ಸಾಧಿಸಬೇಕು ಎಂಬ ಛಲ ಅಛಲವಾಗಿರಲು ಸಾಧನೆಯ ಶಿಖರದ ಪಯಣ ಸುಖಕರವಾಗಿಸುತ್ತದೆ ಅನ್ನುವುದಕ್ಕೆ ಸಾಕ್ಷಿಯಾಗಿ ನಿಂತವರು ಮಹೇಶಣ್ಣ. ‘ಯಾರು ಕೇಳಲಿ ಎಂದು ನಾನು ಹಾಡುವುದಲ್ಲ’ ಎಂಬ ಡಾ.ಜಿ ಎಸ್ ಶಿವರುದ್ರಪ್ಪನವರ ಸ್ಪೂರ್ತಿದಾಯಕ ಕವಿವಾಣಿಯಂತೆ ಅದ್ಯಾರೋ ನನ್ನ ಗುರುತಿಸಿ ಮಾನ ಸಮ್ಮಾನ ಮಾಡುತ್ತಾರೆ? ಪ್ರಚಾರದ ಅಬ್ಬರದಲ್ಲಿ ನನ್ನ ಮುಳುಗಿಸುತ್ತಾರೆ? ಎಂದು ಮಹೇಶಣ್ಣ ಸಮಾಜ ಸೇವೆಗೆ ಇಳಿದವರಲ್ಲ. ತನ್ನಷ್ಟಕ್ಕೆ ತನ್ನಿಷ್ಟಕ್ಕೆ ಎಂಬಂತೆ ಕ್ಷಣ ಕ್ಷಣವೂ ನೊಂದವರ ಬದುಕಿಗೆ ನಂದಾ ದೀಪವಾದವರು. ಕಲಿಯಬೇಕು ಎಂಬ ಆಸೆ ಹೊತ್ತ ಬಡ ಮಕ್ಕಳ ಭವಿಷ್ಯ ರೂಪಿಸುವಲ್ಲಿಯೇ ತನ್ನ ನೋವುಗಳನ್ನು ಮರೆತು ಅಲ್ಲಿ ಖುಷಿಯನ್ನು ಕಂಡು ಕೊಂಡವರು. ಬಂಟರ ಸಂಘದ ಎಸ್ ಎಮ್ ಶೆಟ್ಟಿ ಶಾಲಾ ಕಾಲೇಜಿನಲ್ಲಿ ಶಿಕ್ಷಣ ಬಯಸಿದ ಬಂಟರ ಮಕ್ಕಳೊಂದಿಗೆ ಇನ್ನಿತರ ಜಾತಿ ಪಂತದವರ ಮಕ್ಕಳಿಗೂ ಅಲ್ಲಿ ಕಲಿಯಲು ಪ್ರೋತ್ಸಾಹಿಸಿದರು. ಮಾತ್ರವಲ್ಲ ಅವರಿಗೆ ಧನ ಸಹಾಯದ ಅಗತ್ಯ ಕಂಡು ಬಂದಾಗ ಉದಾರ ದಾನಿಯಾದರು.
