ಉಡುಪಿ ಭಾಗದಲ್ಲಿ ನಡೆಯುವ ದೇವರ ಮತ್ತು ಜನ್ನ ಕಂಬಳದಲ್ಲಿ ಅನೇಕ ನಂಬಿಕೆ ಆಚರಣೆ ಇದೆ. ಬ್ರಹ್ಮಾವರ ಬಳಿ ಚೇರ್ಕಾಡಿಯಲ್ಲಿ ಮಾತ್ರ ಇರುವ ಜನ್ನ ಕಂಬಳದಲ್ಲಿ ಒಂದು ವಿಶೇಷತೆ. ಗದ್ದೆಯಲ್ಲಿ ಕಂಬಳದ ಕೋಣಗಳ ಓಟ ನಡೆಯುತ್ತಿದ್ದರೆ ಕಂಬಳ ಮನೆತನದ ಪಟ್ಟದ ಅರಸರು ರಾಜ ಪೋಷಾಕಿನಲ್ಲಿ ಕಂಬಳ ಗದ್ದೆಯ ಒಂದು ವಿಶೇಷ ಕಟ್ಟೆಯಲ್ಲಿ ಕುಳಿತು ಕಂಬಳವನ್ನು ವೀಕ್ಷಿಸುತ್ತಾರೆ.
ಆಗಮಿಸಿದ ಕೋಣಗಳ ಓಟ ಮುಗಿಸಿ ಕೊನೆಯದಾಗಿ ಕಂಬಳ ಮನೆಯ ಕೋಣಗಳು ಗದ್ದೆಯಲ್ಲಿ ಓಟ ಮುಗಿಸಿದ ಬಳಿಕ ಮುಕ್ತಾಯದ ಒಂದು ಸನ್ನಿವೇಶ ಅತೀ ಕೂತೂಲಕಾರಿ. ತುಳುನಾಡಿನ ಮೂಲ ನಿವಾಸಿಗಳಾದ ಕೊರಗ ಜನಾಂಗದ ವ್ಯಕ್ತಿ, ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಡೋಲು ವದನದೊಂದಿಗೆ ಕೈಯಲ್ಲಿ ಒಂದು ದಂಡವನ್ನು ಹಿಡಿದು ಕಂಬಳ ಗದ್ದೆಗೆ ಬರುತ್ತಾರೆ.
ತಲತಲಾಂತರದಿಂದ ಬಂದಂತೆ ಮನೆತನದ ಹಿರಿಯ ವ್ಯಕ್ತಿ ಕಂಬಳ ಗದ್ದೆಗೆ ಮೊದಲು 5 ಅಡಕೆಯನ್ನು ಎಸೆಯುತ್ತಾರೆ. ಕೊನೆಯದಾಗಿ ತೆಂಗಿನ ಕಾಯಿಯನ್ನು ಎಸೆಯುತ್ತಾರೆ. ಗದ್ದೆಯಲ್ಲಿ ಇರುವ ವ್ಯಕ್ತಿ ಆ ತೆಂಗಿನ ಕಾಯಿಯನ್ನು ತನ್ನ ದಂಡದಿಂದ ಹೊಡೆಯಬೇಕು. ಕಾಯಿ ಹೊಡೆಯುದು ಹೆಚ್ಚುಕಮ್ಮಿಯಾದಲ್ಲಿ ಕುಟುಂಬಕ್ಕೆ ಅಥವಾ ಮುಖ್ಯಸ್ಥರಿಗೆ ಅಪಾಯ ಎನ್ನುವ ನಂಬಿಕೆ ಇದೆ. ಈ ಬಾರಿ ಚೇರ್ಕಾಡಿ ದೊಡ್ಡಮನೆ ಜಯರಾಮ ಹೆಗ್ಡೆಯವರು ತೆಂಗಿನ ಕಾಯಿಯನ್ನು ಎಸೆದು ಸಂಪ್ರದಾಯವನ್ನು ಮುನ್ನಡೆಸಿದರು.
ಕೃಪೆ – ಬ್ಯೂಟಿ ಆಫ್ ತುಳುನಾಡ್