ಕಳೆದ ನಾಲ್ಕು ದಶಕಗಳಿಂದ ಮುಂಬಯಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ವೈವಿಧ್ಯಮಯ, ಹಾಗೂ ಅರ್ಥಪೂರ್ಣ ತುಳು ಸಮ್ಮೇಳನ, ತುಳುವರ ಹಬ್ಬಗಳ ಆಚರಣೆ ಮತ್ತು ತುಳುವರ ಆಚಾರ ವಿಚಾರಗಳನ್ನು ತಿಳಿಸುವ ಭಿನ್ನ ರೀತಿಯ ಕಾರ್ಯಕ್ರಮಗಳನ್ನು ನಿರಂತರ ನೀಡುತ್ತಾ ಬಂದಿರುವ ಮುಂಬಯಿ ತುಳು ಕನ್ನಡಿಗರ ಹೆಮ್ಮೆಯ ಸಂಸ್ಥೆ “ಕಲಾ ಜಗತ್ತು ಮುಂಬಯಿ” ಜುಲೈ 23 ರಂದು ಸಾಂತಾಕ್ರೂಸ್ ಪೇಜಾವರ ಮಠ ಸಭಾಗೃಹದಲ್ಲಿ ಏರ್ಪಡಿಸಲಿರುವ ‘ಆಟಿದ ಪೊರ್ಲು ತಿರ್ಲ್ ‘ ತೋನ್ಸೆ ವಿಜಯಕುಮಾರ್ ಶೆಟ್ಟಿಯವರ ನೂತನ ಪರಿಕಲ್ಪನೆಯ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ತಾ.08/07/2023 ರಂದು ಸಂಜೆ ಬಿಲ್ಲವ ಭವನದಲ್ಲಿ ಏರ್ಪಡಿಸಲಾಗಿತ್ತು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಪ್ರಸಿದ್ಧ ನಾಟಕ ನಿರ್ದೇಶಕ ಶ್ರೀ ವಿಜಯಕುಮಾರ್ ಶೆಟ್ಟಿ ತೋನ್ಸೆ
ಅವರು ಮಾತನಾಡುತ್ತಾ, ಈ ಕಾರ್ಯಕ್ರಮದ ಉದ್ದೇಶ ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಮಾತ್ರವಲ್ಲದೆ ತುಳುವರ ಆರಾಧನೆ, ಆಚರಣೆಗಳ ಬಗ್ಗೆಯೂ ತಿಳುವಳಿಕೆಯನ್ನು ನೀಡುವುದಾಗಿದೆ. ಈ ಕಾರ್ಯಕ್ರಮಕ್ಕೆ ಒಳನಾಡಿನ ಹೆಸರಾಂತ ವಾಗ್ಮಿಗಳು ಆಗಮಿಸಲಿದ್ದು ಇದರ ಪ್ರಯೋಜನವನ್ನು ತುಳುವ ಕನ್ನಡಿಗರು ಪಡೆಯುವಂತಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರವಾಗಿ ತಿಳಿಸಿದರಲ್ಲದೆ ಈ ಸಂದರ್ಭದಲ್ಲಿ ಕೆಲವು ಸಮಿತಿಗಳನ್ನು ರಚಿಸಿ ಸಮಿತಿಯವರಿಗೆ ಜವಾಬ್ದಾರಿಗಳನ್ನು ಒಪ್ಪಿಸಲಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ಜರುಗಲು ಸರ್ವ ಸದಸ್ಯರು ಒಮ್ಮನಸ್ಸಿನಿಂದ ಕಾರ್ಯವೆಸಗಬೇಕೆಂದು ಕರೆ ನೀಡಿದರು.
ತುಳು ಸಂಸ್ಕೃತಿಗೆ ಸಂಬಂಧಿಸಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಅಂದು ಹಮ್ಮಿಕೊಳ್ಳಲಾಗಿದ್ದು ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಲಾಗುವುದು ಎಂದು ಅವರು ನುಡಿದರು. ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯಲ್ಲಿ ಭಾಗವಹಿಸಲು ಇಚ್ಛಿಸುವ ತುಳು ಕನ್ನಡಿಗರು ಡಾ. ಜಿ ಪಿ ಕುಸುಮ 8779660901 ಮತ್ತು ಸುಶೀಲಾ ದೇವಾಡಿಗ 9869742358 ಇವರನ್ನು ಸಂಪರ್ಕಿಸಬಹುದು.
ಸಭೆಯಲ್ಲಿ ಕಲಾಜಗತ್ತು ಮುಂಬಯಿ ಇದರ ಸಮಿತಿ ಸದಸ್ಯರು ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.