ತುಳುನಾಡಿನ ಧಾರ್ಮಿಕ ಆಚರಣೆಗಳ ಹಿನ್ನೆಲೆಯಿರುವ 28ನೇ ವರ್ಷದ ಶಿರ್ವ ನಡಿಬೆಟ್ಟು ಸೂರ್ಯ-ಚಂದ್ರ ಸಂಪ್ರದಾಯ ಬದ್ಧ ಜೋಡುಕರೆ ಕಂಬಳವು ಡಿ. 3 ರಂದು ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಿತು. ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎಲ್ಲೂರುಗುತ್ತು ಪ್ರಫುಲ್ಲ ಶೆಟ್ಟಿ ದೀಪ ಬೆಳಗಿಸಿ ಜೋಡುಕರೆಗೆ ಕಾಯಿ ಒಡೆಯುವುದರ ಮೂಲಕ ಕಂಬಳವನ್ನು ಉದ್ಘಾಟಿಸಿದರು.
ನಡಿಬೆಟ್ಟು ಚಾವಡಿಯ ದೈವ ಜುಮಾದಿಗೆ ಪೂಜೆ ಪುರಸ್ಕಾರ ನಡೆದ ಬಳಿಕ ಬಂಟ ಕೋಲ ನಡೆದು ಮೆರವಣಿಗೆಯಲ್ಲಿ ಕೊಂಬು, ವಾದ್ಯ ಘೋಷಗಳೊಂದಿಗೆ ಮನೆಯ ಕೋಣಗಳನ್ನು ಗದ್ದೆಗಿಳಿಸಲಾಯಿತು. ಹಗ್ಗ ಕಿರಿಯ ವಿಭಾಗದಲ್ಲಿ 29 ಜತೆ ಕೋಣಗಳು ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ 22 ಜತೆ ಒಟ್ಟು 51 ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು. ಕೋಣಗಳ ಸ್ಪರ್ಧೆ ಮುಗಿದ ಬಳಿಕ ಮನೆತನದ ಕೋಣಗಳನ್ನು ಗದ್ದೆಗಿಳಿಸಿ ಓಡಿಸುವುದರೊಂದಿಗೆ ಸಾಂಪ್ರದಾಯಿಕ ಕಂಬಳ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಶಿರ್ವ ಪಿಎಸ್ಐ ಸಕ್ತಿವೇಲು. ಈ ಕಾಪು ತಾ| ಯುವಜನ ಕ್ರೀಡಾಧಿಕಾರಿ ರಿತೇಶ್ ಕುಮಾರ್ ಶೆಟ್ಟಿ, ಮಜೂರು ಗ್ರಾ.ಪಂ. ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರತನ್ ಕುಮಾರ್ ಶೆಟ್ಟಿ, ಕೆ.ಆರ್. ಪಾಟ್ಕರ್, ಪಿಲಾರು ಸುಧಾಕರ ಬಂಡ್ರಿಯಾಲ್, ಅಟ್ಟಿಂಜ ಶಂಭು ಶೆಟ್ಟಿ, ರಘುರಾಮ ನಾಯ್ಕ, ಕುತ್ಯಾರು ಕೇಂಜ ಸಾಯಿನಾಥ ಶೆಟ್ಟಿ, ಶಿರ್ವ ನಡಿಬೆಟ್ಟು ಮನೆತನದ ಯಜಮಾನ ದಾಮೋದರ ಚೌಟ, ವ್ಯವಸ್ಥಾಪಕ ಶಿರ್ವ ನಡಿಬೆಟ್ಟು ಶಶಿಧರ ಹೆಗ್ಡೆ, ಸಚ್ಚಿದಾನಂದ ಹೆಗ್ಡೆ, ಸುಂದರ ಶೆಟ್ಟಿ, ರಾಜೇಶ್ ನಾಯ್ಕ, ಪ್ರಶಾಂತ ಶೆಟ್ಟಿ ಸೂಡ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಸುಧೀರ್ ಶೆಟ್ಟಿ, ಪ್ರದೀಪ್ ಶೆಟ್ಟಿ, ತಮ್ಮಣ್ಣ ಪೂಜಾರಿ, ಸುರೇಂದ್ರ ಪೂಜಾರಿ ಕೊಪ್ಪಲ, ವೀರೇಂದ್ರ ಪೂಜಾರಿ, ಶಿರ್ವ ನಡಿಬೆಟ್ಟು ಫ್ಯಾಮಿಲಿ ಟ್ರಸ್ಟ್ನ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಫಲಿತಾಂಶ :
