ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಮಾತಿನಂತೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ತತ್ವದಡಿ ಕಳೆದ 40 ವರ್ಷಗಳಿಂದ ಸರ್ವ ಕ್ಷೇತ್ರಗಳಲ್ಲಿ ತೊಡಗಿ ಸಮಾಜ ಸೇವೆಯಲ್ಲಿ ಎ.ಹೇಮನಾಥ ಶೆಟ್ಟಿ ಕಾವುರವರು ನಿರತರಾಗಿದ್ದಾರೆ. ಸುದೀರ್ಘ ಕಾಲದಿಂದ ಕೃಷಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣ, ಉದ್ಯಮ, ಧಾರ್ಮಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಹೇಮನಾಥ ಶೆಟ್ಟಿ ಅವರು ಬಂಟ ಸಮುದಾಯದ ಜತೆಗೆ ಸರ್ವ ಸಮುದಾಯದ ಪ್ರೀತಿ ಗಳಿಸಿದ ವ್ಯಕ್ತಿ. ನೊಂದವರಿಗೆ, ಅಶಕ್ತರ ಆಶಾಕಿರಣರಾಗಿರುವ ಇವರು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ನಿರೀಕ್ಷೆಗಳಿಗೆ ಸ್ವಂದಿಸುವ ಧಣಿವರಿಯದ ನಾಯಕ ಅನ್ನುವ ಅಭಿಮಾನಕ್ಕೆ ಪಾತ್ರರಾದವರು.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಬನ್ನೂರು ಗುತ್ತು ಮನೆಯಲ್ಲಿ ಡಿಸೆಂಬರ್ 21-1964 ರಲ್ಲಿ ಕಾವು ಅಂತಪ್ಪ ಶೆಟ್ಟಿ ಮತ್ತು ಬನ್ನೂರು ಗುತ್ತು ತಾರಾ ಅಂತಪ್ಪ ಶೆಟ್ಟಿ ದಂಪತಿಗಳ ತೃತೀಯ ಪುತ್ರನಾಗಿ ಜನಿಸಿದರು. ಮಡಿಕೇರಿ ಸೈಂಟ್ ಮೈಕೆಲ್, ಮಾಡ್ನೂರು ಕಾವು ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪೆರ್ನಾಜೆ ಸೀತಾ ರಾಘವ ಪ್ರೌಢಶಾಲೆ ಮತ್ತು ಕಾವು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದು, ಸುಳ್ಯ ಕೆವಿಜಿ ಶಿಕ್ಷಣ ಸಂಸ್ಥೆಯ್ಲಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ.ಎ. ಪದವಿ ಶಿಕ್ಷಣವನ್ನು ಪಡೆದರು. ವಿದ್ಯಾರ್ಥಿ ದೆಸೆಯಲ್ಲಿಯೇ ಕಾಲೇಜಿನಿಂದ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಎನ್ ಎಸ್ ಯುಐ ತಾಲೂಕು ಅಧ್ಯಕ್ಷನಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, 9 ವರ್ಷಗಳ ಕಾಲ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಸಂಯೋಜಕರಾಗಿ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿ, ರಾಜ್ಯ ಸೇವಾದಳದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದರು.
ರಾಜಕೀಯವಾಗಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿಯಾಗಿ ಆರು ವರ್ಷ ಸೇವೆ ಮಾಡಿದ ಇವರು 2 ನೇ ಅವಧಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಸಂಘಟನಾ ಸಾಮರ್ಥ್ಯದ ಮೂಲಕ ಅಪೂರ್ವ ರೀತಿಯ ಕಾರ್ಯ ಚಟುವಟಿಕೆಗಳನ್ನು ಮಾಡಿರುವ ಎ. ಹೇಮಾನಾಥ ಶೆಟ್ಟಿ ಅವರು ಬಂಟ ಸಮುದಾಯದ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಮುದಾಯದ ಆರ್ಥಿಕ, ಸಾಮಾಜಿಕ, ಶಿಕ್ಷಣ ಕ್ಷೇತ್ರದ ಹಿಂದುಳಿದವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಸಮಿತಿ ಸದಸ್ಯರಾಗಿದ್ದಾರೆ.
ಸುಮಾರು 10 ವರ್ಷಗಳಿಂದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಸಂಚಾಲಕರಾಗಿರುವ ಇವರು, ಸಂಸ್ಥೆಯು ವಿಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ತೋರುವಲ್ಲಿ ಪ್ರೋತ್ಸಾಹ ನೀಡಿದವರು. ಸಹಕಾರಿ ಸಂಘದ ಮಾರ್ಗದರ್ಶಕರಾಗಿ, ಕಾವು ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾಗಿ, ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಅಧ್ಯಕ್ಷರಾಗಿ, ಪಾಲ್ತಾಡಿ ನಾಗ, ರಕ್ತೇಶ್ವರಿ, ಕಲ್ಲುರ್ಟಿ, ಗುಳಿಗ ಮತ್ತು ಕೊರಗಜ್ಜನ ಸಾನಿಧ್ಯ ಕ್ಷೇತ್ರದ ಜೀರ್ಣೋದ್ದಾರ ಮತ್ತು ಬ್ರಹ್ಮಕಳಶದ ಅಧ್ಯಕ್ಷರಾಗಿ, ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿ ಸ್ಥಾಪಕಾಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪುತ್ತೂರು ಕಾವು ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷರಾಗಿ, ಒಂದೇ ವರ್ಷದಲ್ಲಿ ವಲಯಾಧ್ಯಕ್ಷರಾಗಿ, ಪುತ್ತೂರು ಪಾಣಾಜೆ ಮತ್ತು ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಸ್ಥಾಪನೆಯ ಮೂಲಕ ಎರಡು ಲಯನ್ಸ್ ಕ್ಲಬ್ ಪ್ರಾರಂಭಿಸಿ, ಪ್ರಾಂತೀಯ ಅಧ್ಯಕ್ಷರಾದ ಕೆಲವೇ ದಿನಗಳಲ್ಲಿ ವಿಟ್ಲ ಸಿಟಿ ಕ್ಲಬ್ ಪ್ರಾರಂಭವಾದರೆ, ಇವರ ವಿಶೇಷ ಪ್ರಯತ್ನದ ಫಲವಾಗಿ ನೂತನವಾಗಿ ಲಯನ್ಸ್ ಕ್ಲಬ್ ಅಲಂಕಾರು ದುರ್ಗಾಂಬಾ, ಲಯನ್ಸ್ ಕ್ಲಬ್ ಸುಬ್ರಮಣ್ಯ ಉದ್ಘಾಟನೆಗೊಂಡಿದೆ. ಇದು ಇವರ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ. ಕಳೆದ ಲಯನ್ಸ್ ವರ್ಷದಲ್ಲಿ ಜಿಲ್ಲಾ ಕ್ಯಾಬಿನೆಟ್ ನಲ್ಲಿ ಜತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವುದು ಇವರ ಹೆಗ್ಗಳಿಕೆ. ಪತ್ನಿ ಮುಂಡಾಳ ಗುತ್ತು ಅನಿತಾ ಹೇಮಾನಾಥ್ ಶೆಟ್ಟಿ ಅವರು ವೃತ್ತಿಯಲ್ಲಿ ನ್ಯಾಯವಾದಿಯಾಗಿ, ಪಂಚಾಯತ್ ಸದಸ್ಯರಾಗಿ, ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಶಿಕ್ಷಣ ಮತ್ತು ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಚಿರಪರಿಚಿತರು. ಹಿರಿಯ ಮಗಳು ಡಾ. ವಾಸ್ತವಿ ಶೆಟ್ಟಿ. ಎರಡನೆಯ ಮಗಳು ಡಾ. ರಂಜಿತಾ ಶೆಟ್ಟಿ ಡಿಸ್ಟ್ರಿಕ್ಟ್ ಲಿಯೋ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.