ನಾವು ಎಲ್ಲಾ ಧರ್ಮದ, ಎಲ್ಲಾ ಮತದ ಬಗ್ಗೆ ಅದೆಷ್ಟೋ ವಿಷಯಗಳನ್ನು ತಿಳಿದವರು. ಆದರೂ ತುಳು ಧರ್ಮ ಇವೆಲ್ಲಕ್ಕಿಂತ ಮೀರಿದ್ದು. ಹಿರಿಯರು ಹಾಕಿದ ಬುನಾದಿಯು ಒಂದಿಂಚು ಮಿಸುಕಾಡದಿದ್ದರೂ ಅಲ್ಲಲ್ಲಿ ಪಾಚಿ ಮಾತ್ರ ಕಟ್ಟಿರುವುದು ಕಾಣುತ್ತದೆ. ಆದರೂ ಕೂಡ ಬಂಡೆಯಷ್ಟೆ ಗಟ್ಟಿಯಾಗಿರುವುದು ನಮ್ಮ ಭಾಗ್ಯ. ತುಳುನಾಡ ಧರ್ಮಕ್ಕೆ ಯಾವುದೇ ಕರ್ತನಿಲ್ಲ, ಯಾವುದೇ ಬರವಣಿಗೆಗಳು ಇಲ್ಲ, ಆದರೂ ತುಳುನಾಡ ಮಣ್ಣಿನ ಜನರ ಕಣ ಕಣದಲ್ಲೂ ಹರಡಿಕೊಂಡಿದೆ. ತುಳುನಾಡ ಧರ್ಮದಲ್ಲಿ ಎಲ್ಲಕ್ಕೂ ಅದರದೇ ಆದ ವೈಜ್ಞಾನಿಕ ಆಧಾರ ಇದೆ. ಈ ಧರ್ಮದಲ್ಲಿ ಎಲ್ಲೂ ಕೂಡ ದುಂದುವೆಚ್ಚದ ಆರಾಧನೆಗಳಿಲ್ಲ. ಮುಖ್ಯವಾಗಿ ತುಳುನಾಡ ಜನರು ಪ್ರಕೃತಿ ಆರಾಧಕರು. ತಮ್ಮೊಂದಿಗೆ ಇರುವ ಪ್ರಾಣಿ ಪಕ್ಷಿಗಳಿಗೆ ದೈವ ದೇವರುಗಳ ಸ್ಥಾನವನ್ನು ಕಲ್ಪಿಸಿ ಜೀವನ ಚಕ್ರದಲ್ಲಿ ಮತ್ತು ನಿಸರ್ಗದ ಉಳಿವಿನಲ್ಲಿ ಪ್ರಾಣಿ ಪಕ್ಷಿಗಳ ಉಳಿವು ಅತೀ ಹೆಚ್ಚಿನದ್ದು ಎಂದು ಸಾರಿದ್ದಾರೆ.
ತಮ್ಮಂತೆ ಅವುಗಳು ಜೀವವಿರುವುದನ್ನು ಮನಗಂಡು ಅವುಗಳಿಗೆ ಪೂಜ್ಯ ಸ್ಥಾನವನ್ನು ನೀಡಿದ್ದಾರೆ. ಉದಾ: ಪಂಜುರ್ಲಿ, ಮೈಸಂದಾಯ, ನಾಗ, ಪಿಲ್ಚಂಡಿ, ನಂದಿ ಇವೆಲ್ಲ ಪ್ರಾಣಿ ಮೂಲದ ತುಳುವರ ಸತ್ಯಗಳು. ತುಳುನಾಡಿನಲ್ಲಿ ಜನರು ಒಂದೇ ಜನುಮದ ಅನುಬಂಧವನ್ನು ನಂಬುವವರು. ಇವರು ಪುನರ್ಜನ್ಮದ ಮೇಲೆ ನಂಬಿಕೆಯಿಟ್ಟವರಲ್ಲ. ಆದುದರಿಂದ ಸತ್ತವರು ತಮ್ಮೊಂದಿಗೆ ಆತ್ಮಗಳಾಗಿ ನಮ್ಮನ್ನು ಕಾಯುತ್ತಾರೆ ಎನ್ನುವ ನಂಬಿಕೆ ಈ ನಂಬಿಕೆಯಲ್ಲಿಯೇ ಜನರು ವರ್ಷಕ್ಕೊಮ್ಮೆ ಗುರು ಕಾರ್ನವರಿಗೆ ಬಡಿಸುವುದು ಮತ್ತು ಅವರಿಗೆ ಪ್ರಾರ್ಥನೆ ಮಾಡುವ ಸಮಯದಲ್ಲಿ ಈ ಹಿಂದೆ ಕಾಯದಲ್ಲಿರುವಾಗ ಯಾವ ರೀತಿ ಕುಟುಂಬವನ್ನು ಜೋಪಾನ ಮಾಡಿದ್ದೀರ ಅದೇ ರೀತಿಯಲ್ಲಿ ಮಾಯ ಸೇರಿದ ಮೇಲು ನಮ್ಮನ್ನು ರಕ್ಷಿಸಿಕೊಂಡು ಬನ್ನಿ ಎಂದು ಹೇಳುತ್ತಾರೆ. ಅದೇ ರೀತಿಯಲ್ಲಿ ಸತ್ತವರನ್ನು ಸುಡದೆ ಧಪನ ಮಾಡುತ್ತಾರೆ. ಹಾಗಾಗಿ ಇಲ್ಲಿ ಪಿಂಡ ಪ್ರಧಾನ ಅಸ್ತಿ ವಿಸರ್ಜನೆ ಎನ್ನುವ ಸಂಪ್ರದಾಯವಿಲ್ಲ ಬದಲಾಗಿ ಮನೆಯಲ್ಲಿಯೇ ಉತ್ತರ ಕ್ರಿಯಾಧಿಗಳನ್ನು ತಮ್ಮ ಜಾತಿ ಗುರಿಕಾರ ಮುಖಾಂತರ ಮಾಡುವುದು ವಾಡಿಕೆ. ಅದೇ ರೀತಿಯಲ್ಲಿ ಸಮಾಧಿ ಕಟ್ಟದೆ ಕೇವಲ ಧೂಪೆ ಮೆತ್ತುವುದು (ಮಣ್ಣಿನಿಂದ ತ್ರಿಭುಜಕಾರದ ರಚನೆ) ವಾಡಿಕೆ. ಇಲ್ಲಿ ಮಣ್ಣಿನಿಂದ ಬಂದವರು ಮಣ್ಣಿಗೆ ಹೋಗಬೇಕೆನ್ನುವುದು ವಾಡಿಕೆ, ಇಲ್ಲಿ ಸುಡದೆ ಇರುವುದಕ್ಕೆ ಇನ್ನೊಂದು ಕಾರಣವೆಂದರೆ ತುಳುವರಿಗೆ ಅಗ್ನಿ ಬಹಳ ಪವಿತ್ರ ಹಾಗಾಗಿ ದೇಹವನ್ನು ಅದರಲ್ಲಿ ಉರಿಸಿ ಅಪವಿತ್ರ ಮಾಡಬಾರದೆನ್ನುವ ನಂಬಿಕೆ. ಅದೇ ರೀತಿ ಮದುವೆಯು ಕೂಡ ಒಂದು ಕೂಡು ಕಟ್ಟಿನ ಒಳಗೆ ನಡೆಯುವ ಶುಭ ಸಮಾರಂಭ. ಇಲ್ಲಿಯೂ ಕೂಡ ಬಳಿಯ(ಬರಿ, ಗೋತ್ರ) ಆಧಾರದಲ್ಲಿ ನಡೆಯುತ್ತಿದ್ದು ಸಗೋತ್ರ ವಿವಾಹಗಳು ನಿಶಿದ್ದವಾಗಿತ್ತು.
