ಜಾಗತಿಕ ತಾಪವು ಸರಾಸರಿ 1.5 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾದರೆ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಪರಿಸರ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಜಾಗತಿಕ ಉಷ್ಣಾಂಶವು ಸರಾಸರಿ 1.23 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳ ಕಂಡಿದೆ. ಇದು ಅಪಾಯಕಾರಿ ಮಟ್ಟ ತಲುಪುವುದನ್ನು ತಡೆಯಬೇಕಿದೆ. ಇದಕ್ಕಾಗಿ ದೇಶದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ತಲಾ 10 ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ರಮವನ್ನು ಕೇಂದ್ರ ಸರಕಾರ ತುರ್ತಾಗಿ ಹಮ್ಮಿಕೊಳ್ಳಬೇಕು. ಈ ಬಗ್ಗೆ ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ ತಿಳಿಸಿದೆ. ಒಕ್ಕೂಟದ ಸದಸ್ಯ ಬೆನೆಡಿಕ್ಟ್ ಫೆರ್ನಾಂಡಿಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ವಿವಿಧ ಶಾಲಾ ಕಾಲೇಜುಗಳಲ್ಲಿ 26.5 ಕೋಟಿ ನೋಂದಾಯಿತ ವಿದ್ಯಾರ್ಥಿಗಳಿದ್ದಾರೆ.ವಿದ್ಯಾರ್ಥಿಗಳು ತಲಾ 10 ಗಿಡಗಳನ್ನು ನೆಟ್ಟರೂ ದೇಶದಲ್ಲಿ ವರ್ಷಕ್ಕೆ 270 ಕೋಟಿ ಗಿಡಗಳನ್ನು ಬೆಳೆಸಬಹುದು. ಅದರಲ್ಲಿ ಶೇ. 30ರಷ್ಟು ಗಿಡಗಳು ಉಳಿದರೂ 80 ಕೋಟಿ ಗಿಡಗಳನ್ನು ಬೆಳೆಸಿದಂತಾಗುತ್ತದೆ ಎಂದರು.
ನಂದಿಗುಡ್ಡೆ: ಮರ ಕಡಿಯದಂತೆ ತಡೆಯಾಜ್ಞೆ
ಮಂಗಳೂರಿನ ನಂದಿಗುಡ್ಡೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 34 ಮರಗಳನ್ನು ಕಡಿಯುವ ನಿರ್ಧಾರಕ್ಕೆ ರಾಷ್ಟ್ರೀಯ ಹಸುರು ನ್ಯಾಯಮಂಡಳಿ ತಡೆಯಾಜ್ಞೆ ನೀಡಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಂದಿಗುಡ್ಡೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ 34 ಮರಗಳನ್ನು ಕಡಿಯಲು ನಿರ್ಧರಿಸಲಾಗಿತ್ತು. ಇಲ್ಲಿ ಎರಡು ರಸ್ತೆಗಳಿದ್ದು, ಅವುಗಳಲ್ಲಿ ಏಕಮುಖ ಸಂಚಾರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ರಸ್ತೆ ವಿಸ್ತರಣೆ ಬೇಕಾಗುವುದಿಲ್ಲ. ನೂರಾರು ವರ್ಷಗಳಷ್ಟು ಹಳೆಯದಾದ 34 ಮರಗಳನ್ನು ಉಳಿಸಿಕೊಳ್ಳಬಹುದು. ಈ ಸಲಹೆಯನ್ನು ಜಿಲ್ಲಾಡಳಿತ ಪರಿಗಣಿಸಿಲ್ಲ. ಹಾಗಾಗಿ ಹಸಿರು ನ್ಯಾಯಮಂಡಳಿಯ ಚೆನ್ನೈ ಪೀಠಕ್ಕೆ ಅರ್ಜಿ ಸಲ್ಲಿಸಿದ್ದೆವು. 34 ಮರಗಳನ್ನು ಕಡಿಯುವುದಕ್ಕೆ ನ್ಯಾಯಮಂಡಳಿ ಈಗ ತಡೆಯಾಜ್ಞೆ ನೀಡಿದೆ ಎಂದವರು ಹೇಳಿದರು.