ಜೀವನದಲ್ಲಿ ಉನ್ನತ ಧ್ಯೇಯ, ಕಠಿಣ ಪರಿಶ್ರಮ, ಸಾಧನೆಯ ಛಲ, ನಡೆ ನುಡಿಯಲ್ಲಿ ಪ್ರಾಮಾಣಿಕತೆ ಇವುಗಳು ಜೀವನದ ಯಶಸ್ಸಿನ ಗುಟ್ಟು ಎನ್ನುವುದು ಸರ್ವೇಸಾಮಾನ್ಯವಾದ ಮಾತು. ಆದರೆ ಇದೆಲ್ಲವನ್ನೂ ಜೀವನದಲ್ಲಿ ಅನುಸಂಧಾನ ಮಾಡಿಕೊಂಡು, ಮುನ್ನಡೆದು ಸಾಧಕರಾಗಿ ಕಾಣ ಸಿಗುವವರು ವಿರಳ. ಇಂತವರ ಸಾಲಿನಲ್ಲಿ ವಿಶೇಷವಾಗಿ ಕಂಡುಬರುವ ಭಿವಂಡಿ ಬದ್ಲಾಪುರ ಪರಿಸರದಲ್ಲಿ ವೃತ್ತಿಯಲ್ಲಿ ನಿಪುಣರಾಗಿ, ಸಮಾಜ ಸೇವಕರಾಗಿ, ಜನಾನುರಾಗಿಯಾಗಿ ತುಳು ಕನ್ನಡಿಗರಲ್ಲಿ ಅನ್ಯೋನ್ಯತೆಯೊಂದಿಗೆ ಬೆರೆತು ಬಾಳುವ, ಯಾವುದೇ ಪ್ರಚಾರವನ್ನು ಬಯಸದೇ, ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ವ್ಯಕ್ತಿತ್ವವೆಂದರೆ ಅದು ಸುಭೋದ್ ಭಂಡಾರಿಯವರು. ಎಡಗೈಯಲ್ಲಿ ನೀಡಿದ್ದು ಬಲಗೈಗೆ ತಿಳಿಯಬಾರದು ಎನ್ನುವ ಮನೋಧರ್ಮವನ್ನು ರೂಢಿಸಿಕೊಂಡು ಯಾರೇ ನೆರವಿಗೆ ಬಂದರೂ ತನ್ನಿಂದಾದ ಸಹಾಯ ಮಾಡಿ ಪರೋಪಕಾರ ಧರ್ಮದಲ್ಲಿ ಧನ್ಯತೆಯನ್ನು ಕಾಣುವ ಇವರ ಮುಖದಲ್ಲಿ ಸದಾ ಮಂದಹಾಸ, ಮೃದು ಮಾತು ಎಲ್ಲರನ್ನೂ ಸ್ನೇಹಭಾವದಿಂದ ಕಾಣುವ ಇವರ ಸ್ವಭಾವ ಎಂತಹವರನ್ನೂ ಆಕರ್ಷಿಸದೆ ಇರದು.
ಶ್ರೀ ಸುಭೋದ್ ಭಂಡಾರಿಯವರು ತಮ್ಮ ವೃತ್ತಿಯನ್ನು ಹೋಟೆಲಿನಲ್ಲಿ ಪ್ರಾರಂಭಿಸಿ, ಪ್ರಸ್ತುತ ಹೋಟೆಲು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮುಂಬಯಿ ಬಂಟರ ಸಂಘದ ಭಿವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿಯಲ್ಲಿ ಕೋಶಾಧಿಕಾರಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಉಪ ಕಾರ್ಯಾಧ್ಯಕ್ಷರಾಗಿ ತನಗೆ ಸಿಕ್ಕ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ತಾನೊಬ್ಬ ಯಶಸ್ವೀ ಸಂಘಟಕ ಎನ್ನಿಸಿಕೊಂಡರು. ಈ ಎಲ್ಲಾ ಅನುಭವಗಳೇ ಈಗ ಭಿವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕಾರಿಯಾಯಿತು.
ಧಾರ್ಮಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡ ಶ್ರೀಯುತರು ಕೇವಲ ವೃತ್ತಿಯಲ್ಲಿ ಯಶಸ್ಸನ್ನು ಪಡೆದುಕೊಂಡು ತಮ್ಮಷ್ಟಕ್ಕೆ ತಾವಿರದೆ ತಾನು ಬಂದ ಸಮಾಜವನ್ನೂ ಪ್ರೀತಿಸಿಕೊಂಡು, ತಾನಾರ್ಜಿಸಿದ ಸಂಪತ್ತಿನ ಒಂದಂಶವನ್ನು ಸಮಾಜದ ಏಳಿಗೆಗೂ ವ್ಯಯಿಸುತ್ತಾ ಕೇವಲ ಬಂಟ ಸಮಾಜವಲ್ಲದೇ ಭಿವಂಡಿ, ಬದ್ಲಾಪುರ, ಕಲ್ಯಾಣ್, ಡೊಂಬಿವಲಿ ಭಾಂಧವರ ಪ್ರೀತಿ ವಿಶ್ವಾಸಗಳಿಗೂ ಕಾರಣರಾಗಿದ್ದಾರೆ. ಧರ್ಮಪತ್ನಿ ಶ್ರೀಮತಿ ಚೇತನಾ ಭಂಡಾರಿ ಹಾಗೂ ಪುತ್ರ ಆದಿತ್ಯ ಭಂಡಾರಿಯವರೊಂದಿಗಿನ ಸಂತೃಪ್ತ ಬದುಕು ಅವರದಾಗಿದ್ದು, ಭವಿಷ್ಯದಲ್ಲಿ ದೇವರು ದೀರ್ಘಾಯುಷ್ಯ, ಆರೋಗ್ಯ ಭಾಗ್ಯ, ಸುಖ ಸಂಪತ್ತುಗಳನ್ನು ನೀಡಿ ದಯಪಾಲಿಸಲಿ ಎಂದು ಶುಭವನ್ನು ಹಾರೈಸೋಣ