ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾಗುವ ಯುವಕ ಯುವತಿಯರ ಸಂಖ್ಯೆ ಜಾಸ್ತಿಯಾಗಿದೆ. ಬಹಳಷ್ಟು ಯುವ ಜನರಲ್ಲಿ ಗಾಂಜಾ ಬಗ್ಗೆ ಇದು ಆರೋಗ್ಯಕರ, ಇದು ಸೃಜನಶೀಲತೆ ಹೆಚ್ಚಿಸುವ ದ್ರವ್ಯ ಎಂಬ ಅಪನಂಬಿಕೆಗಳು ಇವೆ. ಬಾಂಗ್ ತಿಂದಾಗ ಅಥವಾ ಗಾಂಜಾ ಸೇದಿದಾಗ “ಟೆಟ್ರಾ ಹೈಡ್ರೋ ಕ್ಯಾನಬಿನೋಲ್ “ಎಂಬ ಒಂದು ಆಕ್ಟಿವ್ ಪ್ರಿನ್ಸಿಪಲ್ ಮನುಷ್ಯನ ಮೆದುಳು ಮತ್ತು ದೇಹದ ಮೇಲೆ ಕೆಲಸ ಮಾಡುತ್ತದೆ. ಗಾಂಜ ತೆಗೆದುಕೊಂಡ ಕೂಡಲೇ ಮನಸ್ಸಿಗೆ ಆರಾಮವಾಗುತ್ತದೆ ಮತ್ತು ಖುಷಿ ಸಿಗುತ್ತದೆ. ಆದ್ದರಿಂದಲೇ ಯುವಕರು ಇದನ್ನು ಇಷ್ಟ ಪಡುತ್ತಾರೆ. ಆದರೆ ಅದನ್ನು ತೆಗೆದುಕೊಂಡ ಕೂಡಲೇ ಮನಸ್ಸಿಗೆ ಒಂದು ರೀತಿಯ ಕನ್ಫ್ಯೂಷನ್, ಸುಸ್ತು, ನೆನಪಿನ ಶಕ್ತಿಯ ಕೊರತೆ, ಏಕಾಗ್ರತೆಯ ಕೊರತೆ, ಗಮನ ಕೊಡಲು ಆಗದೆ ಇರುವುದು, ಒಂದು ರೀತಿಯ ಹೆದರಿಕೆ ಭಯ ಮತ್ತು ಸುತ್ತಮುತ್ತಲು ನಡೆಯುತ್ತಿರುವ ವಿಷಯಗಳಿಗೆ ಪ್ರತಿಕ್ರಿಯಿಸಲು ಕಷ್ಟವಾಗುವುದು ಇವೆಲ್ಲ ಉಂಟಾಗುತ್ತದೆ. ಇನ್ನು ಕೆಲವರಲ್ಲಿ ಸಂಶಯ ಪ್ರವೃತ್ತಿ, ವಿಚಿತ್ರ ಭ್ರಮೆಗಳು ಹಾಗೂ ಶೂನ್ಯದಲ್ಲಿ ಕಣ್ಣಿಗೆ ವಿಚಿತ್ರ ಆಕೃತಿಗಳು ಕಾಣುವುದು ಅಥವಾ ಶಬ್ದಗಳೇ ಇಲ್ಲದಾಗ ಕಿವಿಗೆ ವಿಚಿತ್ರ ಶಬ್ದಗಳು ಕೇಳುವುದು ಮುಂತಾದವು ಉಂಟಾಗುತ್ತದೆ. ಬಹಳಷ್ಟು ಜನರಲ್ಲಿ “ಮೂಡ್” ಏರುಪೇರು ಆಗುವುದು, ಚಿತ್ತ ವಿಕಲತೆಯ ಚಿಹ್ನೆಗಳು ಕಂಡುಬರುವುದು ಉಂಟಾಗಿ ಮಾನಸಿಕ ಆರೋಗ್ಯ ಹದಗೆಡುತ್ತದೆ. ಗಾಂಜಾ ಸೇದಿದ ಸೆಕಂಡ್ ಗಳಿಂದ ಮೂರು ನಿಮಿಷದ ಒಳಗೆ ಈ ಸಮಸ್ಯೆಗಳು ಶುರುವಾಗಬಹುದು. ಭಾಂಗ್ ತಿಂದು 30 ನಿಮಿಷದ ಒಳಗೆ ಈ ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ಸಮಸ್ಯೆಗಳು ಗಾಂಜಾ ಉಪಯೋಗಿಸಿದ 6 ಗಂಟೆಯಿಂದ 12 ಗಂಟೆಯವರೆಗೆ ಇರುತ್ತದೆ.
