“ಐಕಳ ಹರೀಶ್ ಶೆಟ್ಟಿಯವರು ಹೊರನಾಡಿನ ಪ್ರತಿಸೂರ್ಯ. ಮುಂಬೈನ ತುಳು ಕನ್ನಡಿಗರ ಧೀಮಂತ ನಾಯಕ. ಅವರು ತಾರಾಮೌಲ್ಯ ಇರುವ ಕೆಲವೇ ಕೆಲವು ಸಂಘಟಕರಲ್ಲಿ ಒಬ್ಬರು. ಕ್ರಿಯಾಶೀಲ, ಚಿಂತನಶೀಲ, ಸಹನಶೀಲ ಮತ್ತು ಆಧ್ಯಾತ್ಮಶೀಲಗಳನ್ನು ಮೈಗೂಡಿಸಿಕೊಂಡ ಮಹಾನಾಯಕ. ಇಂತಹ ಅಪರೂಪದ ದಣಿವರಿಯದ ಚೇತನ, ಸಂಘಟನ ಸೀಮಾಪುರುಷ, ಸಾಹಸಪುರುಷನನ್ನು ಗೌರವಿಸುವುದು ವಿಶ್ಕವಿದ್ಯಾಲಯದ ಕರ್ತವ್ಯ ಎಂಬ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂಬುದಾಗಿ ಮುಂಬೈ ವಿಶ್ಕವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಆದ ಡಾ ಜಿ ಎನ್ ಉಪಾಧ್ಯ ಅವರು ಅಭಿಪ್ರಾಯಪಟ್ಟರು. ಐಕಳ ಒಂದು ಸಣ್ಣ ಊರು. ತಮ್ಮ ಕರ್ತೃತ್ವ ಶಕ್ತಿಯಿಂದ ಐಕಳ ಇಂದು ವಿಶ್ವದ ಸಾಂಸ್ಕೃತಿಕ ನಕಾಶೆಯಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದೆ. ಸಹಕಾರ, ಸಮಾಜಸೇವೆ ಒಂದು ಮಹೋನ್ನತ ತತ್ವ ಎಂದು ದೀನದಲಿತರ ಏಳಿಗೆಗೆ ಶ್ರಮಿಸುತ್ತಿರುವ ಐಕಳ ಹರೀಶ್ ಶೆಟ್ಟಿಯವರು ನಾಡಿಗೆ ಮಾದರಿ ಎಂದು ಡಾ. ಜಿ ಎನ್ ಉಪಾಧ್ಯ ಅವರು ನುಡಿದರು. ಅವರು ಸೆಪ್ಟೆಂಬರ್ 10 ರಂದು ಸಾಂತಕ್ರೂಜ್ ಕಲೀನಾ ಕ್ಯಾಂಪಸ್ ನ ಮುಂಬೈ ವಿಶ್ಕವಿದ್ಯಾನಿಲಯದ ಕವಿ ಕುಸುಮಾಗ್ರಜ ಮರಾಠಿ ಭಾಷಾಭವನದಲ್ಲಿ ನಡೆದ ಮುಂಬೈ ವಿಶ್ಕವಿದ್ಯಾನಿಲಯದ ಕನ್ನಡ ವಿಭಾಗವು ಖ್ಯಾತ ಸಂಘಟಕ, ಜಾಗತಿಕ ಬಂಟರ ಸಂಘದ ಒಕ್ಕೂಟಗಳ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರಿಗೆ ಸಾರ್ವಭೌಮ ಗೌರವ ಗ್ರಂಥ ಸಮರ್ಪಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಸಾರ್ವಭೌಮ ಗೌರವ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, “ಐಕಳ ಹರೀಶ್ ಶೆಟ್ಟಿ ಅವರ ರೀತಿಯಲ್ಲಿ ಎಲ್ಲರಿಗೂ ನಾಯಕತ್ವವನ್ನು ನೀಡಲು ಕಷ್ಟ.ಅಂತಹುದರಲ್ಲಿ ಐಕಳ ಕುಶಲ ಸಂಘಟಕನಾಗಿ ಜನಮೆಚ್ಚಿದ ನಾಯಕನಾಗಿ ಹಾಗೂ ತನ್ನ ಅದ್ಭುತ ಕಾರ್ಯವನ್ನು ಸಾಧಿಸಿದ ಅಪೂರ್ವ ವ್ಯಕ್ತಿ.ಅವರು ಮಾಡಿದ ಕೆಲಸ ಅಪರಿಮಿತ. ಸಮಾಜದ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಕಷ್ಟದಲ್ಲಿ ಇರುವ ಎಲ್ಲರನ್ನೂ ಉತ್ತಮ ಪಡಿಸುವ ಚಿಂತನೆ ಅವರಲ್ಲಿ ಇದೆ. ಏನಾದ್ರೂ ಆಗು ಮೊದಲು ಮಾನವನಾಗು ಎಂಬ ಸೂಕ್ತಿಗೆ ಅನುಗುಣವಾಗಿದೆ ಅವರ ಕೆಲಸಗಳು. ಎಲ್ಲಾ ಸಮಾಜದ ನೊಂದ ಜನರ ಕಣ್ಣೀರು ಒರೆಸುವ ಕೆಲಸವನ್ನು ಐಕಳ ಅವರು ಮಾಡಿದ್ದಾರೆ, ಒಳ್ಳೆಯ ಜನಪರ ಕೆಲಸಗಳಲ್ಲಿ ದೇವರನ್ನು ಕಂಡವರು .
