ಜ್ಞಾನ ಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ದಿನಾಂಕ 15- 9 – 2023 ರಂದು ಪೋಷಕರ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದು, ಬಹಳ ಉತ್ಸಾಹದಿಂದ ನಡೆಸಲಾಯಿತು. ಕಾರ್ಯಕ್ರಮವು ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾಯಿತು. ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉತ್ಸಾಹದಿಂದ ಪೋಷಕರನ್ನು ಸ್ವಾಗತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಸುಧಾಕರ ಎಸ್ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಪೋಷಕರ ಕ್ರೀಡಾಕೂಟವನ್ನು ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನು ಕುರಿತು ಸಹ ಪ್ರೇರಕ ಭಾಷಣವನ್ನು ಮಾಡಿದರು. ಪ್ರತಿಯೊಬ್ಬರು ಕ್ರೀಡಾಕೂಟದಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದರು ಮತ್ತು ಕ್ರೀಡಾ ಚಟುವಟಿಕೆಗಳನ್ನು ಮಾಡುವುದರಿಂದ ಆಗುವ ಅನೇಕ ಪ್ರಯೋಜನಗಳನ್ನು ತಿಳಿಸಿದರು. ಮಕ್ಕಳಿಗೆ ಪಾಠ ಎಷ್ಟು ಮುಖ್ಯವೋ ಆಟವು ಅಷ್ಟೇ ಮುಖ್ಯ. ಕ್ರೀಡೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರೂ ಇದ್ದಾರೆ ಎಂದರು.
ಶಾಲಾ ಕ್ರೀಡಾ ಇಲಾಖೆ ವತಿಯಿಂದ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪೋಷಕರು ತಮ್ಮ ಆಸಕ್ತಿಗೆ ಅನುಗುಣವಾಗಿ ಭಾಗವಹಿಸಿದರು. ಶಾಲೆಯ ಒಳ ಸಭಾಂಗಣದಲ್ಲಿ ಎಲ್ಲಾ ಆಟಗಳನ್ನು ಆಯೋಜಿಸಲಾಗಿತ್ತು. ಎಲ್ಲಾ ಪೋಷಕರು ಉತ್ಸಾಹಭರಿತರಾಗಿ ಎಲ್ಲಾ ಆಟಗಳಲ್ಲೂ ಪಾಲ್ಗೊಂಡರು. ಎಲ್ಲಾ ಆಟಗಳು ಮುಗಿದ ನಂತರ ಬಹುಮಾನ ವಿತರಣಾ ಸಮಾರಂಭದಲ್ಲಿ ಪಂದ್ಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಎಲ್ಲಾ ವಿಜೇತರಿಗೂ ಸುಧಾಕರ ಎಸ್ ಶೆಟ್ಟಿ ಅವರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಯವರಾದ ಶ್ರೀಮತಿ ಸುಖಲತಾ ಎಸ್ ಶೆಟ್ಟಿ, ಪ್ರಾಂಶುಪಾಲರಾದ ಶ್ರೀಮತಿ ಶಾಂತಿನಿ ಜರಾಲ್ಡ್, ಆಡಳಿತ ಅಧಿಕಾರಿಗಳಾದ ಶ್ರೀ ಮುಕುಂದ್ ಉಪಸ್ಥಿತರಿದ್ದರು.