ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತುಳು ಕನ್ನಡಿಗರು ಒಂದಿಲ್ಲೊಂದು ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಪ್ರತಿಭಾ ಸಂಪನ್ನತೆಯಿಂದ ಗುರುತಿಸಿಕೊಂಡವರು. ಅದು ವ್ಯಾಪಾರ ಉದ್ಯಮವಿರಲಿ, ವೈದ್ಯಕೀಯ ತಾಂತ್ರಿಕ ಕ್ಷೇತ್ರಗಳಿರಲಿ, ರಾಜಕೀಯ ರಂಗವಿರಲಿ ನಮ್ಮವರು ಸಾಧಿಸಿದ ವಿಕ್ರಮಗಳು ಜಗಜ್ಜಾಹೀರಾಗಿ ವಿಶ್ವದ ಮೂಲೆ ಮೂಲೆಗಳಿಂದ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಇನ್ನೊಂದು ವರ್ಗದ ಜನ ಸಾಹಿತ್ಯ, ಕಲೆ, ಶಿಕ್ಷಣ, ಸಾಂಸ್ಕೃತಿಕ ಸಂಘಟನೆ, ಸಂಗೀತ, ನಾಟಕ, ಯಕ್ಷಗಾನ, ಚಿತ್ರಕಲೆ, ಸಮಾಜಸೇವೆ ಹೀಗೆ ಭಿನ್ನವಾದ ತಮಗೆ ಅಭಿರುಚಿ ಇರುವ ಮನಸ್ಸಿಗೆ ಖುಷಿ ನೀಡುವ ಒಟ್ಟಾರೆಯಾಗಿ ಹೇಳುವುದಾದರೆ ತಮಗೆ ದೈವದತ್ತವಾಗಿಯೋ, ಪಾರಂಪರಿಕ ಹಿನ್ನೆಲೆಯಿಂದಲೋ ಬಂದ ಸ್ವಸಾಮರ್ಥ್ಯ ಪ್ರತಿಭೆಗಳನ್ನು ಅರ್ಥಮಾಡಿಕೊಂಡು ನಿರಂತರ ಸಾಧನೆ ಅಧ್ಯಯನ ಮೂಲಕ ಗುರಿ ಮೀರಿದ ಸಾಧನೆಗಳಿಂದ ಗುರುತಿಸಿಕೊಂಡಿರುತ್ತಾರೆ.
ತಾವು ಹುಟ್ಟಿದ ನೆಲದಲ್ಲಿ ಆರ್ಥಿಕ ಪ್ರಗತಿಗೆ ತೊಡಕಾದಾಗ ಅಥವಾ ಸಂಪನ್ಮೂಲಗಳ ಕೊರತೆ ಕಂಡಾಗ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕೌಟುಂಬಿಕ ಜೀವನದಲ್ಲಿ ಏಳಿಗೆ ಕಂಡುಕೊಳ್ಳಲು ಹುಟ್ಟಿದ ಊರನ್ನು ಬಿಟ್ಟು ಭವಿಷ್ಯದ ಕನಸಿನ ಮೂಟೆ ಕಟ್ಟಿಕೊಂಡು ನಗರಗಳನ್ನೋ ಕೊಲ್ಲಿ ರಾಷ್ಟಗಳನ್ನೋ ಸೇರಿ ಕಷ್ಟಪಟ್ಟು ದುಡಿದು ಕೆಲವರು ತಾವು ಅರ್ಧಕ್ಕೆ ನಿಲ್ಲಿಸಿದ ವಿದ್ಯಾಭ್ಯಾಸವನ್ನು ಮಂದುವರಿಸಿ ಜೀವನದಲ್ಲಿ ಯಶಸ್ಸನ್ನು ಕಂಡವರಿದ್ದಾರೆ. ವಾಸು ಶೆಟ್ಟರು ತನ್ನ ಶಿಕ್ಷಣ ಪೂರೈಸಿ ಮುಂಬಯಿ ನಗರಕ್ಕೆ ಆಗಮಿಸಿ ಅನೇಕ ಕಡೆ ಉದ್ಯೋಗ ಮಾಡುತ್ತಲೇ ತನ್ನ ಆಸಕ್ತಿಯ ವಿಷಯವಾದ ಯಕ್ಷಗಾನ ಕುರಿತಂತೆ ವಿಶೇಷ ತಿಳುವಳಿಕೆಯನ್ನು ವಿವಿಧ ಮೂಲಗಳಿಂದ ಸಂಪಾದಿಸಿಕೊಂಡು ಅವಕಾಶ ಸಿಕ್ಕಾಗಲೆಲ್ಲ ವೇಷ ಮಾಡಿ ಆಂತರಿಕ ಪ್ರತಿಭೆಯನ್ನು ಅನಾವರಣ ಮಾಡಿಕೊಳ್ಳ ತೊಡಗಿ ಯಕ್ಷಗಾನ ಕಲಾಪ್ರೇಮಿಗಳಿಂದ ಗುರುತಿಸಿಕೊಂಡು ಭವಿಷ್ಯದಲ್ಲಿ ಓರ್ವ ಉತ್ತಮ ಕಲಾವಿದನಾಗಿ ರೂಪುಗೊಳ್ಳಬಲ್ಲ ಸಾಧ್ಯತೆಯನ್ನು ಕಲಾವಲಯದಲ್ಲಿ ತೋರಿಸತೊಡಗಿದರು.
