ಮೀರಾ ಭಾಯಂದರ್ ಅವಳಿ ನಗರ ಮಹಾರಾಷ್ಟ್ರದಲ್ಲೊಂದು ಪುಟ್ಟ ಮಂಗಳೂರು ಎಂದೂ, ಥಾಣೆ ಜಿಲ್ಲೆಯ ಸಾಂಸ್ಕೃತಿಕ ನಗರವೆಂದೂ ಪ್ರಸಿದ್ಧಿ ಪಡೆದಿದೆ. ಇಲ್ಲಿ ನಮ್ಮೂರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸ್ತವ್ಯ ಹೂಡಿದ್ದು, ಸಂಬಂಧಿಸಿದ ಸಂಘ ಸಂಸ್ಥೆಗಳ ಸಂಖ್ಯೆಯೂ ಇನ್ನೂರು ಮೀರುತ್ತಿದೆ. ನಮ್ಮ ಸಮುದಾಯದ ಹೆಚ್ಚಿನ ಸಂಘಟಕರು, ಸಮಾಜ ಸೇವಕರು, ರಾಜಕೀಯ ನಾಯಕರು, ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರದ ಮುಂದಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಹಾಗೂ ಸಾಕಷ್ಟು ಪ್ರಭಾವಿಗಳೂ ಇರುವುದರಿಂದ ಇಲ್ಲಿ ನಾಯಕತ್ವಕ್ಕೆ ಸ್ಫರ್ಧಿಗಳೂ ಹೆಚ್ಚು. ಒಂದಕ್ಕಿಂತ ಹೆಚ್ಚು ಸಮಾನ ಯೋಗ್ಯತೆ ಇರುವ ಈ ಪ್ರದೇಶದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಕೇಂದ್ರ ಸಮಿತಿಯ ಮುಖ್ಯಸ್ಥರು ಹಾಗೂ ಸ್ಥಾನೀಯ ಮುಖ್ಯಸ್ಥರೊಂದಿಗೆ ಸೌಹಾರ್ದದ ಸಮಾಲೋಚನೆ ನಡೆಸಿ ನಾಯಕತ್ವದ ಆಯ್ಕೆಯಾಗುತ್ತದೆ. ಹಾಗೆ ತುಸು ವಿಳಂಬವಾದರೂ ಕೊನೆಗೂ ಸಮಿತಿಗೆ ಸಮರ್ಥ ನಾಯಕತ್ವದ ಆಯ್ಕೆಯಾಗಿದೆ. ಬಂಟರ ಸಂಘ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಈ ಸಾಲಿನ ಮೂರು ವರ್ಷಗಳ ಅವಧಿಗೆ ಗುತ್ತಿನಾರ್ ರವೀಂದ್ರ ಶೆಟ್ಟಿ ಬಳ್ಕುಂಜೆ ಗುತ್ತು ಅವರು ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಳ್ಕುಂಜೆ ಚೆನ್ನಯ ಬೆನ್ನಿ ಕುತ್ಯಾರು ಅಂಜಾರು ಮನೆ ದೇಜು ಶೆಟ್ಟಿ ಮತ್ತು ಬಳ್ಕುಂಜೆ ಗುತ್ತು ಪುಷ್ಪಾ ಶೆಟ್ಟಿ ದಂಪತಿಯರ ನಾಲ್ಕು ಜನ ಮಕ್ಕಳಲ್ಲಿ ಕಿರಿಯವರಾಗಿ 1972 ರಲ್ಲಿ ಮುಂಬಯಿಯಲ್ಲಿ ಜನಿಸಿದ ಶೆಟ್ಟರು ತನ್ನ ಪ್ರಾಥಮಿಕ ಶಿಕ್ಷಣವನ್ನು