ಪರಿಶುದ್ಧವಾದ ಬಿಳುಪು ಶುಭ್ರ ವರ್ಣದ ಸುಂದರ ಕೋಮಲ ಸುಗಂಧಯುಕ್ತ ಮನಸೂರೆಗೊಳ್ಳುವ ಸುವಾಸನಾಭರಿತ ಉಡುಪಿ ಶಂಕರಪುರ ಮಲ್ಲಿಗೆಯ ಸೌಂದರ್ಯ ಅವರ್ಣನೀಯ. ಬೆಳ್ಳಿ ನೊರೆಗಳು ಹಸಿರು ಪ್ರಕೃತಿಯನ್ನು ಅಪ್ಪಿಕೊಂಡಂತೆ ಇರುವ ಮಲ್ಲಿಗೆಯ ತೊಟ್ಟು ಹಾಗೂ ತನ್ನ ಪರಿಮಳದಿಂದ ಎಲ್ಲರನ್ನೂ ಸ್ವಾಗತಿಸುವ ಮಲ್ಲಿಗೆಯ ಸೌಂದರ್ಯಕ್ಕೆ, ಸುಂದರತೆಗೆ ಪ್ರತೀಕವಾಗಿ ಜಿ.ಐ ಮಾನ್ಯತೆ ಹೊಂದಿದೆ. ಭೌದ್ಧಿಕ ಆಸ್ತಿ ಹಕ್ಕಿನಡಿ ನೊಂದಣಿಯಾದ ಉಡುಪಿ ಮಲ್ಲಿಗೆ ಬೌಗೋಳಿಕ ಸೂಚ್ಯಂಕದ ಪಟ್ಟಿಯಲ್ಲಿ ಸ್ಥಾನ ಪಡೆದು ಟ್ಯಾಗ್ ಹೊಂದಿದ್ದು ಘಮ ಘಮಿಸುವ ಪರಿಮಳದೊಂದಿಗೆ ಕಣ್ಣಿಗೆ ಮನಸ್ಸಿಗೆ ತಂಪನ್ನು ಮೂಗಿಗೆ ಕಂಪನ್ನು ನೀಡುವ ಉಡುಪಿ ಮಲ್ಲಿಗೆ 700 ರಿಂದ 800 ಹೂವುಗಳು ಸೇರಿದರೆ ಒಂದು ಚೆಂಡು. ನಾಲ್ಕು ಚೆಂಡು ಸೇರಿದರೆ ಒಂದು ಅಟ್ಟಿ, ಒಂದು ಅಟ್ಟಿಯಲ್ಲಿ ಸರಾಸರಿ 3 ಸಾವಿರ ಹೂವಿರುತ್ತದೆ.
ಭೌಗೋಳಿಕ ಸೂಚನೆ ಜಿ ಐ ಒಂದು ನಿರ್ದಿಷ್ಟ ಸ್ಥಳ ಪ್ರದೇಶಕ್ಕೆ ಅನುರೂಪವಾಗಿ ಕೆಲವು ವಸ್ತುಗಳಿಗೆ ಬಳಸುವ ಚಿಹ್ನೆ ಅಥವಾ ಮಾನ್ಯತೆ. ಸಂಪ್ರದಾಯಕ ವಿಶೇಷತೆಗಳನ್ನು ಹೊಂದಿರುವ ವಿಶ್ವ ವಾಣಿಜ್ಯ ಸಂಸ್ಥೆ ಸದಸ್ಯರಾಗಿ ನೊಂದಣಿ ಮತ್ತು ಸಂರಕ್ಷಣೆ ಕಾಯ್ದೆ ಹಕ್ಕನ್ನು ಹೊಂದಿದ ದೇಶದ ಬೌದ್ಧಿಕ ಆಸ್ತಿಗಳ ಹಕ್ಕು ವ್ಯಾಪಾರ ವ್ಯವಹಾರ ಸಂಬಂಧಿತ ಅಂಶಗಳ ಕುರಿತಾದ ವಾಣಿಜ್ಯ ಸಂಸ್ಥೆಯ ಒಪ್ಪಂದದಂತೆ ಸದಸ್ಯರ ಭೌಗೋಳಿಕ ಪ್ರದೇಶದಲ್ಲಿ ಇರುವ ಅಪರೂಪದ ಅಗತ್ಯದ, ದಿನನಿತ್ಯ ಬಳಕೆಯಲ್ಲಿರುವ ಉತ್ಪನ್ನ ಅಥವಾ ವಸ್ತುಗಳನ್ನು ಗುರುತಿಸುವ ಸೂಚನೆ.
ವಾಣಜ್ಯ ಹೂ ಬೆಳೆಗಳಲ್ಲಿ ಮಲ್ಲಿಗೆ ಮುಖ್ಯವಾಗಿದ್ದು, ಪ್ರಕೃತಿಯ ಅನನ್ಯ ಕೊಡುಗೆ ನಿಸರ್ಗದ ಅತ್ಯದ್ಬುತ ಸೃಷ್ಟಿ. ಆದಾಯದ ಮೂಲವೂ ಹೌದು. ಹಬ್ಬ ಹರಿ ದಿನಗಳಲ್ಲಿ, ಮದುವೆ ಮಂಟಪಗಳಲ್ಲಿ, ಜಾತ್ರೆ ಉತ್ಸವಗಳಲ್ಲಿ ಶುಭ ಕಾರ್ಯ, ಸೀಮಂತ, ದೇವರ ಪೂಜಾ ಅಲಂಕಾರದಲ್ಲಿ ಮತ್ತು ನವ ವಧುವಿಗೆ ನೀಳಜಡೆ ಹೆಣೆದು ಅದಕ್ಕೆ ಮಲ್ಲಿಗೆಯ ಹೂ ಸುತ್ತಿ ನವ ವಧುವನ್ನು ಶೃಂಗಾರ ಮಾಡುವಲ್ಲಿ ಮಲ್ಲಿಗೆಯ ಪಾತ್ರ ಬಹಳ ಮಹತ್ವದ್ದು. ಗಾತ್ರದಲ್ಲಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತು ಮಲ್ಲಿಗೆ ಹೂವಿಗೆ ಅನ್ವಯವಾಗುತ್ತದೆ.
ಇಷ್ಟೆಲ್ಲಾ ಹೆಗ್ಗಳಿಕೆ ಹೊತ್ತು ಮೆರೆಯುವ ನಮ್ಮ ಉಡುಪಿ ಶಂಕರಪುರ ಮಲ್ಲಿಗೆ ಅಭಿವೃದ್ಧಿಗೆ ಸ್ವಸಹಾಯ ಸಂಘಗಳು, ತೋಟಗಾರಿಕಾ ಇಲಾಖೆ, ಕೃಷಿ ತರಬೇತಿ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡುತ್ತಿದ್ದಾರೆ. ಉಡುಪಿ ತೋಟಗಾರಿಕಾ ಇಲಾಖೆಯ ಪುಷ್ಪ ಹರಾಜು ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಬೃಹ್ಮಾವರದಲ್ಲಿ ಮಲ್ಲಿಗೆ ಕೃಷಿಯ ವೈಜ್ಞಾನಿಕ ಬೇಸಾಯ ಪದ್ಧತಿ ಬಗ್ಗೆ ತರಬೇತಿ ಶಿಬಿರ ನಡೆಸಲಾಗುತ್ತದೆ ಆದರೆ ಸರಕಾರ ಮತ್ತು ತೋಟಗಾರಿಕಾ ಇಲಾಖೆ ಸಸ್ಯಶಾಸ್ತ್ರ ವಿಭಾಗ ಇನ್ನೂ ತೀವೃ ತರದಲ್ಲಿ ಜಾಗ್ರತರಾಗಬೇಕು. ಮಲ್ಲಿಗೆಯ ಬೆಳೆಗೆ ಬೇಕಾಗುವ ಸಲಹೆ ಸೂಚನೆಗಳನ್ನು ಜನಸಾಮಾನ್ಯರಿಗೆ ಸಸ್ಯ ಶಾಸ್ತ್ರಜ್ಞರು ನೀಡುತ್ತಾ ಬಂದಲ್ಲಿ ಮಲ್ಲಿಗೆ ಗಿಡ ಅಮರವಾಗಿ ಉಳಿಯಬಹುದು. ಇಲ್ಲದಿದ್ದರೆ ಕರ್ನಾಟಕದ ಉಪಯುಕ್ತವೆನಿಸಿದ ಅದೆಷ್ಟೋ ಜಾತಿಯ ಗಿಡ, ಮರ, ಬಳ್ಳಿ, ಔಷಧೀಯ ಸಸ್ಯಗಳು ಅಳಿವಿನಂಚಿನಲ್ಲಿ ಇರುವಂತೆ ಮಲ್ಲಿಗೆಯ ಕಥೆ ಆದಲ್ಲಿ ಆಶ್ಚರ್ಯವಿಲ್ಲ.
