ಪ್ರತಿಯೊಬ್ಬರ ಆರೋಗ್ಯ ಅವಲಂಬಿತವಾಗಿರುವುದು ಅವರವರು ತೆಗೆದುಕೊಳ್ಳುವ ಆಹಾರದ ಮೇಲೆ. ಸುರಕ್ಷೆಯ ಆಹಾರ ಸೇವನೆಯಿಂದ ನಾವು ಆರೋಗ್ಯವಾಗಿರಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಆಹಾರ ಕಲಬೆರಕೆ, ಅಸುರಕ್ಷಿತ , ಗುಣಮಟ್ಟ ರಹಿತ ಆಹಾರ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ಈ ನಿಟ್ಟಿನಲ್ಲಿ ಆಹಾರ ಸುರಕ್ಷೆಯ ಕುರಿತು ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಕಳೆದ ಐದು ವರ್ಷಗಳಿಂದ ಪ್ರತೀ ವರ್ಷ ಜೂ.7ರಂದು ವಿಶ್ವ ಆಹಾರ ಸುರಕ್ಷ ದಿನವನ್ನು ಆಚರಿಸಲಾಗುತ್ತಿದೆ.
ಅಸುರಕ್ಷಿತ ಆಹಾರದಿಂದ ಅನಾರೋಗ್ಯ :
ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿರುವ ಜಾಗತಿಕ ಅಂಕಿಅಂಶಗಳ ಪ್ರಕಾರ ಮಾನವನ ಆರೋಗ್ಯದ ಮೇಲೆ ಅಸುರಕ್ಷಿತ ಮತ್ತು ಕಲುಷಿತ ಆಹಾರ ಸೇವನೆ ಭಾರೀ ಪರಿಣಾಮವನ್ನುಂಟು ಮಾಡುತ್ತಿದೆ. ಈ ಬಗ್ಗೆ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸ ಲಾಗುತ್ತಿದ್ದರೂ ವಿವಿಧ ಕಾರಣಗಳಿಗಾಗಿ ಗುಣಮಟ್ಟದ ಮತ್ತು ಸುರಕ್ಷಿತ ಆಹಾರ ಪದಾರ್ಥಗಳಿಂದ ಭಾರೀ ಸಂಖ್ಯೆಯ ಜನರು ವಂಚಿತರಾಗಿದ್ದಾರೆ.
ಭಾರತದ ಮುಂದಿದೆ ಬಲುದೊಡ್ಡ ಸವಾಲು :
ವಿಶ್ವಸಂಸ್ಥೆಯ ಪ್ರಕಾರ ಅಂದಾಜು 195 ಮಿಲಿಯನ್ ಜನರು ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಜತೆಗೆಶೇ. 43ರಷ್ಟು ಮಕ್ಕಳು ದೀರ್ಘಕಾಲದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವಿಶ್ವ ಆಹಾರ ಭದ್ರತ ಸೂಚ್ಯಂಕ 2022ರ ಪ್ರಕಾರ ವಿಶ್ವದ ಪ್ರಮುಖ 113 ದೇಶಗಳ ಪೈಕಿ ಭಾರತ 68ನೇ ಸ್ಥಾನದಲ್ಲಿದೆ. ಅದಲ್ಲದೇ ಗುಣಮಟ್ಟದ ಪ್ರೊಟೀನ್ ಸೇವನೆಯಲ್ಲಿಯೂ ದೇಶದ ಜನರು ಶೇ.20ರಷ್ಟು ಹಿಂದುಳಿದಿದ್ದಾರೆ. ಗುಣಮಟ್ಟದ ಆಹಾರದ ಕೊರತೆಯಿಂದ ಮಕ್ಕಳ ಸಹಿತ ನಾಗರಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಇದು ಜನರ ಜೀವಿತಾವಧಿಯ ಮೇಲೂ ಪರಿಣಾಮ ಬೀರುವುದರಿಂದ ಭಾರತ ಆಹಾರ ಸುರಕ್ಷತೆಯ ವಿಚಾರದಲ್ಲಿ ಅತೀ ಹೆಚ್ಚು ಗಮನ ಹರಿಸಬೇಕಾಗಿದೆ.
ಎಫ್ಎಸ್ಎಸ್ಎಐ :
ಭಾರತದಲ್ಲಿ ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರಕಾರದ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು ಕೆಲಸ ಮಾಡುತ್ತಿದೆ. ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿಯಲ್ಲಿ ಈ ಪ್ರಾಧಿಕಾರವು ಕಾರ್ಯ ನಿರ್ವಹಿಸುತ್ತಿದ್ದು ಆಹಾರದ ಗುಣಮಟ್ಟವನ್ನು ನೋಡಿಕೊಳ್ಳುವ ಮೂಲಕ ಸಾರ್ವಜನಿಕರ ಆರೋಗ್ಯದ ರಕ್ಷಣೆಯ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.