ಈ ಪದಾರ್ಥದ ಸೇವನೆಯಾದ ಕೂಡಲೇ ರಕ್ತನಾಳಗಳು ಹಾಳಾಗಬಹುದು ಹಾಗೆ ಬಿಪಿ ಕಡಿಮೆಯಾಗಿ ಇದನ್ನು ಉಪಯೋಗಿಸಿದ ವ್ಯಕ್ತಿ ತಲೆ ತಿರುಗಿ ಬೀಳಬಹುದು. ಹೃದಯ ಬಡಿತ ಜಾಸ್ತಿಯಾಗಿ ಹೃದಯಘಾತ ಕೂಡ ಸಂಭವಿಸಬಹುದು. ಗಾಂಜ ತೆಗೆದುಕೊಂಡ ಯುವಕರು ವಾಹನ ಚಲಾಯಿಸುವಾಗ ಅವರ ದೇಹದ ಸಮನ್ವಯತೆ ದುರ್ಬಲಗೊಂಡಿರುತ್ತದೆ, ಎದುರಿಗೆ ವಾಹನ ಅಥವಾ ವ್ಯಕ್ತಿ ಹೋಗುತ್ತಿದ್ದರೆ ಬ್ರೇಕ್ ಹಾಕಬೇಕು ಎಂಬ ಪ್ರತಿಕ್ರಿಯೆ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಗಮನ ಕೊಡುವ ಸಾಮರ್ಥ್ಯ ಕೂಡ ಕಡಿಮೆಯಾಗುತ್ತದೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕೂಡ ಇರುವುದಿಲ್ಲ, ಇದರಿಂದಾಗಿ ರಸ್ತೆ ಅಪಘಾತಗಳು ಜಾಸ್ತಿ ಆಗುತ್ತಿವೆ. ಮದ್ಯಪಾನ ಮತ್ತು ಗಾಂಜಾ ಎರಡು ಒಟ್ಟಿಗೆ ಸೇರಿದಾಗ ಅಪಘಾತ ಆಗುವ ಸಂಭವ ಹೆಚ್ಚು. ಗಾಂಜಾ ಉಪಯೋಗ ದೀರ್ಘಕಾಲಿನವಾದಾಗ ನೆನಪಿನ ಶಕ್ತಿ, ಏಕಾಗ್ರತೆ, ಬುದ್ಧಿಶಕ್ತಿ ಮತ್ತು ಜೀವನದಲ್ಲಿ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಸಣ್ಣ ವಯಸ್ಸಿನಲ್ಲೇ ಗಾಂಜಾ ಸೇವನೆ ಮಾಡುತ್ತಿರುವ ಯುವಕರು ಹಾಗೂ ಬಹಳ ವರ್ಷಗಳಿಂದ ಅದನ್ನು ಉಪಯೋಗಿಸಿದ ಯುವಕರು ಏಮೋಟಿವೇಷನ್ ಸಿಂಡ್ರೋಮ್ ಎಂಬ ವಿಚಿತ್ರ ಮನೋರೋಗದಿಂದ ಬಳಲುತ್ತಾರೆ. ಇದರಿಂದಾಗಿ ಯಾವುದೇ ಕೆಲಸದಲ್ಲಿ ಆಸಕ್ತಿ ಇಲ್ಲದೆ ವ್ಯಕ್ತಿ ಒಂದೇ ಕೋಣೆಯಲ್ಲಿ ಕುಳಿತುಕೊಂಡು ಶೌಚ ಊಟ ಯಾವುದರಲ್ಲೂ ಆಸಕ್ತಿ ಇಲ್ಲದೆ ಒಬ್ಬನೇ ಕುಳಿತುಕೊಂಡು ಬಿಡುತ್ತಾನೆ. ಹಲವರು ಜೀವನ ಪರ್ಯಂತ ಹೀಗೆ ಇದ್ದುಬಿಡುತ್ತಾರೆ.
ದೀರ್ಘಕಾಲಿನ ಗಾಂಜಾ ಸೇವನೆಯಿಂದ ದೈಹಿಕ ಪರಿಣಾಮಗಳೆಂದರೆ ಬ್ರೋನ್ಕೈಟಿಸ್, ಶ್ವಾಸಕೋಶದ ಊತ, ದೀರ್ಘಕಾಲಿನ ಕೆಮ್ಮು ಇವೆಲ್ಲ ಉಂಟಾಗಬಹುದು. ಯುವಕರು ತಿಳಿದುಕೊಳ್ಳಬೇಕಾದ ಇನ್ನೊಂದು ವಿಷಯ ಅಂದರೆ ಗಾಂಜದ ಬೆಲೆ ಜಾಸ್ತಿ ಇರುವುದರಿಂದ ಕೆಲವೊಮ್ಮೆ ಕೀಟನಾಶಕಗಳು, ಇತರ ಅಗ್ಗದ ಮಾದಕ ದ್ರವ್ಯಗಳು, ಲೋಹಗಳು, ಅಣಬೆ ಮುಂತಾದವುಗಳನ್ನು ಬೆರೆಸಿ ಗಾಂಜಾ ಎಂದು ಮಾರಲಾಗುತ್ತದೆ. ಇವು ಕೂಡ ಆರೋಗ್ಯಕ್ಕೆ ಹಾನಿಕರ. ಯುವಕರಲ್ಲಿ ಆತ್ಮಹತ್ಯೆ, ಖಿನ್ನತೆ, ಆತಂಕ ಮನೋಬೇನೆ, ಸ್ಕಿಜೋಫ್ರೆನಿಯಾ ಅಥವಾ ಇಚ್ಚಿತ ಚಿತ್ತ ವಿಕಲತೆಯಂತಹ ಹೋಲಿಕೆ ಇರುವ ಮಾನಸಿಕ ರೋಗ ಗಾಂಜಾ ಸೇವನೆಯಿಂದ ಉಂಟಾಗುತ್ತದೆ.
ಒಬ್ಬ ಮನೋವೈದ್ಯನಾಗಿ ಇಷ್ಟಂತು ಹೇಳಬಯಸುತ್ತೇನೆ ಮಿದುಳು ಬೆಳೆಯುವ ಹದಿಹರೆಯದ ವಯಸ್ಸಿನಲ್ಲಿ ಗಾಂಜಾ ಸೇವನೆ ಅತಿಯಾಗಿ ಮೆದುಳಿನ ಬೆಳವಣಿಗೆ ಅಸ್ತವ್ಯಸ್ತ ಗೊಳ್ಳುತ್ತದೆ. ಆದ್ದರಿಂದ ಕಾಲೇಜಿನ ವಿದ್ಯಾರ್ಥಿಗಳು ಈ ಬಗ್ಗೆ ಜಾಗೃತರಾಗಿರಬೇಕು.
ಗಾಂಜಾ ಒಂದು “ಕೂಲ್ ” ಡ್ರಗ್ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಇದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಸಾಕಷ್ಟು ವೈಜ್ಞಾನಿಕ ಪುರಾವೆಗಳು ಇವೆ. ಸಮಸ್ಯಾತ್ಮಕ ಗಾಂಜಾ ಬಳಕೆಯು ಕೆಲವು ಅಥವಾ ಕೆಳಗಿನ ಎಲ್ಲ ಸಮಸ್ಯೆಗಳನ್ನು ಒಳಗೊಂಡಿರುತ್ತದೆ
ಕೆಳಗಿನ ನಡವಳಿಕೆಗಳು:
ಕೆಲಸ, ಶಾಲೆ ಅಥವಾ ಮನೆಯಲ್ಲಿ ಪ್ರಮುಖ ಕರ್ತವ್ಯಗಳನ್ನು ಪೂರೈಸಲು ವಿಫಲವಾಗುವುದು.
ಗಾಂಜಾ ಸೇವನೆಯಿಂದಾಗಿ ಪ್ರಮುಖ ಸಾಮಾಜಿಕ, ಔದ್ಯೋಗಿಕ ಅಥವಾ ಮನರಂಜನಾ ಚಟುವಟಿಕೆಗಳನ್ನು ತ್ಯಜಿಸುವುದು.
