ಬಂಟರ ಸಂಘ ಮುಂಬಯಿ ಇಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅದರ ನೂತನ ಗೌರವ ಕೋಶಾಧಿಕಾರಿಯಾಗಿ ಮುಂಬಯಿಯ ಪ್ರತಿಷ್ಠಿತ ರಮೇಶ್ ಶೆಟ್ಟಿ ಎಂಡ್ ಕಂ. ಲೆಕ್ಕಪರಿಶೋಧಕ ಹಾಗೂ ವ್ಯಾಪಾರೋದ್ಯಮ ಸಂಬಂಧಿ ತೆರಿಗೆ ಸಲಹೆಗಾರ ಸಂಸ್ಥೆಯ ಸಿಎ ರಮೇಶ್ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು. ಬಾಲ್ಯದ ದಿನಗಳಿಂದಲೇ ತೀಕ್ಷ್ಣ ಹಾಗೂ ಕುಶಾಗ್ರಮತಿಯಾಗಿದ್ದ ರಮೇಶ್ ಶೆಟ್ಟಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಕೈನಾಲ್ ಪ್ರಾಥಮಿಕ ಶಿಕ್ಷಣ ಸಂಸ್ಥೆ ಮತ್ತು ಮುಂಡ್ಕೂರು ಪ್ರಾಥಮಿಕ ಶಾಲೆಗಳಲ್ಲಿ ಪೂರೈಸಿದರು. ಹೈಸ್ಕೂಲು ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮುಂಡ್ಕೂರಿನ ಪ್ರಸಿಧ್ಧ ವಿವಿಪಿಸಿಯಲ್ಲಿ ಮುಗಿಸಿದ ಬಳಿಕ ಮುಂದಿನ ಶಿಕ್ಷಣ ಪಡೆಯಲು ಮುಂಬಯಿಗೆ ಆಗಮಿಸಿದ ಯುವಕ ರಮೇಶ್ ಅವರು ವಡಲಾದ ಪ್ರತಿಷ್ಠಿತ ಎಸ್ ಐ ಡಬ್ಲ್ಯೂ ಎಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪೂರೈಸಿದವರು. ಅಲ್ಲಿಗೆ ತನ್ನ ಶಿಕ್ಷಣವನ್ನು ಕೊನೆಗೊಳಿಸದೆ ಉನ್ನತ ಶಿಕ್ಷಣ ಪಡೆಯುವ ಮಹತ್ವಾಕಾಂಕ್ಷೆಯಿಂದ ಐಸಿಎಐ ಮುಖಾಂತರ ವಿಶೇಷ ತರಬೇತಿ ಪಡೆದು ಸಿಎ ಪದವಿ ಮುಗಿಸಿದರು.
ಬಳಿಕ ಆ ದಿನಗಳಲ್ಲಿ ಬಹಳ ಬೇಡಿಕೆಯಲ್ಲಿದ್ದ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡ ರಮೇಶ್ ತನ್ನದೇ ಆದ ರಮೇಶ್ ಶೆಟ್ಟಿ ಎಂಡ್ ಕಂ. ಲೆಕ್ಕ ಪರಿಶೋಧಕ ತೆರಿಗೆ ಸಲಹೆಗಾರ ಸಂಸ್ಥೆಯನ್ನು ಹುಟ್ಟು ಹಾಕಿ ಕೆಲವೇ ಸಮಯದಲ್ಲಿ ಓರ್ವ ಸಮರ್ಥ ಸಿಎ ಎಂಬಂತೆ ಗುರುತಿಸಿಕೊಂಡು ನಗರದ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳ ಸಲಹೆಗಾರರಾಗಿ ನಿಯುಕ್ತಿಗೊಂಡರಲ್ಲದೆ ಆಸಕ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಬೇತಿಯನ್ನೂ ಸಂಸ್ಥೆಯ ಮೂಲಕ ನೀಡತೊಡಗಿದರು. ಬಾಂದ್ರಾ ಪಶ್ಚಿಮದಲ್ಲಿ ಮುಖ್ಯ ಕಛೇರಿ ಹೊಂದಿದ ಇವರು ತನ್ನ ವ್ಯವಹಾರ ಸಂಪರ್ಕ ವಿಸ್ತರಣೆ ಉದ್ದೇಶದಿಂದ ಇತರ ಕಡೆಗಳಲ್ಲಿ ಸಂಸ್ಥೆಯ ಶಾಖೆಗಳನ್ನು ತೆರೆದು ತನ್ನ ವ್ಯವಹಾರ ಕ್ಷೇತ್ರದಲ್ಲಿ ಗಟ್ಟಿ ನೆಲೆ ಪಡೆದರು. ಸ್ವಜನ ಬಾಂಧವರ ಶ್ರೇಯಸ್ಸಿಗೋಸ್ಕರ ತನ್ನ ದಿನದ ಕೆಲ ಸಮಯ ವಿನಿಯೋಗಿಸಬೇಕೆಂಬ ಮಾನವೀಯ ತುಡಿತದಿಂದ ಮುಂಬಯಿ ನಗರದ ಪ್ರಸಿದ್ಧ ಸ್ವಜಾತಿ ಬಾಂಧವರ ಸಂಘಟನೆಯಾದ ಮುಂಬಯಿ ಬಂಟರ ಸಂಘದ ಸಂಪರ್ಕಕ್ಕೆ ಬಂದರು.
