ಬಂದರು, ವಿಮಾನಯಾನ, ರೈಲ್ವೇ, ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನೊಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ, ಆರೋಗ್ಯ, ಧಾರ್ಮಿಕ, ಉದ್ಯಮ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುಂದುವರಿದಿದ್ದು, ಈ ರೀತಿಯಾಗಿ ಸಮಗ್ರ ಅಭಿವೃದ್ಧಿ ಕಂಡ ನಗರ ದೇಶದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ವಿಭಿನ್ನತೆಯಿಂದ ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ನಗರದ ಓಷಿಯನ್ ಪರ್ಲ್ ಹೊಟೇಲ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜ.5 ರಿಂದ ಅಡ್ಯಾರ್ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಕ್ಯಾ. ಪ್ರಾಂಜಲ್ ಗೌರವಾರ್ಥ ನಡೆಯಲಿರುವ ‘ಕೆಯುಡಬ್ಲ್ಯುಜೆ ಬ್ರ್ಯಾಂಡ್ ಮಂಗಳೂರು ರೋಹನ್ ಕಪ್’ ಟ್ರೋಪಿ ಅನಾವರಣಗೊಳಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ವಿಭಿನ್ನತೆಯೇನೆಂದರೆ ಸಾಂಸ್ಕೃತಿಕ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳು ಮುಂದುವರಿದಿದ್ದು, ದೇಶದಲ್ಲಿ ಇಂತಹ ಸ್ವಚ್ಛ, ಸೌಹಾರ್ದತೆಯ ಮತ್ತೊಂದು ನಗರವನ್ನು ಕಾಣಲು ಸಾಧ್ಯವಿಲ್ಲ. ಇಂತಹ ನಾಡಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ ನಡೆಯುತ್ತಿರುವುದು ಬ್ರ್ಯಾಂಡ್ ಮಂಗಳೂರಿಗೆ ಮತ್ತಷ್ಟು ಪೂರಕ ಎಂದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, 4 ವರ್ಷದ ಹಿಂದೆ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನವನ್ನು ಯಶಸ್ವಿಯಾಗಿ, ಮಾದರಿಯಾಗಿ ನಡೆಸಿದ ಹೆಗ್ಗಳಿಕೆ ಪಡೆದುಕೊಂಡ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದ ಅವಕಾಶ ಸಿಕ್ಕಿರುವುದು ನಿಜಕ್ಕೂ ನಮಗೆ ಹೆಮ್ಮೆ. ಕ್ರಿಕೆಟ್ ಪಂದ್ಯಾಟ ಹಾಗೂ ಪತ್ರಕರ್ತರ ಮಹಾಸಭೆಗೆ ರಾಜ್ಯದ ನಾನಾ ಜಿಲ್ಲೆಯಿಂದ ಬರುವ 600ಕ್ಕೂ ಅಧಿಕ ಪತ್ರಕರ್ತರು ಆಗಮಿಸುತ್ತಿದ್ದು ಅವರಿಗೆ ಆತಿಥ್ಯ ಸೇರಿದಂತೆ ಯಶಸ್ವಿ ಕ್ರೀಡಾಕೂಟ ಆಯೋಜಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ಕುಟ್ಟಪ್ಪ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು. ಪ್ರೆಸ್ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ. ಭಟ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಧನ್ಯವಾದವಿತ್ತರು.