ಕೊಟ್ರಪಾಡಿ ಹಯರ್ ಎಲಿಮೆಂಟರಿ ಶಾಲೆಯಲ್ಲಿ ಮತ್ತು ನಿಡ್ಡೋಡಿ ಸತ್ಯನಾರಾಯಣ ಶಾಲೆಯಲ್ಲಿ ಪೂರೈಸಿದರು. ಮುಂದಿನ ಶಿಕ್ಷಣವನ್ನು ಸಂಕಲಕರಿಯ ಮತ್ತು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಮುಖಾಂತರ ಮುಗಿಸಿದರು. ಮುಂದೆ ಗವರ್ನಮೆಂಟ್ ಹೈಸ್ಕೂಲು ಕೆಮ್ಮಣ್ಣು ಇಲ್ಲಿ ಪದವಿ ಪೂರ್ವದ ಶಿಕ್ಷಣ ಪೂರೈಸಿ ಬಳಿಕ ಅನಿವಾರ್ಯ ಕಾರಣಗಳಿಂದ ಶಿಕ್ಷಣ ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂದರೂ ಸಾಹಸ ಪ್ರವೃತ್ತಿಯ ಶೆಟ್ಟರು ಪುಸ್ತಕ ಓದಿ ಲೋಕಾನುಭವ ಪಡೆದು ಬುದ್ಧಿವಂತ ಯುವಕನೆಂದು ಗುರುತಿಸಿ ಕೊಂಡರು. ಬಳಿಕ ಹತ್ತು ವರ್ಷಗಳ ದೀರ್ಘ ಕಾಲ ಊರಿನಲ್ಲೇ ಬೇಸಾಯ ಕೃಷಿ ಮಾಡಿಕೊಂಡು ಓರ್ವ ಉತ್ತಮ ಕೃಷಿಕನೆಂದೂ ಊರಿನಲ್ಲಿ ಗುರುತಿಸಿಕೊಂಡರು. ಬಾಲ್ಯದ ದಿನಗಳಲ್ಲಿ ತನ್ನ ಅಜ್ಜ ಅಜ್ಜಿ ತೋರಿಸಿದ ಪ್ರೀತಿಯನ್ನು ಹೇಳಲು ಮರೆಯದ ಶೆಟ್ಟರು ಹುಟ್ಟೂರಿನ ಬಾಂಧವರು ನೀಡಿದ ಸಹಕಾರ ಪ್ರೋತ್ಸಾಹಗಳನ್ನೂ ನೆನಪಿಸಿಕೊಳ್ಳುತ್ತಾರೆ.
ಮುಂಬಯಿಗೆ ಆಗಮಿಸಿ ತನ್ನ ಮಾವನ ಅಖಿಲಾ ಹೊಟೇಲ್ ಹಾಗೂ ಶಿವರಾಂ ಶೆಟ್ಟಿ ಅವರ ಜೊತೆ ಹೊಟೇಲ್ ವ್ಯವಸಾಯದಲ್ಲಿ ತನ್ನ ಅನುಭವ ಸಂಪತ್ತನ್ನು ಹೆಚ್ಚಿಸಿಕೊಂಡು ಮುಂದೆ ಅವರ ಹೊಟೇಲ್ ಉದ್ಯಮಕ್ಕೆ ಸಹಕಾರಿಯಾಯಿತು. ಮುಂಬಯಿ ನಗರದಲ್ಲಿ ತನ್ನನ್ನು ಆಧರಿಸಿದ ಉದ್ಯಮಿಗಳಾದ ಮಹೇಶ್ ಶೆಟ್ಟಿ ತೆಳ್ಳಾರ್, ಗಿರೀಶ್ ಶೆಟ್ಟಿ ತೆಳ್ಳಾರ್, ರಾಜೇಶ್ ಶೆಟ್ಟಿ ತೆಳ್ಳಾರ್, ಸುಕೇಶ್ ಶೆಟ್ಟಿ ತೆಳ್ಳಾರ್ ಹಾಗೂ ಕಿಶೋರ್ ಕುಮಾರ್ ಕುತ್ಯಾರು ಹಾಗೂ ಬಂಟರ ಸಂಘ ಮುಂಬಯಿಯ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯವರನ್ನು ಕೃತಜ್ಞತಾ ಭಾವದಿಂದ ಸ್ಮರಿಸಿಕೊಳ್ಳುತ್ತಾರೆ.