ವಾಸುಶೆಟ್ಟಿ ಮಾರ್ನಾಡ್ ಅವರೋರ್ವ ಸೃಜನ ಶೀಲ ಅಭಿಜಾತ ಕಲಾವಿದರು. ಬಹುಶಃ ಊರಿನ ತಿರುಗಾಟದ ಮೇಳಗಳನ್ನು ಸೇರಿಕೊಂಡು ವೃತ್ತಿಪರ ಕಲಾವಿದರಾಗಿ ದುಡಿಯುತ್ತಿದ್ದರೆ ಅವರೋರ್ವ ಅಗ್ರಪಂಕ್ತಿಯ ಕಲಾವಿದರಾಗಿ ರೂಪುಗೊಳ್ಳುತ್ತಿದ್ದರು. ಕೇವಲ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡು ಮುಂಬಯಿಯಂತಹ ನಗರದಲ್ಲಿ ಕುಟುಂಬ ಜೀವನ ನಿರ್ವಹಣೆ ಅಸಾಧ್ಯದ ಮಾತು. ಹಾಗೆಂದು ಊರಿನ ವೃತ್ತಿಪರ ಕಲಾವಿದರನ್ನು ಮೀರಿಸುವ ಕಲಾವಿದರು ಮುಂಬಯಿ ನಗರದಲ್ಲಿ ಹವ್ಯಾಸಿ ಕಲಾವಿದರಾಗಿ ಯಕ್ಷಗಾನ ಕಲಾಸೇವೆಯನ್ನು ಶ್ರದ್ಧಾ ಗೌರವಗಳೊಂದಿಗೆ ಮಾಡುತ್ತಿದ್ದಾರೆ ಎಂಬ ಸತ್ಯವನ್ನು ಯಾರೂ ಅಲ್ಲಗಳೆಯಲಾರರು. ವಾಸು ಶೆಟ್ಟರ ಯಕ್ಷಗಾನ ಕಲೆ ಕುರಿತಂತೆ ಆಸಕ್ತಿ ಜಿಜ್ಞಾಸೆ ಅಧ್ಯಯನ ಪ್ರಾಯೋಗಿಕ ಕುತೂಹಲ ಅನನ್ಯವಾದುದು. ಹಾಗೆಂದು ಮಹಾ ನಗರದಲ್ಲಿ ಅವರು ತನ್ನದೇ ಆದ ಶೈಲಿಯ ಮೂಲಕ ಪರಿಚಿತರು. ಪ್ರವೇಶ ರಂಗ ಸಂಚಾರ ಆಂಗಿಕ ಅಭಿವ್ಯಕ್ತಿ ಮಾತಿನ ಏರಿಳಿತ ನಾಟ್ಯದ ಸೂಕ್ಷ್ಮ ಹೆಜ್ಜೆಗಳ ಜ್ಞಾನ ಪಾತ್ರಗಳ ವಿಶ್ಲೇಶಿತ ಚಿತ್ರಣ ಪ್ರಸಂಗ ಸಂದೇಶದ ನಿಖರ ಜ್ಞಾನ ಸಹ ಕಲಾವಿದರೊಂದಿಗಿನ ಸಾನ್ನಿವೇಶಿಕ ಔಚಿತ್ಯ ವರ್ತನೆ ಸಂವಾದಗಳಿಂದ ಓರ್ವ ಭಿನ್ನ ಸಾಮರ್ಥ್ಯದ ಕಲಾವಿದರಾಗಿ ಯಕ್ಷಗಾನ ವಿಶ್ಲೇಷಕರಿಂದ ಗುರುತಿಸಿಕೊಂಡಿದ್ದಾರೆ.
