ಈಚೆಗೆ ವಿಶ್ವ ಬಂಟ ಸಮ್ಮೇಳನದಲ್ಲಿ ನಿರುದ್ಯೋಗ ಸಮಸ್ಯೆ ಕೇಂದ್ರೀಕರಿಸಿ ಒಂದು ವಿಚಾರಗೋಷ್ಠಿ ನಡೆದಿತ್ತು. ಅದರಲ್ಲಿ ಖ್ಯಾತ ಉದ್ಯಮಿಗಳು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಅವರೆಲ್ಲರೂ ಮಂಡಿಸಿದ ಒಂದು ಸಮಾನ ವಿಚಾರವೆಂದರೆ – ಈಗಿನ ಸುಶಿಕ್ಷಿತ ಪದವೀಧರರಲ್ಲಿ ಉದ್ಯೋಗಕ್ಕೆ ಬೇಕಾದ ಕೌಶಲಗಳಿಲ್ಲ ಎಂಬುದು! ನಮ್ಮ ಮಕ್ಕಳು ಉನ್ನತ ಶಿಕ್ಷಣ ಮಾಡಿ ದೊಡ್ಡ ದೊಡ್ಡ ಪದವಿಗಳನ್ನು ಪಡೆದುಕೊಂಡಿರುತ್ತಾರೆ. ಉತ್ತಮ ಅಂಕ ಪಟ್ಟಿಯೂ ಅವರಲ್ಲಿದೆ. ಆದರೆ ಕಲಿತ ವಿಷಯದಲ್ಲಾಗಲೀ, ಉದ್ಯೋಗಕ್ಕೆ ಅಗತ್ಯವಿರುವ ವಿಷಯದಲ್ಲಾಗಲೀ ಅವರಲ್ಲಿ ಕೌಶಲ ಇರುವುದಿಲ್ಲ. ಆದ್ದರಿಂದಲೇ ಕಂಪೆನಿಗಳಲ್ಲಿ ಉದ್ಯೋಗ ಖಾಲಿ ಇದ್ದರೂ ಸೂಕ್ತ ಅಭ್ಯರ್ಥಿಗಳು ಸಿಗದೆ ಅವುಗಳನ್ನು ತುಂಬಿಸಲಾಗುತ್ತಿಲ್ಲ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಕೆಲವರನ್ನು ಉದ್ಯೋಗಕ್ಕೆ ಸೇರಿಸಿಕೊಂಡ ಬಳಿಕ ತಮಗೆ ಬೇಕಾದಷ್ಟು ತರಬೇತಿ ಕೊಟ್ಟು ಕೆಲಸ ಮಾಡಿಸುತ್ತೇವೆ ಎಂಬುದು ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯವಾಗಿತ್ತು.
ಇಂದು ಎಂಜಿನಿಯರಿಂಗ್ ಸಹಿತ ಬೇರೆ ಬೇರೆ ಉನ್ನತ ಕೋರ್ಸ್ ಮಾಡಿದವರಿಗೆ ಕೊರತೆಯಿಲ್ಲ. ಜತೆಗೆ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗವೂ ಇದೆ. ಕೆಲವರು ತಾವು ಮಾಡಿರುವ ಕೋರ್ಸ್ ಬಿಟ್ಟು ಬೇರೆಯೇ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುತ್ತಾರೆ. ಹಾಗೆ ಕೆಲಸ ಮಾಡಿದವರಲ್ಲಿ ಎಷ್ಟೋ ಮಂದಿ ಯಶಸ್ಸು ಗಳಿಸಿದ್ದೂ ಇದೆ. ಇದನ್ನೆಲ್ಲ ಗಮನಿಸುವಾಗ ಮೇಲ್ನೋಟಕ್ಕೆ ಸ್ಪಷ್ಟವಾಗುವುದು ಏನೆಂದರೆ ಉದ್ಯೋಗಕ್ಕೆ ಪದವಿಯಷ್ಟೇ ಮುಖ್ಯವಾಗಿ ಕೌಶಲವೂ ಅಗತ್ಯ ಎಂಬುದು.
ಕಾರಣ ಏನಿರಬಹುದು?