ಗುರಿಕಾರನ ಮುಂದಾಳತ್ವದಲ್ಲಿ ಮತ್ತು ಮಡಿವಾಳರ ಪೌರೋಹಿತ್ಯದಲ್ಲಿ ನಡೆಯುತ್ತಿತ್ತು. ಇಲ್ಲಿ ಕೂಡ ಮಹಿಳಾ ಪ್ರಧಾನ್ಯತೆ ಹೆಚ್ಚಾಗಿತ್ತು ಮತ್ತು ಮದುವೆಯ ದಿವಸ ಹೆಣ್ಣಿನ ತಾಯಿ ಮಗಳಿಗೆ ತಾಳಿ ಕಟ್ಟುವ ವ್ಯವಸ್ಥೆ ಇದ್ದಿದ್ದೆ ಹೊರತು ಗಂಡು ಕಟ್ಟುವ ಸಂಪ್ರದಾಯವಿರಲಿಲ್ಲ. ಇಲ್ಲಿ ತಾಳಿ ಎನ್ನುವುದು ಹೆಣ್ಣಿಗೆ ಮದುವೆಯಾಗಿದೆ ಎಂದು ತಿಳಿಸುವ ಉದ್ದೇಶವಷ್ಟೆ ಹೊರತು ಇಲ್ಲಿ ದಾಸ್ಯದ ಸಂಕೇತವಲ್ಲ. ಅದೇ ರೀತಿಯಲ್ಲಿ ಮದುವೆಯಾದ ಹೆಣ್ಣು ಗಂಡಿನ ಮನೆಗೆ ಹೋಗುವ ಪರಿಪಾಠ ಬಹಳ ವಿರಳ ಯಾಕೆಂದರೆ ತಾಯಿ ಮನೆಯಲ್ಲಿ ಆಸ್ತಿಯ ಬಹು ಪಾಲು ಹೆಣ್ಣಿಗೆ ವರ್ಗಾವಣೆಯಾಗುವುದರಿಂದ ಗಂಡನಾದವ ಹೆಣ್ಣಿನ ಮನೆಯಲ್ಲಿ ಇದ್ದುಕೊಂಡು ಅಸ್ತಿಯ ಮೇಲ್ವಿಚಾರಣೆ ಮಾಡುತ್ತಿದ್ದ. ಅದೇ ರೀತಿಯಲ್ಲಿ ತಾಯಿಯಿಂದ ಮಗಳಿಗೆ ಆಸ್ತಿ ವರ್ಗಾವಣೆಯಾಗುತ್ತಿತ್ತು. ತುಳುನಾಡಿನಲ್ಲಿ ಹೆಣ್ಣಿಗಿದ್ದ ಅಧಿಕಾರ ಮತ್ತು ಅಂತಸ್ತು ಬೇರೆ ಎಲ್ಲಿಯೂ ನೋಡಲು ಸಿಗುವುದಿಲ್ಲ. ಅದೇ ರೀತಿ ಹೆಣ್ಣು ಪ್ರಾಯಕ್ಕೆ ಬಂದಾಗ ಆಕೆಯ ಮಾನ ರಕ್ಷಣೆ ಅವಳೇ ಮಾಡಿಕೊಳ್ಳುವ ನಿಟ್ಟಿನಲ್ಲಿ ಆಕೆಯ ಕೈಗೆ ಗೆಜ್ಜೆ ಕತ್ತಿಯನ್ನು ಕೊಡುವ ಸಂಪ್ರದಾಯವಿತ್ತು. ದೈವ ದೇವರುಗಳ ಆರಾಧನೆಯಲ್ಲಿಯೂ ಕೂಡ ಮನೆಯ ಹಿರಿಯ ಸದಸ್ಯೆಯನ್ನು ಕರೆದು ದೈವ ಹಾಲು ಪಡೆದುಕೊಳ್ಳುತ್ತಿತ್ತು. ಅದೇ ರೀತಿಯಲ್ಲಿ ಯಾವುದೇ ಜಾಗದ ಮತ್ತು ದೈವದ ಅಧಿಕಾರವು ಕೂಡ ಅಳಿಯ ಕಟ್ಟಿನ ಸಂಪ್ರದಾಯ ರೀತಿಯಲ್ಲಿ ನಡೆಯುತ್ತಿತ್ತು. ಅಂದರೆ ಹೆಣ್ಣು ಮಕ್ಕಳಿಗೆ ಮತ್ತು ಅವರ ಮಕ್ಕಳಿಗೆ ಅಧಿಕಾರ ಸಿಂಹ ಪಾಲಿನದ್ದು.