ಪುಂಡು ವೇಷದಿಂದ ತೊಡಗಿ ಕಿರೀಟ ವೇಷದವರೆಗೂ ಅವರ ಕಲಾಪಯಣ ಸಾಗಿಬಂದಿದೆ. ಇತ್ತೀಚಿನ ವರ್ಷಗಳಲ್ಲಿ ರಕ್ತ ಬೀಜ ಮಹಿಷಾಸುರ, ಅರುಣಾಸುರ ಇಂಥ ಕ್ಲಿಷ್ಟ ಪಾತ್ರಗಳ ನಿರ್ವಹಣಾ ಸಾಮರ್ಥ್ಯವನ್ನೂ ಕಲಾರಸಿಕರಿಗೆ ಪರಿಚಯಿಸುತ್ತಾ ಬಂದಿದ್ದಾರೆ. ಉಳಿದಂತೆ ಕೋಟಿಚೆನ್ನಯ ಅವಳಿ ಪಾತ್ರಗಳಲ್ಲಿ ಎರಡೂ ಪಾತ್ರಗಳನ್ನು ನಿರ್ವಹಿಸಬಲ್ಲ ಪ್ರತಿಭೆಯನ್ನು ಹೊಂದಿದ್ದು, ರಾಮ ಕೃಷ್ಣ, ಅಭಿಮನ್ಯು, ಬಬ್ರುವಾಹನ, ಸುಧನ್ವ ಹೀಗೆ ನವರಸ ಅಭಿವ್ಯಕ್ತಿಯ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಬಲ್ಲರು. ಮಧ್ಯಮ ಎತ್ತರ ಪುಷ್ಟ ದೇಹದ ಆಳ್ತನವಾದ ಕಾರಣ ಬಿಟ್ಟ ಮಂಡೆಯ ವೇಷಗಳಿಗೆ ಪುಂಡು ವೇಷಗಳಿಗೆ ಸೂಕ್ತ ಎಂದು ಮೊದಲ ನೋಟಕ್ಕೆ ಕಾಣಿಸಿಕೊಂಡರೂ ಪ್ರಫುಲ್ಲಿತ ಮುಖಶೋಭೆ ಆಂತರಿಕ ಸಜ್ಜನಿಕೆಯ ಬಂಡವಾಳ ವಿಶೇಷ ಭಾಷ ಸಾಹಿತ್ಯ ಪ್ರತಿಭೆಯನ್ನು ಹೊಂದಿರುವ ಕಾರಣ ನಳ, ಹರಿಶ್ಚಂದ್ರ, ಮಹಾವಿಷ್ಣು, ಶ್ರೀರಾಮ, ದೇವೇಂದ್ರ, ಋತುಪರ್ಣ, ತುಳುಪ್ರಸಂಗಗಳ ಬಲ್ಲಾಳರು ಹೀಗೆ ಯಾವ ಪಾತ್ರ ಕೊಟ್ಟರೂ ಪಾತ್ರಗಳಿಗೆ ನ್ಯಾಯ ಒದಗಿಸಬಲ್ಲ ಕಲಾಕೌಶಲ ಪಾತ್ರ ಜ್ಞಾನ ಇವೆಲ್ಲವೂ ಅವರಿಗಿದ್ದ ಕಾರಣ ಪ್ರಸಂಗದ ಪ್ರಮುಖ ಪಾತ್ರ, ಪೋಷಕ ಪಾತ್ರ, ಸಮರ್ಥ ಇದಿರುಸ್ಫರ್ಧೆಯ ಪಾತ್ರಗಳಿಗೂ ಸಮರ್ಥ ಕಲಾವಿದರೆನಿಸಿಕೊಂಡಿದ್ದಾರೆ. ಚಂಡ ಮುಂಡ, ಮಧುಕೈಟಭ, ಕೋಟಿಚೆನ್ನಯ, ಕಾಂತಾಬಾರೆ ಬೂದ ಬಾರೆ ಇಂಥ ಜೋಡಿ ಪಾತ್ರಗಳಲ್ಲಿ ಮಿಂಚುವ ಇವರು ಬಡಗು ತಿಟ್ಟಿನ ನಾಟ್ಯ ಕುಣಿತ ಹೆಜ್ಜೆಗಾರಿಕೆಗಳನ್ನು ಕಲಿಯುವ ತಿಳಿಯುವ ಪ್ರಾಮಾಣಿಕ ಪ್ರಯತ್ನದಲ್ಲಿದ್ದು ಕೆಲವು ಕಡೆ ಪಾತ್ರ ನಿರ್ವಹಿಸಿದ್ದಿದೆ.
