ಮಹಾರಾಷ್ಟ್ರ ಸರಕಾರದ ಆದೇಶದಂತೆ ಮುಂಬೈ ವಿಶ್ವವಿದ್ಯಾಲಯದ ಸೂಚನೆಯಂತೆ ವಿವಿಯ ಕನ್ನಡ ವಿಭಾಗದಲ್ಲಿ ನವೆಂಬರ್ 7ರಂದು ವಂದೇ ಮಾತರಂ ಸಮೂಹ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗಾಯನದ ತರುವಾಯ ಗೀತೆಯ ಕುರಿತಾಗಿ ಸಂವಾದ ಕಾರ್ಯಕ್ರಮ ಸಹ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಮಾತನಾಡುತ್ತಾ, ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಕಳೆದ 46 ವರ್ಷಗಳಿಂದ ನಮ್ಮ ದೇಶ ಭಾಷೆ ಸಾಹಿತ್ಯ ಸಂಸ್ಕೃತಿಯ ಬಲವರ್ಧನೆಗೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದೆ.

ವಂದೇ ಭಾರತ ಗೀತೆಯು ಭಾರತೀಯರ ಭಾವ ಕೋಶದಲ್ಲಿ ಸೇರಿದ ಭಾವಗೀತೆಯಾಗಿದೆ. ಭಾರತದ ಜನಮನವನ್ನು ಬೆಸೆಯುವಲ್ಲಿ, ಸ್ವದೇಶಿ ಚಳುವಳಿ ಮತ್ತು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಗೀತೆಯು ಪ್ರಧಾನಪಾತ್ರವನ್ನು ವಹಿಸಿದೆ. ಬಂಕಿಮ್ ಚಂದ್ರ ಚಟರ್ಜಿ ವಿರಚಿತ 1875ರ ಗೀತೆಗೆ ಇಂದು 150ರ ಸಂಭ್ರಮ. ಇದನ್ನು ಸಾಮೂಹಿಕವಾಗಿ ಗಾಯನ ಮಾಡಿ ಚಿಂತನ ಮಂಥನ ಮಾಡುವ ಅವಕಾಶ ಲಭಿಸಿದ್ದು ಸಂತಸದ ವಿಷಯವಾಗಿದೆ ಎಂದರು. ಈ ಗೀತಗಾಯನದಲ್ಲಿ ವಿಭಾಗದ ಸಹಪ್ರಾಧ್ಯಾಪಕದ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ, ಸಂಶೋಧನ ವಿದ್ಯಾರ್ಥಿಗಳಾದ ಕಲಾ ಭಾಗ್ವತ್, ನಳಿನಾ ಪ್ರಸಾದ್, ಸುರೇಖಾ ದೇವಾಡಿಗ, ಸವಿತಾ ಅರುಣ್ ಶೆಟ್ಟಿ, ಎಂ.ಎ. ವಿದ್ಯಾರ್ಥಿಗಳಾದ ಪುಷ್ಪಲತಾ ಗೌಡ , ಜ್ಯೋತಿಪ್ರಸಾದ್, ಕಚೇರಿ ಸಹಾಯಕರಾದ ರೇಷ್ಮಾ ಮಾನೆ ಮತ್ತು ಯೋಗೀಶ್ ಮಾನೆ ಮೊದಲಾದವರು ಭಾಗವಹಿಸಿದ್ದರು.







































































































