ದೈವಾರಾಧನೆಯನ್ನು ಉಸಿರಾಗಿಸಿಕೊಂಡಿರುವ ತುಳುನಾಡಿನಲ್ಲಿ ಅನೇಕ ಕಾರ್ಣಿಕ ಕ್ಷೇತ್ರಗಳು ಕಾಣ ಸಿಗುತ್ತವೆ. ಅಂತಹ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕ್ಷೇತ್ರ ತಾರಾಬರಿ (ಸಾರಬಳಿ) ಜುಮಾದಿ ಬಂಟ ಕ್ಷೇತ್ರ, ಕೆಂಜಾರು. ತಾರಾಬರಿ ತುಳುನಾಡಿನಲ್ಲಿ ಆರಾಧಿಸಲ್ಪಡುವ ಜುಮಾದಿ ಬಂಟ ದೈವಗಳ ಬಂಡಿ ಉತ್ಸವಗಳಲ್ಲಿ ವಿಶೇಷವಾಗಿ ಕಾಣಿಸಲ್ಪಡುತ್ತದೆ. ಪಶ್ಚಿಮ ಘಟ್ಟದಿಂದ ಕಡಲ ತಟಿಯವರಗಿನ ಸಾವಿರಾರು ಭಕ್ತರು ಇಲ್ಲಿಯ ಬಂಡಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ತಾರಾಬರಿ ಕ್ಷೇತ್ರದ ಕಾರಣಿಕದ ಇತಿಹಾಸವನ್ನು ನೋಡಿದಾಗ ಸೂಮಾರು ೯೦೦ ವರ್ಷಗಳ ಹಿಂದೆ “ಭೂತ ಮಂಜು” ಎಂಬವರನ್ನು ಬೆನ್ನು ಹಿಡಿದು ಬಂದ ದೈವಗಳು ತಾರಾ ಬರಿಯಲ್ಲಿ ನೆಲೆಯೂರಿ ಪೇಜಾವರ ಮಾಗಣೆಯವರಿಂದ ಆರಾಧಿಸಲ್ಪಡುತ್ತಾ ಕಾರಣಿಕ ಮೆರೆಯುತ್ತಿದ್ದಾರೆ.
ದೈವದ ನುಡಿಕಟ್ಟಿನನುಸಾರ “ಭೂತ ಮಂಜುವಿನ” ಬೆನ್ನು ಹಿಡಿದು ಬಂದ ದೈವವು ಮಾಗಣೆ ಸಮಸ್ತರ ಕೂಡುವಿಕೆಯೊಂದಿಗೆ ಚಿಕ್ಕಪರಾರಿ “ಮಂಜೊಟ್ಟಿ ಮಾರ್ಲ” ಕೈಯಿಂದ ಕೆಸರುಕಲ್ಲು ಹಾಕಿಸಿಕೊಂಡು ದೈವಸ್ಥಾನ ನಿರ್ಮಿಸಲ್ಪಟ್ಟು ಶ್ರೀ ಕ್ಷೇತ್ರದಲ್ಲಿ ನೆಲೆಯೂರಿರುತ್ತಾರೆ. ಮುಂದೆ ಮಂಜೊಟ್ಟಿ ಮಾರ್ಲರಿಂದ ಪಾಪೆ ಬಂಡಿಯನ್ನು ಅರ್ಪಿಸಿಕೊಂಡು ಕೀರ್ತಿ ಪಡೆದರು ಎಂದು ಪ್ರತೀತಿ. ಶ್ರೀ ಕ್ಷೇತ್ರ ಜುಮಾದಿಯ ಕಂಗಿನ ಹಾಳೆಯ ಮೊಗದ ಬದಲಿಗೆ ಬೆಳ್ಳಿಯ ಮೊಗದ ತಯಾರಿಯಲ್ಲಿ ತಯಾರಿಸುವವನಿಂದ ಆದ ಮೋಸಕ್ಕೆ ದೈವವು ಉಗ್ರಗೊಂಡು ಆತನನ್ನು ಕಂಬಳ ಗದ್ದೆಯಲ್ಲಿ ಬಿಳಿ ನೊರೆ ಕಾರಿಸಿ ಮೂರ್ಛೆಗೊಳಿಸಿದಾಗ ಆತನ ತಾಯಿಯ ಅಳಲಿಗೆ ಶಾಂತಗೊಂಡು, ಆಕೆಯು ತಪ್ಪು ಕಾಣಿಕೆಯಾಗಿ ಭಕ್ತಿಯಿಂದ ಅರ್ಪಿಸಿದ ಆಕೆಯ ಚಿನ್ನದ ಒಲೆಯನ್ನು ತನ್ನ ಮೊಗದ ನಾಲಿಗೆಯಾಗಿ ಧರಿಸಿಕೊಂಡು ಭಕ್ತರ ಇಷ್ಟಾರ್ಥವನ್ನು ತಾಯಿ ಜುಮಾದಿ ಒದಗಿಸಿಕೊಡುತ್ತಿರುವುದು ಶ್ರೀ ಕ್ಷೇತ್ರದ ಕಾರ್ಣಿಕಕ್ಕೆ ಜ್ವಲಂತ ಸಾಕ್ಷಿ.
ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಏಪ್ರಿಲ್ ತಿಂಗಳಲ್ಲಿ ಸಂಕ್ರಮಣಕ್ಕೆ ದ್ವಜಾರೋಹಣಗೊಂಡು ಬಿಸು ಹಬ್ಬ ಸೌರಮಾನ ಯುಗಾದಿಯಂದು ತಾರಾಬರಿ ಬಂಡಿ ಉತ್ಸವ ನಡೆದು ಮರು ದಿನ ದ್ವಜಾವರೋಹಣಗೊಂಡು ತುಡಾರ ಬಲಿ ಸೇವೆ ನಡೆಯುತ್ತದೆ. ಗಣೇಶ ಚೌತಿಯ ಹಾಗೂ ಬಲಿಪಾಡ್ಯದ ಮರುದಿನ ಕ್ರಮವಾಗಿ ಚೌತಿ ಪರ್ಬ ಸೇವೆ ನಡೆಯುತ್ತದೆ.
ಪೇಜಾವರ ಮಾಗಣೆಯ ೫ ಗ್ರಾಮಗಳಾದ ಕೆಂಜಾರು, ಕರಂಬಾರು, ಮರವೂರು, ತೋಕೂರು, ಬಜ್ಪೆ, ಇಲ್ಲಿಯ ಭಕ್ತರ ಆರಾಧ್ಯ ದೈವವಾಗಿ ತನ್ನ ವಿಶೇಷವಾದ ಕಾರ್ಣಿಕದಿಂದ ಹೆಸರುವಾಸಿಯಾಗಿದೆ. ತುಳುನಾಡಿನಲ್ಲಿ ನಡೆಯುವ ಜುಮಾದಿ ಬಂಟ ದೈವದ ಬಂಡಿ ಉತ್ಸವಗಳಲ್ಲಿ ಇಲ್ಲಿಯ ಬಂಡಿ ಉತ್ಸವಕ್ಕೆ ಸಾವಿರಾರು ಭಕ್ತರು ಬಂದು ಸೇರುತ್ತಾರೆ. ಬೆಳ್ಳಿಯ ಮೊಗದಲ್ಲಿ ಬಂಗಾರದ ನಾಲಿಗೆಯನ್ನು ಹೊತ್ತ ದೈವದ ಸಿರಿ ಸಿಂಗಾರದ ರೂಪದಲ್ಲಿ ನೋಡುವುದು ನಮ್ಮೆಲ್ಲರ ಭಾಗ್ಯವೇ ಸರಿ. ನಂಬಿದ ಭಕ್ತರನ್ನು ತನ್ನ ಮಡಿಲಲ್ಲಿ ಹೊತ್ತು ಇಂಬು ನೀಡಿ ಸಲಹುತ್ತಾಳೆ ತಾರಾಬರಿ ಶ್ರೀ ಜುಮಾದಿ.
ಕೃಪೆ : ಬ್ಯೂಟಿ ಆಫ್ ತುಳುನಾಡು