುವ ಅನನ್ಯ ಸಾಂಸ್ಕೃತಿಕ ಸಾಧಕ ನವನೀತ ಶೆಟ್ಟಿ ಕದ್ರಿ ಅವರ ತುಳು ಭಾಷೆಯ ಸೊಗಡನ್ನು ಅನಾವರಣಗೊಳಿಸುವ ಅದ್ಭುತ ಸಂಭಾಷಣೆ ಇಡೀ ನಾಟಕದ ಹೈಲೈಟ್ ಆಗಿ ಗಮನ ಸೆಳೆಯುತ್ತದೆ. ತುಳು ನಾಟಕ ರಂಗದಲ್ಲೇ ಹಲವು ದೃಶ್ಯಗಳಲ್ಲಿ ಜಾದೂ ತಂತ್ರವನ್ನು ಮೊತ್ತ ಮೊದಲ ಬಾರಿಗೆ ಈ ನಾಟಕದಲ್ಲಿ ಅಳವಡಿಸಲಾಗಿದ್ದು, ಶೂನ್ಯದಿಂದ ಹಾವು, ಮಂತ್ರದಂಡ, ಹೂಗುಚ್ಚ ಮತ್ತಿತರ ವಸ್ತುಗಳ ಸೃಷ್ಟಿಯಾಗಿ ಪ್ರೇಕ್ಷಕರಿಗೆ ರೋಮಾಂಚಕಾರಿ ಅನುಭವ ನೀಡಿ, ನಿಬ್ಬೆರಗಾಗಿಸುತ್ತದೆ. ದಟ್ಟ ಕಾಡಿನ ದೃಶ್ಯವಂತೂ ಅತ್ಯಂತ ನೈಜತೆಯಿಂದ ಮೂಡಿಬಂದಿದ್ದು, ಈ ನಾಟಕದ ವಿವಿಧ ದೃಶ್ಯಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ.
ಕೇರಳದಲ್ಲಿ 150ಕ್ಕಿಂತಲೂ ಹೆಚ್ಚಿನ ಪ್ರದರ್ಶನವನ್ನು ಕಂಡ ಸುನಿ ಮಾಳ ಅವರ ʻಚತುರ್ವೇದಂʼ ಎಂಬ ಯಶಸ್ವಿ ನಾಟಕದ ರೂಪಾಂತರವಾಗಿರುವ ʻಗರುಡ ಪಂಚಮಿʼ ಯನ್ನು ತುಳುವಿಗೆ ಅನುವಾದಿಸಿದ್ದು ಕದ್ರಿ ನವನೀತ ಶೆಟ್ಟಿ ಅವರು. ಮೂಲ ಕಥೆಗೆ ಚ್ಯುತಿ ಬಾರದಂತೆ ಸ್ಥಳೀಯ ಪೂರಕ ಅಂಶಗಳನ್ನು ನಾಟಕಕ್ಕೆ ಅಳವಡಿಸಿದ್ದು ಇಲ್ಲಿ ಉಲ್ಲೇಖನೀಯವಾಗಿದೆ. ಮಾಂತ್ರಿಕ ವಿದ್ಯೆಯನ್ನು ಮೋಸದಿಂದ ಕೈವಶಪಡಿಸಿಕೊಂಡು, ತನ್ನ ಪ್ರತಿಷ್ಟೆಗೆ ಅಡ್ಡಿಪಡಿಸುವ ತಮ್ಮವರನ್ನೇ ನಾಶ ಪಡಿಸುವ ಹುನ್ನಾರ ಹೊಂದಿದ ಮಂತ್ರವಾದಿಯ ಖಳ ಪಾತ್ರದಲ್ಲಿ ಹಿರಿಯ ರಂಗ ನಟ, ನಿರ್ದೇಶಕ ಜೀವನ್ ಉಳ್ಳಾಲ್ ಅವರು ಅನನ್ಯ ನಟನಾ ಕೌಶಲ್ಯ ಮೆರೆದಿದ್ದಾರೆ. ಮಾಂತ್ರಿಕ ವಿದ್ಯೆಯನ್ನು ಪ್ರಾಮಾಣಿಕವಾಗಿ ಕಲಿತು, ತನ್ನ ತಂದೆಯನ್ನು ಮೋಸದಿಂದ ಕೊಂದ ದುಷ್ಟ ಮಂತ್ರವಾದಿಯೊಂದಿಗೆ ಸೆಣಸಾಡುವ ಕಥಾನಾಯಕನ ಪಾತ್ರದಲ್ಲಿ ಉದಯೋನ್ಮುಖ ನಟ ರೋಹಿಲ್ ಶೆಟ್ಟಿ ಮಿಂಚಿದ್ದಾರೆ. ಕಥಾ ನಾಯಕಿಯಾಗಿ ಸ್ನೇಹಾ ಕುಂದರ್, ಹಿರಿಯ ರಂಗ ನಟಿ ಸರೋಜಿನಿ ಶೆಟ್ಟಿ, ಕಥೆಗೊಂದು ತಿರುವು ನೀಡುವ ಪಾತ್ರ ನಿರ್ವಹಿಸಿದ ತಾರಾನಾಥ್ ಉರ್ವ, ಮಂತ್ರವಾದಿಯ ಪಾತ್ರಧಾರಿ ದಿನೇಶ್ ಕುಂಪಲ, ರಾಜನ ಕ್ರೌರ್ಯಕ್ಕೆ ಬಲಿಯಾಗುವ ಮುಗ್ದೆ ಸುಂದರಿ ಬಂಗಾರಿಯಾಗಿ ಮಂಜು ಕಾರ್ಕಳ, ಸಜ್ಜನ ಸಂಕು ಮಾಮನ ಪಾತ್ರದಲ್ಲಿ ಯಾದವ ಮಣ್ಣಗುಡ್ಡೆ ಅವರು ತಮಗೆ ದೊರೆತ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ತುಳು ರಂಗಭೂಮಿಯ ಪ್ರಬುದ್ಧ ನಟ ಪ್ರದೀಪ್ ಆಳ್ವ ಕದ್ರಿ, ಉದಯೋನ್ಮುಖ ಕಲಾವಿದರಾದ ನಿತೇಶ್ ಶೆಟ್ಟಿ ಇರಾ, ಅಶ್ವಿನಿ ರೈ, ನವೀನ್ ಶೆಟ್ಟಿ ಅಂಬ್ಲಮೊಗರು ಮುಂತಾದವರ ಅಭಿನಯವೂ ಗಮನ ಸೆಳೆಯುತ್ತದೆ.
ʻಗರುಡ ಪಂಚಮಿʼ ಎಂಬ ಅಪೂರ್ವ ನಾಟಕವನ್ನು ತುಳು ರಂಗಭೂಮಿಗೆ ನೀಡಿದ ಕದ್ರಿ ನವನೀತ ಶೆಟ್ಟಿ,ಅಭಿನಯಿಸಿದ ಶ್ರೀಲಲಿತೆ ಕಲಾವಿದರು ಹಾಗೂ ತೆರೆಯ ಮರೆಯಲ್ಲಿ ನಿರ್ವಹಿಸಿದ ಸಂಗೀತ ನಿರ್ದೇಶಕರು, ತಂತ್ರಜ್ಞರು ಈ ನಾಟಕದ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ. ಗರುಡ ಪಂಚಮಿಯ ಪರ್ವ ಕಾಲದಲ್ಲಿ ದಟ್ಟ ಕಾನನದಲ್ಲಿ ನಡೆದ ಘಟನೆ ಏನು? ಯಾವ ದಿನದಂದು ಈ ಘಟನೆಗೆ ಸೇಡು ತೀರಿಸಲಾಯಿತು? ಎಂಬುದನ್ನು ಈ ನಾಟಕ ವೀಕ್ಷಿಸಿಯೇ ತಿಳಿಯಬೇಕು. ಒಟ್ಟಿನಲ್ಲಿ ಈವರೆಗಿನ ತನ್ನ ಸುದೀರ್ಘ ರಂಗ ಪಯಣದಲ್ಲಿ ನಾಟಕವನ್ನು ಎಂದಿಗೂ ವ್ಯಾವಹಾರಿಕ ದೃಷ್ಟಿಕೋನದಿಂದ ನೋಡದೆ, ನಾಟಕದ ಅದ್ದೂರಿತನದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಒಂದು ಉತ್ತಮ ನಾಟಕ ನಿರ್ದೇಶಿಸಿ, ತುಳು ನಾಟಕಾಭಿಮಾನಿಗಳಿಗೆ ಸಾದರಪಡಿಸಿದ ಸಹೃದಯಿ ಉದ್ಯಮಿ ಕಿಶೋರ್ ಡಿ.ಶೆಟ್ಟಿ ಅವರು ಅಭಿನಂದನಾರ್ಹರಾಗಿದ್ದಾರೆ.