ಬಂಟ ಸಮಾಜದ ಸಾಧಕರ ಕೀರ್ತಿ ವಿವಿಧ ಕ್ಷೇತ್ರಗಳಲ್ಲಿ ಜಗಜ್ಜಾಹೀರಾಗಿದ್ದು, ಇವರು ಪ್ರವೇಶಿಸಿದ ಕ್ಷೇತ್ರಗಳ ಪ್ರತಿಷ್ಠೆಯನ್ನೂ ಹೆಚ್ಚಿಸಿ ನಮ್ಮ ಸಮಾಜ ಇಂದು ವಿಶ್ವಮಾನ್ಯ ಎನಿಸಿದ್ದರೆ ಅದರ ಹಿಂದೆ ನಮ್ಮವರ ಛಲ, ಪರಿಶ್ರಮ, ಏಕಾಗ್ರತೆಗಳ ಅರಿವಾಗದಿರದು. ಇಂಥಹ ಸಾಧಕರ ಸಾಲಿಗೆ ಸೇರ್ಪಡೆಯಾಗಿ ರಾಸಾಯನಿಕ ಉತ್ಪನ್ನಗಳ ಕ್ಷೇತ್ರ ಸಂಬಂಧಿ ಕೈಗಾರಿಕೋದ್ಯಮದಲ್ಲಿ ಪ್ರಸಿದ್ಧಿ ಪಡೆದ ಬೊಲ್ಯಗುತ್ತು ವಿವೇಕ್ ಶೆಟ್ಟರ ಹೆಸರು ಅತೀ ಗೌರವ ಭಾವದಿಂದ ಉಲ್ಲೇಖಿಸಲ್ಪಡುತ್ತದೆ. ಶ್ರೀಯುತರು ಯಾವುದೇ ಪರಿಸರ ಮಾಲಿನ್ಯಕ್ಕೆ ಕಾರಣವಾಗಿ ಜನರ ಸ್ವಾಸ್ಥ್ಯ ಕೆಡದಂತೆ ರಾಸಾಯನಿಕ ಪದಾರ್ಥಗಳ ಉತ್ಪಾದನೆಗೆ ನವೀನ ರೀತಿಯ ತಂತ್ರಜ್ಞಾನವನ್ನು ಬಳಸುವುದರ ಮೂಲಕ ಸಾರ್ವಜನಿಕ ಸ್ವಾಸ್ಥ್ಯಕ್ಕೆ ಪ್ರಾಶಸ್ತ್ಯ ನೀಡುವ ಮಾನವ ಕಾಳಜಿಯಿಂದ ಗುರುತಿಸಿಕೊಂಡಿದ್ದಾರೆ.
ಮಂಗಳೂರಿನ ಬಹು ಪ್ರತಿಷ್ಠಿತ ಬೊಲ್ಯಗುತ್ತು ಮನೆತನದಲ್ಲಿ ಜನ್ಮ ತಾಳಿದ ವಿವೇಕ್ ಶೆಟ್ಟರು ಬಾಲ್ಯದ ದಿನಗಳಲ್ಲೇ ಮುಂಬಯಿ ನಗರ ಸೇರಿಕೊಂಡರು. ಇಲ್ಲಿಯೇ ಶಿಕ್ಷಣ ಪಡೆದು ಓರ್ವ ಉನ್ನತ ಶಿಕ್ಷಣ ಪಡೆದ ಯುವಕನಾಗಿ ತನ್ನ ಕನಸುಗಳಿಗೆ ಸಾಕಾರ ರೂಪ ಕೊಡಬಹುದಾದ ಅನುಭವ ಸಂಪತ್ತನ್ನು ವಿವಿಧ ಮೂಲಗಳಿಂದ ಸಂಪಾದಿಸಿಕೊಂಡರು. ಮುಂಬಯಿಯಲ್ಲಿ ಅಮೇರಿಕಾ ಮೂಲದ ಕೆಮಿಕಲ್ಸ್ ಕಂಪನಿಯೊಂದರಲ್ಲಿ ದಶಕಕ್ಕೂ ಹೆಚ್ಚು ಕಾಲ ದುಡಿದು ಮಹತ್ವಪೂರ್ಣ ಅನುಭವ ಪಡೆದು ಇದೀಗ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾಗಿ ವಿಸ್ವಾತ್ ಕೆಮಿಕಲ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ತನ್ನ ಮಗ ಅಳಿಯ ಇವರ ಸಂಸ್ಥೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಮುಂಬಯಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ವಾಣಿಜ್ಯ ಪದವಿಯನ್ನು ಸಂಪಾದಿಸಿಕೊಂಡ ಶ್ರೀಯುತರು ತುಂಬಾ ಎಚ್ಚರಿಕೆಯಿಂದ ಹಾಗೂ ಉತ್ತಮ ಉಸ್ತುವಾರಿ ವಹಿಸುವುದರ ಮೂಲಕ ವಿಸ್ವಾತ್ ಕೆಮಿಕಲ್ಸ್ ಕಂಪನಿಯನ್ನು ಒಂದು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಿದ್ಧಪಡಿಸಿ ಪೂರೈಸುವ ಸಂಸ್ಥೆ ಎಂಬ ಪ್ರಶಂಸೆಗೆ ಪಾತ್ರವಾಯಿತು. ಶ್ರೀಯತರಲ್ಲಿ ಉತ್ತಮ ಸಂಸ್ಕಾರ, ಸಮಾಜನೀತಿ ಪ್ರಭಾವಿ ನಾಯಕತ್ವಗಳಿದ್ದ ಕಾರಣ ತನ್ನ ಬಿಡುವಿಲ್ಲದ ವ್ಯವಹಾರಗಳ ನಡುವೆಯೂ ಮುಂಬಯಿ ನಗರ ನಿರ್ಮಲೀಕರಣ ಅಭಿಯಾನ ಹಾಗೂ ಉದ್ಯಾನ ನಿರ್ಮಾಣ, ನೀರು ಪೂರೈಕೆ ಹೀಗೆ ಸಮಾಜಪರ ಕಾಳಜಿ ಹೊಂದಿದ್ದು ನಗರಪಾಲಿಕೆ ಅಧಿಕಾರಿಗಳ ಜೊತೆಗೆ ಕೈ ಜೋಡಿಸಿಕೊಂಡು ತನ್ನ ಪ್ರದೇಶದ ಪ್ರಾಕೃತಿಕ ಸೌಂದರ್ಯ ಕೆಡದಂತೆ ತೀವ್ರ ನಿಗಾ ವಹಿಸುತ್ತಾ ಓರ್ವ ಪ್ರಜ್ಞಾವಂತ ಉದ್ಯಮಿ, ನಾಗರಿಕ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಶ್ರೀಯುತರು ವರ್ಸೋವ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಗಮನೀಯ ಸೇವೆ ಸಲ್ಲಿಸಿದ್ದರು. ತಮ್ಮ ಈ ಕಾರ್ಯಕೌಶಲತೆ, ಸಂಘಟನಾ ಚಾತುರ್ಯ ಹಾಗೂ ಸಮಾಜಮುಖಿ ಚಿಂತನೆ ಮೊದಲಾದ ಗುಣ ವಿಶೇಷಗಳ ಕಾರಣದಿಂದ ಮುಂದೆ ನಗರದ ಪ್ರತಿಷ್ಠಿತ ಬಂಟ ಸಂಘಟನೆ ಜವಾಬ್ ಇದರ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಸರ್ವ ಸಮ್ಮತದಿಂದ ನಿಯುಕ್ತಿ ಹೊಂದಿದರು. ಇವರ ಅಧಿಕಾರಾವಧಿಯಲ್ಲಿ ಸಾಧಿಸಿದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ಜವಾಬ್ ಸಂಸ್ಥೆಯಲ್ಲಿ ಗೌರವ ದಾಖಲೆ ಹೊಂದಿದೆ. ತಮ್ಮ ಸೇವೆ ಕೇವಲ ಒಂದು ಸಂಘಟನೆಗೆ ಸೀಮಿತಗೊಂಡಿರದೆ ನಂತರದ ದಿನಗಳಲ್ಲಿ ಬಂಟರ ಸಂಘ ಮುಂಬಯಿಯ ಅನೇಕ ಉನ್ನತ ಸ್ಥರದ ಹುದ್ದೆಗಳಿಗೆ ನೇಮಕಗೊಂಡು ಬಳಿಕ ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ತಮ್ಮ ಅಧಿಕಾರ ಅವಧಿಯನ್ನು ಜನ ಇಂದಿಗೂ ಸ್ಮರಿಸಿಕೊಳ್ಳುವಂತೆ ಮಾಡಿದ್ದಾರೆ. ಎರಡು ದಶಕಗಳ ಸುದೀರ್ಘ ಕಾಲದ ಮಹತ್ವದ ಸೇವಾ ಕಾರ್ಯಗಳನ್ನು ಬಂಟರ ಸಂಘವಾಗಲೀ, ಸಮಾಜ ಬಾಂಧವರಾಗಲೀ ಮರೆಯುವಂತಿಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಬಂಟರ ಸಂಘ ತನ್ನ ಪ್ಲಾಟಿನಂ ಜುಬಿಲಿ ವರ್ಷಾಚರಣೆ ಮಾಡಿದ ಆ ಸಂಭ್ರಮದ ಸವಿ ನೆನಪು ಇಂದಿಗೂ ಹಚ್ಚ ಹಸಿರಾಗಿ ಉಳಿದಿದೆ. ವಿಲಾಸರಾವ್ ದೇಶ್ ಮುಖ್, ಎಸ್. ಎಂ. ಕೃಷ್ಣ, ಮನೋಹರ್ ಜೋಷಿ ಹಾಗೂ ಲೋಕಸಭಾ ಸ್ಪೀಕರ್ ಮೊದಲಾದ ಗಣ್ಯಾತಿ ಗಣ್ಯರು ಭಾಗವಹಿಸಿದ ಆ ಸಂಭ್ರಮೋತ್ಸವದ ನೆನಪು ಇನ್ನೂ ಹಸಿಯಾಗಿದೆ.
ತಮ್ಮ ಸಮಾಜಮುಖಿ ಚಿಂತನೆ, ದೂರದರ್ಶಿತ್ವಗಳ ಪರಿಣಾಮ ಬಂಟರ ಸಂಘ ಆಡಳಿತದ ಜ್ಞಾನಮಂದಿರ, ವಿದ್ಯಾಸಂಸ್ಥೆಗಳಾದ ಎಸ್ ಎಂ ಶೆಟ್ಟಿ ಹೈಸ್ಕೂಲು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಮೈದಾಳಿ ಬಂಟರ ಸಂಘಕ್ಕೆ ಧವಳ ಕೀರ್ತಿ ಒದಗಿಸಿತು. ಶ್ರೀಯುತರು ಎಸ್ ಎಂ ಶೆಟ್ಟಿ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷರಾಗಿಯೂ ಅನುಪಮ ಸೇವೆ ಸಲ್ಲಿಸಿದ್ದಾರೆ. ಶ್ರೀಯತರು ಬಂಟರ ಸಂಘದ ವಿಶ್ವಸ್ಥ ಮಂಡಳಿಯಲ್ಲಿ ಇದ್ದುಕೊಂಡು ಉಪಯುಕ್ತ ಮಾರ್ಗದರ್ಶನ ನೀಡುತ್ತಾ ಬರುತ್ತಿದ್ದಾರೆ. ಒಬ್ಬ ಸ್ವಯಂಸ್ಫೂರ್ತಿಯ, ಕಾರ್ಯ ಕೌಶಲದ ಅಪ್ರತಿಮ ನಾಯಕತ್ವದ ಚುರುಕಿನ ನಡೆ ನುಡಿಯ ಧೀಮಂತ ಪ್ರಭಾವಿ ವ್ಯಕ್ತಿತ್ವ ಹೊಂದಿರುವ ಅಪರೂಪದ ನಾಯಕ ವಿವೇಕ್ ಶೆಟ್ಟಿಯವರು.