ಒಳ್ಳೆಯ ಕ್ರೀಡಾಪಟುವಾಗಿ ವಿದ್ಯಾರ್ಥಿ ದಿಸೆಯಲ್ಲಿ ನಾಯಕತ್ವವನ್ನು ನೀಡಿದವರು , ಹುಟ್ಟು ಹೋರಾಟಗಾರರು, ಐಕಳ ಅವರು ಹೋರಾಟದ ದಿಸೆಯಲ್ಲಿ ಬಂದು ನಾನು ಸಾಯುವವರೆಗೂ ಸಮಾಜದ ಕೆಲಸ ಮಾಡುತ್ತೇನೆ ಎಂದು ಹೇಳುವ ಮಾತು ನಮಗೆಲ್ಲಾ ಸ್ಪೂರ್ತಿಯಾಗಿದೆ.
ಐಕಳ ಅವರು ಮಾಡಿದ ಕೆಲಸಗಳ ಸಾಕ್ಷ್ಯ ಚಿತ್ರ ಕಂಡಾಗ ನನಗೆ ಕಣ್ಣೀರು ಬಂತು. ಅದರಲ್ಲಿ ಸಮಾಜದ ಅ ದೆಸ್ಟೋ ಜನರು ಕಷ್ಟದಲ್ಲಿರುವ ದೃಶ್ಯ ಗಳಿವೆ, ಇಂಥವರಿಗೆ ಮಾಡಿದ ಸಹಾಯ ಒಂದು ಮೈಲಿಗಲ್ಲು. ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದರು. ನಟ ಡಾ. ರಾಜ್ ಕುಮಾರ್ ನಟ ಸರ್ವಭೌಮ ಆಗಿದ್ದಾರೆ,
ರಾಜ್ ಕುಮಾರ್ ಅವರು ಅಭಿಮಾನಿಗಳೇ ದೇವರು ಎನ್ನುತ್ತಾರೆ .ಆದರೆ ಐಕಳ ಅವರು ದಾನಿಗಳೇ ನನ್ನ ದೇವರು ಎಂದು ಹೇಳ್ತಾರೆ, ಇವರು ಸಮಾಜದ ಸಾರ್ವಭೌಮ ಆಗಿದ್ದಾರೆ,
ಐಕಳ ಅವರು ಇನ್ನೊಬ್ಬರಿಗೆ ಗೌರವ ಕೊಟ್ಟು ತಾನು ಗೌರವ ಪಡೆದವರು,
ಇವರನ್ನು ಎಲ್ಲಾ ಸಮಾಜದ ದವರು ಪ್ರೀತಿಸಿದರು, ಗೌರವಿಸಿದರು,
ಐಕಳ ಹರೀಶ್ ಅವರ ಪ್ರತಿಷ್ಠೆ ಯ ಕೆಲಸವನ್ನು ಕಂಡಾಗ ಬೇರೆ ಸಮುದಾಯದ ವರಿಗೂ ನಾನು ಇವರ ಒಡನಾಡಿಯಾಗಿ ಇರಬೇಕು ಎಂದು ಅನಿಸುತ್ತದೆ, ತಾನು ಗಳಿಸಿದ್ದನ್ನು ಹಿಂದೆ ಸಮಾಜಕ್ಕೆ ಕೊಡಬೇಕು ಎಂಬ ಮನಸಿದ್ದವರು ಬಹಳ ಎತ್ತರಕ್ಕೆ ಏರುತ್ತಾರೆ ಇದಕ್ಕೆ ಐಕಳ ಹರೀಶ್ ಶೆಟ್ಟಿ ಯವರು ಒಂದು ಸ್ಪಷ್ಟ ಉದಾಹರಣೆ.” ಎಂದು ಅವರ ಸಮಾಜಮುಖಿ ಕೆಲಸ ಕಾರ್ಯಗಳ ಬಗ್ಗೆ ಪ್ರಶಂಸೆಯ ನುಡಿಗಳನ್ನಾಡಿದರು.