ತುಳುನಾಡಿನ ಧರ್ಮ ಮಹಿಳಾ ಪ್ರಧಾನ ಸಮಾಜವನ್ನು ಪೋಷಿಸಿದ್ದೇ ಹೆಚ್ಚು. ಅದೇ ರೀತಿಯಲ್ಲಿ ಇಲ್ಲಿ ಜಾತಿ ಪದ್ದತಿಯಿಲ್ಲದೆ ಬಳಿ(ಗೋತ್ರ) ಪದ್ದತಿಯ ಮುಖಾಂತರ ಸಮಾಜ ವಿಂಗಡನೆಯಾಗುತ್ತಿತ್ತು. ಅದೇ ರೀತಿಯಲ್ಲಿ ಒಂದೇ ಬಳಿಯ ಜನರು ಅವರದೇ ಆದ ಗಣ ಮಂಡಲವನ್ನು ರಚಿಸಿಕೊಂಡು ಅವರ ಸಂಪ್ರದಾಯ ಕಟ್ಟಲೆಗಳನ್ನು ಪಾಲಿಸಿಕೊಂಡು ಹೋಗುತ್ತಿದ್ದರು ಮತ್ತು ಬೇರೆ ಬಳಿಯವರ ಹಸ್ತಕ್ಷೇಪವು ಇಲ್ಲ. ಪ್ರತಿ ಬಳಿಯ ಗಣಮಂಡಲಕ್ಕೂ ಅವರದೇ ಆದ ಗಂಡು ಮತ್ತು ಹೆಣ್ಣಿನ ಸಮಾನ ಅಧಿಕಾರದ ನಾಯಕತ್ವ ಇತ್ತು. ಇಲ್ಲಿ ಕೂಡ ಗಂಡಿಗಿಂತ ಹೆಚ್ಚಾಗಿ ಹೆಣ್ಣಿಗೆ ಅಧಿಕಾರ ಇತ್ತು. ತುಳು ಧರ್ಮದಲ್ಲಿ ಯಾವುದೇ ರೀತಿಯ ಮೂರ್ತಿ ಪೂಜೆಯ ಕಲ್ಪನೆಗಳು ಇರಲಿಲ್ಲ. ಇಲ್ಲಿ ಪ್ರಕೃತಿ ದತ್ತವಾಗಿ ಬಂದ ವಸ್ತುಗಳ ಮೂಲಕ ದೈವ ದೇವರ ಆರಾಧನೆಗಳು ನಡೆಯುತ್ತಿತ್ತು. ಇಂದಿಗೂ ಕೂಡ ಅದೆಷ್ಟೋ ದೈವ ದೇವರುಗಳ ಆರಾಧನೆಯಲ್ಲಿ ಕಲ್ಲುಗಳನ್ನು, ಹುತ್ತಗಳನ್ನು ಕಾಣಬಹುದು.
ತುಳುನಾಡಿನಲ್ಲಿ ದೇವರು ಎಂದು ನಂಬಿದ್ದು ಬೆರ್ಮೆರ್ (ಬಿರ್ಮೆರ್) ಎನ್ನುವ ಶಕ್ತಿಯನ್ನು. ಇಲ್ಲಿ ಬೆರ್ಮೆರ್ ಕೂಡ ಮನುಷ್ಯ ಮೂಲದ ದೇವರು ಎನ್ನುವ ನಂಬಿಕೆಯಿದೆ. ಅದೇ ರೀತಿ ತುಳುನಾಡನ್ನು ಆಳಿದ ಮೊದಲ ರಾಜನಾಗಿರಬಹುದು ಎನ್ನುವ ಕಲ್ಪನೆಯ ನಂಬಿಕೆಯಿದೆ. ದೈವಗಳ ಅದೆಷ್ಟೋ ಪಾರ್ದನಗಳಲ್ಲಿ ದೇವರಾಗಿ ಬಿರ್ಮೆರ್ ಅನ್ನು ಸ್ತುತಿಸುವ ಉಲ್ಲೇಖ ಇದೆ. ಅದೇ ರೀತಿ ತುಳುವರ ಜೀವನದಲ್ಲಿ ದೈವಗಳೇ ಪ್ರಧಾನ ಶಕ್ತಿಗಳಾಗಿ ನೆಲೆ ನಿಂತಿವೆ. ಹಾಗಾಗಿ ತುಳುನಾಡಲ್ಲಿ ದೇವರಿಗಿಂತ ದೈವಗಳೆ ಅತೀ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದುಕೊಂಡಿವೆ. ಅದೇ ರೀತಿ ದೈವಾರಾಧನೆಯು ಅದರದೇ ಆದ ಸೀಮಿತ ಚೌಕಟ್ಟಿನಲ್ಲಿ ಆಗುತ್ತಿದ್ದು, ತಾವು ಯಾವ ರೀತಿಯ ಆಹಾರವನ್ನು ಪಡೆದುಕೊಳ್ಳುತ್ತಿದ್ದಾರೋ ಅದನ್ನೇ ದೈವಕ್ಕೆ ಅಗೇಲು ಬಡಿಸುವ ಸಂಪ್ರದಾಯ. ತುಳುನಾಡ ಧರ್ಮದಲ್ಲಿ ಜಾತಿಗೊಂದು ಗುರು ಎನ್ನುವ ಕಲ್ಪನೆಯಿಲ್ಲ ಅದು ಒಪ್ಪಿಕೊಂಡಿದ್ದು ಕೂಡಾ ಇಲ್ಲ. ಇಲ್ಲಿ ಗುರಿಕಾರ ಅಥವಾ ಸೋದರ ಮಾವನೇ ಗುರುವಿನ ಸ್ಥಾನದಲ್ಲಿ ನಿಂತು ಕುಟುಂಬದ ನಿರ್ವಹಣೆಯನ್ನು ಮಾಡುತ್ತಿದ್ದ. ಈ ಕುಲಗುರು ಮತ್ತು ಸ್ವಾಮೀಜಿ ಎನ್ನುವ ಕಲ್ಪನೆ ತೀರಾ ಇತ್ತೀಚಿನದ್ದು. ಅದೇ ರೀತಿ ಇಲ್ಲಿ ದೈವಗಳಿಗೆ ಪ್ರತಿಷ್ಟೆ ಎನ್ನುವ ಕಲ್ಪನೆಯಿಲ್ಲ ಬದಲಾಗಿ ಅವರವರ ನಂಬಿಕೆಯ ರೀತಿಯಲ್ಲಿ ಭೂತಾಲಯದ ಕಟ್ಟಿನ ಮೂಲಕ ಆರಾಧಿಸಿಕೊಂಡು ಬರುತ್ತಿದ್ದರು.
