ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಯೋಜನೆಯಲ್ಲಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವ ಹಾಗೂ ಮಾರ್ಗದರ್ಶನದೊಂದಿಗೆ ಅಕ್ಟೋಬರ್ ತಿಂಗಳಿನಲ್ಲಿ ದಿನಾಂಕ 28 ಮತ್ತು 29ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ದಿನಪೂರ್ತಿ ನಡೆಯಲಿರುವ “ವಿಶ್ವ ಬಂಟರ ಕ್ರೀಡಾಕೂಟ” “ವಿಶ್ವ ಬಂಟರ ಸಮ್ಮಿಲನ” ವಿಶ್ವ ಬಂಟರ ಸಾಂಸ್ಕೃತಿಕ ವೈಭವ ನಡೆಯಲಿದ್ದು ಇದರ ಪ್ರಯುಕ್ತ ಪೂರ್ವಭಾವಿ ಸಭೆಯು ಆ.26 ರ ಶನಿವಾರ ಬಂಟರ ಸಂಘ ಮುಂಬಯಿಯ ರಂಜನಿ ಸುಧಾಕರ ಹೆಗ್ಡೆ ಸಮಾಜ ಕಲ್ಯಾಣ ಎನೆಕ್ಸ್ ಸಭಾಂಗಣದಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಮಾತನಾಡುತ್ತಾ ಪ್ರತಿಯೊಂದು ಕಾರ್ಯಕ್ರಮ ಮಾಡುವ ಮುನ್ನ ಕಟೀಲಿನ ದುರ್ಗಾಪರಮೇಶ್ವರಿಯನ್ನು ಮುಂದಿಟ್ಟು ಎಲ್ಲಾ ಕಾರ್ಯಗಳನ್ನು ಮಾಡುತ್ತಿದ್ದೇವೆ. ನಾವು ಸಮಾಜದ ಸೇವಕರಾಗಿ ಸೇವೆ ಮಾಡುತ್ತಿದ್ದೇವೆ. ಮಾಡಿಸುವವರೆಲ್ಲಾ ಆ ಜಗನ್ಮಾತೆ. ಈ ಸಭೆಯಲ್ಲಿ ನಮ್ಮ ಬಾಂಧವರು ಬಂಟ ಸಮಾಜದ ಮೇಲಿನ ಸ್ವಾಭಿಮಾನದಿಂದ ಪಾಲ್ಗೊಂಡಿದ್ದಾರೆ. ಒಕ್ಕೂಟದ ಈ ಹಿಂದೆ ನಡೆದ ಸಮ್ಮಿಲನ ಎಲ್ಲವೂ ಇತಿಹಾಸವಾಗಿದೆ. ಅದರಲ್ಲಿ ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು, ಹಿರಿಯ ಉದ್ಯಮಿಗಳನ್ನು ಸಮಾಜ ಸೇವಕರನ್ನು ಗುರುತಿಸುವಂತೆ ಕೆಲಸ ನಡೆದಿದೆ. 65 ಕ್ಕೂ ಮಿಕ್ಕಿ ಗುತ್ತಿನ ಮನೆಯ ಗುತ್ತಿನಾರಿನವರನ್ನು ಸನ್ಮಾನಿಸಿದ್ದೇವೆ. ಇದೀಗ ಅದರಲ್ಲಿ ತುಂಬಾ ಜನ ನಮ್ಮನ್ನೆಲ್ಲರನ್ನು ಅಗಲಿದ್ದಾರೆ. ಆದರೆ ಆ ನೆನಪು ನಮ್ಮಲ್ಲಿ ಸದಾ ನೆನಪಿಸುತ್ತದೆ. ಅಂತಹ ಸಮ್ಮೇಳನ ನಡೆದಾಗ ನಮ್ಮ ಊರಿನ ಎಲ್ಲಾ ಬಂಟ ಸಂಘಟನೆಗಳೆಲ್ಲವೂ ನಿದ್ರಿಸುತ್ತಿದ್ದವು. ಸಮ್ಮಿಲನದ ನಂತರದ ದಿನಗಳಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಬಂಟರು ಒಗ್ಗಟ್ಟು, ಸಂಘಟನಾ ಶಕ್ತಿ ಬೆಳಗೆ ನಿಂತಿದೆ. ಒಕ್ಕೂಟದಲ್ಲಿ ಅಧಿಕಾರ ಸ್ವೀಕರಿಸಿ ಇಂದಿನ ದಿನ ತನಕ ಸುಮಾರು 25 ಕೋಟಿ ರೂಪಾಯಿಯನ್ನು ಮುಂಬಯಿಯಿಂದ ಸಂಗ್ರಹಿಸಿ ಊರಿನ ಸಮಾಜದ ಆರ್ಥಿಕವಾಗಿ ಹಿಂದುಳಿದ ಸಮಾಜದ ಬಂಧುಗಳಿಗೆ, ಶಿಕ್ಷಣಕ್ಕೆ, ಕ್ರೀಡಾಪಟುಗಳಿಗೆ, ಮನೆ ನಿರ್ಮಾಣಕ್ಕೆ ವಿವಿಧ ರೀತಿಯಲ್ಲಿ ಸಹಾಯ ಸಹಕಾರವನ್ನು ನೀಡುತ್ತಾ ಬಂದಿದೆ. ಇದು ಖಂಡಿತ ಮುಂದಿನ ದಿನಗಳಲ್ಲಿ ಸಮಾಜದ ಜವಾಬ್ದಾರಿಯನ್ನು ಯುವಕರು ನಿರ್ವಹಿಸಬೇಕು ಅದಕ್ಕಾಗಿ ಮುಂದೆ ನಡೆಯಲಿರುವ ವಿಶ್ವ ಕ್ರೀಡಾ ಕೂಟದ ಜವಾಬ್ದಾರಿಯನ್ನು ಯುವ ನಾಯಕ ಗಿರೀಶ್ ಶೆಟ್ಟಿ ಅವರಿಗೆ ನೀಡಿದ್ದೇವೆ. ಊರಿನಲ್ಲಿ ಎರಡು ಸಭೆಗಳು ನಡೆದಿದೆ. ಸಮಾಜದ ಬಂಧುಗಳ ಒಳ್ಳೆಯ ಪ್ರತಿಕ್ರಿಯೆಗಳು ಲಭಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಜವಾಬ್ದಾರಿಯನ್ನು ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮವನ್ನು ಮಾಡುವ ಕರ್ನೂರು ಮೋಹನ್ ರೈ ಅವರಿಗೆ ನೀಡಲಾಗಿದೆ. ಜಾಗತಿಕ ಮಟ್ಟದ ಬಂಟರ ಸಂಘಗಳ ಪಥ ಸಂಚಲ ನಡೆಯಲಿದೆ. ಅದರಲ್ಲಿ ಪಾಲ್ಗೊಂಡವರಿಗೆ ಪ್ರಥಮ ದ್ವಿತೀಯ ತೃತೀಯ ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪಥ ಸಂಚಲನ ಪಾಲ್ಗೊಂಡವರನ್ನು ನೋಡುವುದಕ್ಕೆ ಸಾವಿರ ಸಂಖ್ಯೆಯಲ್ಲಿ ಜನ ಸೇರುವಂತಾಗಬೇಕು. ಈ ಪಥ ಸಂಚಲನದಲ್ಲಿ ಊರಿನ ಎಲ್ಲಾ ಬಂಟರ ಸಂಘಗಳು ಪಾಲ್ಗೊಳ್ಳುತ್ತದೆ. ಬಂಟರ ಸಂಘ ಮುಂಬಯಿ ಕೂಡಾ ಪಾಲ್ಗೊಂಡು ಬಹುಮಾನವನ್ನು ಪಡೆಯುವಂತಾಗಬೇಕು. ಪ್ರತಿಯೊಂದು ಸ್ಪರ್ಧೆಯಲ್ಲಿ ಮುಂಬಯಿಯ ಬಂಟರು ಪಾಲ್ಗೊಂಡು ಎಲ್ಲಾ ಬಂಟ ಸಂಘಟನೆಗಳಿಗೆ ಸ್ಪರ್ಧಿಗಳಾಗಿ ಸ್ಪರ್ಧೆಯಲ್ಲಿ ವಿಜೇತರಾಗಬೇಕು. ಎರಡು ತಿಂಗಳುಗಳ ಕಾಲಾವಧಿ ಇದೆ. ಪ್ರತೀ ಪ್ರಾದೇಶಿಕ ಸಮಿತಿಗಳು ಸಿದ್ಧತೆ ಮಾಡುವಷ್ಟು ಸಮಯಗಳಿದೆ. ಪ್ರೋ ಕಬಡ್ಡಿ ರೀತಿಯಲ್ಲಿ ಕಬಡ್ಡಿ ನಡೆಯಲಿದೆ. ಈ ಅಪೂರ್ವ ಕಾರ್ಯಕ್ರಮಕ್ಕೆ ಮುಂಬಯಿ ಬಂಟರು ಜವಾಬ್ದಾರಿಯನ್ನು ನಿರ್ವಹಿಸಬೇಕು. ಪ್ರತಿಯೊಂದು ವಿಭಾಗದಲ್ಲೂ ಕೂಡ ನಮ್ಮ ಮುಂಬಯಿಯ ಬಂಟರು ಜವಾಬ್ದಾರಿತ ಕೆಲಸವನ್ನು ಮಾಡಬೇಕು. ಈ ಒಂದು ಅಭೂತಪೂರ್ವ ಕಾರ್ಯಕ್ರಮ ಬೇರೆ ಸಮಾಜದ ಬಂಧುಗಳಿಗೆ ಆದರ್ಶವಾಗಬೇಕು. ನಮ್ಮ ಒಗ್ಗಟ್ಟು ನಮ್ಮ ಸಂಘಟನಾ ಶಕ್ತಿ ಜಗತ್ತಿಗೆ ಮತ್ತೊಮ್ಮೆ ತೋರಿಸುವ ಸಮಯ ಎದುರಾಗಿದೆ. ಮುಂಬಯಿಯಲ್ಲಿರುವ ಎಲ್ಲಾ ಬಂಟ ಸಂಘಟನೆಗಳು ಈ ಒಂದು ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ವಿಗೊಳಿಸಬೇಕು. ಇದು ನಮ್ಮೆಲ್ಲರ ಮನೆಯ ಕಾರ್ಯಕ್ರಮ ಎನ್ನುವ ಭಾವನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ದೇಶ. ವಿದೇಶದಾದ್ಯಂತ ಇರುವ ಬಂಟರ ಸಂಘಗಳಲ್ಲಿ ಸಭೆಯನ್ನು ನಡೆಸಿ ಅಲ್ಲಿಯ ಸಂಘಟನೆಗಳನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತೇವೆ. ಬಂಟ ಸಮಾಜದ ಬಂಧುಗಳು ಒಟ್ಟಾದರೆ ಯಾವ ರೀತಿ ಸಮಾಜ ಬೆಳೆಯಬಹುದು ಎನ್ನುವುದು ನಾವೆಲ್ಲರೂ ಒಗ್ಗಟ್ಟಿನಲ್ಲಿ ತೋರಿಸಬೇಕಾಗಿದೆ. ಜಾಗತಿಕ ಒಕ್ಕೂಟಕ್ಕೆ ಬಂದವರು ಇಂದಿನ ತನಕ ದೂರವಾಗಿಲ್ಲ. ದೇಣಿಗೆ ನೀಡಿದ ದಾನಿಗಳು ನಮ್ಮ ಕೆಲಸವನ್ನು ಪ್ರಶಂಸಿಸಿದ್ದಾರೆ. ಸಮಾಜಕ್ಕೆ ಸಮಯ ಮತ್ತು ದೇಣಿಗೆ ನೀಡಿದ ಬಂಧುಗಳ ಹೆಸರು ಈ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಗೌರವ ಉಪಸ್ಥಿತರಿದ್ದ ಒಕ್ಕೂಟದ ಮಹಾನಿರ್ದೇಶಕ ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಸಿ.ಎಂ.ಡಿ ತೋನ್ಸೆ ಆನಂದ್ ಎಮ್.ಶೆಟ್ಟಿ ಮಾತನಾಡುತ್ತಾ, ವಿಶ್ವದ ಬಂಟರನ್ನು ಒಗ್ಗೂಡಿಸಬೇಕೆನ್ನುವ ಈ ಒಂದು ಕಾರ್ಯಕ್ರಮದ ರೂವಾರಿ ಐಕಳ ಹರೀಶ್ ಶೆಟ್ಟಿ ಬಂಟ ಸಮಾಜದ ಸಾಮ್ರಾಟ. ಅವರು ಪ್ರತಿಯೊಬ್ಬ ಬಂಟನ ಹೃದಯದಲ್ಲಿ ಇದ್ದಾರೆ. ಬಹಳ ಹಿರಿಯ ಸಂಸ್ಥೆ ಆಗಿರುವಂತಹ ಜಾಗತಿಕ ಬಂಟರ ಸಂಘ ಸೇವಾ ಕಾರ್ಯಗಳಲ್ಲಿ ಐಕಳ ಹರೀಶ್ ಶೆಟ್ಟಿ ಅವರು ಜವಾಬ್ದಾರಿ ತೆಗೆದುಕೊಂಡ ದಿನಗಳಿಂದಲೇ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಿದ್ದಾರೆ. ಎಂಟೆದೆಯ ಬಂಟ ಎನ್ನುವುದನ್ನು ತೋರಿಸಿಕೊಟ್ಟವರು. ಅವರಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಆಶೀರ್ವಾದವಿದೆ. ಪತ್ನಿ ಚಂದ್ರಿಕಾ ಶೆಟ್ಟಿ ಅವರ ಸಂಪೂರ್ಣ ಸಹಕಾರವಿದೆ. ಮನೆಯವರ ಸಹಕಾರವಿಲ್ಲದೆ ಯಾವುದೇ ಕೆಲಸವನ್ನು ಪುರುಷರಿಗೆ ಮಾಡಲು ಅಸಾಧ್ಯ. ಚಂದ್ರಿಕಾ ಶೆಟ್ಟಿ ದೇವತೆ ರೂಪದಲ್ಲಿರುವ ಶಕ್ತಿಯಾಗಿದ್ದಾರೆ. ಐಕಳ ಹರೀಶ್ ಶೆಟ್ಟಿ ಅವರು ಎಲ್ಲರೊಂದಿಗೆ ಪ್ರೀತಿ ವಾತ್ಸಲ್ಯದಿಂದ ಬೆರೆತು, ಬಂಟ ಸಮಾಜ ಬೆಳೆಯಬೇಕು ಬಲಿಷ್ಠ ಆಗಬೇಕು ನಮ್ಮವರೆಲ್ಲರೂ ಸಮಾಜದಲ್ಲಿ ಗುರುತಿಸುವಂತಾಗಬೇಕೆನ್ನುವ ಮಹತ್ಪಾಂಕ್ಷೆ ಅವರಲ್ಲಿದೆ. ಆದ್ದರಿಂದ ಊರಿನ ಕಡು ಬಡತನದ ಕುಟುಂಬಗಳನ್ನು ಭೇಟಿಯಾಗಿ ಮನೆಗೆ ಆರ್ಥಿಕ ನೆರವು, ಮದುವೆಗೆ ನೆರವು, ಮತ್ತಿತರ ಸೇವಾ ಕಾರ್ಯಗಳನ್ನು ಮಾಡುವಾಗ ಕರ್ನಿರೆ ವಿಶ್ವನಾಥ್ ಶೆಟ್ಟಿ ಅವರೊಂದಿಗೆ ಪ್ರತಿ ಕುಟುಂಬವನ್ನು ಭೇಟಿಯಾಗಿ ಸಹಾಯ ಹಸ್ತವನ್ನು ನೀಡುತ್ತಾರೆ. ಅಕ್ಟೋಬರ್ ನಲ್ಲಿ ನಡೆಯಲಿರುವ ಈ ಅದ್ಭುತ ಪೂರ್ವ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಹಕಾರ ನೀಡುವ, ಕ್ರೀಡಾಕೂಟಕ್ಕೆ, ಸಾಂಸ್ಕೃತಿಕ ಉತ್ಸವಕ್ಕೆ ಯುವ ನಾಯಕರಿಗೆ ಅವಕಾಶ ನೀಡಿದ್ದಾರೆ. ಮಹಿಳೆಯರೆಲ್ಲರೂ ವಿಶೇಷ ರೀತಿಯಲ್ಲಿ ಈ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಮುಂಬಯಿಯಲ್ಲಿರುವ ಬಂಟ ಬಂಧುಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಸೇರಿಕೊಳ್ಳುವಂತಾಗಬೇಕು. ಆ ಮೂಲಕ ಮುಂಬಯಿ ಬಂಟರ ಕೀರ್ತಿಯನ್ನು ಜಗತ್ತಿಗೆ ತೋರಿಸುವಂತಾಗಬೇಕು. ಬಂಟರ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಯಶಸ್ವಿ ಕಂಡಾಗ ರಾಜ್ಯಮಟ್ಟ ರಾಷ್ಟ್ರಮಟ್ಟದಲ್ಲಿ ಅವರಲ್ಲಿ ಸ್ಪರ್ಧಿಸಬೇಕೆನ್ನುವ ಹಂಬಲ ಹುಟ್ಟುತ್ತದೆ. ಹಿಂದೆ ನಮ್ಮ ಊರಿನ ಬಂಟ ಸಂಘಟನೆಗಳು ಹೆಚ್ಚು ಸಕ್ರಿಯವಾಗಿ ಸೇವೆಯಲ್ಲಿ ತೊಡಗಿ ಕೊಂಡಿಲ್ಲ. ಒಕ್ಕೂಟದ ಕೆಲಸಗಳು ಐಕಳ ಹರೀಶ್ ಶೆಟ್ಟಿ ಅವರ ಸಂಘಟನಾ ಚತುರತೆಗಳನ್ನು ನೋಡಿ ಎಲ್ಲರಿಗೂ ಒಕ್ಕೂಟದಂತೆ ಕೆಲಸ ಮಾಡಬೇಕು ಐಕಳರಂತೆ ನಾಯಕನಾಗಬೇಕೆಂಬ ಹುಮ್ಮಸು ಬಂದಿದೆ. ಇದು ನಮ್ಮ ಸಮಾಜದಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಒಕ್ಕೂಟದ ಎಲ್ಲಾ ಸೇವಾಕಾರರ್ಯಗಳಿಗೆ ನಾವು ಕೈಜೋಡಿಸಬೇಕಾಗಿದೆ ಎಂದು ನುಡಿದರು.
ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ ಅವರು ಸ್ವಾಗತಿಸುತ್ತಾ ಒಕ್ಕೂಟದ ಅಧ್ಯಕ್ಷರಾಗಿರುವ ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ವಿಶ್ವಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ವೈಭವ ಅಕ್ಟೋಬರ್ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆಯಲಿದೆ ಅದು ಯಶಸ್ವಿಗೊಳಿಸುತ್ತೇವೆ ಎಂಬ ನಿಟ್ಟಿನಲ್ಲಿ ಇಂದು ಸೇರಿರುವ ಸಮಾಜದ ಬಾಂಧವರು ಸಾಕ್ಷಿಯಾಗಿದ್ದಾರೆ. ಒಕ್ಕೂಟದಲ್ಲಿ ಯಾವುದೇ ರೀತಿಯ ಆದಾಯವಿಲ್ಲದ ಸಂಸ್ಥೆಯ ಜವಾಬ್ದಾರಿಯನ್ನು ಐಕಳ ಹರೀಶ್ ಶೆಟ್ಟಿ ಅವರು ವಹಿಸಿಕೊಂಡು ಚಾಲೆಂಜಿಂಗ್ ರೀತಿಯಲ್ಲಿ ಸಮಾಜದ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಐದು ವರ್ಷಗಳ ಹಿಂದೆ ವಿಶ್ವ ಬಂಟರ ಸಮ್ಮಿಲನ ಮಾಡಿ 25 ಸಾವಿರಕ್ಕೂ ಮಿಕ್ಕಿ ಸಮಾಜ ಬಾಂಧವರನ್ನು ಒಗ್ಗೂಡಿಸಿಕೊಂಡಿದ್ದಾರೆ. ಅದು ಬಂಟರ ಸಮಾಜದ ಬಹುದೊಡ್ಡ ಮೈಲುಗಲ್ಲಾಗಿದೆ. ಅಂದಿನಿಂದ ಇಂದಿನ ತನಕ ಊರಿನ ಎಲ್ಲಾ ಬಂಟ ಸಂಘಟನೆಗಳನ್ನು ಬಡಿದೆಬ್ಬಿಸಿದಂತೆ ಆಗಿದೆ. ಇದೀಗ ಪ್ರತಿಯೊಂದು ಬಂಟರ ಸಂಘಗಳು ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ. ಐದು ವರ್ಷಗಳ ನಂತರ ಮತ್ತೆ ವಿಶ್ವಮಟ್ಟದ ಕ್ರೀಡಾಕೂಟ ಸಾಂಸ್ಕೃತಿಕ ವೈಭವ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮುಂಬಯಿ ಬಂಟರು ಸೇರಿಕೊಳ್ಳುವಂತಾಗಬೇಕು ಎಂದು ವಿನಂತಿಸಿಕೊಂಡರು.
