ಸಣ್ಣ ಪ್ರಾಯದಲ್ಲೇ ಉದ್ಯಮ ಆರಂಭಿಸಿ ಯಶಸ್ಸಿನ ಪಥದಲ್ಲಿ ಸಾಗುತ್ತಿರುವ, ಕಠಿಣ ಪರಿಶ್ರಮಿಯಾಗಿರುವ ಕುಂದಾಪುರದ ಪ್ರಸಿದ್ಧ ಕೈಗಾರಿಕೋದ್ಯಮಿ ಶ್ರೀ ಜಯಕರ ಶೆಟ್ಟಿಯವರು 1960 ರಲ್ಲಿ ದಿವಂಗತ ಚಾರ್ಮಾಕ್ಕಿ ಸಂಜೀವ ಶೆಟ್ಟಿ ಮತ್ತು ದಿವಂಗತ ಗಿರಿಜಾ ಶೆಟ್ಟಿಯವರ ಸುಪತ್ರರಾಗಿ ಜನಿಸಿದರು.
ಜಯಕರ ಶೆಟ್ಟಿಯವರು ತನ್ನ ಶಿಕ್ಷಣವನ್ನು ಬೆಂಗಳೂರಿನ ಬಾಲ್ಡ್ವಿನ್ ಶಾಲೆಯಲ್ಲಿ ಪ್ರಾರಂಭಿಸಿ, ಭಂಡಾರ್ ಕರ್ಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿ, ಮಣಿಪಾಲದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿ ತನ್ನ ವೃತ್ತಿ ಜೀವನವನ್ನು ಬೆಂಗಳೂರಿನಲ್ಲಿ ಪ್ರಾರಂಭ ಮಾಡಿದರು.
ಉದ್ಯೋಗ ಕ್ಷೇತ್ರದಲ್ಲಿ ಬೇರೆ ಬೇರೆ ರಂಗದಲ್ಲಿ ದುಡಿದರೂ ಅವರಿಗೆ ಪೂರ್ತಿ ತೃಪ್ತಿ ಸಿಗಲಿಲ್ಲ. ಅವರಲ್ಲಿರುವ ಸಾಧನೆಯ ತುಡಿತ ಹೆಚ್ಚುತ್ತಲೇ ಹೋಯಿತು. ಯಾವುದಾದರೂ ಸ್ವಂತ ಉದ್ಯಮ ಆರಂಭಿಸಿ ಹಲವರಿಗೆ ಉದ್ಯೋಗದಾತರಾಗುವ ಕನಸು ಕಂಡರು. ಇದರ ಫಲವಾಗಿ 1987 ರಲ್ಲಿ ಗಿರಿಜಾ ಟೈಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು.
ಯಶಸ್ವೀ ಉದ್ಯಮಿ ಎಂದು ಗುರುತಿಸಿಕೊಂಡ ಜಯಕರ ಶೆಟ್ಟಿಯವರು ತನ್ನ ಉದ್ಯಮವನ್ನು ನೆಲ್ಲಿಕಟ್ಟೆ, ಅಂಪಾರು, ಹಾಲಾಡಿಗೆ ವಿಸ್ತರಿಸಿ ಅಸೋಡಿನಲ್ಲಿ ಸಿಮೆಂಟ್ ಹಾಗೂ ಗೇರುಬೀಜ ಸಂಸ್ಕರಣ ಫ್ಯಾಕ್ಟರಿಯನ್ನು ಪ್ರಾರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿ ಅನ್ನದಾತರಾದರು. ಸಂಸ್ಥೆ ನೀಡುವ ಅತ್ಯುತ್ತಮ ಸೇವೆಯಿಂದಾಗಿ, ಗ್ರಾಹಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದ ಫಲವಾಗಿ ವೇಗವಾಗಿ ಸಂಸ್ಥೆಯು ಅಭಿವೃದ್ಧಿಯ ಪಥದಲ್ಲಿ ಸಾಗಿತು.
ಜಯಕರ ಶೆಟ್ಟಿಯವರು ಉದ್ಯಮದೊಂದಿಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದು, ವಿವಿಧ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಉದ್ಯಮದೊಂದಿಗೆ ಸಾಮಾಜಿಕ ಸೇವೆಯನ್ನು ಮಾಡುತ್ತಾ, ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಉದ್ಯಮ, ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ ಹೀಗೆ ಹಲವಾರು ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿದೆ.
ಕುಂದಾಪುರದ ಪ್ರಸಿದ್ಧ ಕೈಗಾರಿಕೋದ್ಯಮಿಯಾಗಿರುವ ಜಯಕರ ಶೆಟ್ಟಿಯವರು 1988 ರಲ್ಲಿ ರಂಜಿತಾ ಶೆಟ್ಟಿಯವರನ್ನು ವಿವಾಹವಾಗಿ 4 ಮಕ್ಕಳ ತಂದೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಗಂಡನ ಯಶಸ್ಸಿನಲ್ಲಿ ರಂಜಿತಾ ಶೆಟ್ಟಿಯವರ ಕೊಡುಗೆಯೂ ಇದೆ. 2022 ರಲ್ಲಿ ಇವರನ್ನು ಪ್ರತಿಷ್ಠಿತ ಮಣಿಪಾಲ ಅಕಾಡೆಮಿಯು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಟ್ರಸ್ಟಿಯನ್ನಾಗಿ ನೇಮಿಸಿವೆ. ಹೀಗೆ ಯಶಸ್ವೀ ಉದ್ಯಮಿಯಾಗಿ ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಜಯಕರ ಶೆಟ್ಟಿಯವರು ಇನ್ನಷ್ಟು ಅಭಿವೃದ್ಧಿ ಹೊಂದಿ ಇನ್ನಷ್ಟು ಮಂದಿಗೆ ಉದ್ಯೋಗದಾತರಾಗಲಿ ಎಂದು ನಮ್ಮ ಮಾಧ್ಯಮ ಸಂಸ್ಥೆಯ ಶುಭ ಹಾರೈಸುತ್ತದೆ.