ತಾಳಮದ್ದಳೆ ಅರ್ಥಗಾರಿಕೆಯಲ್ಲಿ ವಿಶೇಷ ಆಸಕ್ತಿ ಇರುವ ಮಾರ್ನಾಡ್ ಅವರು ಅನೇಕ ಘಟಾನುಘಟಿ ಕಲಾವಿದರೊಂದಿಗೆ ಸಹಕಲಾವಿದರಾಗಿ ಪಾತ್ರ ನಿರ್ವಹಿಸಿದ್ದಿದೆ. ಇವರ ಮಾತುಗಾರಿಕೆಯಲ್ಲಿ ಕೇಳುವುದಕ್ಕೆ ಹಿತವೆನಿಸುವ ಸ್ವರ ಭಾರ ಸನ್ನಿವೇಶಕ್ಕನುಸಾರ ಪಾತ್ರಜ್ಞಾನದೊಂದಿಗೆ ಸಾಹಿತ್ಯಿಕ ಸಾಂದರ್ಭಿಕ ಏರಿಳಿತಗಳೊಂದಿಗೆ ತನ್ನದೇ ಶೈಲಿಯಿಂದ ಕಲಾಭಿಮಾನಿಗಳನ್ನು ಆಕರ್ಷಿಸುತ್ತಾರೆ. ಸುಧನ್ವ, ಕರ್ಣ, ಅರ್ಜುನ, ಭೀಷ್ಮ, ಸುಯೋಧನ ಮುಂತಾದ ಪಾತ್ರಗಳಿಗೆ ನ್ಯಾಯ ಒದಗಿಸುವ ಸಾಮರ್ಥ್ಯ ಇದೆ. ಮುಂಬಯಿ ನಗರದ ಸಂಘ ಸಂಸ್ಥೆಗಳು ಆಡಿಸುವ ಯಕ್ಷಗಾನ ಪ್ರಸಂಗಗಳಲ್ಲಿ ಅತಿಥಿ ಕಲಾವಿದರಾಗಿಯೂ ನಾರಾಯಣ ಗುರುಸ್ವಾಮಿ ಯಕ್ಷಗಾನ ಮಂಡಳಿ ಇದರ ಕಲಾವಿದರಾಗಿ ಭಾಗವಹಿಸುತ್ತಾರೆ. ನಗರದಲ್ಲಿ ನಡೆಯುವ ತಾಳಮದ್ದಳೆ ಕೂಟಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿರುವ ಇವರಿಗೆ ಸುದೀರ್ಘಾವಧಿಯ ಕಲಾಸೇವೆಯ ಅನುಭವ ಶ್ರೇಷ್ಠ ಕಲಾವಿದರ ಒಡನಾಟ ನಿರಂತರ ಅಭ್ಯಾಸ ಓದು ಹೀಗೆ ಯಕ್ಷಗಾನ ಕಲಾಕ್ಷೇತ್ರದ ಸಾಧಕನಾಗಿ ರಂಗದ ಮೇಲಿನ ಪ್ರಬುದ್ಧ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಪ್ರಸಿದ್ಧಿ ಪ್ರಶಸ್ತಿಗಳ ಬಯಕೆ ಇಲ್ಲದೇ ತನ್ನ ಆಸಕ್ತಿ ಆತ್ಮಸಂತೃಪ್ತಿಗಷ್ಟೇ ಓರ್ವ ಹವ್ಯಾಸಿ ಕಲಾವಿದನಾಗಿ, ಉದ್ಯಮಿಯಾಗಿ ಸಮುದಾಯದ ಆದರ ಅಭಿಮಾನಕ್ಕೆ ಪಾತ್ರರಾಗಿರುವುದಷ್ಟೇ ಅಲ್ಲದೆ ನಗರದ ಸರ್ವ ಜಾತಿಬಾಂಧವರ ಅಚ್ಚು ಮೆಚ್ಚಿನ ಕಲಾವಿದರಾಗಿದ್ದಾರೆ. ತನ್ನ ಬಿಡುವಿಲ್ಲದ ದುಡಿಮೆಯ ನಡುವೆಯೂ ನಗರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಮಾತುಗಾರಿಕೆಯಂತೆಯೇ ಉತ್ತಮ ಬರಹಗಾರಿಕೆಯಲ್ಲಿಯೂ ತಮ್ಮ ವಿಶೇಷ ಸಾಮರ್ಥ್ಯವನ್ನು ತೋರಿಸುವ ಇವರು ಇಲ್ಲಿನ ಸ್ವಜಾತಿ ಬಾಂಧವರ ಮುಖಪುಟದ ಜನಪ್ರಿಯ ಕೂಟವೊಂದರ ಎಡ್ಮಿನ್ ಬಳಗದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದು, ವೈವಿಧ್ಯಮಯ ಲೇಖನಗಳನ್ನು ಆಗಾಗ ಪ್ರಕಟಿಸುತ್ತಾರೆ.