ಒಕ್ಕೂಟದ ಮಹಾ ನಿರ್ದೇಶಕ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿನ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಮಾತನಾಡುತ್ತಾ ಒಕ್ಕೂಟದಲ್ಲಿ ಸಮಾಜದ ಬಂಧುಗಳಿಗಾಗಿ ಬಹಳಷ್ಟು ಸೇವಾಕಾರ್ಯಗಳು ನಡೆದಿದೆ, ಅದೆಲ್ಲವೂ ಯಶಸ್ವಿಯಾಗಿದೆ. ಅದಕ್ಕೆ ಕಾರಣ ಒಕ್ಕೂಟದ ಅಧ್ಯಕ್ಷರ ಯೋಚನೆಗಳು. ಐಕಳ ಹರೀಶ್ ಶೆಟ್ಟಿ ಅವರು ಯಾವುದೇ ಒಂದು ಕೆಲಸವನ್ನು ರೂಪಿಸಿದರೆ ಅದನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸುತ್ತಾರೆ. ಅವರು ಪ್ರತಿಯೊಬ್ಬನನ್ನು ನೆನಪಿಸುತ್ತಾರೆ. ಅವರ ಸೇವಾ ಕಾರ್ಯಗಳನ್ನು ಸದಾ ಸ್ಮರಿಸುತ್ತಾರೆ. ಯಾವುದೇ ಒಂದು ಸಂಘಟನೆಗೆ ಜನಬಲ ಎಷ್ಟು ಮುಖ್ಯವೋ ಅಷ್ಟೇ ಹಣ ಬಲವು ಅಷ್ಟೇ ಅಗತ್ಯ. ಐಕಳ ಹರೀಶ್ ಶೆಟ್ಟಿ ಅವರು ಒಂದು ಕಾರ್ಯಕ್ರಮ ಮಾಡುವುದಾದರೆ 25,000 ಕ್ಕಿಂತ ಮಿಕ್ಕಿ ಬಂಧುಗಳನ್ನು ಸೇರಿಸುತ್ತಾರೆ. ಅದರೊಟ್ಟಿಗೆ ಹಣ ಬಲವನ್ನು ಕೂಡ ಕ್ರೋಡೀಕರಣ ಮಾಡುವಲ್ಲಿ ಅವರು ಶ್ರೇಷ್ಠರು. ಅವರು ಯಾವುದೇ ಒಂದು ಯೋಜನೆಯನ್ನು ರೂಪಿಸಿಕೊಂಡಾಗ ಬಜೆಟ್ ಅನ್ನು ತಯಾರಿಸುವುದಿಲ್ಲ. ಅವರ ಕೆಲಸ ಕಾರ್ಯಗಳೇ ಅವರಿಗೆ ಯಶಸ್ವಿಯನ್ನು ತಂದುಕೊಡುತ್ತದೆ. ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಮಾಡಿದರೆ ನಮ್ಮ ಸಂಘಟನೆಗಳು ಸಮಾಜದ ಬಂಧುಗಳು ಸದಾ ನೆನಪಿಸುತ್ತಾರೆ. ಒಕ್ಕೂಟದ ವಿಶ್ವ ಬಂಟರ ಸಮ್ಮಿಲನ, ಕ್ರೀಡಾಕೂಟ ಯಶಸ್ವಿಯಾಗಲಿ, ಹೆಚ್ಚು ಸಂಖ್ಯೆಯಲ್ಲಿ ಮುಂಬಯಿ ಬಂಟರು ಸೇರಿಕೊಳ್ಳುವಂತಾಗಲಿ ಎಂದು ನುಡಿದರು.