ಇತ್ತೀಚೆಗೆ ನಾನು ನನ್ನ ಮಕ್ಕಳೊಂದಿಗೆ ಇಲ್ಲೇ ಪರಿಸರದ ಒಂದು ಹೋಟೆಲಿಗೆ ಊಟಕ್ಕೆ ಹೋಗಿದ್ದೆ. ಕೆಲವು ವರ್ಷಗಳ ನನ್ನ ಪರಿಚಯ ಅಲ್ಲಿನ ಸಪ್ಲಾಯರ್ಗೆ. ಬಹಳ ಸಮಯದ ನಂತರ ಅಲ್ಲಿಗೆ ಊಟಕ್ಕೆ ಹೋದವ ಅವರೊಂದಿಗೆ ಮಾತಾನಾಡಿದೆ. ಮಕ್ಕಳು ಹೇಗಿದ್ದಾರೆ? ಯಾವ ಕ್ಲಾಸಿನಲ್ಲಿದ್ದಾರೆ? ಅಂದಾಗ ಆತನಾಡಿದ ಮಾತು ಹೀಗಿತ್ತು. ‘ಈ ಹೋಟೆಲಿನಲ್ಲಿ ಇಪ್ಪತ್ತು ವರ್ಷಕ್ಕಿಂತ ಹೆಚ್ಚು ದುಡಿದಿರುವೆ. ಎಸ್ ಎಮ್ ಶೆಟ್ಟಿ ಶಾಲೆಯಲ್ಲಿ ನನ್ನ ಮಕ್ಕಳನ್ನು ಸೇರಿಸಲು ಇದೆ ಎಂದು ನನ್ನ ಮಾಲಿಕರಲ್ಲಿ ಅಲವತ್ತುಕೊಂಡೆ. ನೀನು ಜಾತಿಯವನಲ್ಲ ಆ ಶಾಲೆಯಲ್ಲಿ ಕೇವಲ ನಮ್ಮ ಬಂಟರ ಮಕ್ಕಳಿಗೆ ಮಾತ್ರ ಸಹಾಯ ಮಾಡ್ತಾರೆ ನೀನು ಮುನ್ಸಿಪಲ್ ಶಾಲೆ ನೋಡ್ಕೊ ಅಂದರು. ಬಹಳ ದು:ಖ ಆಯಿತು ನನ್ನ ಮಕ್ಕಳು ನಮ್ಮ ಊರಿನವರ ಶಾಲೆಯಲ್ಲಿ ಕಲಿಬೇಕು ಎಂಬ ಮಹದಾಸೆಯೊಂದಿಗೆ ಯಾರದೋ ಸಹಾಯದಿಂದ ಮಹೇಶಣ್ಣನಲ್ಲಿಗೆ ಹೋದೆ. ನನ್ನ ಬಡತನ, ಬಾಡಿಗೆಯ ಮನೆ ವಿಷಯಗಳನ್ನು ಅವರಿಗೆ ತಿಳಿಸಿದೆ. ನನ್ನ ಮಕ್ಕಳಿಗೆ ಶಾಲೆಗೆ ದಾಖಲಾತಿಯೂ ಸಿಕ್ಕಿತು. ಒಟ್ಟಿಗೆ ಫೀಸಿನಲ್ಲೂ ಕಡಿತ ಸಿಕ್ಕಿತು. ಇವತ್ತು ಮಕ್ಕಳಿಬ್ಬರೂ ಕಾಲೇಜಿನಲ್ಲಿದ್ದಾರೆ. ಮಹೇಶಣ್ಣ ದೇವರಂತಹ ಮನುಷ್ಯ ಅಂದರಾತ. ಇಂತಹ ನೂರಾರು ಜನರ ಕಷ್ಟಗಳಿಗೆ ಅವರ ನೋವುಗಳಿಗೆ ಸ್ಪಂದಿಸಿದವರು ಮಹೇಶಣ್ಣ. ಸಾಮಾನ್ಯ ಜನರ ಮನದಾಳದ ಮಾತು ಅವರಿಗೆ ವರದಾನವಾಗಿದೆ ಅಂದರೆ ಈ ಮಾತು ಹೋಗಳಿಕೆಗೆ ಮಾತ್ರ ಸೀಮಿತವಲ್ಲ. ಧನ ಇದ್ದವರೆಲ್ಲಾ ದಾನಿಗಳಾಗಿದ್ದರೆ ಸಮಾಜದಲ್ಲಿ ಬಡತನ ಇವತ್ತು ಮಕಾಡೆ ಮಲಗಿರುತಿತ್ತು. ಆದರೆ ದೇವರು ಆ ಹೃದಯ ವೈಶಾಲ್ಯವನ್ನು ಮಹೇಶಣ್ಣನಂತಹ ಬೆರಳಣಿಕೆಯ ಜನರಿಗೆ ಮಾತ್ರ ಸೀಮಿತವಾಗಿರಿಸಿದ. ಕೆರೆಯ ನೀರನು ಕೆರೆಗೆ ಚೆಲ್ಲಿ.. ಎಂಬ ದಾಸರ ವಾಣಿಯನ್ನು ಒಪ್ಪಿಕೊಂಡದ್ದು ಮಾತ್ರವಲ್ಲ ಆ ಸಾಲುಗಳನ್ನು ಅಪ್ಪಿಕೊಂಡವರು ಈ ಮಹೇಶಣ್ಣ.
