ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಜನರ ಬದುಕು ಭಾವನೆಗಳ ನಡುವೆ ಗತಕಾಲದಿಂದಲೂ ಗ್ರಾಮೀಣ ಕೃಷಿಕರು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಪರಿಕಗಳು ನೇಪಥ್ಯಕ್ಕೆ ವಾಲುತ್ತಿದೆ. ನಮ್ಮ ನಾಡಿನ ಮುಖ್ಯ ಆಹಾರ ಬೆಳೆಗಳಲ್ಲೊಂದಾಗಿರುವ ಭತ್ತವನ್ನು ಮನೆಯ ಮುಂದಿರುವ ಅಂಗಳದಲ್ಲಿ ಶ್ರೀಮಂತಿಕೆಗೆ ಸಾಕ್ಷಿ ಎಂಬಂತೆ ಬೃಹತ್ ಆಕಾರದ ದೇಶಿ ಸೊಗಡಿನ ತಿರಿ ಸಂಪತ್ತಿನ, ಸಿರಿತನದ ಮನೆತನದ ಗುತ್ತಿನ ಪ್ರತೀಕವಾಗಿದ್ದ ಕಾಲವೊಂದಿತ್ತು. ತಿರಿ ಕಟ್ಟುವ ಪದ್ಧತಿ ಅನಾದಿ ಕಾಲದಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ವಿಧಾನವನ್ನು ಭತ್ತದ ಕಣಜ ಕಟ್ಟುವಿಕೆ ಅಥವಾ ಗ್ರಾಮ್ಯ ಭಾಷ್ಯೆಯಲ್ಲಿ ತಿರಿ ಕಟ್ಟುವುದು ಎಂದು ಕರೆಯುತ್ತಾರೆ. ಆದರೆ ಈ ಸಂಪ್ರದಾಯ ಈ ಕಾಲಘಟ್ಟದಲ್ಲಿ ನಿಧಾನವಾಗಿ ಕಣ್ಮರೆಯಾಗುತ್ತಿರುವುದು ವಿಷಾದನೀಯ.
ಎರಡು ಮೂರು ವರ್ಷಗಳವರೆಗೆ ತಿರಿಯಲ್ಲಿ ಧಾನ್ಯ ಸಂಗ್ರಹಿಸಿಟ್ಟರೂ ಹಾಳಾಗುವುದಿಲ್ಲ. ಅಷ್ಟೇ ಅಲ್ಲದೆ ಬಹಳ ಹಿಂದೆ ಹೆಣ್ಣು ಕೊಟ್ಟು ಮದುವೆ ಮಾಡಿಸುವವರು ಮನೆಯೆದುರಿನ ತಿರಿ ನೋಡಿ ಅವರ ಶ್ರೀಮಂತಿಕೆ ಅಳೆಯುತ್ತಿದ್ದರಂತೆ. ತಿರಿಯೊಂದಿಗೆ ಸಂಪ್ರದಾಯಬದ್ಧ ಗೌರವದ ಶ್ರೀಮಂತಿಕೆಯ ಇತಿಹಾಸವಿತ್ತು. ಆದರೆ ಆಧುನೀಕರಣದ ಭರಾಟೆಯಲ್ಲಿ ಈ ನೈಸರ್ಗಿಕ ಹುಲ್ಲಿನ ತಿರಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಸಾಂಸ್ಕೃತಿಕ ಪರಂಪರೆಯ ಸಂಪ್ರದಾಯದ ಭತ್ತದ ತಿರಿಯು ಇತಿಹಾಸದ ಪುಟ ಸೇರಲಿದೆ.