ಕೃತಿ ಪರಿಚಯ ಮಾಡಿದ ಆರ್ಥಿಕ ತಜ್ಞರಾದ ಆರ್. ಕೆ. ಶೆಟ್ಟಿಯವರು, “ಐಕಳ ಹರೀಶ್ ಶೆಟ್ಟಿಯವರ ಬದುಕಿನ ವಿವಿಧ ಮಜಲು, ಬಾಲ್ಯ ಯೌವನ, ಸಮಾಜ ಸೇವೆ, ಸಾಂಘಿಕ ಚಟುವಟಿಕೆಗಳ ಬಗ್ಗೆ ಅವರ ಅನೇಕ ಹಿತೈಷಿ ಲೇಖಕರು ಬರೆದ ಲೇಖನಗಳನ್ನು ಕೃತಿಯ ಸಂಪಾದಕರು ಸಂಗ್ರಹಿಸಿ, ಅಚ್ಚುಕಟ್ಟಾಗಿ ಮುದ್ರಿಸಿ ಐಕಳರವರಿಗೆ ಗೌರವಪೂರ್ವಕ ಸಮರ್ಪಿಸಿದ್ದಾರೆ. ಇದು ಪ್ರಪಂಚದ ಒಬ್ಬ ದೊಡ್ಡ ವ್ಯಕ್ತಿಯ ಗೌರವಗ್ರಂಥವಾಗಿ ಮೂಡಿಬಂದಿದೆ ಎಂದು ಹೇಳಲು ಸಂತೋಷವಾಗುತ್ತದೆ ” ಎಂದರು
ಸಂಸದರಾದ ಗೋಪಾಲ ಶೆಟ್ಟಿಯವರು ಮಾತನಾಡಿ ಐಕಳ ಹರೀಶ್ ಶೆಟ್ಟಿಯವರು ಬಂಟರ ಸಂಘದ ದೊಡ್ಡ ಹುದ್ದೆ ದೊರಕಿದ ನಂತರ ಅವರು ಅದನ್ನು ಸೂಪರ್ ಕ್ಯಾಶ್ ಮಾಡಿಕೊಂಡರು. ಮೂಲಬೇರಿನಿಂದಲೇ ಕೆಲಸ ಮಾಡುವ ತನ್ನ ಗುಣವನ್ನು ಬಿಡಲಿಲ್ಲ. ಸರಕಾರದ ಸಹಾಯ , ಸಹಕಾರದಿಂದ ತುಂಬಾ ಬಡಕುಟುಂಬಗಳಿಗೆ ಮನೆ ಕಟ್ಟಿಸಿ ಕೊಡುವ ಕೆಲಸವನ್ನು ಮಾಡಿದರು. ಸರಕಾರದಿಂದ ಸಹಕಾರ ದೊರೆಯದ ಕಡೆ ದಾನಿಗಳಿಂದ ಹಣಸಂಗ್ರಹ ಮಾಡಿ ಮನೆ ಕಟ್ಟಿಸಿ ಕೊಡುವ ಕೆಲಸವನ್ನೂ ಮಾಡಿರುವುದು ಶ್ಲಾಘನೀಯ ಎಂದರು. ಭಾರತೀಯ ಜನತಾ ಪಕ್ಷದ ಪರವಾಗಿ ಶುಭಾಶಯಗಳನ್ನುತಿಳಿಸಿದರು.
ಮುಂಬೈಯ, ದಿನಪತ್ರಿಕೆ ಕರ್ನಾಟಕ ಮಲ್ಲದ ಸಂಪಾದಕರು, ಸಾರ್ವಭೌಮ ಗೌರವ ಗ್ರಂಥದ ಪ್ರಧಾನ ಸಂಪಾದಕರು ಆದ ಚಂದ್ರಶೇಖರ ಪಾಲೆತ್ತಾಡಿ ಅವರು ಮಾತನಾಡಿ, ” ಐಕಳ ಹರೀಶ್ ಶೆಟ್ಟಿಯವರು ದೇಹದಾರ್ಢ್ಯದ ಮೂಲಕ ಕ್ರೀಡೆಯನ್ನು ಉಸಿರಾಡಿದವರು. ಗಟ್ಟಿ ಮನಸ್ಥಿತಿ ಉಳ್ಳವರು. ಅವರು ಸಂಘಟನೆಯನ್ನು ಒಂದು ಚಳುವಳಿಯನ್ನಾಗಿ ಹಮ್ಮಿಕೊಂಡವರು. ಸೇವೆ ಕೂಡಾ ಒಂದು ಚಳುವಳಿ. ಅವರು ಸಾಮಾಜಿಕ ಚಳುವಳಿಯನ್ನು ನೆಲದ ಬುಡಕ್ಕೆ ಕೊಂಡು ಹೋಗಿದ್ದಾರೆ. ಹರೀಶಣ್ಣನಂತೆ ಮುಂಬೈಯಲ್ಲಿ ನಾಯಕತ್ವವನ್ನು ವಹಿಸಿದವರು ಯಾರೂ ಇಲ್ಲ. ಮುಂಬೈಯಲ್ಲಿ ತುಳು ಕನ್ನಡಿಗರ ಒಂದು ಸಮರ್ಥ ವೇದಿಕೆಯನ್ನು