ತುಳು ಸಿನಿಮಡ್ ನಮ ನಾಟಕ ತೂವೊಂದಿತ್ತ. ಆಂಡ ಇತ್ತೆ ನಾಟಕೊಡೇ ಎಡ್ಡೆ ಸಿನಿಮಾ ತೂವೊಂದುಲ್ಲ. ಇದು ಅಕ್ಷರಬ್ರಹ್ಮ, ಕಲಾಮಾಣಿಕ್ಯ ವಿಜಯಕುಮಾರ್ ಕೋಡಿಯಾಲ್ಬೈಲ್ರವರ ‘ಮೈತಿದಿ’ ಸಾಮಾಜಿಕ ನಾಟಕ ನೋಡಿದ ಬಳಿಕ ಪ್ರೇಕ್ಷಕ ವರ್ಗದಿಂದ ಕೇಳಿಬರುವ ಪ್ರಶಂಸನೀಯ ಮಾತುಗಳು. ಚಾರಿತ್ರಿಕ ದಾಖಲೆಯೊಂದಿಗೆ ಮುನ್ನುಗ್ಗುತ್ತಿರುವ ‘ಶಿವಧೂತೆ ಗುಳಿಗೆ’ ಎಂಬ ಪೌರಾಣಿಕ ಕಥಾ ಹಂದರದಿಂದ ಹೊರ ಬಂದು ಸಾಮಾಜಿಕ ನೆಲೆಗಟ್ಟಿನ ಕಥೆಯಿಂದ ಹೆಣೆದ ನಾಟಕದ ಪ್ರತಿಯೊಂದು ದೃಶ್ಯವೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದಾ ಹೊಸತನ ಮೂಲಕವೇ ಹೆಸರು ಮಾಡಿರುವ ಕೋಡಿಯಾಲ್ಬೈಲ್ ಅವರ ‘ಮೈತಿದಿ’ ನಾಟಕ ನವರಸಗಳ ಮಿಳಿತದೊಂದಿಗೆ ರಂಗಭೂಮಿಗೆ ಹೊಸ ಆಯಾಮ ನೀಡಿದೆ. ಇದು ಬರೀ ನಾಟಕವಲ್ಲ ನಮ್ಮ ನಿಮ್ಮೊಳಗಿನ ಜೀವನದ ಕಥೆ. ಸಮಾಜದಲ್ಲಿ ಈಗ ನಡೆಯುತ್ತಿರುವ ಪಿಡುಗುಗಳನ್ನು ನವರಸಗಳ ಪಾಕದೊಂದಿಗೆ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಕೋಡಿಯಾಲಬೈಲ್.
ನಾಟಕದ ತುಂಬಾ ಬಡತನದ ನೋವಿದೆ. ಖುಷಿ ಇದೆ. ದೇಶಪ್ರೇಮ ಇದೆ. ಸಾಮರಸ್ಯ ಇದೆ. ನೈಜತೆ ಇದೆ. ಅಕ್ಕರೆಯೂ ಇದೆ. ಕೆಲವೊಂದು ದೃಶ್ಯದಲ್ಲಿ ಪ್ರೇಕ್ಷಕರ ಕಣ್ಣಂಚನ್ನು ತೇವಗೊಳಿಸುವ ಮ್ಯಾಜಿಕನ್ನೂ ನಿರ್ದೇಶಕರು ಮಾಡಿದ್ದಾರೆ. ನಾಟಕವನ್ನು ಪ್ರೇಕ್ಷಕರು ಕೊಂಡಾಡಲು ಮತ್ತೊಂದು ಪ್ರಮುಖ ಕಾರಣವೆಂದರೆ ರಂಗ ನಿರ್ವಹಣೆ, ವರ್ಣಾಲಂಕಾರ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ. ಇಡೀ ನಾಟಕದುದ್ದಕ್ಕೂ ಸುಂದರವಾದ ರಂಗದೃಶ್ಯ ಕಾವ್ಯವನ್ನು ಹೆಣೆದ ಕೀರ್ತಿ ಕೋಡಿಯಾಲ್ಬೈಲ್ ಅವರಿಗೆ ಸಲ್ಲುತ್ತದೆ. ಪೂರ್ವ ಮುದ್ರಿತಗೊಂಡಿರುವ ಸಂಭಾಷಣೆಯಲ್ಲಿ ಪ್ರತಿಯೊಬ್ಬ ಕಲಾವಿದನೂ ನೈಜತೆ ಪ್ರದರ್ಶಿಸುವಲ್ಲಿಯೂ ಯಶಸ್ಸಾಗಿದ್ದಾರೆ.
ಮಣಿಕಾಂತ್ ಕದ್ರಿ, ವಿಜಯ್ ಕೋಕಿಲ ಅವರ ಹಿನ್ನೆಲೆ ಸಂಗೀತದ ಸುಂದರ ದೃಶ್ಯ ಕಾವ್ಯವಾಗಿ ನಾಟಕ ಮೂಡಿಬಂದಿದೆ. ನಿರ್ದೇಶಕರು ಎಲ್ಲೂ ನಕರಾತ್ಮಕತೆಗೆ ಎಡೆಮಾಡಿಕೊಡದೆ ರಂಗ ಪ್ರಯೋಗವನ್ನು ಸುಂದರವಾಗಿ ಕೆತ್ತಿ ಮನಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅಗತ್ಯವಾಗಿ ತುಳುನಾಡಿನ ಜನ ವಿಜಯಕುಮಾರ್ ಕೊಡಿಯಾಲ್ಬೈಲ್ರವರ ‘ಮೈತಿದಿ’ಯನ್ನು ನೋಡಲೇಬೇಕು.