ಬಂಟರ ಸಂಘದ ಬೋರಿವಿಲಿ ಶಿಕ್ಷಣ ಸಮಿತಿಯ ಉಪಕಾರ್ಯಧ್ಯಕ್ಷ ಮಹೇಶ್ ಎಸ್ ಶೆಟ್ಟಿ ಮಾತನಾಡುತ್ತಾ ಮುಂಬಯಿ ಬಂಟರ ಸಂಘಕ್ಕೆ ನಾನು ಬರಲು, ಈ ಒಂದು ಸಮಾಜದ ಕೆಲಸ ಮಾಡುವುದಕ್ಕೆ ಐಕಳ ಹರೀಶ್ ಶೆಟ್ಟಿ ಅವರು ಕಾರಣ. ಮುಂಬಯಿ ಬಂಟರ ಸಂಘಕ್ಕೆ ಐಕಳ ಹರೀಶ್ ಶೆಟ್ಟಿ ಅವರು ಅಧ್ಯಕ್ಷರಾದ ಸಂದರ್ಭದಲ್ಲಿ ನನ್ನನ್ನು ಕ್ರೀಡಾಕೂಟಕ್ಕೆ ಎರಡನೇ ಬಾರಿ ಕಾರ್ಯ ಅಧ್ಯಕ್ಷರಾಗಿ ಆಯ್ಕೆಗೊಳಿಸಿದರು. ಅವರ ಮಾರ್ಗದರ್ಶನದಲ್ಲಿ ಯಶಸ್ವಿ ಕ್ರೀಡಾಕೂಟವನ್ನಾಗಿಸಿಕೊಂಡಿದ್ದೇವೆ. ಒಕ್ಕೂಟದಲ್ಲಿ ಜಾಗತಿಕ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿದ್ದಾರೆ ನಾವೆಲ್ಲರೂ ಅವರ ಸೇವಾಕಾರ್ಯಗಳಿಗೆ ಸಹಕಾರ ನೀಡುವ ಎಂದು ನುಡಿದರು. ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ಮಾತನಾಡುತ್ತಾ, ಒಕ್ಕೂಟದ ಈ ಒಂದು ಅದ್ದೂರಿಯ ಕಾರ್ಯಕ್ರಮದಲ್ಲಿ ಮುಂಬಯಿ ಬಂಟರ ಸಂಘ ಮತ್ತು ಪ್ರಾದೇಶಿಕ ಸಮಿತಿಗಳು ಪಾಲು ಪಡೆದು ನಾವೆಲ್ಲರೂ ತನು ಮನ ಧನದಿಂದ ಸಹಕಾರ ನೀಡುವ ಎಂದು ನುಡಿದರು.
ಬಂಟರ ಸಂಘ ಮುಂಬಯಿಯ ಪ್ರಾದೇಶಿಕ ಸಮಿತಿಗಳ ಪಶ್ಚಿಮ ವಲಯದ ಸಮನ್ವಯಕ ಶಶಿಧರ್ ಶೆಟ್ಟಿ ಇನ್ನಂಜೆ ಮಾತನಾಡುತ್ತಾ, ಮುಂಬಯಿ ಬಂಟರ ಸಂಘಕ್ಕೆ ಸರಿ ಸುಮಾರು ಶೇಕಡಾ 70 ರಷ್ಟು ಜನ ಐಕಳ ಹರೀಶ್ ಶೆಟ್ಟಿಯವರ ಮೂಲಕವೇ ಸದಸ್ಯತನ ನೋಂದಾಯಿಸಿದ್ದಾರೆ ಎನ್ನುವುದು ಇಲ್ಲಿಯ ಜನರ ಮಾತುಗಳಿಂದ ಅರ್ಥವಾಗುತ್ತಿದೆ. ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮ ನನ್ನೂರಿನ ಪಕ್ಕದಲ್ಲಿ ನಡೆಯುವುದರಿಂದ ಇದಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಭರವಸೆಯನ್ನು ನೀಡುತ್ತೇನೆ. ಮುಂಬಯಿಯ ಬಂಟರ ಒಗ್ಗಟ್ಟು ಊರಿನವರಿಗೆ ಮನವರಿಕೆ ಮಾಡುವ ರೀತಿಯಲ್ಲಿ ನಾವೆಲ್ಲರೂ ಒಗ್ಗಟ್ಟಿನಲ್ಲಿ ಅಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ. ಪ್ರತೀ ಪ್ರಾದೇಶಿಕ ಸಮಿತಿಯ ತಂಡಗಳು ಕಾರ್ಯಕ್ರಮದಲ್ಲಿ ವಿವಿಧ ರೀತಿಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಎಂದು ನುಡಿದರು. ಮುಂಬಯಿ ಬಂಟರ ಸಂಘದ ಬಂಟರ ವಾಣಿಯ ಕಾರ್ಯಧ್ಯಕ್ಷ ರವೀಂದ್ರನಾಥ ಭಂಡಾರಿ ಮಾತನಾಡುತ್ತಾ, ನಾನಿಂದು