ಅದೇ ರೀತಿಯಲ್ಲಿ ನಾಗಾರಾಧನೆಯೂ ಕೂಡ ಕಡ್ಯನಾಟದ ಮೂಲಕ ಪ್ರಚಲಿತಕ್ಕೆ ಬಂದಿದ್ದು. ಮಣ್ಣಿನ ಒಂದು ಸಣ್ಣ ಮಡಿಕೆಯ ಮೇಲೆ ನಾಗನ ಹೆಡೆಯನ್ನು ಬಿಡಿಸಿ ಮಡಿಕೆಯಲ್ಲಿ ನೀರು ತುಂಬಿಸಿ ಇಡುವಂತದ್ದು. ಇದು ನಾಗಗಳ ಆಸರಿಕೆಯನ್ನು ತಣಿಸುವ ಉದ್ದೇಶ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದ್ದು, ತುಳುವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಇದ್ದ ಪ್ರೀತಿಯನ್ನು ಸೂಚಿಸುತ್ತದೆ. ತುಳುವರ ಜೀವನ ಶೈಲಿಗಳನ್ನು ತಿಳಿಸಲು ಇರುವ ಏಕೈಕ ಸಾಕ್ಷಿಗಳೆಂದರೆ ಈ ಪಾರ್ದನಗಳು, ಇಲ್ಲಿ ಜನರ ಜೀವನ ಶೈಲಿ ಮತ್ತು ಆರಾಧನಾ ನಂಬಿಕೆಗಳನ್ನು ತಿಳಿಸುವ ಮೌಖಿಕ ವಾಹಕಗಳಾಗಿದ್ದವು. ತುಳುವರ ಧರ್ಮಕ್ಕೆ ಇತಿಮಿತಿಯಿಲ್ಲ ಎಲ್ಲವು ಪ್ರಕೃತಿಗೆ ಪೂರಕವಾದ ಜೀವನ ಶೈಲಿ ಎಲ್ಲೂ ಕೂಡ ಆಕ್ರಮಣ ಮನೋಭಾವವಿಲ್ಲ. ಆದರೆ ಕಾಲದ ಹಿಡಿತಕ್ಕೆ ನಲುಗಿ ಪರಕೀಯರ ಆಗಮನ, ಆಕ್ರಮಣಗಳಿಗೆ ಸಿಕ್ಕಿದ ಬದುಕು ತಮ್ಮದೆನ್ನುವ ಅದೆಷ್ಟೋ ಆಚರಣೆಗಳನ್ನು ಬಿಟ್ಟು ಹೊಸ ಆಚರಣೆಗಳ ಬೆನ್ನು ಹತ್ತಬೇಕಾಯಿತು. ತಮ್ಮದು ಸ್ವಂತ ಎನ್ನುವುದಕ್ಕೆ ಕೆಲವೊಮ್ಮೆ ಪೂರಕ ಆಧಾರಗಳನ್ನು ಒದಗಿಸುವ ಮಟ್ಟಕ್ಕೆ ಬಂದು ನಿಂತಿದೆ. ವೃತ್ತಿಯಿಂದ ಜಾತಿಗಳ ವಿಭಜನೆಯಾಗಿ ತಮ್ಮ ತಮ್ಮದೇ ಆದ ಜೀವನ ಶೈಲಿಗಳನ್ನು ಅಳವಡಿಸಿಕೊಳ್ಳಲಾಗಿದೆ. ತುಳುವರ ಧರ್ಮ ಬರೆದಷ್ಟು ಮುಗಿಯದ ಅಧ್ಯಾಯ.
ಬರಹ – ಶೈಲು ಕುಡ್ಲ