ಕಟ್ಟಿ, ಅಸಂಖ್ಯ ಜನರನ್ನು ಸೇರಿಸಿ ನಮ್ಮ ಜನಬಲವನ್ನು ತೋರಿಸಬೇಕು” ಎಂದು ಕರೆಕೊಟ್ಟರು. “ಸಾರ್ವಭೌಮ” ಎಂಬ ಸಾಮಾನ್ಯ ಗ್ರಂಥವನ್ನು ನಾವು ಸಂಪಾದಿಸಿದ್ದೇವೆ. ಇದಕ್ಕಿಂತ ದೊಡ್ಡ ಗ್ರಂಥ ಬರಬೇಕಿದೆ. ಡಾ ಜಿ ಎನ್ ಉಪಾಧ್ಯ ಅವರು ಮುಂಬೈ ತುಳು ಕನ್ನಡಿಗರನ್ನು ವಿಶ್ಕವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಕರೆಸಿಕೊಂಡಿದ್ದಾರೆ. ಮುಂಬೈಯ ತುಳು ಕನ್ನಡಿಗರನ್ನು ಒಟ್ಟು ಮಾಡುವ ಚಳುವಳಿಯನ್ನು ವಿಸ್ತರಿಸಿದ್ದಾರೆ. ಮುಂಬೈ ವಿಶ್ಕವಿದ್ಯಾಲಯವನ್ನು ತುಳು ಕನ್ನಡಿಗರ ಮನೆಮನೆಗೆ ಕೊಂಡು ಹೋಗಿದ್ದಾರೆ. ಮುಂಬೈ ಸಾಧಕರ ವೈಯಕ್ತಿಕ ಕೊಡುಗೆಗಳನ್ನು ಅಚ್ಚು ಹಾಕಿಸಿ, ತಮ್ಮ ವಿದ್ಯಾರ್ಥಿಗಳು ಕೃತಿಗಳನ್ನು ತರುವಂತೆ ಮಾಡಿದ್ದಾರೆ. ಅವರ ಈ ಕಾರ್ಯ ಸಣ್ಣ ಕೆಲಸ ಖಂಡಿತಾ ಅಲ್ಲ” ಎಂದು ಡಾ ಜಿ ಎನ್ ಉಪಾಧ್ಯ ಅವರನ್ನು ಅಭಿನಂದಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಖ್ಯಾತ ಸಂಘಟಕ, ಜಾಗತಿಕ ಬಂಟರ ಸಂಘದ ಒಕ್ಕೂಟಗಳ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಮಾತನಾಡಿ ” ಇಂದು ನಡೆದ ಸಾಂಸ್ಕೃತಿಕ ವೈಭವ ಅತ್ಯದ್ಭುತವಾಗಿತ್ತು. ನನ್ನ ಕುರಿತು ಗ್ರಂಥವನ್ನು ಸಂಪಾದಿಸಿ ಗೌರವ ಸಮರ್ಪಣೆ ಮಾಡಿದ್ದೀರಿ. ಅದಕ್ಕಾಗಿ ಮುಂಬೈ ವಿಶ್ಕವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಋಣಿಯಾಗಿದ್ದೇನೆ ಎಂದು, ಕೃತಿ ಸಂಪಾದನೆಯಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಮರ್ಪಿಸಿದರು. ತನ್ನ ಎಲ್ಲಾ ಕೆಲಸಕಾರ್ಯಗಳಲ್ಲಿ ಕೈಜೋಡಿಸಿದ ಎಲ್ಲರನ್ನೂ ಸ್ಮರಿಸುತ್ತಾ ದಾನಿಗಳೇ ನನ್ನ ದೇವರು ” ಎಂದರು. ಇದೇ ಸಂದರ್ಭದಲ್ಲಿ ಐಕಳ ಹರೀಶ್ ಶೆಟ್ಟಿ ದಂಪತಿಗಳನ್ನು ಹೂಹಾರ ಹಾಕಿ ಶಾಲು ಹೊದಿಸಿ, ಕೃತಿಪ್ರದಾನಿಸಿ ಗೌರವಿಸಲಾಯಿತು.
ದಾನಿಗಳಾದ ಆನಂದ ಶೆಟ್ಟಿಯವರು ಮಾತನಾಡಿ, “ಐಕಳ ಹರೀಶ್ ಶೆಟ್ಟಿಯವರಂತೆ ಮಿಂಚಿನಂತಹ ಮಾತು, ಮಿಂಚಿನಂತಹ ವೇಗ, ಮಿಂಚಿನಂತಹ ಕೆಲಸ ಬೇರೆಲ್ಲೂ ನೋಡಲು ಸಿಗದು . ಹಳ್ಳಿಗಳ ಮೂಲೆ ಮೂಲೆಗಳಿಗೂ ತೆರಳಿ ಸಮಾಜ ಸೇವೆ ಮಾಡುತ್ತಿದ್ದಾರೆ. ಅವರ ಕೆಲಸ ಜನ ಮೆಚ್ಚುವಂತಹುದು. ಅವರಿಗೆ ದೇವರು ಒಳಿತನ್ನು ಮಾಡಲಿ” ಎಂದು ಶುಭ ಹಾರೈಸಿದರು.
ಸುಧಾಕರ ಹೆಗ್ಡೆಯವರು ಮಾತನಾಡಿ, “ಸಾವಿರಾರು ಜನರು ಹರೀಶ್ ಶೆಟ್ಟಿಯವರ ಸಮಾಜಸೇವೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. “ಸಾರ್ವಭೌಮ ಗೌರವ ಗ್ರಂಥ ಸಮರ್ಪಣೆಗೆ ಭಾಜನರಾದ ಅವರನ್ನು ಅಭಿನಂದಿಸಿದರು. ಮುಂದೆಯೂ ಅವರಿಗೆ ಪ್ರಶಸ್ತಿಗಳು ಸಿಗಲಿ ” ಎಂದರು.
ಮಹಾದಾನಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರು ಮಾತನಾಡುತ್ತಾ “ಐಕಳ ಹರೀಶ್ ಶೆಟ್ಟಿಯವರದು ತೆಂಗಿನಕಾಯಿಯಂತಹ ವ್ಯಕ್ತಿತ್ವ. ಹೊರಗೆ ಗಟ್ಟಿ, ಒಳಗೆ ಮನಸ್ಸು ಮೃದು. ಅವರ ಸಮಾಜಸೇವೆ ಒಂದು ಪ್ರಾಮಾಣಿಕವಾದ ಕೆಲಸವಾಗಿದೆ. ಅವರು ಬಹುಮುಖ ವ್ಯಕ್ತಿತ್ವದ ಹೃದಯವಂತ. ನಾವು ಮಾಡಬೇಕಾಗಿರುವ ಸಮಾಜಮುಖಿ ಕಾರ್ಯಗಳಿಗೆ ಅವರು ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಹಾಯ ಸಹಕಾರ ಸದಾ ಅವರಿಗೆ ಇರುತ್ತದೆ ” ಎಂಬ ಭರವಸೆಯನ್ನಿತ್ತರು.
ಹರೀಶ್ .ಜಿ. ಅಮೀನ್ ಅಧ್ಯಕ್ಷರು, ಬಿಲ್ಲವರ ಅಸೋಸಿಯೇಷನ್ ಅವರು ಹರೀಶ್ ಶೆಟ್ಟಿಯವರಿಗೆ ತಮ್ಮ ಶುಭಾಶಯಗಳನ್ನು ತಿಳಿಸುತ್ತಾ ” ಹರೀಶಣ್ಣನವರು ಹುಟ್ಟು ನಾಯಕ ಎಂಬ ಮಾತನ್ನು ನಾನು ಅನುಮೋದಿಸುತ್ತೇನೆ. ತುಂಬಾ ಕಮ್ಮಿ ಜನರಲ್ಲಿ ಕಾಣ ಸಿಗುವ ನಾಯಕತ್ವದ ಗುಣಗಳನ್ನು ನಾನವರಲ್ಲಿ ಕಂಡಿದ್ದೇನೆ. ಎಲ್ಲಾ ಸಮಾಜಬಾಂಧವರನ್ನು ಸಾಮರಸ್ಯದಿಂದ ಜೊತೆಯಲ್ಲಿ ಕೊಂಡೊಯ್ಯವ ಗುಣ ಅವರಲ್ಲಿದೆ ” ಎಂದರು.
ಬಿ ಎಸ್ ಕೆ ಬಿ ಅಸೋಸಿಯೇಷನ್ನಿನ ಅಧ್ಯಕ್ಷರು ಹಾಗೂ ಹಿರಿಯ ವೈದ್ಯರಾದ ಡಾ। ಸುರೇಶ್ ರಾವ್ ಅವರು ಮಾತನಾಡಿ “ನಮ್ಮ ಪ್ರೀತಿಯ ಮಿತ್ರನಿಗೆ ಸಾರ್ವಭೌಮ ಎಂಬ ಪದವಿ ಸಿಗುವುದೆಂದರೆ ನಮಗೂ ಹೆಮ್ಮೆಯ ವಿಷಯವಾಗಿದೆ. ಇನ್ನಷ್ಟು ಜನರಿಗೆ ಅವರಿಂದ ಸೇವೆ ಸಿಗಲಿ ಎಂದು ಹಾರೈಸುತ್ತೇನೆ” ಎಂದರು.
ಮುಂಬೈಯ ಹಿರಿಯ ಸಾಹಿತಿ ಡಾ. ಸುನೀತಾ ಎಂ ಶೆಟ್ಟಿಯವರು ” ವಿಶ್ವವಿದ್ಯಾಲಯಕ್ಕೆ ಪ್ರವೇಶ ಮಾಡುವಾಗ ಮೈ ರೋಮಾಂಚನಗೊಳ್ಳುತ್ತದೆ. ಇಪ್ಪತ್ತೆರಡು ವರ್ಷಗಳ ಕಾಲ ನಾನು ಇಲ್ಲಿ ಎಂ. ಎ. ವಿದ್ಯಾರ್ಥಿಗಳಿಗೆ ಬೋಧಿಸಿದ್ದೆ. ಒಂದು ಸುಂದರ ವಾತಾವರಣ ಇಲ್ಲಿಯದು. ಮುಂಬೈಯಲ್ಲಿ ತುಳು ಕನ್ನಡಿಗರು ಒಟ್ಟಾಗಿ ಸಂಘಟನೆ ಮಾಡದೇ ಇದ್ರೆ ಇಲ್ಲಿ ಉಳಿಗಾಲವಿಲ್ಲ.” ಎಂದರು. ಅವರು ಮುಂಬೈಯಲ್ಲಿ ಬಹುಕಾಲದಿಂದ ಇದ್ದ ಕನ್ನಡ ಆಕಾಶವಾಣಿ ಪ್ರಸಾರ ನಿಂತುಹೋಗಿರುವುದಕ್ಕಾಗಿ ಖೇದ ವ್ಯಕ್ತಪಡಿಸಿದರು. ಐಕಳರವರನ್ನು ನಾನು ಒಬ್ಬ ಸಮಾಜ ಪುರುಷನನ್ನಾಗಿ ಗುರುತಿಸುತ್ತೇನೆ. ಸಮಾಜದ ಒಳಿತಿಗಾಗಿ ಸಮಾಜದಲ್ಲಿ ಒಬ್ಬ ವ್ಯಕ್ತಿ ಅದಕ್ಕಾಗಿ ಹೋರಾಡುವವನೇ ಸಮಾಜ ಪುರುಷ, ಎನ್ನುತ್ತಾ ರಾಮಾಯಣದ ಎರಡು ಪ್ರಸಂಗಗಳನ್ನು ಉದಾಹರಿಸಿದರು . ನಂತರ ಅವರು ‘ಸಾರ್ವಭೌಮಗ್ ಅಭಿನಂದನೆ’ ಎಂಬ ಸ್ವರಚಿತ ತುಳು ಕವಿತೆಯ ವಾಚನ ಮಾಡಿದರು.
ಮೊಗವೀರ ಮಹಾಜನ ಸಂಘ, ಬಗ್ವಾಡಿ ಹೋಬಳಿ ಇದರ ಅಧ್ಯಕ್ಷರಾಗಿರುವ ಸುರೇಶ್ ಕಾಂಚನ್ ಮಾತನಾಡಿ, ” ಸಾರ್ವಭೌಮ ಪದವಿಗೆ ಐಕಳ ಹರೀಶ್ ಶೆಟ್ಟಿಯವರು ತಕ್ಕಂತಹ ವ್ಯಕ್ತಿ. ಬಂಟರಸಮಾಜದಲ್ಲಿ ಬೆಳಕು ತಂದುಕೊಟ್ಟವರು ಅವರು. ಅವರ ನೇತೃತ್ವದಲ್ಲಿ ತುಳು ಕನ್ನಡಿಗರ ಸಮಾವೇಶ ಮುಂಬೈಯಲ್ಲಿ ಆಗಬೇಕು” ಎಂದರು.
ಬಂಟರಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ. ” ಇಂದಿನ ಮಕ್ಕಳಿಗೆ ಐಕಳ ಹರೀಶ್ ಶೆಟ್ಟಿಯವರ ಸಾಧನೆ ಮಾದರಿಯಾಗಲಿ. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಹರೀಶಣ್ಣನವರಿಗೆ ಈ ಕೃತಿ ಗೌರವಾರ್ಪಣೆಯ ಯೋಗವೂ ಯೋಗ್ಯತೆಯೂ ಇದೆ ” ಎಂದು ಅಭಿನಂದಿಸಿದರು.
