ದೇವರ ಸ್ವಂತ ನಾಡಾದ ಕೇರಳ ರಾಜ್ಯದ ಉತ್ತರ ಭಾಗದ ತುಳುನಾಡಿನಲ್ಲಿ ಕುಂಬಳೆ ಸೀಮೆ ಪ್ರಸಿದ್ಧವಾದುದು. ಈ ಸೀಮೆಯ ಉದ್ದಗಲಕ್ಕೂ ತುಳುನಾಡಿನ ರಾಜದೈವಗಳೆಂದು ಪ್ರಖ್ಯಾತವಾದ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ಹಲವು ದೈವಸ್ಥಾನಗಳು ಕಾಣಸಿಗುತ್ತವೆ. ಬೆಳೆಂಜದ ಕಿನ್ನಿಗೋಳಿ ಮಾಡವು ಇಂತಹ ಕಾರಣಿಕ ದೈವಸ್ಥಾನಗಳಲ್ಲಿ
ಒಂದಾಗಿದೆ.
ಬಹಳ ವರ್ಷಗಳ ಹಿಂದೆ ಬಾರಕೂರಿನ ರಾಜನಿಗೆ ಮಕ್ಕಳಿಲ್ಲದೆ ಆತ ತನ್ನ ಸೊಸೆಯನ್ನು ಅಳಿಯ ಸಂತಾನ ಪದ್ಧತಿಯ ಪ್ರಕಾರ ರಾಣಿಯನ್ನಾಗಿ ನೇಮಿಸುತ್ತಾನೆ. ಆಕೆ ಹಲವು ವರ್ಷಗಳ ಕಾಲ ರಾಜ್ಯಭಾರ ಮಾಡುತ್ತಾಳೆ. ಅವಳ 9 ಮಕ್ಕಳಲ್ಲಿ ಒಬ್ಬಳು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಇತರರೆಲ್ಲ ಯುದ್ಧದಲ್ಲಿ ಮಡಿಯುತ್ತಾರೆ. ಸೋಲಿನಿಂದ ಅವಮಾನಿತರಾಗಿ ಆ ಮೂವರು ಕಾಶಿಯಾತ್ರೆ ಕೈಗೊಳ್ಳುತ್ತಾರೆ. ಕಾಶಿ ವಿಶ್ವನಾಥನನ್ನು ಒಲಿಸಿಕೊಂಡು ಪೂಮಾಣಿ – ಕಿನ್ನಿಮಾಣಿ, ದೈಯಾರೆ ಎಂಬ ಹೆಸರನ್ನು ಪಡೆದು, ಕಾರಣಿಕ ಶಕ್ತಿಯನ್ನು ಗಳಿಸಿ ಅಲ್ಲಿಂದ ದಕ್ಷಿಣಕ್ಕೆ ಪ್ರಯಾಣ ಬೆಳೆಸುತ್ತಾರೆ. ಹಾಗೆ ಭಗಂಡ ಕ್ಷೇತ್ರ (ಭಾಗಮಂಡಲ)ಕ್ಕೆ ತಲುಪಿ ಕಾವೇರಮ್ಮನ ದರ್ಶನ ಪಡೆದು ಘಟ್ಟ ಇಳಿದು ಬರುತ್ತಾರೆ.
ಬರುತ್ತಿರುವಾಗ ಸುಬ್ರಹ್ಮಣ್ಯ ದೇಗುಲದ ಧ್ವಜಕ್ಕೆ ಬಾಣಹೂಡಿ ನಾಶ ಮಾಡಿದ ಕಾರಣದಿಂದ ದೇವರಿಗೂ ದೈವಗಳಿಗೂ ಘೋರ ಯುದ್ಧ ನಡೆಯುತ್ತದೆ. ಹಲವು ದಿನಗಳ ಕಾಲ ನಡೆದ ಯುದ್ಧದಲ್ಲಿ ಎರಡು ತಂಡಗಳೂ ಸಮಬಲರೆಂದು ತೋರಿ ಒಪ್ಪಂದವೊಂದಕ್ಕೆ ಬರುತ್ತಾರೆ. ಆ ಒಪ್ಪಂದದಂತೆ ತುಳುನಾಡಿನಲ್ಲಿ ನೆಲೆನಿಲ್ಲುವ ಇಂಗಿತವನ್ನು ಶ್ರೀ ದೈವಗಳು ವ್ಯಕ್ತಪಡಿಸಿದಾಗ ಸುಬ್ರಹ್ಮಣ್ಯ ದೇವರು ಪಡುಭಾಗಕ್ಕೆ ಹೋಗಿರೆಂದು ಅಪ್ಪಣೆ ಕೊಡಿಸುತ್ತಾರೆ. ತಂಗಿ ದೈಯಾರೆಯನ್ನು ಹೊಸಳಿಗಮ್ಮ ಎಂಬ ಹೆಸರಿನಲ್ಲಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೆಲೆಗೊಳಿಸಿ ದೈವಗಳು ತುಳುನಾಡಿನಲ್ಲಿ ಸಂಚಾರಕ್ಕೆ ಹೊರಡುತ್ತಾರೆ. ಹಾಗೆ ಪಂಜ ಪಡುಮಲೆಯಾಗಿ ಬೆಳಿಂಜದ ಬನತ್ತಡಿ , ಎಂಬಲ್ಲಿಗೆ ಬಂದು ವಿಶ್ರಮಿಸುತ್ತಾರೆ. ಆ ಕಾಲದಲ್ಲಿ ಬೆಳಿಂಜವು ಬಲ್ಲಾಳ ರಾಜವಂಶದವರ ಅಧೀನದಲ್ಲಿತ್ತು.
