ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ‘ಬಂಟ ಕಲಾ ಸಂಭ್ರಮ” ಆದಿತ್ಯವಾರ ಬಂಟ್ಸ್ ಹಾಸ್ಟೆಲ್ನ ಓಂಕಾರ ನಗರದ ಗಣೇಶೋತ್ಸವದ ವೇದಿಕೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ಸಮಾಜದ ಸಂಘಟನೆಗೆ ಬಂಟ ಕಲಾ ಸಂಭ್ರಮದಂತಹ ಕಾರ್ಯಕ್ರಮ ಪೂರಕವಾಗಿರುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಸುಮಾರು 16 ತಂಡಗಳು ಭಾಗವಹಿಸುತ್ತಿದೆ. ಇಂತಹ ಸ್ಪರ್ಧೆಯಿಂದ ಎಲ್ಲಾ ಸಂಘಗಳು ಸಕ್ರಿಯವಾಗುತ್ತದೆ. ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಒಳ್ಳೆಯ ವೇದಿಕೆ. ಬಂಟ ಕಲಾ ಸಂಭ್ರಮ ಶಿಸ್ತುಬದ್ಧವಾಗಿ ಆಯೋಜನೆಗೊಂಡಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿರುವುದು ಬಂಟರ ಸಂಘದ ಹಿರಿಮೆಯಾಗಿದೆ. ಬಂಟರ ಮಾತೃ ಸಂಘದ ಅಡಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅತೀವ ಸಂತಸ ತಂದಿದೆ. ಬಂಟ ಸಮುದಾಯ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದೆ. ಎಲ್ಲರಿಂದ ಗುರುತಿಸಲ್ಪಟ್ಟು ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುವ ನಾವು ಸಮಾಜದಲ್ಲಿ ಒಗ್ಗಟ್ಟಾಗಿದ್ದರೆ ಇನ್ನಷ್ಟು ಪ್ರಗತಿ ಸಾಧ್ಯ” ಎಂದರು.


ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕೋಶಾಧಿಕಾರಿ ರಾಮ್ ಮೋಹನ್ ರೈ, ಕಾಸರಗೋಡು ಬಂಟರ ಸಂಘದ ಅಧ್ಯಕ್ಷ ಸುಬ್ಬಯ್ಯ ರೈ, ಕಾಸರಗೋಡು ಜಿಲ್ಲಾ ಸಂಚಾಲಕ ಕೆ ಸಂಜೀವ ಶೆಟ್ಟಿ, ಆಶಾಜ್ಯೋತಿ ರೈ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು ಮತ್ತಿತರರು ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಅತಿಥಿಗಳನ್ನು ಸ್ವಾಗತಿಸಿದರು.

ರವಿಚಂದ್ರ ಶೆಟ್ಟಿ ಅಶೋಕನಗರ ವಂದಿಸಿದರು. ಕಿರಣ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಬಂಟ ಕಲಾ ಸಂಭ್ರಮದ ತೀರ್ಪುಗಾರರಾಗಿ ಮೈಮ್ ರಮೇಶ್ ರಂಗಾಯಣ, ಸುರೇಂದ್ರನಾಥ ಶೆಟ್ಟಿ ಮಾರ್ನಾಡ್, ಅವಿನಾಶ್ ಕಾಮತ್ ಭಾಗವಹಿಸಿದ್ದರು.

 
		




























































































 



 
 
 
 
 
 
 
 