ಸಮಾಜ ಸೇವೆಯ ಮೂಲಕ ಜನರಿಗೆ ನನ್ನನ್ನು ಗುರುತಿಸುವಂತಾಗಲು ಕಾರಣ ಐಕಳ ಹರೀಶ್ ಶೆಟ್ಟಿ ಅವರು. ನನ್ನನ್ನು ಬಂಟರ ಸಂಘಕ್ಕೆ ಕರೆ ತಂದು ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷರಾಗಿ ಜವಾಬ್ದಾರಿಯನ್ನು ನೀಡಿದರು. ಅಂದಿನಿಂದ ವಿವಿಧ ರೀತಿಯಲ್ಲಿ ಮುಂಬಯಿ ಬಂಟರ ಸಂಘದಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿ ಸೇವೆಯನ್ನು ಮಾಡುತ್ತಿದ್ದೇನೆ. ಮುಂಬಯಿ ಬಂಟರ ಸಂಘಕ್ಕೆ ಐಕಳ ಹರೀಶ್ ಶೆಟ್ಟಿ ಅವರು ಅಧ್ಯಕ್ಷರಾದ ನಂತರವೇ ಸಂಘದ ಕೀರ್ತಿಪತಾಕೆ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯಿತು. ಈಗ ಊರಿನ ಬಂಟ ಸಂಘಟನೆಗಳು ಜಾಗೃತರಾಗಿದ್ದರೆ ಅದಕ್ಕೆ ಕೂಡ ಐಕಳ ಹರೀಶ್ ಶೆಟ್ಟಿ ಅವರೇ ಕಾರಣ. ಇಂದು ಸಂಘಗಳು, ಸಮಾಜದ ಬಂಧುಗಳು ಸಂಘರ್ಷ ರೀತಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಹರೀಶ್ ಶೆಟ್ಟಿ ಅವರು. ಇದು ಉತ್ತಮ ಬೆಳವಣಿಗೆ. ಊರಿನ ಪ್ರತಿಯೊಂದು ಬಂಟ ಸಂಘಗಳು ಒಕ್ಕೂಟದ ಸೇವಾಕಾರ್ಯಗಳಿಗೆ ಬೆಂಬಲವಾಗಿ ನಿಂತಿದೆ. ಅಂತಹ ಮಾನವೀಯತೆ ಗುಣವಿರುವ ಐಕಳ ಹರೀಶ್ ಯವರ ಜಾಗತಿಕ ಮಟ್ಟದ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ನುಡಿದರು.
ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ್ ಶೆಟ್ಟಿ ಕಾರ್ಯಕ್ರಮ ಯಶಸ್ವಿಯಾಗಲಿ, ಐಕಳ ಹರೀಶ್ ಶೆಟ್ಟಿ ಅವರಲ್ಲಿ ಸಂಘಟನಾ ಶಕ್ತಿ ಇದೆ. ಅವರು ಯಾವುದೇ ಯೋಚನೆಗಳನ್ನು ಯೋಜನೆಗಳನ್ನು ರೂಪಿಸುವಾಗ ಅದಕ್ಕೆ ಸಮಾಜ ಬಂಧುಗಳು ಸಹಕಾರ ನೀಡುತ್ತಾರೆ. ಮುಂದಿನ ದಿನಗಳಲ್ಲೂ ಕೂಡ ಅವರೊಂದಿಗೆ ನಾವೆಲ್ಲರೂ ಸೇರಿಕೊಳ್ಳುವ ಎಂದು ನುಡಿದರು. ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣಶೆಟ್ಟಿ ಮಾತನಾಡುತ್ತಾ, ಅಕ್ಟೋಬರ್ 27, 28 ಎರಡು ದಿನಗಳು ಬಂಟ ಸಮಾಜದ ಉತ್ಸವವಾಗಲಿ, ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯುವಂತೆ ಸಮಾಜ ಬಾಂಧವರ ಸಹಕಾರ ಒಕ್ಕೂಟಕ್ಕೆ ಸಿಗಲಿ, ಹರೀಶ್ ಶೆಟ್ಟಿ ಅವರ ಸೇವಾ ಕಾರ್ಯಗಳು ವಿಶ್ವ ವಿಖ್ಯಾತವಾಗಲಿ. ಸಮಾಜದ ಉದ್ದಾರವಾದರೆ ನಮ್ಮೆಲ್ಲರ ಪ್ರಗತಿಯಾದಂತೆ ಎಂದು ನುಡಿದರು.