ಬಂಟರ ಸಂಘ ಮುಂಬೈಯ ಉಪಾಧ್ಯಕ್ಷರಾದ ರತ್ನಾಕರ್ ಶೆಟ್ಟಿ ಮುಂಡ್ಕೂರು ಅವರು ವಿಶ್ಕವಿದ್ಯಾನಿಲಯ ಕನ್ನಡ ವಿಭಾಗದ ಕಾರ್ಯಸಾಧನೆಯನ್ನು ಅಭಿನಂದಿಸಿ, ಐಕಳ ಹರೀಶ್ ಶೆಟ್ಟಿಯವರ ಸಹಯೋಗ, ಸ್ನೇಹವನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಡಾ.ದಿನೇಶ್ ಶೆಟ್ಟಿ ರೆಂಜಾಳ ವಿರಚಿತ, ” ಮುಂಬೈ ಕನ್ನಡ ಪತ್ರಿಕೋದ್ಯಮ ” ಸೋಮಶೇಖರ್ ಮಸಳಿಯವರ ಸಂಪಾದಿತ ” ಅರಿವಿನ ಅಂಗಳದಲ್ಲಿ (ಪರಿಷ್ಕೃತ ಆವೃತ್ತಿ) ಡಾ ಸುರೇಶ್ ರಾವ್ ನೇತೃತ್ವದಲ್ಲಿ ಬಿ.ಎಸ್.ಕೆ.ಬಿ, ಗೋಕುಲ ಪ್ರಕಟಿಸಿದ, ” ಶ್ರೀ ಕೃಷ್ಣ ಅನುಸಂಧಾನ” ಕೃತಿಗಳನ್ನು ಕನ್ನಡ ವಿಭಾಗ ಮುಂಬೈ ವಿಶ್ಕವಿದ್ಯಾನಿಲಯಕ್ಕೆ ಹಸ್ತಾಂತರಿಸಲಾಯಿತು.
ಗೌರವಾನ್ವಿತ ಅತಿಥಿಗಳನ್ನು ಸುಬ್ರಹ್ಮಣ್ಯ ಯಡಪಡಿತ್ತಾಯ ಅವರನ್ನು, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಡಾ ಜಿ. ಎನ್. ಉಪಾಧ್ಯ ಅವರನ್ನು , ಗೌರವ ಗ್ರಂಥದ ಪ್ರಧಾನ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿಯವರನ್ನು, ಸಂಪಾದಕರಾದ ಡಾ. ಪೂರ್ಣಿಮಾ ಶೆಟ್ಟಿಯವರನ್ನು, ಅತಿಥಿ ಗಣ್ಯರನ್ನು ಶಾಲುಹೊದಿಸಿ, ಪುಷ್ಪ ಗುಚ್ಛ ನೀಡಿ, ಗ್ರಂಥ ಗೌರವದೊಂದಿಗೆ ಸತ್ಕರಿಸಲಾಯಿತು.
ಸಾರ್ವಭೌಮ ಗೌರವ ಗ್ರಂಥ ಸಮರ್ಪಣೆ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸಿಟಿ ರೀಜನ್ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ. ಕೆ. ಶೆಟ್ಟಿ ಮತ್ತು ಬಳಗ, ಸಹನಾ ಭಾರದ್ವಾಜ್ ಮತ್ತು ತಂಡ, ಶೈಲಜಾ ಮಧುಸೂದನ್ ರಾವ್ ಮತ್ತು ತಂಡ, ಪೊವಾಯಿ ಕನ್ನಡ ಸೇವಾ ಸಂಘದ ಮಹಿಳಾ ವಿಭಾಗದ ಪ್ರಶಾಂತಿ ದಿವಾಕರ ಶೆಟ್ಟಿ ಮತ್ತು ತಂಡ ಹಾಗೂ ನಿಕಿತಾ ಅಮೀನ್ ಹಾಗೂ ತಂಡದವರು “ಸಾಂಸ್ಕೃತಿಕ ವೈಭವ ‘ ಕಾರ್ಯಕ್ರಮವನ್ನು ಸಾದರಪಡಿಸಿದರು.
ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ವಿಭಾಗದ ವಿದ್ಯಾರ್ಥಿಗಳು ವಿಶ್ಕವಿದ್ಯಾನಿಲಯದ ಗೀತೆಯನ್ನು ಹಾಡಿದರು.
ವೇದಿಕೆಯಲ್ಲಿ ಗೌರವಾನ್ವಿತ ಅತಿಥಿಗಳಾಗಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ,
(ಆಡಳಿತ ನಿರ್ದೇಶಕರು ಹೇರಂಬ ಇಂಡಸ್ಟ್ರೀಸ್ ) ಆನಂದ ಶೆಟ್ಟಿ (ಆಡಳಿತ ನಿರ್ದೇಶಕರು, ಆರ್ಗಾನಿಕ್ ಕೆಮಿಕಲ್ಸ್), ಸುಧಾಕರ್ ಹೆಗಡೆ (ಆಡಳಿತ ನಿರ್ದೇಶಕರು ತುಂಗಾ ಗ್ರೂಪ್ ಆಫ್ ಹೋಟೆಲ್ಸ್), ಡಾ. ಸುರೇಶ್ ರಾವ್ (ಖ್ಯಾತ ವೈದ್ಯರು, ಸಂಜೀವಿನಿ ಆಸ್ಪತ್ರೆ ಮುಂಬೈ) ಹರೀಶ್ ಅಮೀನ್ (ಅಧ್ಯಕ್ಷರು, ಬಿಲ್ಲವರ ಅಧ್ಯಕ್ಷರು), ಸುರೇಶ್ ಕಾಂಚನ್ (ಮೊಗವೀರ ಮಹಾಜನ ಸೇವಾ ಸಂಘ ಬಗ್ಗಾಡಿ ಹೋಬಳಿ ಮುಂಬೈ), ಉಮಾ ಕೃಷ್ಣ ಶೆಟ್ಟಿ (ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ ಬಂಟರ ಸಂಘ ಮುಂಬೈ )ಮತ್ತು ಗ್ರಂಥದ ಪ್ರಧಾನ ಸಂಪಾದಕ ಕರ್ನಾಟಕ ಮಲ್ಲದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಪೂರ್ಣಿಮಾ ಶೆಟ್ಟಿ (ಸಹಪ್ರಾಧ್ಯಕರು ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ) ಸಲಹಾ ಸಮಿತಿಯ ಸದಸ್ಯರುಗಳಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಮುಂಬಯಿ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ನಿರ್ದೇಶಕ ಪ್ರವೀಣ್ ಭೋಜ ಶೆಟ್ಟಿ , ತುಳು ಕೂಟ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ ಶಶಿಧರ ಕೆ ಇನ್ನಂಜೆ, ಬಂಟರ ಸಂಘದ ಮುಖವಾಣಿ ಬಂಟರವಾಣಿಯ ಕಾರ್ಯಾಧ್ಯಕ್ಷ ರವೀಂದ್ರನಾಥ್ ಭಂಡಾರಿ ಹಾಗೂ ಗೌರವ ಗ್ರಂಥದ ಸಂಪಾದಕ ಮಂಡಳಿಯ ಸದಸ್ಯರುಗಳಾದ ಅಶೋಕ ಪಕ್ಕಳ, ಕರ್ನೂರು ಮೋಹನ್ ರೈ, ಕೊಲ್ಲಾಡಿ ಬಾಲಕೃಷ್ಣ ರೈ, ಡಾ. ದಿನೇಶ್ ಶೆಟ್ಟಿ ರೆಂಜಾಳ, ಪತ್ರಕರ್ತ ದಿನೇಶ್ ಕುಲಾಲ್ ಉಪಸ್ಥಿತರಿದ್ದರು.
ಮಧ್ಯಾಹ್ನ ವಿಶ್ವವಿದ್ಯಾನಿಲಯ ಪ್ರಧಾನ ದ್ವಾರದಿಂದ ಸಭಾಂಗಣದವರೆಗೆ ಚಂಡೆ ಕೊಂಬು,ವಾದ್ಯ, ಪೂರ್ಣ ಕುಂಭ ಸ್ವಾಗತದೊಂದಿಗೆ ಐಕಳ ದಂಪತಿಗಳನ್ನು ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಕರ್ನೂರು ಮೋಹನ್ ರೈ ನಿರೂಪಿಸಿದರು. ಸಭಾ ಕಾರ್ಯಕ್ರಮವನ್ನು ಅಶೋಕ ಪಕ್ಕಳ ಹಾಗೂ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ನಿರೂಪಿಸಿದರು. ವಿಜಯ ಶೆಟ್ಟಿ ಮೂಡುಬೆಳ್ಳೆ ಅವರು ಪ್ರಾರ್ಥನೆ ಹಾಡಿದರು.
ಕಾರ್ಯಕ್ರಮದಲ್ಲಿ ಬಂಟರ ಸಂಘದ ಪದಾಧಿಕಾರಿಗಳು, ವಿವಿಧ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ನಗರದ ವಿವಿಧ ಜಾತಿಯ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಅಭಿಮಾನಿಗಳು, ಹಿತೈಷಿಗಳು, ವಿವಿಯ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು .
ಬಂಟರ ಸಂಘ, ಮುಂಬಯಿಯ ಪ್ರಬಂಧಕರಾದ ಪ್ರವೀಣ್ ಶೆಟ್ಟಿ, ಸುಪ್ರೀತ್ ಶೆಟ್ಟಿ, ಪ್ರವೀಣ್ ಶೆಟ್ಟಿ ಕಣಂಜಾರು,
ಕನ್ನಡ ವಿಭಾಗದ ವಿದ್ಯಾರ್ಥಿಗಳು ಸಹಕರಿಸಿದರು.