ವಿಸ್ವಾತ್ ಕೆಮಿಕಲ್ಸ್ ಸಂಸ್ಥೆಯ ಮೂಲಕ ಬೇಸಾಯ ಸಂಬಂಧಿ ಕ್ರಿಮಿನಾಶಕ, ಕೆಲವು ಕಾರ್ಖಾನೆಗಳಿಗೆ ಕಟ್ಟಿಂಗ್ ಮೌಲ್ಡಿಂಗ್ ಜಾಯ್ನಿಂಗ್ ಸಂಬಂಧಿ ಕಾರ್ಯಗಳಿಗೆ, ಮಸಿ ಕಾಗದ ಚರ್ಮ ಇತ್ಯಾದಿ ಕೈಗಾರಿಕೆಗಳಿಗೆ, ಕ್ಯಾಟರಿಂಗ್ ಸಂಬಂಧಿ, ಕಾರ್ಖಾನೆಗಳ ಕೆಲವು ಉತ್ಪಾದನೆ ಕಾರ್ಯಗಳಿಗೆ ರಾಸಾಯನಿಕ ಉತ್ಪನ್ನಗಳನ್ನು ಪೂರೈಸುತ್ತಿದೆ. ತನ್ನ ಉದ್ಯಮದಲ್ಲಿ ಉತ್ತಮ ತರಬೇತಿ ಪಡೆದ ಸಿಬ್ಬಂದಿಗಳನ್ನು ನೇಮಿಸುವುದರ ಮೂಲಕ ಗುಣಮಟ್ಟವನ್ನು ಕಾಯ್ದುಕೊಂಡಿದ್ದಾರೆ. ಸಕಾಲದಲ್ಲಿ ಪೂರೈಕೆ, ಗ್ರಾಹಕರೊಂದಿಗೆ ನಿರಂತರ ಸಂಪರ್ಕ, ಕೈಗಾರಿಕಾ ಪರಿಸರದ ಸುರಕ್ಷಿತತೆ, ತ್ಯಾಜ್ಯ ವಸ್ತುಗಳ ವ್ಯವಸ್ಥಿತ ಸಾಗಾಟ ಹೀಗೆ ಎಲ್ಲಾ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಕೈಗಾರಿಕಾ ಘಟಕ ಎ ಗ್ರೇಡ್ ಶಿಫಾರಸು ಪತ್ರ ಪಡೆದಿದೆ. ಇಲ್ಲಿ ಗ್ರಾಹಕರ ದೂರುಗಳೇ ಬಾರದ ರೀತಿಯಲ್ಲಿ ಆಡಳಿತ ಪದ್ಧತಿ ಇದ್ದು ಎಲ್ಲಾ ವಿಭಾಗಗಳಲ್ಲಿ ವೈಯಕ್ತಿಕ ನಿಗಾ ವ್ಯವಸ್ಥೆ ಮಾಡಲಾಗಿದೆ.
ಪಶು ಆಹಾರ ಸಂಸ್ಕರಣ, ಸೌಂದರ್ಯ ಸಾಧನ ತಯಾರಿ, ಬಣ್ಣಗಳ ತಯಾರಿ, ಬಟ್ಟೆ ತಯಾರಿ, ಜೌಷಧಿಗಳ ಉತ್ಪಾದನೆ, ಖಾದ್ಯಗಳ ತಯಾರಿಕೆಗೆ ಉಪಯೋಗವಾಗುವ ಉತ್ಪನ್ನಗಳು ಹೀಗೆ ವಿವಿಧೋದ್ದೇಶ ಉತ್ಪಾದನೆಗಳಿಗೆ ಗುರುತಿಸಿಕೊಂಡಿರುವ ವಿರಳ ಉದ್ಯಮಗಳಲ್ಲಿ ಇದೂ ಒಂದೆನಿಸಿದೆ. ಸಾರ್ವಜನಿಕ ಸಂಪರ್ಕ, ವಿವರ ರವಾನೆ, ಸಂದರ್ಶನ, ಜಾಹೀರಾತು, ಸೇವಾ ಸೌಲಭ್ಯಗಳ ವಿವರ, ಉತ್ಪನ್ನಗಳ ವಿವರ ಈ ಎಲ್ಲಾ ಮಾಹಿತಿಗಳನ್ನು ಕ್ಷಣ ಮಾತ್ರದಲ್ಲಿ ಒದಗಿಸುವ ಲಿಂಕ್ ವ್ಯವಸ್ಥೆ ಇದೆ. ಹೀಗೆ ಅತ್ಯಾಧುನಿಕ ಸಲಕರಣೆಗಳೊಂದಿಗೆ ಸುಸಜ್ಜಿತವಾಗಿ ಗ್ರಾಹಕರ ಸೇವೆಗೆ ಸದಾ ಸಿದ್ಧವಾಗಿರುವ ವಿಸ್ವಾತ್ ಕೆಮಿಕಲ್ಸ್ ಮಹಾನಗರದ ಅತ್ಯಂತ ಪ್ರತಿಷ್ಠಿತ ಕೈಗಾರಿಕೋದ್ಯಮಗಳಲ್ಲಿ ಒಂದೆನಿಸಿದೆ.