ಇನ್ನಾದ ಬಹು ಕಾರಣಿಕದ ಪಿಲಿಚಾಮುಂಡಿ ದೈವದ ಪರಮ ಭಕ್ತರಾದ ಶ್ರೀಯುತರು ತನ್ನ ಹುಟ್ಟೂರಿನ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಸ್ಥೆಗಳ ಮೂಲಕ ಜನಸೇವೆಯನ್ನೂ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಮೊತ್ತ ಮೊದಲು ಬಂಟರ ಸಂಘದ ಸಮಿತಿ ಸದಸ್ಯರಾಗಿ, ಅಂಧೇರಿ ಬಾಂದ್ರಾ ಬಂಟರ ಸಂಘ ಪ್ರಾದೇಶಿಕ ಸಮಿತಿಯ ಜತೆ ಕೋಶಾಧಿಕಾರಿಯಾಗಿ, ಬಂಟರ ಸಂಘದ ಶಿಕ್ಷಣ ಮತ್ತು ಸಮಾಜ ಸೇವಾ ಸಮಿತಿಯ ಕೋಶಾಧಿಕಾರಿಯಾಗಿ, ಬಂಟರ ಸಂಘ ಸಂಚಾಲಿತ ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಕೋಶಾಧಿಕಾರಿಯಾಗಿ, ಬಂಟರ ಸಂಘದ ಲೆಕ್ಕ ಪರಿಶೋಧಕ ಸಮಿತಿ ಕೇಂದ್ರ ಕಛೇರಿಯ ಗೌರವಾಧ್ಯಕ್ಷರಾಗಿ, ಬಂಟರ ಸಂಘದ ವಿಶೇಷ ಆಹ್ವಾನಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರಲ್ಲದೆ, ಬಂಟರ ಸಂಘದ ಉನ್ನತ ಶಿಕ್ಷಣ ಸಮಿತಿಯ ಕೋಶಾಧಿಕಾರಿಯಾಗಿ, ಬಾಂದ್ರಾ ಕುರ್ಲಾ ವಲಯದ ಅಧ್ಯಯನ ವೃತ್ತದ ಕನ್ವೀನರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮುಂಡ್ಕೂರು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ ಸಮಿತಿಯಿ ಕೋಶಾಧಿಕಾರಿಯಾಗಿ, ವಿದ್ಯಾ ದುರ್ಗ ಇದರ ಪೋಷಕ ಸದಸ್ಯರಾಗಿ ತನ್ನ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.
ಇದೀಗ ಬಂಟರ ಸಂಘದ ಗೌರವ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಬೇಕಾದ ಗುರುತರ ಜವಾಬ್ದಾರಿ ರಮೇಶ್ ಶೆಟ್ಟಿ ಅವರ ಹೆಗಲೇರಿದೆ. ಇದನ್ನು ಸಮರ್ಥವಾಗಿ ನಿಭಾಯಿಸುವ ಕೌಶಲವೂ ಅವರಿಗಿದೆ. ಪ್ರತಿಷ್ಠಿತ ಬೈಲುಕೊಳಂಬೆ ಗುತ್ತಿನ ಪ್ರೀತಿ ಎಂಬ ತರುಣಿಯೊಂದಿಗೆ ವಿವಾಹ ಬಂಧ ಏರ್ಪಟ್ಟು ಸಾನುರಾಗದ ದಾಂಪತ್ಯ ಫಲದಿಂದ ವಿವಾನ್ ಎಂಬ ಪ್ರತಿಭಾವಂತ ಪುತ್ರ ರತ್ನವನ್ನು ಪಡೆದು ಬಾಂದ್ರಾದಲ್ಲಿ ವಾಸ್ತವ್ಯ ಹೊಂದಿದ್ದು, ಸಂತೃಪ್ತ ಜೀವನ ನಡೆಸುತ್ತಿರುವುದರ ಜೊತೆಗೆ ಮುಂಬಯಿಯಲ್ಲಿ ಬಂಟರ ಸಂಘವನ್ನು ತನ್ನ ಸೇವಾ ಕ್ಷೇತ್ರದ ವೇದಿಕೆಯನ್ನಾಗಿ ಜನಪರ ಕಾಳಜಿಯ ಕೈಂಕರ್ಯಗಳ ಮೂಲಕ ಜನಾನುರಾಗಿಯಾಗಿರುವ ಸಿಎ ರಮೇಶ್ ಶೆಟ್ಟಿ ಅವರ ಭವಿಷ್ಯದ ಜೀವನ ಸುಖಮಯವಾಗಿ ಮುಂಬರುವ ವರ್ಷಗಳಲ್ಲಿ ತನ್ನ ದಕ್ಷ ಕಾರ್ಯ ನಿರ್ವಹಣೆಗಳಿಂದ ಗುರುತಿಸಲ್ಪಟ್ಟು, ನಮ್ಮೆಲ್ಲರ ಅಭಿಮಾನದ ಬಂಟರ ಸಂಘದ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂಬ ಹಾರೈಕೆಗಳೊಂದಿಗೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಶುಭಂ ಶ್ರೇಯಂ..
ಅರುಣ್ ಶೆಟ್ಟಿ ಎರ್ಮಾಳ್