ಲೇಖಕಿ, ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಅಕ್ಷಯ ಆರ್. ಶೆಟ್ಟಿಯವರ ಎರಡು ಕೃತಿಗಳ ಲೋಕಾರ್ಪಣೆ ಗುರುವಾರ ನಗರದ ಪತ್ರಿಕಾಭವನದಲ್ಲಿ ಜರುಗಿತು. ಕೃತಿ ಬಿಡುಗಡೆ ನೆರವೇರಿಸಿ ಮಾತಾಡಿದ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಚಿನ್ನಪ್ಪ ಗೌಡ ಅವರು, “ತುಳು ಭಾಷೆಯಲ್ಲಿ ತುಳು ಸಂಸ್ಕೃತಿಯನ್ನು ಶೋಧನೆ ಮಾಡುವಂತಹ ಕಾರ್ಯ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವುದು ಶ್ಲಾಘನೀಯ ವಿಚಾರ. ತುಳು ನಾಟಕಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ. ಅಕ್ಷಯ ಶೆಟ್ಟಿಯವರು ಹಿಂದೆ ದೆಂಗ ಅನ್ನುವ ಕಾದಂಬರಿ ಬರೆದಿದ್ದಾರೆ. ಈಗ ಪೆರ್ಗ ಅನ್ನುವ ತುಳು ನಾಟಕವನ್ನು ತುಳು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಹಿಡಿ ಅಕ್ಕಿಯ ಧ್ಯಾನ ಕವನ ಸಂಕಲನ ಕೂಡಾ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿದೆ. ಪೆರ್ಗ ಅಂದ್ರೆ ತುಳು ಭಾಷೆಯಲ್ಲಿ ಗೆಲುವು, ಆಕಸ್ಮಿಕವಾಗಿ ಸಿಗುವ ಸಂಪತ್ತು ಅನ್ನುವ ಅರ್ಥವಿದೆ. ಒಂದು ನಿಧಿಯ ಹುಡುಕಾಟದ ಹಿಂದಿನ ಶೋಧ ಮತ್ತು ಅದರ ಸುತ್ತಲಿನ ಸನ್ನಿವೇಶಗಳನ್ನು ಬಹಳ ಚೆನ್ನಾಗಿ ಲೇಖಕಿ ನಿರೂಪಿಸಿದ್ದಾರೆ. ಲೇಖಕಿ ಇನ್ನಷ್ಟು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡಲಿ” ಎಂದು ಶುಭ ಹಾರೈಸಿದರು.

ಧನಂಜಯ ಕುಂಬ್ಳೆ ಮಾತನಾಡಿ, “ಕವಿತೆಗಳು ಧ್ಯಾನದಲ್ಲಿ ಅರಳುತ್ತವೆ. ಕವಯಿತ್ರಿ ಅಕ್ಷಯ ಶೆಟ್ಟಿಯವರು ಹಿಡಿ ಅಕ್ಕಿಯ ಧ್ಯಾನ ಕೂಡಾ ಧ್ಯಾನದ ಮೂಲಕ ಸುಂದರವಾಗಿ ಮೂಡಿಬಂದಿದೆ. ಶೀರ್ಷಿಕೆಯಲ್ಲೇ ಒಂದು ಕವಿತೆಯಿದೆ. ಒಂದು ಹಿಡಿ ಅಕ್ಕಿಯನ್ನು ಹಿಡಿಯುವುದು ಕೂಡ ಒಂದು ಧ್ಯಾನ. ಹೆಣ್ಣೊಬ್ಬಳ ಬದುಕಿನ ತುಮುಲ ಇದರಲ್ಲಿದೆ. ತನ್ನ ಅನುಭವ ಮತ್ತು ಭಾವಕ್ಕೆ ಸೂಕ್ತವಾಗಿ ಇಲ್ಲಿ ಕವಿತೆ ಅರಳಿದೆ. ಕವಯತ್ರಿಯಿಂದ ಮುಂದೆಯೂ ಇಂತಹ ಸಾಂದರ್ಭಿಕ ಕವಿತೆಗಳು ಮೂಡಿಬರಲಿ” ಎಂದರು.
ವೇದಿಕೆಯಲ್ಲಿ ಲೇಖಕಿ ಅಕ್ಷಯ ಆರ್. ಶೆಟ್ಟಿ, ಹಂಪಿ ವಿಶ್ವವಿದ್ಯಾನಿಲಯ ವಿಶ್ರಾಂತ ಉಪಕುಲಪತಿ ಚಿನ್ನಪ್ಪ ಗೌಡ, ಕಲ್ಲೂರು ನಾಗೇಶ್, ಧನಂಜಯ ಕುಂಬ್ಳೆ ಮತ್ತಿತರರು ಉಪಸ್ಥಿತರಿದ್ದರು. ನರೇಶ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.





































































