ಹಗ್ಗ ಕಿರಿಯ ವಿಭಾಗದಲ್ಲಿ ಸಮಾಸಮ ಫಲಿತಾಂಶ ದಾಖಲಾಗಿದ್ದು, ಬ್ರಹ್ಮಾವರ ಹಂದಾಡಿ ಶೇಖರ ಪೂಜಾರಿ (ಕೋಣ ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್) ಮತ್ತು ಕಟೀಲು ಕೊಡೆತ್ತೂರು ಕೆನ್ನಬೈಲ್ ಪ್ರಸಾದ್ ಶೆಟ್ಟಿ (ಕೋಣ ಓಡಿಸಿದವರು: ಪಡ್ಡೆ ಗುರುಚರಣ್) ಅವರಿಗೆ ಪ್ರಥಮ ಬಹುಮಾನ ನೀಡಿ ಗೌರವಿಸಲಾಯಿತು. ಹಗ್ಗ ಅತೀ ಕಿರಿಯ ವಿಭಾಗದಲ್ಲಿ ನಿಂಜೂರು ಪುಷ್ಪಾ ನಿವಾಸ ಗುರುರಾಜ್ ಸಂಪತ್ ಕುಮಾರ್ ಪ್ರಥಮ (ಕೋಣ ಓಡಿಸಿದವರು: ನಕ್ರೆ ಪವನ್ ಮಡಿವಾಳ), ಕಟೀಲು ಕೊಡೆತ್ತೂರು ಕೆನ್ನಬೈಲ್ ಪ್ರಸಾದ್ ಶೆಟ್ಟಿ (ಕೋಣ ಓಡಿಸಿದವರು: ತೆಳ್ಳಾರು ಸುಕೇಶ) ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಎರಡೂ ವಿಭಾಗಗಳಲ್ಲಿ ಗೆದ್ದ ಕೋಣಗಳ ಮಾಲಕರಿಗೆ ಮತ್ತು ಕೋಣ ಓಡಿಸಿದವರಿಗೆ ಶಾಶ್ವತ ಫಲಕ ಸಹಿತ ನಗದು ಬಹುಮಾನ ನೀಡಿ ಗೌರವಿಸಿ ಮಾತನಾಡಿ, ಅತೀ ಪುರಾತನವಾದ ಸಂಪ್ರದಾಯ ಬದ್ಧ ಶಿರ್ವ ನಡಿಬೆಟ್ಟು ಕಂಬಳವು ದೈವದ ಕಾರಣಿಕದ ಕಂಬಳವಾಗಿದ್ದು, ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನಲ್ಲಿ ಕಂಬಳ ನಡೆದ ಬಳಿಕ ತುಳುನಾಡಿನ ರೈತಾಪಿ ವರ್ಗದ ಜನಪದ ಕ್ರೀಡೆ ಕಂಬಳ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದು, ಕಂಬಳಕ್ಕೆ ತೊಂದರೆಯಾಗದಂತೆ ತೀರ್ಪುಗಾರರು, ಕೂಟದ ಯಜಮಾನರು ಕಂಬಳ ಶಿಸ್ತುಬದ್ಧವಾಗಿ ನಡೆಯಲು ಸಮಯದ ಪಾಲನೆ ಮಾಡಿ ಬದ್ಧತೆಯಿಂದ ಕೆಲಸ ಮಾಡಬೇಕಾಗಿದೆ ಎಂದರು.
ಕಾಪು ತಾ| ಯುವಜನ ಕ್ರೀಡಾಧಿಕಾರಿ ರಿತೇಶ್ ಕುಮಾರ್ ಶೆಟ್ಟಿ, ಅಟ್ಟಿಂಜೆ ಸುಧೀರ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಶಿರ್ವ ಠಾಣೆಯ ಎಎಸ್ಐ ಕೃಷ್ಣ ಆಚಾರ್ಯ ಕುತ್ಯಾರು ಸಾಯಿನಾಥ ಶೆಟ್ಟಿ, ಸಚ್ಚಿದಾನಂದ ಹೆಗ್ಡೆ, ಸುಂದರ ಶೆಟ್ಟಿ, ವಿಶ್ವನಾಥ ಪ್ರಭು ಮತ್ತು ಕಂಬಳದ ತೀರ್ಪುಗಾರರು ವೇದಿಕೆಯಲ್ಲಿದ್ದರು. ಸುರೇಂದ್ರ ಪೂಜಾರಿ ಕೊಪ್ಪಲ ನಿರೂಪಿಸಿ, ವಂದಿಸಿದರು. ವೀರೇಂದ್ರ ಪೂಜಾರಿ ಸಹಕರಿಸಿದರು.