ಒಂದೊಮ್ಮೆ ನಮ್ಮನಾಡಿನಲ್ಲಿ 4 ದಶಕಗಳ ಹಿಂದೆ ವಿಪರೀತವಾಗಿ ಭತ್ತ ಬೆಳೆಯಲು ಪ್ರಾರಂಭಿಸಿದರು. ತಿರಿ ಕಟ್ಟುವ ಕಲೆ ಖಂಡಿತ ಮರಳಿ ಬಾರದು. ನೇಪಥ್ಯಕ್ಕೆ ವಾಲುತ್ತಿರುವ ತಿರಿ ಮೆಲ್ಲ ಮೆಲ್ಲನೆ ಕಣ್ಮರೆಯಾಗುತ್ತಾ ಹೋಗಿ ಅಪರೂಪದ ವಸ್ತುಗಳ ಸಾಲಿನಲ್ಲಿ ನಿಲ್ಲುತ್ತದೆ. ಈ ಗ್ರಾಮೀಣ ಸಂಪ್ರದಾಯವನ್ನು ಜೀವಂತವಾಗಿ ಉಳಿಸಿಕೊಳ್ಳಲಾಗದು. ತಿರಿಯ ಅವನತಿಗೆ ಇನ್ನೊಂದು ಹೊಡೆತ ನೀಡಿದ್ದು ಇದರ ರಚನಾಕಾರರ ಅಂದರೆ ತಿರಿಕಟ್ಟುವವರ ಕೊರತೆಯೂ ಹೌದು. ತಿರಿಕಟ್ಟುವ ಕಲೆಯ ಕರಗತ ಮಾಡಿಕೊಂಡ ಹಿರಿಯ ತಲೆಮಾರು ಅಳಿದಿದೆ. ಜನರ ಅಭಿರುಚಿಯು ಬದಲಾಗಿದೆ. ಆಧುನಿಕತೆಯ ಭರಾಟೆಯಲ್ಲಿನ ಬಹುತೇಕ ಪುರಾತನ ದೇಶಿ ಸಂಪ್ರದಾಯ ಪರಿಕಗಳು ಮಾಯವಾಗುತ್ತಿದೆ.
ತಿರಿ ರಚನಾ ವಿಧಾನ : ತಿರಿಯನ್ನು ಸೂರ್ಯೋದಯದ ಕಾಲದಲ್ಲಿ ಕಟ್ಟಲು ಪ್ರಾರಂಬಿಸಬೇಕೆಂಬ ನಿಯಮವಿದೆ. ಗ್ರಾಮದೇವತೆ, ಮನೆದೇವರಿಗೆ, ಮನೆ ದೇವರು, ಗ್ರಾಮ ದೇವತೆಗೆ ಕಾಯಿ ತೆಗೆದಿರಿಸಿ ಅಥವಾ ಪ್ರಾರ್ಥಿಸಿ ತಿರಿ ಕಟ್ಟಲು ಪ್ರಾರಂಭಿಸುತ್ತಾರೆ. ತಿರಿ ಕಟ್ಟಿ ಆದ ಮೇಲೆ ದೀಪ ಧೂಪ ಹಾಕಿ ಪೂಜಿಸುವ ಕ್ರಮ ಇದ್ದು ಅಂದು ಮನೆಯಲ್ಲಿ ಪಾಯಸದ ಊಟ ಮಾಡುವ ಕ್ರಮವಿತ್ತು. ಸೂತಕ ಹಾಗೂ ಅಮೆ ಇದ್ದ ಸಮಯದಲ್ಲಿ ತಿರಿ ಕಟ್ಟುವುದಿಲ್ಲ. ಹಾಗಾದರೆ ಯೋಚಿಸಿ ತಿರಿಗೆ ನಮ್ಮ ಹಿರಿಯರು ಯಾವ ಸ್ಥಾನಮಾನಗಳನ್ನು ನೀಡುತ್ತಿದ್ದರು.