ಉನ್ನತ ಶಿಕ್ಷಣ ಪಡೆದವರಲ್ಲಿ ಕೌಶಲದ ಕೊರತೆ ಕಂಡು ಬರಲು ಹಾಗೂ ಉನ್ನತ ಪದವೀಧರರು ಉದ್ಯೋಗ ಕ್ಷೇತ್ರದಲ್ಲಿ ಸೋಲಲು ಕಾರಣ ಏನಿರಬಹುದು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡು ವುದು ಕಷ್ಟವಾದರೂ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆ ಆಗಬೇಕಾದುದು ಅಗತ್ಯ ಎಂದನಿಸುತ್ತಿದೆ. ಜತೆಗೆ ಯುವಜನತೆ ಕೂಡ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಶಿಕ್ಷಣ ಪಡೆಯಲು ಮುಂದಾಗಬೇಕೇ ಹೊರತು ತಮಗೆ ಒಗ್ಗದ ವಿಷಯದ ಕೋರ್ಸ್ಗಳನ್ನು ಬಲವಂತವಾಗಿ ಮಾಡಬಾರದು. ಯಾವ ಕೋರ್ಸ್ ಮಾಡಿದರೂ ಅದರಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಆದರೆ ಕೌಶಲವಿಲ್ಲದಿದ್ದರೆ, ಆಸಕ್ತಿ ಇಲ್ಲದಿದ್ದರೆ ನಾವು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಹೆಚ್ಚಿನವರು ಉತ್ತಮ ಕೋರ್ಸ್ ಎಂದು ಅದರತ್ತ ಆಕರ್ಷಿತರಾಗಿ ಅಥವಾ ಮನೆಯವರ ಒತ್ತಾಯಕ್ಕೆ ಮಣಿದು ಕೆಲವು ಕೋರ್ಸ್ಗಳನ್ನು ಮಾಡುವುದಿದೆ. ತಲೆಗೆ ಹತ್ತದಿದ್ದರೂ ಕಷ್ಟಪಟ್ಟು ಹೇಗೋ ಕೋರ್ಸ್ ಪೂರ್ತಿಗೊಳಿಸಿರುತ್ತಾರೆ. ಹಾಗೆಂದು ಅವರು ಆ ವಿಷಯದಲ್ಲಿ ಪರಿಣತರಾಗಿರುವುದಿಲ್ಲ. ಹೇಗೋ ಪರೀಕ್ಷೆ ತೇರ್ಗಡೆ ಆಗಿರುತ್ತಾರೆ. ಪರೀಕ್ಷೆಗೆ ಬೇಕಾಗುವ ರೀತಿಯಲ್ಲಿ ಅವರು ಕಲಿತಿರುತ್ತಾರೆಯೇ ಹೊರತು ವಿಷಯದ ಬಗ್ಗೆ ಜ್ಞಾನ ಹೊಂದಿರುವುದಿಲ್ಲ. ಇಂಥವರು ಮುಂದೆ ಉದ್ಯೋಗ ಕ್ಷೇತ್ರದಲ್ಲಿ ನಿಜವಾದ ಸವಾಲು, ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದು ವಾಸ್ತವ.
ಪರೀಕ್ಷೆ ಕೇಂದ್ರಿತ ಕಲಿಕೆ ಸರಿಯಲ್ಲ :
ಈಗೀಗ ಎಲ್ಲ ಕಡೆಯೂ ಪರೀಕ್ಷೆ ಕೇಂದ್ರಿತ ಕಲಿಕೆಯೇ ಎದ್ದು ಕಾಣುತ್ತದೆ. ಪರೀಕ್ಷೆ ಗೆದ್ದರೆ ಜೀವನವನ್ನೇ ಗೆದ್ದಂತೆ ಎಂಬ ಭ್ರಮೆ ಸರಿಯಲ್ಲ. ಶಿಕ್ಷಕರು ಕೂಡ ಪರೀಕ್ಷೆಗೆ ಬಂದೇ ಬರುತ್ತವೆ ಎಂದು ಕೆಲವು ಪ್ರಶ್ನಾವಳಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಅದನ್ನು ಹಠಕ್ಕೆ ಬಿದ್ದವರಂತೆ ಕಲಿತು ಪರೀಕ್ಷೆ ತೇರ್ಗಡೆಯಾಗುವ ಮಕ್ಕಳಿಗೆ ಒಂದಿಷ್ಟು ತಿರುಚಿ ಕೇಳುವ ಪ್ರಶ್ನೆಗಳಿಗೆ ಉತ್ತರ ಬರೆಯಲಾಗುವುದಿಲ್ಲ. ಅವರು ಸೀಮಿತ ರೂಪದ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಿದ್ಧರಿರುತ್ತಾರೆಯೇ ಹೊರತು ಬುದ್ಧಿಶಕ್ತಿ ಬಳಸಿ ಪ್ರಶ್ನೆಗಳಿಗೆ ಉತ್ತರ ಬರೆಯುವ ಶಕ್ತಿ ಹೊಂದಿರುವುದಿಲ್ಲ.
ಕಡಿಮೆಯೇ. ನಿರಂತರ ಅಧ್ಯಯನ ಶೀಲರಾಗಿರುವುದು, ಹೊಸ ಹೊಸ ವಿಷಯಗಳನ್ನು ತಿಳಿದುಕೊಂ ಡಿರುವುದನ್ನು ಈಗಿನ ಉದ್ಯೋಗ ಕ್ಷೇತ್ರ ಬೇಡುತ್ತದೆ. ಉದ್ಯೋಗಕ್ಕೆ ಸೇರಿಕೊಂಡ ಬಳಿಕವೂ ಸ್ವಅಧ್ಯಯನದಿಂದಲೇ ಹೆಚ್ಚು ಯಶಸ್ಸು ಗಳಿಸಿ ಪದೋನ್ನತಿಯಾಗುತ್ತಾ ಎತ್ತರಕ್ಕೇರುವ ಅವಕಾಶವೂ ಇದೆ.
ಭಾರತದಂಥ ಯುವಜನರ ದೇಶದಲ್ಲಿ ಕೌಶಲದ ಕೊರತೆ ಇದೆ ಎಂಬುದು ಆತಂಕದ ಸಂಗತಿ. ಮುಂದಿನ ದಿನಗಳಲ್ಲಿ ಜಾಗತಿಕ ಉತ್ಪಾದನ ಕೇಂದ್ರವಾಗಲಿರುವ ಭಾರತವು ಈ ಸಮಸ್ಯೆಯನ್ನು ದೀರ್ಘಕಾಲ ಉಳಿಸಿಕೊಳ್ಳಬಾರದು. ಅದಕ್ಕೆ ಹೆತ್ತವರು, ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಎಲ್ಲರ ಕೊಡುಗೆಯೂ ಅಗತ್ಯವಾಗಿದೆ.
ಪುತ್ತಿಗೆ ಪದ್ಮನಾಭ ರೈ