ಪಡುಮಾರ್ನಾಡು ಮಹಾವೀರ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಆರನೇ ತರಗತಿವರೆಗೆ ಶಿಕ್ಷಣ ಪಡೆದಿದ್ದ ಮಾರ್ನಾಡ್ ಅವರು ಮಹಾನಗರ ಮುಂಬಯಿಯ ಕೆನರಾ ವಿದ್ಯಾದಾಯಿನಿ ಹೈಸ್ಕೂಲು ಮೂಲಕ ಎಸ್ ಎಸ್ ಸಿ ಶಿಕ್ಷಣ ಮುಗಿಸಿ, ಸಿದ್ದಾರ್ಥ್ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ವಾಣಿಜ್ಯ ಪದವಿ ಶಿಕ್ಷಣವನ್ನು ಪೂರ್ತಿಗೊಳಿಸಿ ಓರ್ವ ಪದವೀಧರರಾಗಿ ಮುಂದೆ ಕ್ರಿಸ್ಟಲ್ ಹಾಸ್ಪಿಟ್ಯಾಲಿಟಿ ಎಂಬ ಹೆಸರಿನಲ್ಲಿ ತನ್ನದೇ ವಹಿವಾಟು ನಡೆಸಿಕೊಂಡು ಉದ್ಯಮಿ ಎಂಬಂತೆ ಗುರುತಿಸಿಕೊಂಡರು. ಇವರು ಹಗಲು ಹೊತ್ತಿನಲ್ಲಿ ಹೋಟೇಲ್ ಕ್ಯಾಂಟೀನ್ ಗಳಲ್ಲಿ ದುಡಿಯುತ್ತಲೇ ರಾತ್ರಿ ಶಾಲೆಗೆ ಸೇರಿಕೊಂಡು ಶಿಕ್ಷಣ ಪಡೆದ ಪರಿಶ್ರಮಿ. ತನ್ನ ಶಾಲಾ ಕಾಲೇಜು ದಿನಗಳಲ್ಲಿ ಅಂತರ್ಕಾಲೇಜು ಭಾಷಣ ಸ್ಪರ್ಧೆ ಛದ್ಮವೇಷ ಇತ್ಯಾದಿಗಳಲ್ಲಿ ಭಾಗವಹಿಸುತ್ತಾ ಊರಿನಲ್ಲಿ ಹಾಗೂ ಮುಂಬಯಿಯಲ್ಲಿ ಬಹುಮಾನ ಗಿಟ್ಟಿಸಿಕೊಂಡ ಪ್ರತಿಭಾವಂತರು.
ಕೃಷಿ ಪ್ರಧಾನ ಕುಟುಂಬದ ಹಿನ್ನೆಲೆ ಹೊಂದಿದ ಇವರ ತೀರ್ಥರೂಪರು ಓರ್ವ ಉತ್ತಮ ಕೃಷಿಕರಾಗಿ ಮಾತ್ರವಲ್ಲದೆ ತನ್ನ ಸಾಮಾಜಿಕ ಚಟುವಟಿಕೆಗಳ ಮೂಲಕ ಗೌರವಾದರದ ಸ್ಥಾನ ಹೊಂದಿದವರಾಗಿದ್ದರು. ಒಂದು ಕಾಲದಲ್ಲಿ ಕಂಬಳ ಓಟದ ಕೋಣಗಳನ್ನು ಹೊಂದಿದ್ದ ಇವರ ಮನೆತನದಲ್ಲಿ ಮಹಾಭಾರತ ರಾಮಾಯಣನ್ನು ಅಧ್ಯಯನ ಮಾಡುವ ಮೂಲಕ ಅದರ ಸಾರ ಸಂಗ್ರಹಗಳ ಜ್ಞಾನ ಹೊಂದಿದ್ದ ಮೇಧಾವಿಗಳಿದ್ದರು. ವಾಸು ಶೆಟ್ಟಿ ಅವರ ಮಾತೃಶ್ರೀಯವರು ನಮ್ಮ ಪ್ರಾಚೀನ ಕಾವ್ಯ ಹಾಗೂ ಜಾನಪದ ಸಾಹಿತ್ಯ ಜ್ಞಾನವನ್ನು ಹೊಂದಿದವರಾಗಿದ್ದು, ಅವರ ಮಾವಂದಿರು ತಾಳಮದ್ದಳೆಗಳಲ್ಲಿ ಅರ್ಥ ಹೇಳುತ್ತಿದ್ದರಂತೆ. ಹೀಗೆ ಒಂದು ಉತ್ತಮ ಪರಂಪರೆಯ ಹಿನ್ನೆಲೆ ಹೊಂದಿದ್ದರ ಪರಿಣಾಮ ವಾಸುದೇವ ಶೆಟ್ಟಿ ಅವರ ಸಹೋದರರೂ ಸೇರಿದಂತೆ ಮಕ್ಕಳೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತರಾಗಿ ಗುರುತಿಸಿಕೊಂಡಿದ್ದಾರೆ. ಮಂಬಯಿಯಲ್ಲಿರುವ ಮೂವರು ಸಹೋದರರಲ್ಲಿ ಹಿರಿಯರಾದ ಮೋಹನ್ ಮಾರ್ನಾಡ್ ಓರ್ವ ವಿಶಿಷ್ಟ ಪ್ರತಿಭೆಯ ರಂಗ ಕಲಾವಿದ ಧಾರಾವಾಹಿ ಹಾಗೂ ಚಿತ್ರನಟರಾಗಿ ನಮಗೆಲ್ಲರಿಗೂ ಚಿರಪರಿಚಿತರಾಗಿದ್ದು, ಇವರ ಇನ್ನೊಬ್ಬ ಕಿರಿಯ ಸಹೋದರ ಸುರೇಂದ್ರ ಕುಮಾರ್ ಮಾರ್ನಾಡ್ ‘ಸೂರಿ ‘ ಎಂದೇ ಖ್ಯಾತನಾಮ ಹೊಂದಿದ್ದು ಹತ್ತಾರು ಪ್ರತಿಭೆಗಳ ಸಂಗಮ ಎಂಬಂತೆ ವ್ಯಕ್ತಿತ್ವ ರೂಪಿಸಿಕೊಂಡಿದ್ದು, ಬರಹಗಾರ, ನಿರೂಪಕ, ರಂಗವಿನ್ಯಾಸಗಾರ, ನಟ, ಜಾಹೀರಾತು ನಟ, ಧ್ವನಿದಾನ ಕಲಾವಿದ, ಕವಿ, ಲೇಖಕ, ವೈವಿಧ್ಯಮಯ ಕಾರ್ಯಕ್ರಮ ಸಂಯೋಜಕ ಸಂಘಟಕರಾಗಿ ಪ್ರಸಿದ್ಧರು. ಮೊದಲೇ ಅಂತರ್ಶಾಲಾ ಅಂತರ್ಕಾಲೇಜು ಪ್ರತಿಭಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಓರ್ವ ಪ್ರತಿಭಾವಂತ ಕಲಾವಿದನೆಂಬಂತೆ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಇವರನ್ನು ಸಹಪಾಠಿಯೋರ್ವರು ನಾರಾಯಣಗುರು ಯಕ್ಷಗಾನ ಮಂಡಳಿ ವ್ಯವಸ್ಥಾಪಕರಿಗೆ ಪರಿಚಯಿಸಿದ ಬಳಿಕ ಮಂಡಳಿ ಸದಸ್ಯ ಕಲಾವಿದನಾಗಿ ಸೇರಿಕೊಂಡ ಬಳಿಕ ಓರ್ವ ಹವ್ಯಾಸಿ ಕಲಾವಿದನಾಗಿ ತನ್ನ ಕಲಾಯಾತ್ರೆಯನ್ನು ಪ್ರಾರಂಭಿಸಿದರು. ರತ್ನಾಕರ್ ಉಪ್ಪಾರ್ ಎಂಬ ಸಹಪಾಠಿ ಮೂಲಕ ಮೇಳ ಸೇರಿಕೊಂಡ ವಾಸುದೇವ ಶೆಟ್ಟಿ ಅವರು ಓರ್ವ ಕಲಾಸಾಧಕನಾಗಿ, ಸದಾ ಅಧ್ಯಯನಶೀಲರಾಗಿ ಮೇಳದಲ್ಲಿ ಶ್ರೀಮಹಾಲಿಂಗ ನಾಯ್ಕ್ ಎಂಬವರು ತನ್ನ ಗುರುಸ್ಥಾನವನ್ನು ತುಂಬಿಕೊಂಡು ಎರಡು ವರ್ಷಗಳ ಕಾಲ ತಾಳ ಜ್ಞಾನ ಹಾಗೂ ಹೆಜ್ಜೆಗಾರಿಕೆ ಕುರಿತ ತರಬೇತಿ ನೀಡಿದರು. ಮುಂದೆ ಅರ್ಥಗಾರಿಕೆ ವಿಷಯದಲ್ಲಿ ಮೇಳದ ಹಿರಿಯ ಅನುಭವಿ ಕಲಾವಿದರಾಗಿದ್ದ ಶ್ರೀಗಳಾದ ರಾಮಯ್ಯ ರೈ ಹಾಗೂ ಕಣಂಜಾರು ಭೋಜ ಶೆಟ್ಟರಿಂದ ವಿಶೇಷ ಜ್ಞಾನ ಸಂಪಾದಿಸಿಕೊಂಡರು. ಸಹ ಕಲಾವಿದರಾದ ಪ್ರಕಾಶ್ ಪಣಿಯೂರು ಮತ್ತು ದಿವಂಗತ ಸದಾನಂದ ಪಣಿಯೂರು ಅವರಿಂದ ಬಡಗು ತಿಟ್ಟಿನ ನಾಟ್ಯ ತರಬೇತಿ ಹಾಗೂ ಪಾತ್ರ ನಿರ್ವಣೆ ಕುರಿತ ತರಬೇತಿ ಪಡೆದುಕೊಂಡರು. ತಾಳಮದ್ದಳೆ ಅರ್ಥಗಾರಿಕೆ ವಿಷಯದಲ್ಲಿ ಶೇಣಿ ಶ್ಯಾಮ ಭಟ್, ಪ್ರಕಾಶ್ ಪಣಿಯೂರು ಅವರೊಂದಿಗೆ ಸಹ ಕಲಾವಿದನಾಗಿ ಭಾಗವಹಿಸುವ ಮುಖಾಂತರ ಮಾತುಗಾರಿಕೆಯ ಶೈಲಿ ಕುರಿತ ಮಹತ್ವದ ಜ್ಞಾನ ಸಂಪಾದಿಸಿಕೊಂಡರು.
ಮೇಳದ ಪ್ರಸಿದ್ಧ ಭಾಗವತರಾಗಿದ್ದ ದಿವಂಗತ ವಿಠಲ ಧೋರನ್ ಹಾಗೂ ನಗರದ ಖ್ಯಾತ ಭಾಗವತರಾದ ಜಯ ಪ್ರಕಾಶ್ ನಿಡ್ವಣ್ಣಾಯ, ನಾದಲೋಲ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮೊದಲಾದ ಕಲಾ ಪ್ರಭೃತಿಗಳಿಂದ ಅದ್ಭುತ ರಂಗತಂತ್ರ ಜ್ಞಾನವನ್ನು ಸಂಪಾದಿಸಿಕೊಂಡರು. ಮುಂದಿನ ದಿನಗಳಲ್ಲಿ ಹೆಸರಾಂತ ಕಲಾವಿದರಾಗಿದ್ದ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರ ಮುಖಾಂತರ ಯಕ್ಷಗಾನ ಪಾತ್ರ ಪ್ರಸ್ತುತಿ ಅಭಿವ್ಯಕ್ತಿ ಕಲೆ ಮಾತುಗಾರಿಕೆ ಕುರಿತ ಸೂಕ್ಷ್ಮ ಅಂಶಗಳ ಸಾರ ಸಂಗ್ರಹಣೆ ಮೂಲಕ ತನ್ನ ಕಲಾಜೀವನದ ಪಾತ್ರ ಪ್ರಭುದ್ಧತೆಗೆ ಅವಶ್ಯಕವಾದ ಅಂಶಗಳನ್ನು ಕಲಿತುಕೊಂಡು ಓರ್ವ ಪ್ರಬುದ್ಧ ಕಲಾವಿದರಾಗಿ ರೂಪುಗೊಂಡರು. ಹೀಗೆ ತನ್ನ ಸಹವಾಸಕ್ಕೆ ಬಂದ ಹಿರಿ ಕಿರಿಯರ ವಿಶೇಷ ಪ್ರತಿಭೆಗಳ ಉತ್ತಮ ಅಂಶಗಳನ್ನು ತನ್ನದಾಗಿಸಿಕೊಂಡು ಪರಿಪೂರ್ಣ ಕಲಾವಿದನಾಗಿ ಗುರುತಿಸಿಕೊಂಡ ವಾಸು ಶೆಟ್ಟಿ ಅವರು ಇಂದು ನಗರದ ಓರ್ವ ಪ್ರಸಿದ್ಧ ಹವ್ಯಾಸಿ ಮೇಳದ ಕಲಾವಿದರೆಂಬಂತೆ ಜನರು ಗೌರವಿಸುತ್ತಾರೆ. ವಾಸು ಶೆಟ್ರ ಸ್ಪಷ್ಟ ಉಚ್ಚಾರಣೆಯ ಸ್ಫುಟವಾದ ಶಬ್ಧ ಸಂಕುಲದ ನಿರರ್ಗಳ ಸಾಹಿತ್ಯ ಸಮೃದ್ಧ ವಾಗ್ಮಿತೆ ಸ್ವರಭಾರ ಎಲ್ಲವೂ ಕರ್ಣಾನಂದದಾಯಕವಾಗಿದ್ದು, ಕುಣಿತ ಹಾವಭಾವ ಅಭಿನಯ ಎಲ್ಲವೂ ಯಕ್ಷಗಾನ ಕಲಾವಿದನಿಗೆ ಒಪ್ಪುವಂತಿದ್ದು ಓರ್ವ ಮೇಳದ ಕಲಾವಿದನಿಗೆ ಸಮನಾದ ವ್ಯಕ್ತಿಮತ್ತತೆಯನ್ನು ಸಂಪಾದಿಸಿಕೊಂಡಿದ್ದಾರೆ. ಇವರಿಗೆ ನಗರದ ಅನೇಕ ಸಂಘ ಸಂಸ್ಥೆಗಳು ಸ್ವಜಾತಿ ಬಾಂಧವ ಸಂಘಟನೆಗಳು ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಿವೆ.
ಅನೇಕ ಪ್ರಶಸ್ತಿ ಫಲಕಗಳು, ಸ್ಮರಣಿಕೆಗಳು, ಸನ್ಮಾನ ಪತ್ರಗಳು ಇವರ ನಿವಾಸವನ್ನು ಅಲಂಕರಿಸಿವೆ. ಇದಾವುದರ ಅಹಮಿಕೆ ತಲೆಗಡರಿಸಿಕೊಳ್ಳದೆ ಓರ್ವ ವಿನಮ್ರ ಕಲಾಸಾಧಕನಾಗಿ ಅಧ್ಯಯನಶೀಲರಾಗಿ ಕಲಾ ಬದುಕನ್ನು ಮುಂದುವರಿಸಿಕೊಂಡು ಹೋಗುತ್ತಿರುವುದರ ಜೊತೆಗೆ ಓರ್ವ ಪರಿಶ್ರಮಿ ಉದ್ಯಮಿಯಾಗಿ ಕುಟುಂಬ ವತ್ಸಲ ಗೃಹಸ್ಥನಾಗಿ ಸಭ್ಯ ಸಾಮಾಜಿಕ ವ್ಯಕ್ತಿಯಾಗಿ ಅಭಿಮಾನದ ಕಲಾಪ್ರತಿಭೆಯಾಗಿ ಹೆಸರು ಪಡೆದ ವಾಸಣ್ಣ ಸುಶೀಲೆ ಮನೋ ಅನುಕೂಲೆ ಕಲಾಭಿಮಾನಿ ಸಹಧರ್ಮಿಣಿ ಹಾಗೂ ಪ್ರತಿಭಾವಂತ ಮುದ್ದು ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹೀಗೆ ಓರ್ವ ಸದ್ಗುಣ ಸಂಪನ್ನ ಸಮಾಜಬಾಂಧವ ಜನ ಮೆಚ್ಚಿದ ಕಲಾವಿದ ಶ್ರೀ ವಾಸುದೇವ ಶೆಟ್ಟಿ ಮಾರ್ನಾಡು ಇವರ ಭವಿಷ್ಯದ ಬಾಳು ಸುಖ ಶಾಂತಿ ಸಮೃದ್ಧಿ ಯಿಂದ ತುಂಬಿರಲಿ. ಯಕ್ಷಗಾನ ಕಲಾಮಾತೆಯ ಪೂರ್ಣಾನುಗ್ರಹ ಅವರ ಮೇಲಿರಲಿ ಎಂದು ಬಂಟ ಸಾಧಕರ ಸಾಧನೆಯ ಗಾಥೆಗಳ ಸದಾ ಪ್ರಸಾರ ಮಾಡುವ ಸ್ವಜನ ಬಾಂಧವರ ಮುಖವಾಣಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾರೈಸುತ್ತದೆ.
ಶುಭಂ ಭದ್ರಂ ಮಂಗಲಂ
ಯಕ್ಷಗಾನಂ ಗೆಲ್ಗೆ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು