ಬ್ರಹ್ಮಾವರ ನ. 10: ಮಕ್ಕಳು ದೇವರ ಅದ್ಭುತ ಸೃಷ್ಟಿ. ನಮ್ಮ ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಶಿಸ್ತಿನಿಂದ ಪ್ರಯತ್ನಪಟ್ಟರೆ ಎಲ್ಲವನ್ನೂಸಾಧಿಸಬಹುದು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಫಲಿತಾಂಶವು ಅತ್ಯುತ್ತಮವಾಗಿರುತ್ತದೆ ಎಂದು ದೀಪಾ ಭಂಡಾರಿಯವರು ಹೇಳಿದರು. ಅವರು ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಚಿಣ್ಣರ ಹಬ್ಬವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿದರು.
ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಈ ಜಗತ್ತಿನಲ್ಲಿ ಮಕ್ಕಳನ್ನು ಅವರ ನಗುವನ್ನು ಇಷ್ಟಪಡದವರು ಯಾರೂ ಇಲ್ಲ. ಇಂದು ಮಕ್ಕಳೆಲ್ಲರೂ ವರ್ಣ, ಚಿತ್ತಾರಗಳ ಬಟ್ಟೆಗಳಲ್ಲಿ ಕಾಮನಬಿಲ್ಲಿನಂತೆ ಪ್ರಕಾಶಿಸುತ್ತಿದ್ದಾರೆ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಕ್ಕಳಿಗೆಲ್ಲ ಶುಭ ಹಾರೈಸಿ ಪ್ರತಿಯೊಬ್ಬರಲ್ಲೂ ಒಂದು ಮಗುವಿನ ಮನಸ್ಸಿರುತ್ತದೆ ಆದರೆ ಕೆಲಸದ ಒತ್ತಡದಲ್ಲಿ ಅದನ್ನು ಅಭಿವ್ಯಕ್ತಿಪಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳೆಲ್ಲರೂ ತಮ್ಮ ಬಾಲ್ಯವನ್ನು ಅಹ್ಲಾದಿಸಬೇಕು. ಜೊತೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂದರು. ಶಾಲಾ ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಪ್ರತಿಭಾ ಪ್ರದರ್ಶನ ಮನೋರಂಜನೆಯ ರಸದೌತಣವನ್ನು ಉಣಬಡಿಸಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ನಾಗರಾಜ ಸೋಮಯಾಜಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚಿರಂತ್ ಶೆಟ್ಟಿ, ಕಾರ್ಯದರ್ಶಿ ಆದರ್ಶ್ ಆಚಾರ್ಯ, ಶಂಕರ್, ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.