ಬಂಟರ ಸಂಘದ ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ ಚಿತ್ರ ಜೆ ಶೆಟ್ಟಿ ಮಾತನಾಡುತ್ತಾ, ಒಕ್ಕೂಟದಲ್ಲಿ ವಿಶ್ವಮಟ್ಟದ ಕ್ರೀಡಾಕೂಟ ಆಯೋಜಿಸಿಕೊಂಡಿದ್ದಾರೆ. ಈ ಹಿಂದೆ ಐಕಳ ಹರೀಶ್ ಶೆಟ್ಟಿ ಅವರು ಅಧ್ಯಕ್ಷರಾಗಿದ್ದಾಗ ವಿಶ್ವಮಟ್ಟದ ಕ್ರೀಡಾಕೂಟ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿ ಯಶಸ್ವಿಯಾಗಿ ನಡೆಸಿಕೊಂಡಿದ್ದಾರೆ. ಇದರಿಂದಾಗಿ ಒಕ್ಕೂಟದ ವಿಶ್ವಮಟ್ಟದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತದೆ. ಕಾರ್ಯಕ್ರಮಕ್ಕೆ ಸಹಕಾರ ನೀಡುವ ಎಂದು ನುಡಿದರು. ಒಕ್ಕೂಟದ ವಿಶ್ವ ಸಾಂಸ್ಕೃತಿಕ ಕಾರ್ಯಕ್ರಮದ ಉಪ ಕಾರ್ಯಧ್ಯಕ್ಷ ಕರ್ನೂರು ಮೋಹನ್ ರೈ ಮಾತನಾಡುತ್ತಾ, ಈ ಹಿಂದೆ ಐಕಳ ಹರೀಶ್ ಶೆಟ್ಟಿ ಅವರು ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮವನ್ನು ಮುಂಬಯಿ ನಗರದಲ್ಲಿ ಆಯೋಜಿಸಿಕೊಂಡಿದ್ದರು. ಅದಕ್ಕೆ ಗಲ್ಫ್ ರಾಷ್ಟ್ರದಿಂದ ಸಮಾಜದ ಬಂಧುಗಳು ಆಗಮಿಸಿದ್ದರು. ಇದೀಗ ಅಕ್ಟೋಬರ್ ನಲ್ಲಿ ನಡೆಯಲಿರುವ ಅದ್ದೂರಿಯ ಕಾರ್ಯಕ್ರಮದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸ್ಪರ್ಧೆಗಳು ನಡೆಯಲಿದೆ ಅದರಲೆಲ್ಲಾ ಸಮಾಜದ ಬಂಧುಗಳು ಪಾಲ್ಗೊಳ್ಳಬೇಕು. ಯಾವ ರೀತಿಯಲ್ಲಿ ನಡೆಯಲಿದೆ ಎನ್ನುವ ಸಮಗ್ರ ಮಾಹಿತಿಯನ್ನು ಸಭೆಯ ಮುಂದಿಟ್ಟರು.
ಒಕ್ಕೂಟದ ವಿಶ್ವ ಕ್ರೀಡಾಕೂಟದ ಕಾರ್ಯಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿರುವ ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡುತ್ತಾ, ಕ್ರೀಡಾಕೂಟ ಉಡುಪಿಯಲ್ಲಿ ಯಾವ ರೀತಿಯಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡುತ್ತಾ, ಸುಮಾರು 150ಕ್ಕೂ ಮಿಕ್ಕಿ ಬಂಟ ಸಂಘಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರತಿಯೊಬ್ಬ ಬಂಟರಿಗೂ ಪಾಲ್ಗೊಳ್ಳುವ ಅವಕಾಶ ನೀಡುವುದಕ್ಕಾಗಿ ಎಲ್ಲಾ ಸಿದ್ಧತೆಗಳು ತಯಾರಿಸಿದ್ದೇವೆ, ಬಂಟರ ಸಮಾಜದ ರಾಷ್ಟ್ರಮಟ್ಟದ, ಜಿಲ್ಲಾಮಟ್ಟದ ಕಬಡ್ಡಿ ಆಟಗಾರರನ್ನು ಒಗ್ಗೂಡಿಸಿ ತಡ ರಾತ್ರಿವರೆಗೆ ಪ್ರೊ ಕಬಡ್ಡಿ ರೀತಿಯಲ್ಲಿ ಪಂದ್ಯಾಟ ನಡೆಯಲಿದೆ. ಹೀಗೆ ವಿವಿಧ ರೀತಿಯ ಕ್ರೀಡಾಕೂಟಗಳ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿಸಿದರು. ಉಪಸ್ಥಿತರಿದ್ದ ವಸಂತ ಶೆಟ್ಟಿ ಪಲಿಮಾರು, ಸಿಎ ಐ ಆರ್ ಶೆಟ್ಟಿ, ಅಶೋಕ್ ಶೆಟ್ಟಿ (ಮೆರಿಟ್ ಹಾಸ್ಪಿಟಲಿಟಿಸ್), ದಿವಾಕರ್ ಶೆಟ್ಟಿ ಇಂದ್ರಾಳಿ, ಜಯ ಎ ಶೆಟ್ಟಿ ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಒಕ್ಕೂಟದ ಪೋಷಕರಾದ ಸುಬ್ಬಯ್ಯ ಶೆಟ್ಟಿ, ಕೃಷ್ಣ ಪ್ಯಾಲೇಸ್ಸಿನ ಕೃಷ್ಣ ಶೆಟ್ಟಿ, ಹರೀಶ್ ಪಾಂಡು ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾಶಿ ಮೀರಾ ಮತ್ತಿತರರು ಉಪಸ್ಥಿರಿದ್ದರು. ಕಾರ್ಯಕ್ರಮವನ್ನು ಸಂಘಟಕ ಅಶೋಕ್ ಪಕ್ಕಳ ನಿರೂಪಿಸಿದರು. ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ವಿಜಯ ಶೆಟ್ಟಿ ಮೂಡು ಬೆಳ್ಳೆ ಪ್ರಾರ್ಥಿಸಿದರು. ಸಭೆಯಲ್ಲಿ ವಿವಿಧ ಬಂಟರ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.