ಉಳ್ಳಾಲ ವಲಯ ಬಂಟರ ಸಂಘದೊಂದಿಗೆ ಕೈಜೋಡಿಸಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸದಾ ದುಡಿಯುತ್ತಿರುವ ವಿವೇಕ್ ಶೆಟ್ಟಿ ಅವರು ಉಳ್ಳಾಲ ವಲಯ ಬಂಟರ ಸಂಘದ ಆಡಿಟೋರಿಯಂ ನಿರ್ಮಾಣದ ಸಂಧರ್ಭದಲ್ಲಿ ಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕೋಟ್ಯಂತರ ರೂಪಾಯಿಗಳನ್ನು ಮುಂಬಯಿಯ ದಾನಿಗಳಿಂದ ಪಡೆದು ಕಟ್ಟಡ ನಿರ್ಮಾಣ ಯಶಸ್ವಿಯಾಗಿ ನಿರ್ವಹಿಸಲು ಸಹಕರಿಸಿದರು. ಶ್ರೀಯುತರು ಮಾನವ ಕಾಳಜಿ ಉಳ್ಳ ಹೃದಯವಂತರಾಗಿರುವ ಕಾರಣ ಉನ್ನತ ಮಟ್ಟದ ಸರ್ಕಾರದೊಂದಿಗೆ ಸದಾ ನೇರ ಸಂಪರ್ಕ ಹೊಂದಿದ ಎನ್.ಜಿ.ಓ ಗಳೊಂದಿಗೆ ಸಂಪರ್ಕ ಹೊಂದಿದ್ದು, ದೊಡ್ಡ ಮೊತ್ತದ ದೇಣಿಗೆಯನ್ನು ನೀಡುತ್ತಾ ಬರುತ್ತಿದ್ದಾರೆ. ಉತ್ತಮ ನಡೆ ನುಡಿಯ ಜನಾದರಣೀಯ ಸಂಸ್ಕಾರ ಹೊಂದಿದ ಆದರ್ಶ ಉದ್ಯಮಿ ಶ್ರೀ ವಿವೇಕ್ ಶೆಟ್ಟಿ ಅವರ ಭವಿಷ್ಯದ ಬಾಳು ಹಸನಾಗಲಿ, ಅವರ ಸಾಂಸಾರಿಕ, ಸಾಮಾಜಿಕ, ಔದ್ಯಮಿಕ ಕ್ಷೇತ್ರಗಳಲ್ಲಿ ಸದಾ ನೆಮ್ಮದಿ ತುಂಬಿರಲಿ, ಆಯುಷ್ಯ ಆರೋಗ್ಯ ವೃದ್ಧಿಸಿ ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಿಸುವ ಯೋಗ ಭಾಗ್ಯಗಳನ್ನು ಭಗವಂತ ಕರುಣಿಸಲಿ ಎಂಬುದೇ ನಮ್ಮೆಲ್ಲರ ಪ್ರಾರ್ಥನೆ. ಜೊತೆಗೆ ಅವರ ಜೀವನ ಸಾಧನೆ ಹಾಗೂ ಸಮಾಜಮುಖಿ ಸೇವೆಗಳನ್ನು ಗಮನಿಸಿದ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಬರಲಿರುವ ಹೊಸ ವರುಷ ಹರುಷದ ಹೊಂಬೆಳಕು ಹೊತ್ತು ತರಲೆಂದು ಹಾರೈಸುತ್ತದೆ.
ಶುಭವಿರಲಿ ಸರ್ವರಿಗೆ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು