ಅಗೋಳಿ ಮಂಜಣ್ಣ ತುಳುನಾಡಿನ ಭೀಮನೆಂದು ಪ್ರಸಿದ್ಧನಾದ ಐತಿಹಾಸಿಕ ಪುರುಷ. ಅಪ್ರತಿಮ ಶಕ್ತಿ ಸಾಹಸಗಳಿಗೆ ಹೆಸರಾದ ವ್ಯಕ್ತಿ. ಅದ್ಭುತ ಜೀರ್ಣಶಕ್ತಿಯುಳ್ಳ ತಿನಿಸಿಗ. ‘ಅಗೋಳಿ’ ಎಂಬ ತುಳು ಶಬ್ದಕ್ಕೆ ಅರ್ಥ ಗುಡಾಣ, ಹಂಡೆ ಅಥವಾ ಅಂತಹದೇ ಭಾರಿ ಗಾತ್ರದ ಪಾತ್ರೆ ಎಂದು. ಆ ಪಾತ್ರೆಯಲ್ಲಿ ಊಟ ಮಾಡುವವನು ಅಗೋಳಿ ಮಂಜಣ್ಣ. ಮಂಗಳೂರು ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದಲ್ಲಿ ಅಗೋಳಿ ಮಂಜಣ್ಣನ ಕಥಾನಕವನ್ನು ತುಳು-ಕಬಿತೆ ರೂಪದಲ್ಲಿ ಅಪರೂಪಕ್ಕೊಮ್ಮೆ ಪ್ರಸಾರಮಾಡುತ್ತಾರೆ. ಅದರಲ್ಲಿ ಮಂಜಣ್ಣನ ಅಪೆಟೈಟ್ ಹೇಗಿತ್ತು ಎಂಬ ವರ್ಣನೆಯ ಸಾಲುಗಳನ್ನು ನೋಡಿ:
ಬಜಿಲ್ ಒಂಜಿ ಕಳಾಸೆ ಆಂಡಾಲಾ ಒರೊರೊ ಅರಾ ಅರಾ ಆಪುಂಡ್
ಗೋಂಟ್ ತಾರಾಯಿ ಇರ್ವತ್ತೈನ್ಲಾ ಬಾಯಿಡೆ ಗಾಣ ಪಾಡುಂಡ್…
ಅವಲಕ್ಕಿ ಒಂದು ಕಳಸಿಗೆಯಷ್ಟಿದ್ದರೂ (1 ಕಳಸಿಗೆ ಅಂದರೆ 14 ಸೇರು; 3 ಕಳಸಿಗೆ ಅಂದರೆ 1 ಮುಡಿ) ಕೆಲವೊಮ್ಮೆ ಕಡಿಮೆಯೇ ಆಗುತ್ತದೆ. ಒಣತೆಂಗಿನಕಾಯಿ ಇಪ್ಪತ್ತೈದು ಇದ್ದರೂ ಬಾಯಿಯಲ್ಲೇ ಗಾಣಹಾಕುತ್ತಾನೆ.
ಸುಮಾರು ನಾಲ್ಕೈದು ತಲೆಮಾರುಗಳ ಹಿಂದೆ ಮಂಗಳೂರಿನ (ತುಳುವಿನಲ್ಲಿ ‘ಕುಡ್ಲ’ ಎನ್ನುವುದು) ಹತ್ತಿರದ ತೊರ್ತಲ್ತ್ ಎಂಬ ಹೆಸರಿನ ಗ್ರಾಮದ ಕಟ್ಲ ಎನ್ನುವಲ್ಲಿ ನಾರಾಯಣ ಶೆಟ್ಟಿ ಮತ್ತು ದುಗ್ಗು ದಂಪತಿಯ ಮಗನಾಗಿ ಹುಟ್ಟಿದವ ಮಂಜಣ್ಣ. ಸಂತಾನಹೀನ ಶೆಟ್ಟಿ ದಂಪತಿ ಬಪ್ಪನಾಡಿನ ದುರ್ಗಾಪರಮೇಶ್ವರಿಗೆ ಹರಕೆ ಸಲ್ಲಿಸಿದ ಬಳಿಕವೇ ಮಂಜಣ್ಣ ಹುಟ್ಟಿದ್ದು. ಹಾಗಾಗಿ ತಂದೆ ತಾಯಿಯಂತೆ ಆತನೂ ದುರ್ಗೆಯ ಭಕ್ತ. ಮಂಜಣ್ಣನ ಸೋದರಮಾವ, ನೆರೆಯ ಗ್ರಾಮವಾದ ‘ತೆಲಾರ್ ಗುತ್ತು’ ಎನ್ನುವಲ್ಲಿನ ಬಗ್ಗಣ್ಣ ಅಡ್ಯಂತಾಯ. ಮಂಜಣ್ಣ ಹುಟ್ಟಿದ್ದು ಅಲ್ಲೇ. ಅದೂ ಅಲ್ಲದೇ ‘ಅಳಿಯ ಸಂತಾನ’ ರೂಢಿಯಲ್ಲಿದ್ದುದರಿಂದ ಮತ್ತು ಬಗ್ಗಣ್ಣ ಅಡ್ಯಂತಾಯನಿಗೆ ಸೈನ್ಯಕ್ಕೆ ಸೇರಲು ಬುಲಾವ್ ಬಂದಿದ್ದರಿಂದ ಇಡೀ ‘ತೆಲಾರ್ ಗುತ್ತು’ ಪ್ರದೇಶಕ್ಕೆ ಮಂಜಣ್ಣನನ್ನೇ ಅಧಿಪತಿಯನ್ನಾಗಿ ಮಾಡಲಾಗಿತ್ತು.
