ಮಿಜಾರಿನ ಶೋಭಾವನ ಆವರಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನೂತನವಾಗಿ ಆರಂಭವಾಗಿರುವ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಸೈನ್ಸ್ ಅಂಡ್ ಟೆಕ್ನಾಲಜಿ ಕಾಲೇಜು ಈ ಶೈಕ್ಷಣಿಕ ವರ್ಷದಿಂದಲೇ ಬಹು ಬೇಡಿಕೆಯ ನಾಲ್ಕು ವರ್ಷದ ಅವಧಿಯ ಬಿಎಸ್ಸಿ (ಆನರ್ಸ್) ಅಗ್ರಿಕಲ್ಚರ್ ಮತ್ತು ಬಿ.ಟೆಕ್ ಫುಡ್ ಟೆಕ್ನಾಲಜಿ ಕೋರ್ಸ್ ಗಳನ್ನು ಪ್ರಾರಂಭಿಸುತ್ತಿದೆ. ಈ ಕಾಲೇಜು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ್ ಕೃಷಿ ಮತ್ತು ಹಾರ್ಟಿಕಲ್ಚರ್ ವಿಜ್ಞಾನಗಳ ವಿಶ್ವವಿದ್ಯಾಲಯದಡಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಇದು ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಕೃಷಿ ವಿಜ್ಞಾನ ಹಾಗೂ ಆಹಾರ ತಂತ್ರಜ್ಞಾನ ಶಿಕ್ಷಣವನ್ನು ನೀಡುವ ಮಹತ್ವದ ಸಂಸ್ಥೆಯಾಗಿ ಮೂಡಿಬರಲಿದ್ದು, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಪ್ರಯೋಗಶಾಲೆ, ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದ ನೈಜ ಅನುಭವ, ಆಹಾರ ಸಂಸ್ಕರಣೆ, ಸಂರಕ್ಷಣೆ ಮತ್ತು ಗುಣಮಟ್ಟ ನಿಯಂತ್ರಣ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ, ನಿಪುಣ ಬೋಧಕ ವೃಂದ ಹಾಗೂ ಕೈಗಾರಿಕಾ ತರಬೇತಿಯ ಸೌಲಭ್ಯಗಳನ್ನು ಒದಗಿಸಲಿದೆ.

ಆಳ್ವಾಸ್ ಸಂಸ್ಥೆ ಈಗಾಗಲೇ ಮಂಗಳೂರು ವಿವಿ, ರಾಜೀವ್ಗಾಂಧಿ ವಿವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿವಿಯ ಪಠ್ಯಕ್ರಮಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದ್ದು, ಇದೀಗ ಕೆಳದಿ ಶಿವಪ್ಪ ನಾಯಕ್ ಕೃಷಿ ಮತ್ತು ಹಾರ್ಟಿಕಲ್ಚರ್ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಕೃಷಿ ಮತ್ತು ಆಹಾರ ತಂತ್ರಜ್ಞಾನ ವಿಭಾಗಗಳ ಸೇರ್ಪಡೆ ಸಂಸ್ಥೆಯ ಶೈಕ್ಷಣಿಕ ಬೆಳವಣಿಗೆಯಲ್ಲಿ ಮತ್ತೊಂದು ಮೈಲುಗಲ್ಲಾಗಲಿದೆ. ಕೃಷಿ ವಿಜ್ಞಾನ ಮತ್ತು ಆಹಾರ ತಂತ್ರಜ್ಞಾನ ಪದವಿ ಕೋರ್ಸನ್ನು ಪ್ರಾರಂಬಿಸಲು ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ನೀಡಿದ ಕರ್ನಾಟಕ ರಾಜ್ಯದ ಕೃಷಿ ಸಚಿವರಾದ ಚಲುವರಾಯಸ್ವಾಮಿ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ್ ಕೃಷಿ ಮತ್ತು ಹಾರ್ಟಿಕಲ್ಚರ್ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್ ಸಿ ಜಗದೀಶ, ಕುಲ ಸಚಿವರಾದ ಡಾ. ಕೆ.ಸಿ ಶಶಿಧರ್ ರವರ ಸಹಕಾರವನ್ನು ಸ್ಮರಿಸಲಾಗಿದೆ.
2025 ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಯನ್ನು (9448458334, 8050585606) ಸಂಪರ್ಕಿಸಲು ಕೋರಲಾಗಿದೆ. ಕಾಲೇಜು ಕೋಡ್ (ಫಾರ್ಮ ಸೈನ್ಸ್) 038 ಆಗಿರಲಿದೆ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡೀಸ್, ಆಳ್ವಾಸ್ ಪದವಿ (ಸ್ವಾಯತ್ತ) ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಇದ್ದರು.
 
		




























































































 



 
 
 
 
 
 
 
 





