ಹುಟ್ಟಿದ ವ್ಯಕ್ತಿ ಎಷ್ಟು ದಿನ ಬದುಕಿದ ಎನ್ನುವುದಕ್ಕಿಂತ ಹೇಗೆ ಬದುಕಿದ ಎನ್ನುವುದು ಮುಖ್ಯವಾಗುತ್ತದೆ. ಮಾನವ ಬಡವನಾಗಿ ಹುಟ್ಟುವುದು ಅವನ ತಪ್ಪಲ್ಲ ಆದರೆ ಬಡವನಾಗಿ ಸಾಯುವುದು ತಪ್ಪು ಎಂಬ ಮಾತನ್ನು ಕೂಡಾ ನಾವು ಕೇಳುತ್ತಾ ಬಂದಿದ್ದೇವೆ. ಈ ಎಲ್ಲಾ ಮಾತುಗಳ ತಾತ್ಪರ್ಯ ಅಂದರೆ ಮನುಷ್ಯ ಕಷ್ಟಪಟ್ಟು ದುಡಿಯಬೇಕು, ಹುಟ್ಟಿದ ಮಾನವ ಏನನ್ನಾದರೂ ಸಾಧಿಸಬೇಕು, ಆತನಲ್ಲಿ ಕೃತ್ವಶಕ್ತಿ, ನಿರಂತರ ಶ್ರಮ, ಸಾಧಿಸುವ ಛಲ, ಹಠ ಎಲ್ಲಕ್ಕಿಂತ ಮಿಗಿಲಾಗಿ ಕನಸು ಇವೆಲ್ಲವೂ ಸಮ್ಮಿಳಿತವಾದಾಗ ಒಂದಲ್ಲ ಒಂದು ಫಲಪ್ರಾಪ್ತಿ ಆಗುವುದು ಖಚಿತ. ಜೊತೆಯಲ್ಲಿ ಸ್ವಲ್ಪ ಅದೃಷ್ಟವೂ ಇರಬೇಕೆನ್ನಿ. ನಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ಹಿರಿಯರು ಕಟ್ಟಿಕೊಟ್ಟ ಬುತ್ತಿಯಲ್ಲ. ಅದನ್ನು ಬಿಚ್ಚಿಟ್ಟರೆ ನಮ್ಮದಾಗುವುದಿಲ್ಲ. ಅದಕ್ಕೆ ಬೇಕಾಗಿರುವುದು ನಿತ್ಯ ನಿರಂತರ ಪರಿಶ್ರಮ. ಪ್ರಾಮಾಣಿಕ ದುಡಿಮೆ ಇವೆಲ್ಲವೂ ಆವಿರ್ಭವಿಸಿದಾಗ ಸಾಧನೆಯ ಸಾರ್ಥಕತೆ ದೊರೆಯುತ್ತದೆ. ತನ್ನ ಜೀವನದುದ್ದಕ್ಕೂ ಪ್ರಾಮಾಣಿಕ ದುಡಿಮೆಯಿಂದ, ಅಚಲವಾದ ಶ್ರಮದಿಂದ ಇಂದು ಯಶಸ್ಸಿನ ಉತ್ತುಂಗಕ್ಕೇರಿದವರು, ಬಂಟ ಸಮಾಜಕ್ಕೆ ಕಿರೀಟಪ್ರಾಯರಾಗಿ ಹೆಸರುವಾಸಿಯಾದವರು ಶ್ರೀಕಾಂತ ಶೆಟ್ಟಿಯವರು. ಜೀವಂತಿಕೆಗೆ, ಲವಲವಿಕೆಗೆ, ಚೈತನ್ಯಶೀಲತೆಗೆ ಮತ್ತೊಂದು ಹೆಸರು ಶ್ರೀಕಾಂತ ಶೆಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದಲ್ಲಿ ಜನಿಸಿದ ಇವರು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಾನ್ ಸಾಧನೆ ಮಾಡಿ ಓರ್ವ ಪರಿಪೂರ್ಣ ಸಮಾಜ ಸೇವಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕನ್ನಡ ನಾಡು ಕಂಡಂತಹ ಬಲಿಷ್ಠ ಸಂಘಟನಾಕಾರ ಯುವಕರಿಗೆ ಮಾರ್ಗದರ್ಶಕರಾಗಿ ಪ್ರಪಂಚದಾದ್ಯಂತ ಹೆಸರು ವಾಸಿಯಾಗಿರುವ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕರಾಗಿರುವ ದಿವಂಗತ ನೆಟ್ಟಾಳ ಮುತ್ತಪ್ಪ ರೈ ಅವರ ಮಾರ್ಗದರ್ಶನದಿಂದ ಜಯಕರ್ನಾಟಕ ದಕ್ಷಿಣ ಕನ್ನಡ ವಲಯದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಸಜೀಪ ಮೂಡ ಗ್ರಾಮ ಪಂಚಾಯತ್ ಸದಸ್ಯರಾಗಿಯೂ, ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಆತ್ಮ ತೃಪ್ತಿ ಇವರಿಗಿದೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಇವರು ಹಲವು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೈಯಾಡಿಸಿಕೊಂಡು ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನದೊಂದಿಗೆ ಪ್ರೋತ್ಸಾಹಿಸುತ್ತಿರುವುದು ಇವರ ಸಾಧನೆಯ ಕೈಗನ್ನಡಿಯೆನ್ನಬಹುದು.