ತಿರಿ ಕಟ್ಟುವ ಹಿಂದಿನ ದಿನ ತಿರಿಕಟ್ಟುವ ಸ್ಥಳವನ್ನು ಸೆಗಣಿ ಹಾಕಿ ಸಾರಿಸಿ ಇಟ್ಟು ತಿರಿಬುಡಕ್ಕೆ ದೊಡ್ಡ ಒಣ ಹುಲ್ಲಿನ ಚಂಡೆ ರಚಿಸಿ ಎಷ್ಟು ಭತ್ತವಿದೆ ಅದರ ಅಂದಾಜಿನಂತೆ ಈ ಚಂಡೆ ನಿರ್ಮಿಸಿ ತಿರಿಯ ಬುಡಕ್ಕೆ ಭತ್ತದ ಹೊಟ್ಟು ಹಾಕಿ ಕೋಲು ಅಥವಾ ಬಿದಿರಿನ ಕೋಲನ್ನು ಹುಗಿದು ಮೊದಲೇ ತಯಾರಿಸಿಕೊಂಡ ಒಣ ಹುಲ್ಲನ್ನು ಕೈಯಲ್ಲಿ ಸುತ್ತಿ ಮಾಡಿದ ಮಡೆ ಬಳ್ಳಿಯನ್ನು ಸುತ್ತುತ್ತಾ ಬಂದಂತೆ ಭತ್ತವನ್ನು ಸುರಿಯುತ್ತಾರೆ. ಕೋಲುಗಳ ಮಧ್ಯ ಒಣ ಹುಲ್ಲನ್ನು ಬಹಳ ಸೂಕ್ಷ್ಮವಾಗಿರಿಸಬೇಕಾಗುತ್ತದೆ. ಭತ್ತ ಬೆಳೆದಂತೆ ಮಡೆ ಬಳ್ಳಿ ಸುತ್ತುತ್ತಾ ಕೆಳಗೆ ದೊಡ್ಡಗಾತ್ರ ನಂತರ ಮೇಲೆ ಕ್ರಮವಾಗಿ ಚಿಕ್ಕದಾಗಿ ಸುತ್ತುತ್ತಾ ಮಧ್ಯದಲ್ಲಿ ಸ್ವಲ್ಪ ಡೊಳ್ಳಾಕಾರದಲ್ಲಿ ತಯಾರಿಸಿ ಮೆಲ್ಭಾಗದಲ್ಲಿ ಗಾಳಿ ಬೆಳಕು ಬಾರದಂತೆ ಹುಲ್ಲನ್ನು ಒಂದರ ಮೇಲೊಂದರಂತೆ ಪಸರಿಸುತ್ತಾ ಹುಲ್ಲನ್ನು ಕೊಡೆಯ ಆಕಾರದಲ್ಲಿ ಕೆಳಮುಖವಾಗಿ ಹುಲ್ಲಿನ ಹಾಸು ಹಾಸಲಾಗುತ್ತದೆ.
ಸಂಪ್ರದಾಯ ಶೈಲಿಯಲ್ಲಿ ಭತ್ತವನ್ನು ಸಂರಕ್ಷಿಸಲು ಇರುವ ಕೌಶಲ್ಯ ವಿಧಾನ ಇದು. ತಿರಿಗೆ ಮುಡಿಯಂತೆ ನಿರ್ದಿಷ್ಟ ಆಕಾರ ಅಥವಾ ಗಾತ್ರವಿಲ್ಲ. ಸಣ್ಣ ತಿರಿ ದೊಡ್ಡ ತಿರಿ ಅವರವರು ಬೆಳೆದ ಬೆಳೆಯ ಆಧಾರದಲ್ಲಿ ಕಟ್ಟಲಾಗುತ್ತದೆ. ಹಿಂದೆಲ್ಲ ರೈತರು ತಾವು ಬೆಳೆದ ಆಹಾರವನ್ನು ಮನೆಯವರ ಆಹಾರಕ್ಕಾಗಿ ಮತ್ತು ಮುಂದಿನ ದಿನಗಳ ಬಿತ್ತನೆಗಾಗಿ ಸಂಗ್ರಹಿಸಿಡುತ್ತಿದ್ದರು. ಭತ್ತದ ಕೃಷಿ ಕಡಿಮೆಯಾದಂತೆ ಸಂಬಂಧಿಸಿದ ಚಟುವಟಿಕೆಗಳು ಮರೆಯಾಗುತ್ತಾ ಹೋಗಿದೆ. ಅದು ಅಲ್ಲದೆ ಬೆಳೆದ ಭತ್ತ ನೇರವಾಗಿ ಮಾರುಕಟ್ಟೆಗೆ ಹೋಗುವುದು ಅಥವಾ ಮಿಲ್ಲಿಗೊ ಅಥವಾ ಭತ್ತ ಮಾರಾಟ ಮಾಡಿ ಹಣ ಪಡೆದು ಅಕ್ಕಿ ತಂದು ಊಟಕ್ಕೆ ಬಳಸುವ ಚಾಳಿ ಎಲ್ಲೆಡೆ ರೂಢಿಯಾಗಿ ಹೋಗಿರುವುದರಿಂದ ತಿರಿ ಕಟ್ಟುವ ಅಗತ್ಯವೂ ಇಂದು ಕಾಣಿಸುತ್ತಿಲ್ಲ. ಒಟ್ಟಿನಲ್ಲಿ ನಮ್ಮ ಊರಿನ ಮನೆ ಮನೆಗಳಲ್ಲಿ ಕಾಣಸಿಗುತ್ತಿದ್ದ ತಿರಿಗಳು ನೋಡ ನೋಡುತ್ತಿದ್ದಂತೆ ನೇಪಥ್ಯದೆಡೆಗೆ ವಾಲುತ್ತಿದೆ. ಈಗ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು ಭತ್ತ ಸಂಗ್ರಹಿಸಿ ರೈತರಲ್ಲಿ ಅಷ್ಟಾಗಿ ಕಂಡು ಬರುತ್ತಿಲ್ಲ. ಕೃಷಿಯನ್ನು ಲಾಭದ ದೃಷ್ಟಿಯಿಂದ ನೋಡಲಾಗುತ್ತದೆ. ಹಿಂದೆ ರೈತರ ಮನೆಗಳಲ್ಲಿ ಎಲ್ಲಿ ನೋಡಿದಲ್ಲಿ ದಾನ್ಯ ತುಂಬಿದಂತೆ ಕಾಣುತ್ತಿತ್ತು.
ಕೆಲ ವರ್ಷಗಳ ತನಕ ಸಾಂಪ್ರದಾಯಿಕ ತಿರಿಗೆ ಆಧುನಿಕ ಸ್ಪರ್ಶ ನೀಡಿ ಚಾಪೆ, ಬಿದಿರಿನ ತಟ್ಟಿ ಬಳಸಿ ತಿರಿ ಕಟ್ಟುತ್ತಿದ್ದರು. ಈಗ ಅದು ಮಾಯವಾಗಿದೆ. ಬದಲಾದ ಕಾಲ ಘಟ್ಟದ ಸುಳಿಯಲ್ಲಿ ಸಿಲುಕಿ ಮನೆ ಖರ್ಚಿಗಾಗುವಷ್ಟು ಭತ್ತ ಬೆಳೆಯುವ ಪರಿಪಾಠ ಪ್ರಾರಂಭವಾಗಿದೆ. ಭತ್ತ ಸಂಗ್ರಹದ ಅಗತ್ಯ ಹಾಗೂ ಅನಿವಾರ್ಯತೆ ಎರಡು ಇಂದು ಇಲ್ಲ. ಒಟ್ಟಿನಲ್ಲಿ ಕೃಷಿ ಕ್ಷೇತ್ರದ ಅವನತಿ ತಿರಿಯು ಮರೆಯಾಗಲು ಕಾರಣವಾಗಿದೆ.
ಲತಾ ಸಂತೋಷ್ಶೆಟ್ಟಿ ಮುದ್ದುಮನೆ.