ಗಾಂಜಾ ಅದನ್ನು ಆಗಾಗ್ಗೆ ಮತ್ತು ದೊಡ್ಡ ಪ್ರಮಾಣದಲ್ಲಿ ಅಥವಾ ಅವರು ಉದ್ದೇಶಿಸುವುದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಸೇವಿಸುವುದು.
ಕ್ಯಾನಬಿಸ್ ಬಳಕೆಯನ್ನು ಕಡಿಮೆ ಮಾಡಲು ಅಥವಾ ನಿಯಂತ್ರಿಸಲು ಸಾಧ್ಯವಾಗದಿರುವುದು.
ಈ ಮೇಲಿನ ನಡವಳಿಕೆಗಳನ್ನು ಹೆಚ್ಚು ಅಥವಾ ಎಲ್ಲವನ್ನು ಪ್ರದರ್ಶಿಸುವ ಜನರು 12 ತಿಂಗಳ ಅವಧಿಗೂ ಹೆಚ್ಚು ಉಪಯೋಗಿಸಿದರೆ ಗಾಂಜಾ ಚಟವನ್ನು ಹೊಂದಿರಬಹುದು ಎನ್ನುತ್ತೇವೆ.
ಕೆಲವು ಜನರು ಗಾಂಜಾ ಪರಿಣಾಮಗಳಿಗೆ ತಾಳಿಕೆ ಬೆಳೆಸಿಕೊಳ್ಳಬಹುದು. ತಾಳಿಕೆ ಅಂದರೆ ಮೊದಲು ಒಂದು ಡೋಸ್ನಲ್ಲಿ ಏನು ಪರಿಣಾಮಗಳು ಬರುತ್ತಿತ್ತು ಪರಿಣಾಮಗಳನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪ್ರಮಾಣದ ಔಷಧದ ಅಗತ್ಯ ಕಂಡು ಬರುತ್ತದೆ. ಒಂದಿಷ್ಟು ಪ್ರಮಾಣ ನಂತರ ಗಾಂಜಾದ ಕೆಲವು ಪರಿಣಾಮಗಳಿಗೆ ತಾಳಿಕೆ ಬೆಳೆಯಬಹುದು. ಕೆಲವು ಜನರಲ್ಲಿ, ಅಂತಿಮವಾಗಿ ದೈಹಿಕ ಅವಲಂಬನೆ/ವ್ಯಸನಕ್ಕೆ ಕಾರಣವಾಗಬಹುದು. ಗಾಂಜವಿಲ್ಲದಿದ್ದರೆ ಒಂದು ಬಗೆಯ ಹಿಂತೆಗೆತದ ಗುಣಲಕ್ಷಣಗಳು ಕಿರಿಕಿರಿ, ಸಿಟ್ಟು ನಿದ್ರಾಹೀನತೆ ಮುಂತಾದವು ಉಂಟಾಗಬಹುದು. ಗಾಂಜಾ ಉಪಯೋಗಿಸುವ ನೂರು ಜನರಲ್ಲಿ 9 ಜನರು ಪೂರ್ಣ ಪ್ರಮಾಣದ ವ್ಯಸನಕ್ಕೆ ಒಳಗಾಗುತ್ತಾರೆ. ಹದಿಹರೆಯದ ಪ್ರಾಯದಿಂದ ಪ್ರಾರಂಭ ಮಾಡುವ ಗಾಂಜಾ ವ್ಯಸನಿಗಳು ಶೇಕಡ 17 ಪೂರ್ಣ ಪ್ರಮಾಣದ ವ್ಯಸನಕ್ಕೆ ಬಲಿಯಾಗುತ್ತಾರೆ.
ಗರ್ಭಿಣಿಯಾವಸ್ಥೆಯಲ್ಲಿ ಗಾಂಜಾ ಸೇವನೆ ಮಾಡುವವರಿಗೆ ಹುಟ್ಟುವ ಮಗುವಿನಲ್ಲಿ ಬುದ್ಧಿಮಾಂದ್ಯತೆ, ಅಂಗ ಊನತೆ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಒಟ್ಟಿನಲ್ಲಿ ಗಾಂಜಾ ಬಗ್ಗೆ ಯುವಕರು ಎಚ್ಚೆತ್ತುಕೊಳ್ಳಿ.
ಡಾ ಪಿ.ವಿ ಭಂಡಾರಿ, ಮನೋವೈದ್ಯರು ಉಡುಪಿ