ತನ್ನ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಅನೇಕ ಪ್ರಶಸ್ತಿಗಳು ಶೆಟ್ಟರ ಮುಡಿಗೇರಿವೆ. ಮುಖ್ಯವಾಗಿ ಜೀವರಕ್ಷಕ ಪ್ರಶಸ್ತಿ, ಯಕ್ಷರಕ್ಷಾ ಪ್ರಶಸ್ತಿ, ಕೊರೋನ ವಾರಿಯರ್ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ಧರ್ಮರಕ್ಷಕ ಪ್ರಶಸ್ತಿ, ತೌಳವ ಸಿರಿ ಪ್ರಶಸ್ತಿ, ಬಳ್ಕುಂಜೆ ಗುತ್ತು ರಾಜನ್ ದೈವ ಧೂಮಾವತಿ ದೈವಸ್ಥಾನದ ಗುತ್ತಿನಾರ್ ಪಟ್ಟ ಹಾಗೂ ಅನೇಕ ಸಂಘ ಸಂಸ್ಥೆಗಳಿಂದ ಸಮಾಜಸೇವಾ ದುರಂಧರ ಪ್ರಶಸ್ತಿಗಳು ಸೇರಿಕೊಂಡಿವೆ.
ಒಬ್ಬ ಸಮರ್ಥ ಸಂಘಟಕನಾಗಿ, ಸಮಾಜ ಸೇವಕನಾಗಿ, ಕಲೆ ಸಂಸ್ಕೃತಿ ಪೋಷಕನಾಗಿ ಗುರುತಿಸಿಕೊಂಡಿರುವ ಇವರು ಸ್ಥಾನೀಯ ರಾಜಕೀಯ ಸಂಘಟನೆಗಳೊಂದಿಗೂ ಸಂಪರ್ಕ ಇರಿಸಿಕೊಂಡಿದ್ದಾರೆ. ತನ್ನ ಸಾರ್ವಜನಿಕ ಸೇವೆಯನ್ನು ಶ್ರೀ ಅವಿನಾಶ್ ಗರುವಾ ಅವರ ನೇತೃತ್ವದ ಬಹುಜನ ವಿಕಾಸ ಅಘಾಡಿಯ ಮೀರಾ ಭಾಯಂದರ್ ವಲಯದ ಸಂಘಟನಾ ಪ್ರಮುಖರಾಗಿ ಆರಂಭಿಸಿದರು. ಮುಂದೆ ಇಲ್ಲಿನ ಹೆಚ್ಚಿನ ಸಂಘಟನೆಗಳ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇರಿಕೊಂಡು ಸಮಾಜ ಸೇವೆ, ಕಲೆ ಸಂಸ್ಕೃತಿ ಕ್ಷೇತ್ರದ ಗಮನೀಯ ಕೊಡುಗೆಗಳಿಂದ ಇಲ್ಲಿನ ಸಾಮಾಜಿಕ ಸಾಂಘಿಕ ಕಾರ್ಯಕರ್ತರಿಗೆ ಆಪ್ತರಾದರು. ಕ್ರಮೇಣ ಇವರ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಸಾರ್ವಜನಿಕ ಗಣೇಶೋತ್ಸವ ಮಂಡಳಿ, ನವತರುಣ ಮಿತ್ರಮಂಡಳಿ ಮೊದಲಾದ ಸಂಘಟನೆಗಳನ್ನು ಹುಟ್ಟು ಹಾಕಿ ಸ್ಥಾಪಕಾಧ್ಯಕ್ಷರಾಗಿ ಅನೇಕ ಸಮಾಜಮುಖಿ ಸೇವೆಯ ಜೊತೆಗೆ ಗುರುತಿಸಿಕೊಂಡಿರುವುದೇ ಅಲ್ಲದೇ ನವತರುಣ ಮಿತ್ರಮಂಡಳಿ ಮುಖಾಂತರ ಊರಿನ ನಾಟಕ ತಂಡ, ಯಕ್ಷಗಾನ, ತಾಳ ಮದ್ದಳೆ ತಂಡಗಳನ್ನು ಆಹ್ವಾನಿಸಿ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಅನೇಕ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಇವರ ಸಂಘಟನಾ ಚಾತುರ್ಯ ಸಮಾಜ ಬಾಂಧವರ ಜೊತೆಗಿನ ಸೌಹಾರ್ದ ಸಂಬಂಧ, ಶಿಸ್ತು ಬದ್ಧ ಕಾರ್ಯವೈಖರಿ, ಸಮಯಪ್ರಜ್ಞೆ ಇವುಗಳನ್ನು ಗುರುತಿಸಿ ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ಶಿವಪ್ರಸಾದ್ ಶೆಟ್ಟಿ ಮಾಣಿಗುತ್ತು ನಾಯಕತ್ವದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಅವಧಿಗೆ ಎಂದರೆ ಆರು ವರ್ಷಗಳ ಸಮಯ ದುಡಿದ ಅನುಭವ ಹೊಂದಿದ್ದಾರೆ.
ಇದೀಗ ಭಾರತೀಯ ಜನತಾ ಪಕ್ಷದ ದಕ್ಷಿಣ ಭಾರತೀಯ ಘಟಕ ಮೀರಾ ಭಾಯಂದರ್ ಇದರ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದು ಇವರ ಸಂಘಟನಾ ಸಾಮರ್ಥ್ಯಕ್ಕೆ ಆನೆಬಲ ಬಂದಂತಾಗಿದೆ. ನಗರದ ವಿವಿಧ ಕಡೆ ಹೊಟೇಲ್ ಸಂಚಾಲಕನಾಗಿ ಉದ್ಯಮ ಕ್ಷೇತ್ರದ ವಿಸ್ತೃತ ಅನುಭವ ಇವರಿಗಿದ್ದು, ಜೊತೆಗೇ ಸಮಾಜ ಸೇವೆಯ ಮೂಲಕ ಸಕ್ರಿಯರಾಗಿದ್ದಾರೆ. ಶ್ರೀಯತರಲ್ಲಿ ಗಮನಿಸಬಹುದಾದ ಮುಖ್ಯ ಅಂಶ ಎಂದರೆ ಸಮಾಜದ ಎಲ್ಲಾ ವರ್ಗದ ಜೊತೆಗೆ ಸೌಹಾರ್ದ ಸಂಬಂಧ, ಬಡವ ಬಲ್ಲಿದ ಬೇಧವಿಲ್ಲದೆ ಸರ್ವರಲ್ಲಿಯೂ ಸಮಭಾವದ ಚಿಂತನೆ, ಹಿರಿಯರಿಗೆ ನೀಡುವ ಗೌರವ ಇತ್ಯಾದಿಗಳು. ಇವರು ನಗರದಲ್ಲಿ ಸಂಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗಣ್ಯರು, ಸೇರುವ ಜನಸಮೂಹವೇ ಇದಕ್ಕೆ ಸಾಕ್ಷಿ.
ಇವರು ಆರು ವರ್ಷಗಳ ಅವಧಿಯಲ್ಲಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿಯಾಗಿ ಸಮಿತಿಯ ಹಾಗೂ ಸಮಾಜದ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದು ಅನೇಕ ಸಮಾಜಪರ ಕಾರ್ಯಕ್ರಮಗಳ ನೇತೃತ್ವ ವಹಿಸಿ ಜನಾನುರಾಗಿಯಾಗಿದ್ದಾರೆ. ಪ್ರತಿ ವರ್ಷವೂ ಒಂದಿಲ್ಲೊಂದು ಮನರಂಜನೆಯ ಕಾರ್ಯಕ್ರಮಗಳನ್ನು ಅದ್ಭುತ ರೀತಿಯಲ್ಲಿ ಸಂಘಟಿಸಿ ಕಲಾಭಿಮಾನಿಗಳ ಮನಗೆದ್ದಿದ್ದಾರೆ. ಇಲ್ಲಿನ ಅನೇಕ ಧಾರ್ಮಿಕ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದು ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದ್ದಾರೆ.