ಉಡುಪಿಯ ಸಮೀಪವಿರುವ ಮಲ್ಲಿಗೆ ಪುರವೆಂದು ಹೆಸರು ಪಡೆದ ಶಂಕರಪುರ, ಕಟಪಾಡಿ, ಶಿರ್ವ, ಕಳತ್ತೂರು, ಇನ್ನಂಜೆ, ಬೆಳ್ಮಣ್, ಕುತ್ಯಾರ್, ಪೆರ್ಣಂಕಿಲಗಳಲ್ಲಿ ಅತೀ ಹೆಚ್ಚು ಮಲ್ಲಿಗೆ ಬೆಳೆಯುತ್ತಾರೆ. ಉಡುಪಿ ಮಲ್ಲಿಗೆಯ ಸಮಗ್ರ ಮಾಹಿತಿಗಾಗಿ ಟ್ಯಾಕಿಯಂಟ್ ಸಂಸ್ಥೆ ಅಭಿವೃದ್ಧಿ ಪಡಿಸಿದ ಆ್ಯಪ್ ನಲ್ಲಿ ನಿತ್ಯ ದರ, ಮಲ್ಲಿಗೆ ಕೃಷಿ ಮಾಹಿತಿ, ಗಿಡ ನಾಟಿ ವಿಧಾನ, ಗಿಡಗಳಿಗೆ ಭಾದಿಸುವ ರೋಗಗಳು ಹಾಗೂ ಅದರ ನಿಯಂತ್ರಣ ವಿಧಾನದ ಮಾಹಿತಿ ಇದೆ. ಉಡುಪಿ ಮಲ್ಲಿಗೆ ಬೆಳೆಗಾರರ ಸಂಘದಿಂದ ಬೇಡಿಕೆ ಮತ್ತು ಉತ್ಪಾದನಾ ಪ್ರಮಾಣದ ಆಧಾರದಲ್ಲಿ ದರ ನಿಗದಿಯಾಗುತ್ತದೆ.
ಮಲ್ಲಿಗೆಯ ಕೋಮಲವಾದ ಮೊಗ್ಗು ಅರಳಿ ಸುವಾಸನೆ ಕುಂದುವ ಮೊದಲೇ ಉಪಯೋಗಿಸಬೇಕು. ಗಿಡದಿಂದ ಸಮಯಕ್ಕೆ ಸರಿಯಾಗಿ ಮೊಗ್ಗು ಆರಿಸಿ ನೇಯ್ದರೇನೆ ಮಾರಾಟಕ್ಕೆ ಸಿದ್ದವಾದ ಸುಂದರ ಮಾಲೆಯಾಗುತ್ತದೆ. ಮಲ್ಲಿಗೆ ಮೊಗ್ಗು ನೇಯುವುದು ಒಂದು ಕಲೆ. ಕೈಚುರುಕು ಇರುವವರು ಅತೀ ಬೇಗನೆ ಮೊಗ್ಗು ಹಾಳಾಗದಂತೆ ಸುಂದರ ಮಾಲೆ ಯಾವುದೇ ಪ್ರಯಾಸವಿಲ್ಲದೇ ನೆಯ್ಯುತ್ತಾರೆ.