ಓ… ತೆಲಾರ ಗುತ್ತ ಮಂಜಣ್ಣಾಯ್ಕೆ ಪನ್ಪಿನಾಯೆ। ಆಯೇ ಬಾರಿ ಬಿರ್ದ್ ತಂಕ ದರ್ಪು ಮಲ್ದಿನಾಯೇ ।।
ಅಟ್ಟೆ ಮುಟ್ಟೆ ಪೊಲಿಪುನಂಚೀ ಲಟ್ಟೆದಾಯೆ । ಆಯೇ ಕೊಟ್ಟೆದಾಂಕರದ ತಿಗಲೇ ನುರ್ದಿನಾಯೇ ।।
ಕೆಂಚಿ ಮೀಸೆ ಕುಪುಲು ಕಣ್ಣ್ ಮರದಿನಾಯೇ। ಆಯೇ ಪುಂಚೊಡಿತ್ತಿ ಉಚ್ಚುಲೇನ್ ಪುರುಂಚಿನಾಯೇ ।।
ಕೊದಂಟಿದಾಂತೇ ಅರಿತ್ತ ಮುಡಿಲಾ ಕಟ್ದಿನಾಯೇ । ಆಯೇ ಕೈಟ್ ಗುದುದೂ ಕೊಜಂಟಿ ತಾರಯಿ ಮಲ್ದಿನಾಯೇ ।।
ಮಂಜಣ್ಣನ ಪರಾಕ್ರಮವನ್ನು ಸಾರುವ ಕಥಾನಕದ ಸಾಲುಗಳಿವು. ತೆಲಾರಗುತ್ತುವಿನ ಬಿರುದಾನ್ವಿತ, ಸಮಕಾಲೀನ ಅಹಂಕಾರಿ ಜಟ್ಟಿಗಳಿಗೆಲ್ಲ ಮಣ್ಣು ಮುಕ್ಕಿಸಿದ, ಹುತ್ತಕ್ಕೇ ಕೈ ಹಾಕಿ ಹಾವುಗಳನ್ನೆಲ್ಲ ತಿರುಚಿ ಹಾಕುವ ಸಾಹಸಿಗ, ಯಾವುದೇ ಕೈಕರಣದ ನೆರವಿಲ್ಲದೇ ಅಕ್ಕಿ ಮುಡಿಯನ್ನು ಕಟ್ಟಬಲ್ಲವ (‘ಕೊದಾಂಟಿ’ ಎಂದರೆ ಅಕ್ಕಿಮುಡಿಯನ್ನು ಕಟ್ಟುವಾಗ ಬೈಹುಲ್ಲಿನಲ್ಲಿ ಅಕ್ಕಿ ಒತ್ತಟ್ಟಾಗಿಸಲು ಕೈಯಲ್ಲಿ ಹಿಡಿದು ಬಡಿಯುವ ಮರದ ದಪ್ಪವಾಗಿರುವ ಕೋಲು), ಕೈಯಲ್ಲಿ ಗುದ್ದಿಯೇ ತೆಂಗಿನಕಾಯಿಯನ್ನೊಡೆದು ತಿರುಳನ್ನೆಲ್ಲ ನುಂಗುವವ… ಹೀಗೆ ಸಾಗುತ್ತದೆ ಮಂಜಣ್ಣನ ವರ್ಣನೆ.
ಎರ್ಮಾಳ್ ಊರಿನ ಜಾತ್ರೆಯಲ್ಲಿ ಬಲ ಪ್ರದರ್ಶನ, ದೇವಸ್ಥಾನದ ಪ್ರಾಂಗಣದಲ್ಲಿದ್ದ ಬಲಿಗಲ್ಲನ್ನು ಕಿತ್ತೆಬ್ಬಿಸಿ ಒಬ್ಬನೇ ಅದನ್ನು ಹೊತ್ತು ತಂದು ಬಪ್ಪನಾಡು ದುರ್ಗಾಪರಮೇಶ್ವರಿಯ ಪದತಲಕ್ಕೆ ತಂದು ತಾಯಿಯ ಹರಕೆಯನ್ನು ಕೈಗೂಡಿಸಿದ್ದು, ಅರಸು ಕಂಬಳ ನಡೆಸುತ್ತೇವೆಂದು ಹೊರಟ ಮುಲ್ಕಿಯ ಸಾಮಂತ ಅರಸ ಕಳಿಸಿದ ಯುವಕರ ಜಂಭ ಮುರಿದದ್ದು, ಅಷ್ಟು ಯುವಕರು ಒಟ್ಟಿಗೇ ಸೇರಿದರೂ ಕದಲಿಸಲೂ ಆಗದ ಕಾಡು ಸೊಪ್ಪಿನ ಕಟ್ಟನ್ನು ಒಬ್ಬನೇ ಎತ್ತಿ ಸಾಗಿಸಿದ್ದು (ಆಗೆಲ್ಲ ದನಕರುಗಳನ್ನು ಕಟ್ಟುವ ಹಟ್ಟಿಗೆ ದಿನಾಲೂ ಸೊಪ್ಪು ತಂದು ಹಾಕುವುದು, ಇದರಿಂದ ಸಾವಯವ ಗೊಬ್ಬರ ಮಾಡುವ ಕ್ರಮ), ಹುಲ್ಲಿನ ಕಟ್ಟಿನಲ್ಲೇ ಹಂದಿಮರಿಯನ್ನೂ ಅಡಗಿಸಿಟ್ಟು ತಂದು ತನ್ನ ಸೋದರತ್ತೆಯ ಬಳಿ ರೊಟ್ಟಿ-ಹಂದಿಮಾಂಸದಡಿಗೆ ಮಾಡಿಕೊಡೆಂದು ಹೇಳಿದ್ದು, ಒಲ್ಲೆನೆಂದರೆ ಅತ್ತೆಗೇ ಬುದ್ಧಿ ಕಲಿಸುವ ಉಪಾಯ ಹೂಡಿದ್ದು, ತೆಂಗಿನಮರಗಳನ್ನು ಕೈಗಳಿಂದ ಅಲುಗಾಡಿಸಿಯೇ ಎಳೆನೀರು ಉದುರುವಂತೆ ಮಾಡಿ ಆನಂದಿಸಿದ್ದು, ಬೈಹುಲ್ಲನ್ನು ಹೊತ್ತುಕೊಂಡು ಬರಲು ಮನೆಯಾಂದಕ್ಕೆ ಹೋದಾಗ ಅವರು ಊಟ ಮಾಡುತ್ತೀಯಾ ಎಂದು ಕೇಳೇ ಇಲ್ಲವೆಂದು ಕುಪಿತನಾಗಿ ಅವರ ಮನೆಯಂಗಳದಿಂದ ಧಾನ್ಯದ ಕಣಜವನ್ನೇ ಹಿಡಿದೆತ್ತಿ ಸಾಗಿಸಿದ್ದು … ಹೀಗೆ ಮಂಜಣ್ಣನ ಅಟಾಟೋಪಗಳು ಲೆಕ್ಕವಿಲ್ಲದಷ್ಟು.
ಇಷ್ಟಿದ್ದರೂ ಸೂಕ್ಷ್ಮವಾಗಿ ನೋಡಿದರೆ ಇದಾವುದೂ ಉಪಟಳ ಕೊಡುವುದಕ್ಕಾಗಿ ಹುಡುಗು ಬುದ್ಧಿಯಿಂದ ಮಾಡಿದ್ದಲ್ಲ. ‘ಪವರ್ ಹೌಸ್’ ಆಗಿದ್ದ ಕಾಯಕ್ಕೆ ಕಾಯಕ ಬೇಕಲ್ಲ ! ಸುಡುಗಾಡಿನಂತಿದ್ದ ಊರನ್ನು ಸುಭಿಕ್ಷವಾಗಿಸಿದ್ದು ಮಂಜಣ್ಣನೇ! ಗುಡ್ಡಬೆಟ್ಟ ಕಡಿದು ಹೊಲಗದ್ದೆಗಳನ್ನಾಗಿ ಮಾಡಿ ಬೆವರು ಹರಿಸಿ ದುಡಿದು ಎಲ್ಲರ ಮನೆಗಳ ‘ಕುತ್ತಟ್ಟ’ (ಅಡಿಗೆಮನೆಯ ಅಟ್ಟ)ದಲ್ಲಿ ಅಕ್ಕಿಮುಡಿಗಳ ರಾಶಿರಾಶಿ ಪೇರಿಸಿಟ್ಟ ಜೀವ ಅವನು. ಸತ್ಯಮಾರ್ಗದಲ್ಲಿ ನಡೆದವನು. ಅನವಶ್ಯಕ ಕಾಲು ಕೆರೆದು ಜಗಳವಾಡಿದವನಲ್ಲ, ಅದರೆ ಒಂದೊಮ್ಮೆ ಯಾರಾದರೂ ಕೆಣಕಿದರೆ ಅವರ ಗತಿಯೇನು ಎಂಬುದನ್ನು ಕಾಳಗದ ಮೊದಲೇ ಊಹಿಸಬಹುದಿತ್ತು!
ಅಗೋಳಿ ಮಂಜಣ್ಣ ಕಥೆನ್ ಕೇಣ್ಣಾಗಾ ಜೋಕುಲೊಟ್ಟಿಗೆ ನಲಿಪುವೊ ಮಲ್ಲಾ ಜವಾಣೆರ್ ಮರ್ಲ್ ಪತ್ತ್ದ್ ಮಂಜಣ್ಣಾ ಬೆರಿಯೆ ಪಾರುವೊ…
ಮಂಜಣ್ಣನ ಕಥೆಯನ್ನು ಅಜ್ಜ-ಅಜ್ಜಿ ಹೇಳುವಾಗ ಮಕ್ಕಳೆಲ್ಲ ಸಂತೋಷದಿಂದ ಕುಣಿದರೆ ಯುವಕರು ಸ್ಫೂರ್ತಿಗೊಂಡು ಮಂಜಣ್ಣನ ಛಲ-ಬಲಗಳ ಅನುಕರಣೆಗೆ ತೊಡಗುತ್ತಾರೆ.. ಇಂತಹ ಧೀರ ಮಂಜಣ್ಣನ ಅವಸಾನ ಹೇಗಾಯ್ತು ಎಂಬ ಕುತೂಹಲವಿರಬಹುದಲ್ಲವೇ? ಮಂಜಣ್ಣನ ಪರಾಕ್ರಮವನ್ನು ನೋಡಿ ಮತ್ಸರದಿಂದ ಕುದಿಯುತ್ತಿದ್ದ ಸಮಕಾಲೀನ ಹೇಡಿ ಯುವಕರ ಗುಂಪೊಂದು ಮೋಸ ಮಾಡಿ ಮಂಜಣ್ಣನನ್ನು ಸುಮ್ಮನೇ ಔತಣ ಬಡಿಸುತ್ತೇವೆಂದು ಆಹ್ವಾನಿಸಿತು. ಹುಣ್ಣಿಮೆಯ ಮುಸ್ಸಂಜೆಯಲ್ಲಿ ನಿಗದಿತ ಸ್ಥಳಕ್ಕೆ ಅವನು ಬರುತ್ತಿದ್ದಾಗ ಈ ಯುವಕರು ಮರೆಯಲ್ಲಿ ನಿಂತು ಒಂದರ ಮೇಲೊಂದರಂತೆ ಮಂಜಣ್ಣನ ಮೇಲೆ ಬಾಣಗಳ ಸುರಿಮಳೆ ಮಾಡಿ ದಾರುಣ ಹತ್ಯೆಗೈದರು ಎಂಬ ಸಂಗತಿ ವಿಷಾದ ಮೂಡಿಸುತ್ತದೆ. ಪರಾಕ್ರಮಿಯಾಬ್ಬನಿಗೆ ಈ ರೀತಿಯ ಅವಸಾನ, ಅವನೊಬ್ಬ ಐತಿಹಾಸಿಕ ಪುರುಷನೇ ಆಗಿದ್ದರೂ ಅವನ ಮೇಲೆ ಹೆಚ್ಚಿನ ಕನಿಕರ ಮೂಡಿಸುತ್ತದೆ.
ಕೃಪೆ : ಬ್ಯೂಟಿ ಆಫ್ ತುಳುನಾಡ್