ರಾಜಕೀಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿ, ಕಾನೂನು ರಂಗದಲ್ಲೂ ಗಮನ ಸೆಳೆಯುವ ಹಿರಿಯ ನಾಯಕ ಕೆ. ಮೋನಪ್ಪ ಭಂಡಾರಿ. ಇವರ ಬಗ್ಗೆ ಒಂದು ಕಿರು ಪರಿಚಯ ಇಲ್ಲಿದೆ. ಕೆಲ್ಲೆಕಾರುಗುತ್ತು ಮೋನಪ್ಪ ಭಂಡಾರಿ ಅವರು ಕೆ. ದೂಮಣ್ಣ ಶೆಟ್ಟಿ ಹಾಗೂ ಶ್ರೀಮತಿ ಲಕ್ಷ್ಮೀ ಅವರ ಪುತ್ರರಾಗಿ 1952 ರ ಜನವರಿ 3ರಂದು ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಕೋಡಿಬೈಲಿನ ಕರವೂರು ಎಂಬಲ್ಲಿ ಜನಿಸಿದವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಕೋಡಿಬೈಲು ಐಡೆಡ್ ಲೋವರ್ ಫ್ರೈಮರಿ ಶಾಲೆಯಲ್ಲಿ ಮುಗಿಸಿ, ಬಳಿಕ ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನಲ್ಲಿ, ಕನ್ಯಾನದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿ ಮಂಗಳೂರಿನ ಸೈಂಟ್ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಕಲಿತು ಬಿ.ಎ. ಪದವಿ ಪಡೆದರು. ಆ ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಮಂಗಳೂರಿನ ಎಸ್ ಡಿ ಎಂ ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಪಡೆದು ನ್ಯಾಯವಾದಿಯಾದರು.
ಪ್ರಸ್ತುತ ಇವರು ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜತೆಗೆ ನೋಟರಿಯೂ ಆಗಿದ್ದಾರೆ.
ರಾಜಕೀಯ, ಸಾಮಾಜಿಕ ರಂಗದಲ್ಲಿ ಆರೆಸ್ಸೆಸ್ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರು ಜನ ಸಂಘದ ಮೂಲಕ ರಾಜಕೀಯ ಪ್ರವೇಶ ಮಾಡಿ ಹಂತ ಹಂತವಾಗಿ ಬಿಜೆಪಿಯಲ್ಲಿ ಬೆಳೆಯುತ್ತಾ 2012 ರಿಂದ 2014 ರ ಅವಧಿಗೆ ವಿಧಾನಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಮಂಗಳೂರು ನಗರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾಗಿ, ಮಂಗಳೂರು ನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ದ.ಕ. ಜಿಲ್ಲಾ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ, ನವಮಂಗಳೂರು ಬಂದರು ಟ್ರಸ್ಟಿಯಾಗಿ, ಮಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ, ಜಿಲ್ಲಾ ಬಿಜೆಪಿ ವಕ್ತಾರರಾಗಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸೇವೆ ಸಲ್ಲಿಸಿದ ಅನುಭವಿ. ಜತೆಗೆ ಮಜ್ಗಾಂ ಡಾಕ್ ವರ್ಕರ್ಸ್ ಯೂನಿಯನ್ ಉಪಾಧ್ಯಕ್ಷರಾಗಿ ಹಾಗೂ ಅಧ್ಯಕ್ಷರಾಗಿ, ನವಮಂಗಳೂರು ಬಂದರು ಮತ್ತು ಜನರಲ್ ಎಂಪ್ಲೋಯಿಸ್ ಅಸೋಸಿಯೇಷನ್ (ಬಿಎಂಎಸ್ ಸಂಯೋಜಿತ) ಇದರ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೆಟಡೋರ್ ವಾಹನ ಚಾಲಕ – ಮಾಲಕರ ಸಂಘದ ಅಧ್ಯಕ್ಷರಾಗಿ, ಮಂಗಳೂರು ಮಹಾನಗರಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಕಾನೂನು ವಿವಿ ಹುಬ್ಬಳ್ಳಿ ಇದರ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಕೊಡಗು ಹಾಗೂ ಉಡುಪಿ ಜಿಲ್ಲೆಗಳ ಬಿಜೆಪಿ ಪ್ರಭಾರಿಯಾಗಿ ಎರಡು ಬಾರಿ, ರಾಜ್ಯ ಬಿಜೆಪಿ ಕಾರ್ಯಾಕಾರಿಣಿ ಸಮಿತಿ ಸದಸ್ಯರಾಗಿ ಹಾಗೂ ರಾಜ್ಯ ಮಟ್ಟದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಎರಡು ಬಾರಿ ಜವಾಬ್ದಾರಿ ವಹಿಸಿಕೊಂಡಿರುವ ಅನುಭವಿ. ವಿವಿಧ ದೇವಸ್ಥಾನಗಳ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವ ಹಾಗೂ ಯಾಗ ಸಮಿತಿ ಮುಂತಾದವುಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಇವರು ಅವಿಭಜಿತ ದ.ಕ. ಜಿಲ್ಲಾ ಟ್ಯಾಕ್ಸಿಮೆನ್ ಆಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ 1991 ರಿಂದ 1997 ರ ವರೆಗೆ ಸೇವೆ ಸಲ್ಲಿಸಿದ್ದಾರೆ. ದ.ಕ. ಜಿಲ್ಲಾ ಟ್ಯಾಕ್ಸಿಮೆನ್ ಆಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷರಾಗಿಯೂ 1997 ರಿಂದ 2018 ರವರೆಗೆ ಸೇವೆ ಸಲ್ಲಿಸಿದ ಸಾಧನೆ ಇವರದ್ದಾಗಿದೆ. ಆದರ್ಶ ವಿದ್ಯಾವರ್ಧಕ ಸಂಘ, ಅಳಪೆ ಕರ್ಮಾರ್ ಇದರ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಇರುವ ಜವಾಬ್ದಾರಿ
1.ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ದ. ಕ. ಜಿಲ್ಲಾ ಸಮಿತಿಯ ಕಾನೂನು ಸಲಹೆಗಾರ
2.ದ.ಕ. ಜಿಲ್ಲಾ ಟ್ಯಾಕ್ಸಿಮೆನ್ ಆಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಗೌರವಧ್ಯಕ್ಷ
3. ಆದರ್ಶ ವಿದಾವರ್ಧಕ ಸಂಘ ಅಳಪೆ, ಕರ್ಮಾರ್ ಇದರ ಆಡಳಿತ ಮಂಡಳಿ ಸದಸ್ಯ
4. ವೈದ್ಯನಾಥ ದೈವಸ್ಥಾನದ ಮೊಕ್ತೇಸರ ಹಾಗೂ ಕಾರ್ಯದರ್ಶಿ
5. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಜತೆಗೆ ಇನ್ನೂ ಹಲವು ಜವಾಬ್ದಾರಿ
6. ಕಾಸರಗೋಡು ಜಿಲ್ಲೆಯ ಉಪ್ಪಳದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಟ್ರಸ್ಟಿ.
ಬಿ.ಎ. ಪದವೀಧರೆಯಾಗಿರುವ ಕಮಲಾಕ್ಷಿ ಅವರನ್ನು ವಿವಾಹವಾಗಿರುವ ಇವರಿಗೆ ಕಲ್ಪಶ್ರೀ ಮತ್ತು ಕಾವ್ಯಶ್ರೀ ಎಂಬಿಬ್ಬರು ಪುತ್ರಿಯರು. ಇಬ್ಬರೂ ವಿವಾಹಿತರು. ಕಲ್ಪಶ್ರೀ ಅವರು ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು (ಎಂ.ಟೆಕ್), ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದಾರೆ. ಇವರು ಪತಿಯೊಂದಿಗೆ ಅಲ್ಲಿ ನೆಲೆಸಿದ್ದಾರೆ. ಕಾವ್ಯಶ್ರೀ ಅವರು ಎಲ್ ಎಲ್ ಎಂ ಪದವೀಧರೆಯಾಗಿದ್ದು, ಈ ಹಿಂದೆ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಬೆಂಗಳೂರಿನ ಕೆ.ಎಲ್. ಇ. ಕಾನೂನು ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಆಗಿ ದುಡಿಯುತ್ತಿದ್ದಾರೆ.