ಅವರ ಅರಮನೆಯು, ಇಂದಿನ ಮೇಗಿನ ಬೆಳಿಂಜ ತರವಾಡು ಮನೆಯಿರುವ ಪ್ರದೇಶದಲ್ಲಿತ್ತು. ರಾಜರಿಗೆ ಕನಸಿನಲ್ಲಿ ಕಾಣಿಸಿಕೊಂಡ ದೈವಗಳು ಬೆಳಿಂಜದಲ್ಲಿ ಮಾಡ ನಿರ್ಮಿಸಲು ಆಜ್ಞೆಯಿತ್ತರು. ಬೆಳಿಂಜದಲ್ಲಿ ಬೀರ್ಣಾಳ್ವನನ್ನು ಪಟ್ಟದ ದೈವವಾಗಿ ಸ್ವೀಕರಿಸಿದ ದೈವಗಳು ತುಳುನಾಡಿನ ಇತರ ಕಡೆಗಳಲ್ಲಿ ಮಾಡ ನಿರ್ಮಿಸಲು ಯೋಗ್ಯ ಸ್ಥಳ ಗುರುತಿಸಿ ಬರುವಂತೆ ಬೀರ್ಣಾಳ್ವರಿಗೆ ಜವಬ್ದಾರಿ ವಹಿಸಿಕೊಟ್ಟರು. ಶ್ರೀ ದೈವಗಳು ತುಳುನಾಡಿನೆಲ್ಲೆಡೆ ಏಕಕಾಲದಲ್ಲಿ ಮಾಡ ನಿರ್ಮಿಸುವ ಸಂಕಲ್ಪವನ್ನು ಮಾಡಿದ್ದರು. ಬೆಳಿಂಜದಿಂದ ಪಡುಭಾಗಕ್ಕೆ ಹೋದ ಬೀರ್ಣಾಳ್ವರು ಬರುವುದು ತಡವಾದಾಗ ಅವರ ನಿರೀಕ್ಷೆಯಲ್ಲಿ ಪಡುಭಾಗಕ್ಕೆ ನೋಡುತ್ತಾ ನಿಂತಿದ್ದ ಶ್ರೀ ದೈವಗಳಿಗೆ ಬಲ್ಲಾಳ ರಾಜರು ಪಶ್ಚಿಮಾಭಿಮುಖವಾಗಿ ಕಿನ್ನಿಗೋಳಿ ಮಾಡ ನಿರ್ಮಿಸಿದರೆಂದೂ, ತಡವಾಗಿ ಬಂದ ಬೀರ್ಣಾಳ್ವರಿಗೆ ಮಾಡದ ಹೊರಗೆ ಸ್ಥಳ ಕಲ್ಪಿಸಿದರೆಂದು ಪ್ರತೀತಿ. ಕಾಲಕ್ರಮೇಣ ಶ್ರೀ ಕ್ಷೇತ್ರದ ಆಡಳಿತವು ಮೇಗಿನ ಬೆಳಿಂಜ ಮತ್ತು ಕೆಳಗಿನ ಬೆಳಿಂಜ ಬಂಟ ಮನೆತನದವರಿಗೆ ಹಸ್ತಾಂತರಿಸಲ್ಪಟ್ಟಿತು.
ಮುಂದೆ ಎರಡೂ ಮನೆಯವರು ಮೊಕ್ತೇಸರರಾಗಿ ಇಲ್ಲಿನ ಪೂಜೆ ಪುರಸ್ಕಾರಗಳು ಕ್ರಮ ಪ್ರಕಾರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಹಿಂದಿನ ಕಾಲದ ವೈಭವದ ದಿನಗಳಲ್ಲಿ ಮೇಗಿನ ಬೆಳಿಂಜ ಮತ್ತು ಕೆಳಗಿನ ಬೆಳಿಂಜ ಮನೆತನದ ಯಜಮಾನರು ಮೈಂದ ಮತ್ತು ಪೆರ್ಗಡೆಯಾಗಿದ್ದರು. ಇಂದಿಗೂ ಈ ಮನೆತನದವರನ್ನು ರಾಜದೈವಗಳು ಅಣಿ ಕಟ್ಟಿ ಪೀಠದಲ್ಲಿ ಸುಖ ವಿಶ್ರಾಂತಿ ಹೊಂದಿ ಮೈಂದ, ಪೆರ್ಗಡೆ ಎಂದು ಕರೆಯುವುದು ರೂಢಿ. ಇಲ್ಲಿ ಊರ ಪರವೂರ ಭಗವದ್ಭಕ್ತರ ಸಹಕಾರದೊಂದಿಗೆ ಪ್ರತಿವರ್ಷ ಮೀನ ಮಾಸ 7 ರಂದು ಕೊಡಿ ಏರಿ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವವು ಬಹು ವಿಜೃಂಭಣೆಯಿಂದ ಜರಗುತ್ತದೆ.
ಕೃಪೆ – ಬ್ಯೂಟಿ ಆಫ್ ತುಳುನಾಡು