ಪ್ರಸಕ್ತ ದಿನಮಾನಸದಲ್ಲಿ ಈ ಮಹಾನಗರದಲ್ಲಿನ ಪ್ರಾದೇಶಿಕ ಭಾಷೆಯ ಶಾಲೆಗಳು ಸದ್ದಿಲ್ಲದೆ ಪಾಶ್ಚಿಮಾತ್ಯ ಭಾಷೆಗೆ ಹತ್ತಿರವಾಗುವ ಹೊತ್ತಲ್ಲಿ ಪೊವಾಯಿಯ ಪಾಸಪೋಲಿ ಕನ್ನಡ ಶಾಲೆಯಲ್ಲಿ ಪುಟಾಣಿಗಳು ಮುದ್ದಾದ ಅಕ್ಷರದೊಂದಿಗೆ ಕನ್ನಡ ಕಲಿಯುತ್ತಾರೆ ಅಂದಲ್ಲಿ ಅದಕ್ಕೆ ಮುಖ್ಯ ಕಾರಣೀಕರ್ತರಿವರು. ಮುಂಬಾನಗರದಲ್ಲಿ ತಾಯಿ ಭುವನೇಶ್ವರಿಯ ಸೇವೆಯಲ್ಲಿ ನಿರತವಾಗಿರುವ ಪೊವಾಯಿ ಕನ್ನಡ ಸಂಘ ಹಾಗೂ ಕನ್ನಡ ವೆಲ್ಫೇರ್ ಅಸೋಸಿಯೇಷನ್ ಘಾಟ್ ಕೋಪರ್ ಈ ಎರಡು ಸಂಸ್ಥೆಗಳು ಇವತ್ತು ಬಹಳ ದೊಡ್ಡ ಮಟ್ಟದಲ್ಲಿ ಭಾಷೆ – ಸಂಸ್ಕ್ರತಿಯನ್ನು ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಉಳಿಸಲು ಹೋರಾಟ ಮಾಡುವಲ್ಲಿ ಅವರೊಂದಿಗೆ ಬಂಡೆಯಂತೆ ನಿಂತವರಿವರು. ಜಾಗತಿಕ ಬಂಟರ ಸಂಘದ ಸಕ್ರೀಯ ಕಾರ್ಯಕರ್ತನಾಗಿ ಮುಂದೊಂದು ದಿನ ನಾಡಿನಾದ್ಯಾಂತದ ಬಡ ಬಂಟ ಜನರ ಸೇವೆಗೆ ತನ್ನನ್ನು ರೂಪಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಜನರಿಗೆ ಗೊತ್ತಿರದ ನಾನು ಅರಿತಿರುವ ಅವರ ಒಂದು ದೊಡ್ಡ ಗುಣ ಈ ಕ್ಷಣದಲ್ಲಿ ಹೇಳಬೇಕು. ತನ್ನೊಟ್ಟಿಗೆ ದುಡಿಯುವ ತನ್ನ ಎಲ್ಲಾ ಕಾರ್ಮಿಕರ ಜೀವವಿಮೆಯ ಬಾಬ್ತನ್ನು ತಾನೇ ಕಟ್ಟಿ ಅವರ ಭವಿಷ್ಯದ ಬದುಕನ್ನು ರೂಪಿಸುವ ಅಮೋಘ ಕಾರ್ಯವನ್ನು ಮಹೇಶಣ್ಣ ಮಾಡುತ್ತಿದ್ದಾರೆ. ಈ ಪರಿಯ ಕೆಲಸ ಎಷ್ಟು ಜನ ಮಾಲಕರು ತನ್ನ ಕಾರ್ಮಿಕ ವರ್ಗಕ್ಕೆ ಮಾಡುತ್ತೆ ಹೇಳಿ. ಅವರ ಈ ಸಹೃದಯತೆಯನ್ನು ಹೇಗೆ ಕೊಂಡಾಡದಿರಲಿ? ನಿಜವಾಗಿಯೂ ಇಲ್ಲಿ ಅವರನ್ನು ಹೊಗಳಲು ಶಬ್ದಗಳ ತಡಕಾಟ.