ಶ್ರೀಯುತರ ಸಂಘಟನಾ ಸಾಮರ್ಥ್ಯ ಹುಟ್ಟೂರಿನಲ್ಲೂ ಹಲವು ವಿಧಗಳಲ್ಲಿ ಆಗಾಗ ಪ್ರಕಟವಾಗುತ್ತಿರುತ್ತವೆ. ಬಡ ಕುಟುಂಬಗಳಿಗೆ ಸಹಾಯ, ದೇವಸ್ಥಾನಗಳ ಜೀರ್ಣೋದ್ಧಾರ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಹೀಗೆ ಊರ ಬಾಂಧವರ ಜೊತೆಗೆ ಪ್ರೀತ್ಯಾಭಿಮಾನಗಳ ಸಂಬಂಧವಿದೆ. ಈ ಕಾರಣದಿಂದಲೇ ತನ್ನ ಕುಟುಂಬದ ಪ್ರತಿಷ್ಠಿತ ಬಳ್ಕುಂಜೆ ಗುತ್ತು ಇದರ ಗುತ್ತಿನಾರ್ ಆಗಿ ಗಡಿ ಪ್ರಧಾನ ಪಡೆದು ಅಲ್ಲಿಯೂ ತನ್ನ ಕ್ರಿಯಾಶೀಲತೆ ಮೆರೆದಿದ್ದಾರೆ. ಇವರ ಈ ವಿಶೇಷ ಸಾಮರ್ಥ್ಯವನ್ನು ಗುರುತಿಸಿ ಪ್ರಾದೇಶಿಕ ಸಮಿಯಲ್ಲಿ ಪದೋನ್ನತಿ ದೊರೆತು ಇದೀಗ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಯಾಗಿದ್ದಾರೆ. ಅವರ ಈ ಸುದೀರ್ಘ ಸೇವಾನುಭವದ ಲಾಭ ಸಾರ್ವಜನಿಕ ಸಂಪರ್ಕ ಮುಂದಿನ ದಿನಗಳಲ್ಲಿ ಸಮಿತಿ ವ್ಯಾಪ್ತಿಯ ಸಮುದಾಯ ಬಾಂಧವರಿಗೆ ಪ್ರಯೋಜನವಾಗಲಿದೆ. ತನ್ನ ಕುಟುಂಬ ಪೋಷಣೆಗೆ ದುಡಿಯುತ್ತಲೇ, ಸಮಾಜಕ್ಕಾಗಿ ತುಡಿಯುವ ಅಪರೂಪದ ಮನೋಭಾವ ಹೊಂದಿದ ರವೀಂದ್ರ ಶೆಟ್ಟರು ಶ್ರಮಜೀವಿ. ಸಮರ್ಥ ಸಮಾಜ ಸೇವಕನಿಗೆ ಸರ್ವವಿಧದ ಸಹಕಾರ ನೀಡಬೇಕಾದ ನೈತಿಕ ಹೊಣೆ ಸಮುದಾಯದ ಆರ್ಥಿಕ ಬಲಾಢ್ಯರಿಗಿದೆ ಎಂಬ ಸೂಚ್ಯ ಸಂದೇಶವೂ ನಮ್ಮ ಕಡೆಯಿಂದ ಇದೆ. ಕಾರಣ ತನ್ನ ಕಷ್ಟಗಳನ್ನೂ ಗಮನಿಸದೆ ಸಮಾಜಕ್ಕಾಗಿ ದುಡಿಯುವ ಸೇವಾಕರ್ತರನ್ನು ಸಕಾಲದಲ್ಲಿ ಪೋಷಿಸಬೇಕಾದ ಜವಾಬ್ದಾರಿ ಸಮಾಜಕ್ಕಿದೆ. ಸುಶೀಲೆ ಮಡದಿ ವನಿತಾ ಶೆಟ್ಟಿ, ಎರಡು ಪ್ರತಿಭಾವಂತ ಗಂಡು ಮಕ್ಕಳ ಸಂಸಾರ ರವೀಂದ್ರ ಶೆಟ್ಟರದ್ದು. ಅವರಲ್ಲಿ ನಾಯಕತ್ವದ ಎಲ್ಲಾ ಲಕ್ಷಣಗಳಿದ್ದು ಭವಿಷ್ಯದಲ್ಲಿ ವಿಪುಲ ಅವಕಾಶಗಳೂ ಕಾದಿವೆ.
