ಡಾ.ಕರುಣಾಕರ ಶೆಟ್ಟಿ ಪಣಿಯೂರು, ಪಾಂಗಳ ವಿಶ್ವನಾಥ ಶೆಟ್ಟಿ ಮತ್ತು ಶೃತಿ ಅಭಿಷೇಕ್ ಶೆಟ್ಟಿಯವರು ಬರೆದಿರುವ ಒಟ್ಟು 14 ಕೃತಿಗಳು ಡಿಸೆಂಬರ್ 30ರಂದು ಥಾಣೆ ಪೂರ್ವ, ಎಲ್.ಬಿ.ಎಸ್ ಮಾರ್ಗ, ರಹೇಜಾ ಗಾರ್ಡನ್ ಎದುರಿಗಿರುವ ವುಡ್ ಲ್ಯಾಂಡ್ ರಿಟ್ರೇಟ್ ಹೋಟೆಲ್ ಲ್ಲಿ ಸಂಜೆ 4 ಗಂಟೆಗೆ ಸರಿಯಾಗಿ ಲೋಕಾರ್ಪಣೆಗೊಳ್ಳಲಿದೆ.
ಬಾಳೊಂದು ಉಯ್ಯಾಲೆ ಮತ್ತು ದೂರದ ಬೆಟ್ಟ (ಕಥಾ ಸಂಕಲನ), ವಿಚಾರ ವಿಮರ್ಶೆ -4 ಅನಾವರಣ (ಕೃತಿ ಸಮೀಕ್ಷೆ), ಕಾರಂತ ಪ್ರೇಮಚಂದ್ರ ಅನುಸಂಧಾನ, ಪ್ರದೀಪ ಅನಾವರಣ, ಓದಿದ್ದು ಹೊಳೆದದ್ದು, ಪಾಂಗಳದ ಪಿಂಗಾರ (ಅಭಿನಂದನಾ ಗ್ರಂಥ) ಹೀಗೆ ಡಾ. ಕರುಣಾಕರ ಶೆಟ್ಟಿ ಪಣಿಯೂರು ಅವರ ಲೇಖನಿಯಿಂದ ರೂಪುಗೊಂಡಿರುವ ಹತ್ತು ಕೃತಿ ರತ್ನಗಳು ಬಿಡುಗಡೆಗೊಳ್ಳಲಿದೆ. ಪುಣೆಯ ಕವಿ ಪಾಂಗಾಳ ವಿಶ್ವನಾಥ ಶೆಟ್ಟಿಯವರ ಸಾವಿರ ನೆನಪಿನ ಗೂಡು, (ಬಾಲ್ಯದ ನೆನಪುಗಳು), ಮಾತು ಮುತ್ತಾದಾಗ (ಕವನ ಸಂಕಲನ), ಧರೆಗಿಳಿದ ಸೂರ್ಯ (ಕಥಾ ಸಂಕಲನ) ಕೃತಿ ಲೋಕಾರ್ಪಣೆಯಾಗಲಿದೆ. ತಂದೆಯವರ ಸಾಹಿತ್ಯದಿಂದ ಪ್ರೇರಿತರಾಗಿ ಇಂಗ್ಲಿಷ್ ನಲ್ಲಿ ‘ಅಬ್ ಸ್ಟ್ರಾಕ್ಟ್ -ಪೀಸ್ ಆಫ್ ಮೈ ಮೈಂಡ್’ ಎಂಬ ಕವನ ಸಂಕಲನವನ್ನು ರಚಿಸಿ ಯುವ ಜನರ ಮೆಚ್ಚುಗೆ ಗಳಿಸಿರುವ ಕರುಣಾಕರ ಶೆಟ್ಟಿಯವರ ಮಗಳು ಶೃತಿ ಅಭಿಷೇಕ್ ಶೆಟ್ಟಿಯವರ ಲೈಫ್ ಟೂಲ್ಸ್ (ಇಂಗ್ಲೀಷ್ ಕಾದಂಬರಿ) ಕೃತಿಯೂ ಬಿಡುಗಡೆಗೊಳ್ಳಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಹಾಸ ಶೆಟ್ಟಿ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಯಾಗಿ ಆನಂದ್ ಶೆಟ್ಟಿ ಎಕ್ಕಾರ್, ಡಿ.ಜಿ. ಬೋಳಾರ್ ಮತ್ತು ಅಡ್ವೋಕೇಟ್ ಪದ್ಮನಾಭ ಶೆಟ್ಟಿಯವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ. ಜಿ. ಪಿ. ಕುಸುಮ, ಪೊಳಲಿ ಮಹೇಶ್ ಪ್ರಸಾದ್ ಹೆಗ್ಡೆ, ಅಶೋಕ್ ವಳದೂರು, ಡಾ. ದಾಕ್ಷಾಯಿಣಿ ಯಡಹಳ್ಳಿ, ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಮತ್ತು ಸವಿತಾ ಅರುಣ್ ಶೆಟ್ಟಿಯವರು ಕೃತಿ ಪರಿಚಯ ಮಾಡಲಿದ್ದಾರೆ. ಈ ಕಾರ್ಯಕ್ರಮದ ನಂತರ ಮುಂಬಯಿ ಚುಕ್ಕಿ ಸಂಕುಲ ಸದಸ್ಯರಿಂದ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಈ ಅಕ್ಷರ ಜಾತ್ರೆಗೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.