ಲಕ್ಷಾಂತರ ರೂಪಾಯಿ ವ್ಯವಹಾರದ ಮಲ್ಲಿಗೆ ಬೆಳೆಯನ್ನು ಸಮಯಕ್ಕೆ ಸರಿಯಾಗಿ ಆರೈಕೆ ಮಾಡದಿದ್ದಲ್ಲಿ ಗಿಡಗಳು ಹುಳದ ಬಾದೆಗೆ ಗುರಿಯಾಗುತ್ತವೆ. ಮಲ್ಲಿಗೆ ಇಳುವರಿ ಜಾಸ್ತಿ ಆದಾಗ ದರ ಕಡಿಮೆ ಆಗಿ ನಷ್ಟವಾದರೂ ಮಲ್ಲಿಗೆ ಕೊಯ್ಯವುದು ಅನಿವಾರ್ಯ. ಗಿಡದಲ್ಲಿ ಹೂ ಹಾಗೆ ಬಿಟ್ಟರೆ ಗಿಡ ಹಾಳಾಗುವುದು. ಗಿಡವನ್ನು ಪ್ರತಿ ವರ್ಷ ಸ್ವಚ್ಛಗೊಳಿಸಿ ಉತ್ತಮ ನಿರ್ವಹಣೆ ಮಾಡಬೇಕು. ಚಳಿಗಾಲ ಮುಗಿಯುವ ವೇಳೆಗೆ ಬುಡಕ್ಕೆ ಗೊಬ್ಬರ ಹಾಕಿ ನೆಲದ ಫಲವತ್ತತೆ ಕಾಯ್ದಕೊಳ್ಳಲು ಗಿಡದ ಬುಡದ ಮಣ್ಣನ್ನು 2ರಿಂದ 3 ವರ್ಷಕ್ಕೊಮ್ಮೆ ಬದಲಾಯಿಸಬೇಕಾಗುತ್ತದೆ. ಸಾಮಾನ್ಯವಾಗಿ ಸಾವಯವ ಪದಾರ್ಥಗಳಿಂದ ಕೂಡಿದ ಭೂಮಿಯಲ್ಲಿ ಮರಳು ಮಿಶ್ರಿತ ಕೆಂಪು ಮಣ್ಣು ಒಣ ಗೊಬ್ಬರ ಮಲ್ಲಿಗೆ ಬೆಳೆಗೆ ಉತ್ತಮ.
ಉಡುಪಿ ಮಲ್ಲಿಗೆಯಿಂದ ಸುವಾಸಿತ ದ್ರವ್ಯ ತಯಾರಿಕೆಗೆ ಟಿ.ಎ.ಪೈ ಮೆನೇಜ್ ಮೆಂಟ್ ಇನ್ಸ್ಟಿಟ್ಯೂಟ್ (ಟ್ಯಪ್ಮಿ) ತಯಾರಿನಡೆಸುತ್ತಿದೆ. ಮಲ್ಲಿಗೆ ಕೇವಲ ನಮ್ಮ ದೇಶಕ್ಕೆ ಮಾತ್ರ ಸಿಮೀತವಾಗಿರದೇ ವಿದೇಶದಲ್ಲೂ ಬೇಡಿಕೆ ಇದೆ. ಮಲ್ಲಿಗೆ ಹೂವಿನಲ್ಲಿ ಏನೋ ಒಂದು ವಿಶೇಷವಿದ್ದು, ಅರಳಿದ ಹೂವಿಗಿಂತ ಮೊಗ್ಗಿನ ಮಾಲೆಗೆ ಬೆಲೆ ಹೆಚ್ಚು. ಮಲ್ಲಿಗೆ ಬೇಡಿಕೆ ಹೆಚ್ಚಿದ್ದು ಬೆಳೆಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂತರ್ಜಲದ ಕೊರತೆ ಹವಾಮಾನದಲ್ಲಿ ಆಗುತ್ತಿರುವ ವ್ಯತ್ಯಾಸಗಳು ಆಕಾಲದಲ್ಲಿ ಬೀಳುವ ಮಳೆ ಮಲ್ಲಿಗೆಯ ಬೆಳೆಗೆ ಮಾರಕವಾಗುತ್ತಿದೆ. ಮಲ್ಲಿಗೆ ಪ್ರಕೃತಿ ನಮಗೆ ನೀಡಿದ ವರಪ್ರಸಾದ. ಮಲ್ಲಿಗೆ ಅಂತಹ ಪವಿತ್ರ ಹೂವನ್ನು ಬೆಳೆವ ನಮ್ಮ ನಾಡು ಪುಣ್ಯದ ಬೀಡು.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