ಈ ಮಹಾನಗರದಲ್ಲಿ ಅಲ್ಲದೇ ಹೂಟ್ಟೂರಿನ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗೆ ಅರ್ಪಿಸಿಕೊಂಡಿರುವ ಮಹೇಶಣ್ಣನ ವ್ಯಕ್ತಿತ್ವ ಬಹಳ ಅಪರೂಪದ್ದು. ಇಂತಹ ಅಪರೂಪದ ವ್ಯಕ್ತಿತ್ವದವರ ಪಟ್ಟಿ ಸಮಾಜದಲ್ಲಿ ಕೋಟಿಯಾಗಬೇಕು. ಇಂತಹ ಪ್ರಾಂಜಲ ಮನಸ್ಸಿನೊಂದಿಗೆ ಅವರ ಬದುಕು ಶತಮಾನದಾಚೆಯ ಸಂಕ ದಾಟಬೇಕು. ಅವರು ಹೊತ್ತ ಯೋಚನೆ, ಹಾಕಿಕೊಂಡ ಯೋಜನೆಗಳು ವಿಘ್ನಗಳ ಲವಲೇಶವೂ ಎದುರಾಗಬಾರದು. ಕೊಟ್ಟು ಕೆಟ್ಟಿವರಿಲ್ಲ ಇಟ್ಟು ಕೆಟ್ಟವರೆಲ್ಲ ಎಂದಂತೆ ಅವರ ಕೊಡುವ ಕೈಗೆ ಸಾಸಿವೆಯಷ್ಟೂ ಬರಗಾಲ ಬಾರದಿರಲಿ. ಸಮಾಜ ಸೇವೆಯಲ್ಲಿ ಅವರ ಹೆಸರು ಅಜರಾಮರವಾಗಿರಬೇಕು. ಪರಮಾತ್ಮ ಅವರ ಸಮಾಜಸೇವೆಗೆ ಇನ್ನಷ್ಟು ಶಕ್ತಿ ತುಂಬಬೇಕು. ಅವರ ಭವಿಷ್ಯದ ನಾಳೆಗಳು ಅವರಿಚ್ಚೆಯಂತೆ ನಳನಳಿಸಬೇಕು. ನಾಡಿನ ಶ್ರೇಷ್ಠ ಸಾಮಾಜಿಕ ಜಾತೀಯ ಸಂಸ್ಥೆ ಬಂಟರ ಸಂಘದ ಉಪಾಧ್ಯಕ್ಷನಾಗಿ ಗದ್ದುಗೆ ಏರಿರುವ ಇವರಿಗೆ ಬೆಟ್ಟದಷ್ಟು ಜವಾಬ್ದಾರಿ ಇದೆ. ಆ ಜವಾಬ್ದಾರಿಯ ಕೆಲಸಕ್ಕೆ ದೇವರ ಅನುಗ್ರಹ ನಮ್ಮವರೆಂದವರ ಸಹಾಯ ಅವರೊಂದಿಗಿರಲಿ. ಅವರಿಟ್ಟ ಎಲ್ಲಾ ಹೆಜ್ಜೆ ಗುರುತುಗಳಲ್ಲೂ ಗೆಜ್ಜೆಯ ನೀನಾದವಿರಲಿ. ಈ ಶುಭ ಅವಸರದಲ್ಲಿ ಅವರಿಗೆ ಕೋಟಿ ಕೋಟಿ ಶುಭಾಶಯಗಳನ್ನು ಸಲ್ಲಿಸುತ್ತಾ, ಅವರ ಭವಿಷ್ಯದ ನಾಳೆಗಳಿಗೆ ಶ್ರೀ ಗುರುರಾಯರ ಕೃಪೆ ಅನಂತವಾಗಿರಬೇಕು ಎನ್ನುವುದು ಈ ಹೂಮನಸ್ಸಿನ ಹಾರೈಕೆ.
ಪೇತ್ರಿ ವಿಶ್ವನಾಥ ಶೆಟ್ಟಿ