ತಪ್ಪು ಮಾಡದ ಮನುಷ್ಯನಿಲ್ಲ, ತಮ್ಮಿಂದಾದ ತಪ್ಪುಗಳನ್ನು ಮುಚ್ಚಿಡುವವರೇ ಹೆಚ್ಚು. ಆದರೆ ಶ್ರೀಕಾಂತ್ ಶೆಟ್ಟರು ಹಾಗಲ್ಲ ತನ್ನಿಂದಾದ ತಪ್ಪುಗಳನ್ನು ಸ್ವೀಕರಿಸಿ ಆದ ತಪ್ಪನ್ನು ಸರಿಪಡಿಸಿ ಮತ್ತೆಂದೂ ಆ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವ ಜಾಗೃತ ಮನೋಭಾವವೇ ಇವರ ಯಶಸ್ಸಿನ ಗುಟ್ಟು. ನಾವು ಕಾಣುವ ಕನಸು ದೊಡ್ಡದಿರಬೇಕು, ಕನಸು ಕಾಣುವುದು ತಪ್ಪಲ್ಲ ಅದನ್ನು ನನಸು ಮಾಡುವ ಪ್ರಯತ್ನವೇ ಯಶಸ್ಸು. ಶ್ರೀಕಾಂತ್ ಶೆಟ್ಟರು ಯಶಸ್ವೀ ಉದ್ಯಮಿ ಆಗಿರುವಂತೆ ತಾನು ಕಂಡ ಕನಸ್ಸನ್ನು ನನಸು ಮಾಡುವ ಉತ್ಸಾಹಿ. ಕೇವಲ ಹಣ ಗಳಿಸುವುದು ಅಥವಾ ಉದ್ಯಮವನ್ನು ವಿಸ್ತರಿಸಿದಷ್ಟೇ ಯಾರೂ ಯಶಸ್ವೀ ವ್ಯಕ್ತಿ ಎಂದೆನಿಸುವುದಿಲ್ಲ. ಆದರೆ ಯಾವಾಗ ಆತನಲ್ಲಿ ಸಾಮಾಜಿಕ ಕಳಕಳಿ ಇರುತ್ತದೋ, ತನ್ನ ಸಮಾಜದ ಋಣವನ್ನು ತೀರಿಸುವತ್ತ ಆತ ಆಸಕ್ತಿ ತಳೆಯುತ್ತಾನೋ ಅವರೇ ನಿಜವಾದ ಸಾಧಕರು.
ಧಾರ್ಮಿಕವಾಗಿಯೂ ಭಕ್ತಿ ಶ್ರದ್ದೆಯನ್ನು ಬೆಳಿಸಿಕೊಂಡಿರುವ ಶ್ರೀಕಾಂತ್ ಶೆಟ್ಟರು ಶ್ರೀ ದುರ್ಗಾಪರಮೇಶ್ವರಿ ಭಕ್ತವೃಂದ ಸಜೀಪ ಮಾಗಣೆಯ ಗೌರವಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇಡೀ ವಿಶ್ವವೇ ಕೋವಿಡ್ 19 ವೈರಸ್ ಎಂಬ ಮಹಾಮಾರಿಯ ದಾಳಿಗೆ ಬೆಂಡಾಗಿದ್ದು, ಭಾರತದಲ್ಲೂ ತನ್ನ ರಕ್ಕಸ ಕೈಗಳನ್ನು ಚಾಚುತ್ತಿರುವ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ತಾನು ಹುಟ್ಟಿ ಬೆಳೆದ ಊರಿನ ಜನರಿಗೆ ಯಾವುದೇ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಬಂಟ್ವಾಳ ತಾಲೂಕಿನ ಸಜೀಪ ಮೂಡ ಹಾಗೂ ಸಜೀಪ ಮುನ್ನೂರು ಗ್ರಾಮದ ಸುಮಾರು ಐನೂರು ಕುಟುಂಬಗಳಿಗೆ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ದಿನಸಿ ಸಾಮಗ್ರಿಗಳನ್ನು ವಿತರಿಸಿದ ಶ್ರೀಕಾಂತ್ ಶೆಟ್ಟರು ಪ್ರಸ್ತುತ ಬಂಟ್ವಾಳ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಶ್ರೀಕಾಂತ್ ಶೆಟ್ಟರು ಈ ಸಮಾಜಕ್ಕೆ ಏನಾದರೂ ಕೊಡುಗೆ ಸಲ್ಲಿಸಬೇಕೆನ್ನುವ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಹೊಂದಿರುವ ಒಬ್ಬ ಸರಳ ವ್ಯಕ್ತಿ. ಇವರ ಸರಳತೆಯು ಇತರರಿಗೆ ಮಾರ್ಗದರ್ಶನವಾಗಲಿ, ಯುವ ನಾಯಕ ಪ್ರಜಾ ನಾಯಕನಾಗಲಿ ಎಂದು ಸಮಸ್ತ ಸಮಾಜ ಬಾಂಧವರ ಪರವಾಗಿ ಬಂಟ್ಸ್ ನೌ ತಂಡ ಶುಭ ಹಾರೈಸುತ್ತದೆ