ಯಕ್ಷಗಾನ ಕಲೆ ಕುರಿತಂತೆ ತೀವ್ರ ಆಸಕ್ತಿ ಇರುವ ಶೆಟ್ಟರು ಪ್ರತಿ ವರ್ಷ ಬಂಟರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಯಕ್ಷಗಾನ ಕಾರ್ಯಕ್ರಮದಲ್ಲಿ ಪಾತ್ರ ನಿರ್ವಹಿಸುತ್ತಾರೆ. ಯಕ್ಷ ಕಲಾ ಗುರು ಅಜೆಕಾರು ಬಾಲಕೃಷ್ಣ ಶೆಟ್ಟರಿಂದ ಯಕ್ಷಗಾನ ಹೆಜ್ಜೆ, ನಟನೆ, ಕುಣಿತ, ಮಾತುಗಾರಿಕೆ ಕುರಿತು ತರಬೇತಿ ಪಡೆಯುತ್ತಾರೆ. ಪ್ರತಿಷ್ಠಿತ ಗುತ್ತು ಮನೆತನದ ಹಿನ್ನೆಲೆ ಇರುವ ಶೆಟ್ಟರ ಆಯ್ಕೆ ಅರ್ಹವಾಗಿದ್ದು ಮುಂಬರುವ ದಿನಗಳಲ್ಲಿ ಸಮುದಾಯಕ್ಕೆ ಉತ್ತಮ ಯೋಗದಾನದ ನಿರೀಕ್ಷೆಯೂ ಇದೆ. ಪ್ರಾದೇಶಿಕ ಸಮಿತಿ ಆಯೋಜಿಸುವ ರಕ್ತದಾನ ಶಿಬಿರ, ಆರೋಗ್ಯ ಸಲಹಾ ಶಿಬಿರ, ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿಗಳಲ್ಲಿ ಒಬ್ಬ ಕಾರ್ಯದರ್ಶಿಯಾಗಿ ಇವರ ಅಮೂಲ್ಯ ಕೊಡುಗೆಯನ್ನು ಉಪೇಕ್ಷಿಸಲಾಗದು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಅರಿತು ಪ್ರಾಮಾಣಿಕವಾಗಿ ದುಡಿಯುವ ಕರ್ತವ್ಯ ಬದ್ಧತೆ ಹೊಂದಿದ ರವೀಂದ್ರ ಶೆಟ್ಟರು ಓಂ ದಿಶೆಯಲ್ಲಿ ಕಾರ್ಯಪ್ರವೃತ್ತರಾಗುವ ಆಶಯ ಸಮಾಜ ಬಾಂಧವರಿಗಿದೆ ಅದು ಈಡೇರಲಿ ಎಂಬ ಹಾರೈಕೆಗಳು ನಮ್ಮದು. ರವೀಂದ್ರ ಶೆಟ್ಟರಿಗೆ ಭವಿಷ್ಯದಲ್ಲಿ ಇನ್ನಷ್ಟು ಸ್ಥಾನಮಾನಗಳು ಲಭಿಸಲಿ. ಅವರಲ್ಲಿರುವ ಸುಪ್ತ ಸಾಮರ್ಥ್ಯ ಬೆಳಕಿಗೆ ಬರಲಿ ಎಂಬ ಆಶಯ ನಮ್ಮದು.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು